ಮಡಿಕೇರಿ : ಕೊಡವ ಮಕ್ಕಡ ಕೂಟದ 88ನೇ ಪುಸ್ತಕ ಹಾಗೂ ಲೇಖಕಿ ಯಶೋಧ ಪೇರಿಯಂಡ ಅವರ ಪ್ರಥಮ ಪುಸ್ತಕ ‘ಚುಪ್ಪಿ ಕತೆರ ಜೊಪ್ಪೆ’ ಕೃತಿಯ ಬಿಡುಗಡೆ ಕಾರ್ಯಕ್ರಮವು ದಿನಾಂಕ 25-03-2024ರಂದು ನಗರದ ಪತ್ರಿಕಾ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಬಿ. ಅಯ್ಯಪ್ಪ “ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಯುವ ಬರಹಗಾರರಿಗೆ ಪ್ರೋತ್ಸಾಹ ನೀಡಲು ಕೊಡವ ಮಕ್ಕಡ ಕೂಟ ಸದಾ ಸಿದ್ಧವಿದೆ. ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲಿ ರಚನೆಗೊಂಡ ಒಟ್ಟು 87 ಪುಸ್ತಕಗಳನ್ನು ಕೂಟದ ಮೂಲಕ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೊಸ ಬರಹಗಾರರೊಂದಿಗೆ ಯುವ ಬರಹಗಾರರನ್ನೂ ಪರಿಚಯಿಸುತ್ತಾ ಬರಲಾಗಿದೆ. ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಯುವ ಬರಹಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಸಾಹಿತ್ಯ ಕೃಷಿ ಆಗಬೇಕಾಗಿದೆ. ಇದೇ ಕಾರಣಕ್ಕೆ ಕೂಟ ಯುವ ಬರಹಗಾರರಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗಾಗಿ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ 100 ಪುಸ್ತಕಗಳ ಗಡಿ ಮುಟ್ಟುವ ಗುರಿ ಹೊಂದಿದೆ. ಉಳಿದಿರುವ 12 ಪುಸ್ತಕಗಳು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಮತ್ತಷ್ಟು ಬರಹಗಾರರು ಮುಂದೆ ಬಂದರೆ ಪ್ರೋತ್ಸಾಹ ನೀಡಲಾಗುವುದು. ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 87 ಪುಸ್ತಕಗಳಲ್ಲಿ ಐದು ಪುಸ್ತಕಗಳಿಗೆ ಕರ್ನಾಟಕ ‘ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿದ್ದು, ‘ಚಿಗುರೆಲೆಗಳು’ ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ, ‘ಅಗ್ನಿಯಾತ್ರೆ’ ಪುಸ್ತಕಕ್ಕೆ ‘ಗೌರಮ್ಮ ದತ್ತಿ ನಿಧಿ ಪ್ರಶಸ್ತಿ’ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಕೊಡವ ಕ್ರೀಡಾ ಕಲಿಗಳು, ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ, ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೇ ಕೊಡವ ಸಾಧಕ ಯುವಕ-ಯುವತಿಯರನ್ನು ಸೇರಿದಂತೆ ಹಲವು ಸಾಧಕರನ್ನು ಸನ್ಮಾನಿಸಿ, ಗೌರವಿಸಿದೆ.” ಎಂದು ತಿಳಿಸಿದರು.
‘ಚುಪ್ಪಿ ಕತೆರ ಜೊಪ್ಪೆ’ ಪುಸ್ತಕದ ಲೇಖಕಿ ಯಶೋಧ ವೇರಿಯಂಡ ಮಾತನಾಡಿ, “ಈ ಪುಸ್ತಕ ವಿಭಿನ್ನ ವಿಷಯಗಳ ಸಣ್ಣಕಥೆಗಳ ಸಂಗ್ರಹವಾಗಿದ್ದು, ಮಕ್ಕಳ ಸಾಹಸ, ಹೆಣ್ಣುಮಕ್ಕಳ ಸಬಲೀಕರಣ, ಜೀವನ ಪರಿವರ್ತನೆ ಮತ್ತಿತರ ವಿಚಾರಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಚಿಕ್ಕವಯಸ್ಸಿನಿಂದಲೇ ಓದುವ ಹವ್ಯಾನವನ್ನು ಬೆಳೆಸಿಕೊಂಡಿದ್ದ ನಾನು ಸಣ್ಣ ಸಣ್ಣ ಕಥೆಗಳನ್ನು ಬರೆಯಲು ಪ್ರಾರಂಭಿಸಿದ್ದು, ಹಲವು ಕಥೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಕೆಲವು ಸಮಯ ಬರೆಯುವುದನ್ನು ನಿಲ್ಲಿಸಿದ್ದ ನಾನು ತಂದೆ-ತಾಯಿಯ ಪ್ರೇರಣೆಯಿಂದ ಹಾಗೂ ಹಿತೈಷಿಗಳ ಪ್ರೋತ್ಸಾಹದಿಂದ ಮತ್ತೆ ಬರೆಯುವುದನ್ನು ಪ್ರಾರಂಭಿಸಿದೆ. ತಂದೆ ಪೇರಿಯಂಡ ಸುಬ್ರಮಣಿ ಅವರ 75ನೇ ಜನ್ಮದಿನಾಚರಣೆ ಪ್ರಯುಕ್ತ ಪುಸ್ತಕವನ್ನು ಹೊರತರಲಾಗುತ್ತಿದೆ” ಎಂದು ಹೇಳಿದರು. ಇದೇ ಸಂದರ್ಭ ಪುಸ್ತಕ ಬಿಡುಗಡೆಗೆ ಸಹಕರಿಸಿದ ಕೊಡವ ಮಕ್ಕಡ ಕೂಟ ಸಂಘಟನೆಗೆ ಧನ್ಯವಾದ ಸಲ್ಲಿಸಿದರು.
ಸಮಾಜ ಸೇವಕ ಚಂಗಂಡ ಗಿರೀಶ್ ತಮ್ಮಯ್ಯ ಮಾತನಾಡಿ, “ಬರಹವನ್ನು ಪುಸ್ತಕದ ರೂಪದಲ್ಲಿ ಹೊರತರುವುದು ಕಷ್ಟದ ಕೆಲಸ. ಆದರೆ ಕೊಡವ ಮಕ್ಕಡ ಕೂಟ ಇದನ್ನು ಸುಲಭ ಮಾಡಿಕೊಡುತ್ತಿದೆ. ಮುಂದಿನ ದಿನಗಳಲ್ಲಿ ಲೇಖಕಿ ಯಶೋಧ ಪೇರಿಯಂಡ ಅವರಿಂದ ಮತ್ತಷ್ಟು ಪುಸ್ತಕಗಳು ಹೊರಬರುವಂತಾಗಲಿ.” ಎಂದು ಹಾರೈಸಿದರು. ಲೇಖಕಿ ಯಶೋಧ ಪೇರಿಯಂಡ ಅವರ ತಂದೆ ಪೇರಿಯಂಡ ಸುಬ್ರಮಣಿ ಹಾಗೂ ತಾಯಿ ಪೇರಿಯಂಡ ಕನ್ನು ಭೋಜಮ್ಮ ಅವರು ಪುಸ್ತಕ ಬಿಡುಗಡೆಗೊಳಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಮುಕ್ಕಾಟಿರ ಅಂಜು ಸುಬ್ರಮಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಲೇಖಕಿಯ ಪರಿಚಯ :
ಯಶೋಧ ಪೇರಿಯಂಡ ಇವರು ಬಲಂಬೇರಿಯ ಪೇರಿಯಂಡ ಒಕ್ಕದ ಸುಬ್ರಮಣಿ ಕನ್ನು ಬೋಜಮ್ಮ (ತಾಮನೆ : ಮಡೆಯಂಡ) ದಂಪತಿಯ ಪುತ್ರಿಯಾಗಿದ್ದಾರೆ. ಇವರು ಪ್ರಾಥಮಿಕ ವಿದ್ಯಾಭ್ಯಾಸ ಬಲಂಬೇರಿ ಸರ್ಕಾರಿ ಸ್ಕೂಲ್, ಪ್ರೌಢ ವಿದ್ಯಾಭ್ಯಾಸ ಪಾರಾಣೆ ಹೈಸ್ಕೂಲ್, ಪಿಯುಸಿ ಮೂರ್ನಾಡ್ ಪಿ.ಯು.ಕಾಲೇಜ್, ಬಿ.ಕಾಂ. ಪದವಿಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಪಡೆದಿರುತ್ತಾರೆ. ಬೆಂಗಳೂರಿನ ಜಾಲಹಳ್ಳಿಯಲ್ಲಿ ಕ್ಯಾಂಪೆನ್ ಕಂಪ್ಯೂಟರ್ ಸೆಂಟರಿನಲ್ಲಿ ಕಂಪ್ಯೂಟರ್ ತರಬೇತಿ ಪಡೆದಿದ್ದು, ಫ್ಯಾಷನ್ ಡಿಸೈನಿಂಗ್ ಹಾಗೂ ಬ್ಯೂಟಿಶನ್‌ನ ಅನುಶ್ರುತ ಫೌಂಡೇಶನ್ ಕರುಬರಗಳ್ಳಿಯಲ್ಲಿ, ಕರಕುಶಲ ತರಬೇತಿಯು ವಿಶ್ವಾನಿಡಂ ಹೇರೋಹಳ್ಳಿ ಬೆಂಗಳೂರಿನಲ್ಲಿ ಮಾಡಿದ್ದಾರೆ.
ವಿಶ್ವಾನಿಡಂನಲ್ಲಿ ಹೆಣ್ಣುಮಕ್ಕಳಿಗೆ ತರಬೇತಿ ನೀಡುವ ಮೂಲಕ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಯಶೋಧ ರಾಜ್ಯಮಟ್ಟದ ಹೈ ಜಂಪ್, ಲಾಂಗ್ ಜಂಪ್ ಕ್ರೀಡಾಪಟು, ಸ್ನಾತಕೋತ್ತರ ಪದವಿಯಲ್ಲಿರುವಾಗ ಎನ್.ಸಿ.ಸಿ.ಯಲ್ಲಿ ಭಾಗವಹಿಸಿ ಬಿ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತ ಐಮುಡಿಯಂಡ ರಾಣಿ ಮಾಚಯ್ಯ ಅವರ ಉಮ್ಮತಾಟ್ ತಂಡದಲ್ಲಿ ಭಾಗವಹಿಸಿ ಹಲವು ಕಡೆ ಪ್ರದರ್ಶನ ನೀಡಿದ್ದಾರೆ. ಇವರು ಬರೆದ ಕಥೆ, ಕವನ ಬ್ರಹ್ಮಗಿರಿ, ಪೂಮಾಲೆ, ಶಕ್ತಿ ಪತ್ರಿಕೆ, ಕೊಡವ ಅಕಾಡೆಮಿಯ ಪೊಂಗುರಿಯಲ್ಲಿ ಮತ್ತು ಆಕಾಶವಾಣಿಯಲ್ಲೂ ಪ್ರಸಾರವಾಗಿದೆ. ಯಶೋಧ ಅವರಿಗೆ ಪುಣ್ಯ ಹಾಗೂ ಸುದರ್ಶನ್ ಎಂಬ ಇಬ್ಬರು ಮಕ್ಕಳಿದ್ದು, ಪ್ರಸ್ತುತ ಇವರು ಮೂರ್ನಾಡು ಟಿ.ಎ.ಪಿ.ಸಿ.ಎಂ.ಎಫ್ ಸೊಸೈಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.