ಕುಂದಾಪುರ: ವಿಭಿನ್ನ ಐಡಿಯಾಸ್ ಹಾಗೂ ಕಾರ್ಟೂನು ಕುಂದಾಪ್ರ ಬಳಗ ನೇತೃತ್ವದಲ್ಲಿ ಆಯೋಜನೆಗೊಂಡ 10ನೇ ವರ್ಷದ ‘ಕಾರ್ಟೂನ್ ಹಬ್ಬ’ ಕಾರ್ಯಕ್ರಮವು ದಿನಾಂಕ 09-12-2023 ರಂದು ಕುಂದಾಪುರದ ಕಲಾಮಂದಿರದಲ್ಲಿ ಉದ್ಘಾಟಣೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ, ಕವಿ ಹಾಗೂ ಲೇಖಕರಾದ ಡಾ. ಕುಂ. ವೀರಭದ್ರಪ್ಪ (ಕುಂವೀ) “ಚಲನಶೀಲ ಸಮಾಜದ ಮುಖ್ಯ ಜೀವಾಳ ಉಪದ್ರವಿತನ. ಲೇಖಕ, ಚಿತ್ರಕಾರ ಎಲ್ಲಿಯವರೆಗೆ ಉಪದವಿಯಾಗಿರುತ್ತಾನೋ ಅಲ್ಲಿಯವರೆಗೆ ಸಮಾಜ ಚೆನ್ನಾಗಿರುತ್ತೆ. ನಿರುಪದ್ರವಿಯಾಗಿ, ವ್ಯವಸ್ಥೆ ಜತೆ ರಾಜಿ ಮಾಡಿಕೊಂಡಾಗ ಸಮಾಜ ಅಸ್ತವ್ಯಸ್ತವಾಗಿರುತ್ತದೆ. ಮನಸ್ಸನ್ನು ಕಲಕುವಂತಹ, ಹೊಸ – ಹೊಸ ಆಲೋಚನಾ ಕ್ರಮಗಳನ್ನು ಸೃಷ್ಟಿಸುವ, ಚಿಂತನಾ ಕ್ರಮಗಳನ್ನು ಬದಲಿಸುವ ಶಕ್ತಿ ವ್ಯಂಗ್ಯಚಿತ್ರಗಳಿಗಿದೆ. ಮಕ್ಕಳಲ್ಲಿ ಇಂತಹ ಕಲೆಯನ್ನು ಬೆಳೆಸಬೇಕು. ಪ್ರತಿ ಶಾಲೆಗಳಲ್ಲಿ ಚಿತ್ರಕಲಾ, ಸಂಗೀತ, ನಾಟಕ ಶಿಕ್ಷಕರಿರಬೇಕು. ಆಟದ ಮೈದಾನ ಇರಬೇಕು. ಆಗ ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು ಸಾಧ್ಯ. ಆ ಕೆಲಸವನ್ನು ಸರಕಾರ ಮಾಡಬೇಕು. ಇಲ್ಲದಿದ್ದರೆ ಭಾರತೀಯ ರೂಪಾಯಿ ಎಣಿಸುವ ಬದಲು, ಡಾಲರ್, ಪೌಂಡ್ಗಳನ್ನು ಎಣಿಸುವ ಪ್ರವೃತ್ತಿ ಹೆಚ್ಚಾಗುತ್ತದೆ. ಇಷ್ಟೊಂದು ಜನ ವ್ಯಂಗ್ಯಚಿತ್ರಕಾರರನ್ನು ಒಟ್ಟಿಗೆ ನೋಡುವುದೇ ನನ್ನ ಜೀವನದ ಮಧುರ ಕ್ಷಣ ಎಂದ ಅವರು, ಕಾರಂತರು, ವೈದೇಹಿಯಂತಹ ಅನೇಕ ಪ್ರತಿಭಾವಂತರನ್ನು ಕೊಟ್ಟಂತಹ ಊರು ಕುಂದಾಪುರ. ಅನೇಕ ಮಂದಿ ವ್ಯಂಗ್ಯಚಿತ್ರಕಾರರಿದ್ದಾರೆ. ಇಲ್ಲಿ ಕಾರ್ಟೂನು ಹಬ್ಬ ನಡೆಯುತ್ತಿರುವುದು ಶ್ಲಾಘನೀಯ.” ಎಂದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ “ಇನ್ನೊಬ್ಬರ ಅಭಿಪ್ರಾಯಕ್ಕೆ ಗೌರವ ಕೊಟ್ಟಾಗ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯ. ಅಭಿಪ್ರಾಯ ಮೂಡಿಸಲು ಅವಕಾಶವೇ ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವ ಅಲ್ಲ. ಆದರೆ ನಿಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವ ಪ್ರಯತ್ನ ಸರಿಯಲ್ಲ. ತಪ್ಪು ಪ್ರಧಾನಿ, ಮುಖ್ಯಮಂತ್ರಿಗಳು ಯಾರೇ ಮಾಡಲಿ. ಅದನ್ನು ಚಿತ್ರದ ಮೂಲಕ ತೋರಿಸಲು ಹಿಂಜರಿಯಬಾರದು. ಪತ್ರಿಕೆಯಲ್ಲೂ ಸಹ ವಾಸ್ತವಾಂಶ ಬರಬೇಕು.” ಎಂದು ಹೇಳಿದರು.
ಡಿ. ವೈ. ಎಫ್. ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಪತ್ರಕರ್ತರಾದ ನವೀನ್ ಸೂರಿಂಜೆ ಹಾಗೂ ಪ್ರಜ್ವಲ್ ಭಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪತ್ರಕರ್ತ ಶೇಖರ್ ಅಜೆಕಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ‘ಶೇಖರ್ ನಮನ ಚಿತ್ರನಿಧಿ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭಂಡಾರ್ಕರ್ಸ್ ಕಾಲೇಜಿನ 1991ನೇ ಬ್ಯಾಚಿನ ಬಿ. ಕಾಂ ಸಹಪಾಠಿಗಳು, ಕುಂದಪ್ರಭ ಪತ್ರಿಕೆ ಹಾಗೂ ಕುಂದಾಪ್ರ ಡಾಟ್ ಕಾಂ ಸಹಯೋಗದೊಂದಿಗೆ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಹಲವರು ನುಡಿನಮನ ಸಲ್ಲಿಸಿದರು.
ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಇವರ ಸಂಘಟನೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಶಿಕ್ಷಕ ಉದಯ್ ಗಾಂವ್ಕರ್ ನಿರೂಪಿಸಿದರು.