ಕುಂದಾಪುರ: ಕುಂದಾಪುರ ಕಲಾಕ್ಷೇತ್ರದ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-52’ ಕಾರ್ಯಕ್ರಮದ ಅಂಗವಾಗಿ ತೆಕ್ಕಟ್ಟೆ ಕೊಮೆಯ ಯಶಸ್ವಿ ಕಲಾವೃಂದದ ಚಿಣ್ಣರ ತಾಳಮದ್ದಳೆ ಕಾರ್ಯಕ್ರಮವು 18 ಆಗಸ್ಟ್ 2024ರಂದು ಕುಂದಾಪುರದ ಕಲಾಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾನ್ಯ ಎ. ಎಸ್. ಎನ್. ಹೆಬ್ಬಾರ್ ಇವರನ್ನು ಅಭಿನಂದಿಸಿ ಮಾತನ್ನಾಡಿದ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ “ಕಲೆಯಲ್ಲಿ ಸಾತ್ವಿಕವಾದ ಹುಚ್ಚು ಇದ್ದರೆ ಸಂಸ್ಕಾರಯುತ ಸಮಾಜವಾಗಿ ಬೆಳೆಯುವುದಕ್ಕೆ ಸಾಧ್ಯ. ಕಲೆಯನ್ನು ನಾವು ನಮ್ಮೊಳಗೆ ರೂಢಿಸಿಕೊಳ್ಳಬೇಕು. ಮಕ್ಕಳು ಕಲೆಯಲ್ಲಿ ಆಸಕ್ತಿಯನ್ನು ಹೊಂದಲೇ ಬೇಕು. ಆಗ ಮಾತ್ರ ಮಕ್ಕಳು ನಮ್ಮೊಂದಿಗೆ ಸಂಸ್ಕಾರವಂತರಾಗಿ ಉಳಿಯುವುದಕ್ಕೆ ಸಾಧ್ಯ. ಮಾತೇ ಆಡದ ಮಕ್ಕಳೂ ಕಲೆಯಲ್ಲಿ ತೊಡಗಿಸಿಕೊಂಡರೆ ರಂಗವೇರಿ ನಿರರ್ಗಳವಾಗಿ ಮಾತಾಡುವುದು ಸಾಧ್ಯವಾಗುತ್ತದೆ. ಪೋಷಕರು ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡಬೇಕು. ಆಗ ಸುಂದರವಾದ ಸಮಾಜ ನಿರ್ಮಾಣವಾಗುವುದಕ್ಕೆ ಸಾಧ್ಯ.” ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎ. ಎಸ್. ಎನ್ ಹೆಬ್ಬಾರ್ “ಯಶಸ್ವೀ ಕಲಾವೃಂದದ ಬೆಳ್ಳಿ ಹಬ್ಬದಲ್ಲಿ 84ರ ಪ್ರಾಯದಲ್ಲಿ ವೇಷ ತೊಟ್ಟು ರಂಗವೇರಿ ಕುಣಿಯುವ ಅವಕಾಶ ಲಭ್ಯವಾದದ್ದು ಅವಿಸ್ಮರಣೀಯ. ಯಕ್ಷಗಾನ ಕಲೆ ರಾಷ್ಟ್ರೀಯ ಕಲೆಯಾಗಿ ಬಿಂಬಿತವಾಗಬೇಕು. ಅತ್ಯದ್ಭುತ ಕಲೆಯಾದ ಯಕ್ಷಗಾನವು ವಿಶ್ವ ಮಾನ್ಯ. ಸರಕಾರದಲ್ಲಿನ ಅಧಿಕಾರಿಗಳಿಗೆ ಯಕ್ಷಗಾನ ಕಲೆಯ ಬಗೆಗಿನ ವಿಶೇಷತೆ ಅರ್ಥವಾಗಬೇಕು. ಯಕ್ಷಗಾನ ಕಲೆಯು ಭಾಷಾ ಶುದ್ಧಿಯೊಂದಿಗೆ ಬದುಕಿನ ಮೌಲ್ಯವನ್ನು ತಿಳಿಸುವ ಅದ್ಭುತ ಕಲೆ. ಅದು ಚಿಣ್ಣರ ಮೂಲಕ ಮುಂದೆ ಸಾಗಬೇಕು.” ಎಂದರು.
ಉದ್ಯಮಿಗಳಾದ ರಾಜೇಶ್ ಕಾವೇರಿ, ಸನತ್ ರೈ, ದಾಮೋದರ ಪೈ ಉಪಸ್ಥಿತರಿದ್ದರು. ಬಳಿಕ ‘ಕೃಷ್ಣಾರ್ಜುನರ ಕಾಳಗ’ ಚಿಣ್ಣರ ತಾಳಮದ್ದಳೆ ರಂಗದಲ್ಲಿ ಪ್ರಸ್ತುತಿಗೊಂಡಿತು.