ಮಂಗಳೂರು: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಬರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಅಧ್ಯಾಯವು ‘ಕರಾವಳಿ ಕರ್ನಾಟಕದಲ್ಲಿ ರಾಕ್ ಆರ್ಟ್’ (ಬಂಡೆ ಚಿತ್ರ) ಕುರಿತು ಪ್ರೊ. ಮುರುಗೇಶಿ ಟಿ. ಅವರ ಉಪನ್ಯಾಸವನ್ನು ಶನಿವಾರ 19-8-2023ರಂದು ಸಂಜೆ 6:00 ಗಂಟೆಗೆ ನಗರದ ಪಶ್ಚಿಮ ಕೊಡಿಯಾಲ್‌ಗುತ್ತಿನ ಬಂಗಾರುಗುತ್ತು ರಸ್ತೆಯಲ್ಲಿರುವ ಕೊಡಿಯಾಲ್ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಆಯೋಜಿಸಿತು. ಪ್ರೊ. ಮುರುಗೇಶಿ ಅವರು ಪ್ರಸಿದ್ಧ ಸಂಶೋಧಕರು ಮತ್ತು ಈ ಪ್ರದೇಶದಲ್ಲಿನ ಇತಿಹಾಸ ಪೂರ್ವದ ಬಂಡೆ ಚಿತ್ರಗಳ ಬಗ್ಗೆ ಅನುಭವಿ ಪರಿಣತರು. ಅವರು ಇತ್ತೀಚೆಗೆ ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.
ಪ್ರೊ.ಮುರುಗೇಶಿಯವರು ಯುವ ಉಪನ್ಯಾಸಕರಾಗಿದ್ದಾಗ ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜಿನ ಉಪ ಪ್ರಾಂಶುಪಾಲರು ಹಾಗೂ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥರಾಗಿದ್ದ ದಿವಂಗತ ಡಾ.ಬಿ.ವಸಂತ ಶೆಟ್ಟಿಯವರು ನೀಡಿದ ಪ್ರೋತ್ಸಾಹವನ್ನು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡರು. “ಡಾ.ವಸಂತ ಶೆಟ್ಟಿಯವರು ಈ ಪ್ರದೇಶದ ಪುರಾತತ್ವ ಶಾಸ್ತ್ರದ ದಾಖಲಾತಿಗಳು ಬಹಳ ಕಡಿಮೆ ಇವೆ ಮತ್ತು ನೀವು ತರಬೇತಿ ಪಡೆದ ಪುರತತ್ವ ಶಾಸ್ತ್ರಜ್ಞನಾಗಿರುವುದರಿಂದ ಅದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದ್ದರು. ನಾನು ತಕ್ಷಣ ಕಾರ್ಯಪ್ರವೃತ್ತನಾದೆ, ತುಳುನಾಡು ಪ್ರದೇಶಕ್ಕೆ ಸಂಬಂಧಿಸಿದ ಎಲ್ಲಾ ವಿದ್ವತ್ಕರ್ಣ ಕೃತಿಗಳನ್ನು ಸಂಗ್ರಹಿಸಿದೆ. ನಾನು ಗಮನಿಸಿದ ಮೊದಲ ವಿಷಯವೆಂದರೆ ಭಾರತದ ವಿಸ್ತಾರವಾದ ಇತಿಹಾಸದಲ್ಲಿ ತುಳುನಾಡು ಪ್ರದೇಶದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಏಕೆಂದರೆ ಈ ಪ್ರದೇಶದ ಪ್ರಾಚೀನ ಇತಿಹಾಸದ ಬಗ್ಗೆ ಯಾವುದೇ ಸಂಶೋಧನೆ ಕೈಗೊಂಡಿಲ್ಲ. ಸ್ಥಳೀಯ ಇತಿಹಾಸ ಸುಮಾರು 3000 ವರ್ಷಗಳ ಹಿಂದಿನ ಮೆಗಾಲಿಥಿಕ್ ಅವಧಿಯೊಂದಿಗೆ ಪ್ರಾರಂಭವಾಯಿತು ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಇದು ನಿಜವಲ್ಲ, ಕಳೆದ ಎರಡು ದಶಕಗಳಲ್ಲಿ ನನ್ನ ಪರಿಶೋಧನೆಗಳು ಸುಮಾರು ಕ್ರಿಸ್ತಪೂರ್ವ 10,000 ವರ್ಷಗಳಿಂದ ಈ ಪ್ರದೇಶದಲ್ಲಿ ಮಾನವ ಅಸ್ತಿತ್ವದ ಪುರಾವೆಗಳನ್ನು ಕಂಡುಕೊಂಡಿವೆ. ಎಪ್ಪತ್ತರ ದಶಕದಲ್ಲಿ ಡಾ.ಪಿ.ಗುರುರಾಜ್ ಭಟ್, ಡಾ.ಎ.ಸುಂದರ, ಡಾ.ಬಿ.ವಸಂತ ಶೆಟ್ಟಿ, ಡಾ.ಎಚ್.ಆರ್.ರಘುನಾಥ ಭಟ್ ಮತ್ತು ಡಾ.ಪಿ.ಪಿ.ಶಿರೋಡ್ಕರ್ ಹೀಗೆ ಸುಮಾರು ಐವರು ವಿದ್ವಾಂಸರು ಈ ಪ್ರದೇಶದ ಮೊದಲ ಗಂಭೀರ ಅಧ್ಯಯನಗಳನ್ನು ಕೈಗೊಂಡಿದ್ದರು ಎಂದು ಪ್ರೊ.ಮುರುಗೇಶಿ ತಿಳಿಸಿದರು. ನಾನು ಈ ಸಂಶೋಧಕರು ಕಂಡುಹಿಡಿದಿರುವ ಇತಿಹಾಸ ಪೂರ್ವ ಸ್ಥಳಗಳಿಗೆ ಭೇಟಿ ನೀಡಿದೆ. ಇವುಗಳಲ್ಲಿ ಕೆಲವು ಈಗ ಅಸ್ತಿತ್ವದಲ್ಲಿಲ್ಲ ಎಂದು ತಿಳಿದು ಆಘಾತವಾಯಿತು. ಡಾ.ಎ.ಸುಂದರ ಕಂಡು ಹಿಡಿದ ಪ್ರಮುಖ ಸ್ಥಳ ಈಗ ಕಾಂಕ್ರೀಟ್ ಮನೆಗಳಿಂದ ಕೂಡಿದೆ. ಡಾ.ಎಚ್.ಆರ್.ರಘುನಾಥ್ ಭಟ್ ಅವರು ಪತ್ತೆ ಹಚ್ಚಿದ ತಾಣ ಮಿನಿ ಅಣೆಕಟ್ಟಿನಿಂದಾಗಿ ನೀರಿನಲ್ಲಿ ಮುಳುಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಗೋವಾದಲ್ಲಿ ಅಂತಹ ಅನೇಕ ತಾಣಗಳನ್ನು ಸ್ಮಾರಕಗಳಾಗಿ ಮಾಡಲಾಗಿದೆ ಮತ್ತು ಅವು ಪ್ರವಾಸಿ ಆಕರ್ಷಣೆಗಳಾಗಿ ಮಾರ್ಪಟ್ಟಿವೆ. ಪತ್ರಿಕೆಯ ಲೇಖನದಲ್ಲಿ ಉಲ್ಲೇಖಿಸಿರುವ ಸ್ಥಳದ ಅಸಾಮಾನ್ಯ ಹೆಸರನ್ನು ಗಮನಿಸಿ ತನಗೆ ಕುತೂಹಲ ಉಂಟಾಯಿತು ಮತ್ತು ಸ್ಥಳವನ್ನು ಅನ್ವೇಷಿಸಲು ನಿರ್ಧರಿಸಿದೆ. ಸ್ಥಳೀಯ ಜನರೊಂದಿಗೆ ಮಾಹಿತಿ ಪಡೆದು ಪ್ರಾಣಿ, ಮಾನವ ಮತ್ತು ಅಮೂರ್ತ ಜ್ಯಾಮಿತೀಯ ವಿನ್ಯಾಸಗಳನ್ನು ಹೊಂದಿರುವ ಸುಮಾರು ಐವತ್ತು ಶಿಲಾಲಿಪಿಗಳನ್ನು ನಾನು ಕಂಡುಕೊಂಡಿದ್ದೇನೆ. ಈ ವಿನ್ಯಾಸಗಳು ರಷ್ಯಾದಲ್ಲಿ ಕಂಡುಬರುವ ಮೆಸೋಲಿಥಿಕ್ ಯುಗದ ವಿನ್ಯಾಸಗಳು ಮತ್ತು ಕೇವಲ ಹರಪ್ಪಾದ ಮಡಿಕೆಗಳ ತುಣುಕುಗಳ ಮೇಲೆ ಕಂಡುಬರುವ ವಿನ್ಯಾಸಗಳನ್ನು ಹೋಲುತ್ತವೆ. ಇದು ಈ ಜನರ ನಡುವಿನ ಸಂಭವನೀಯ ಸಂಪರ್ಕದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.” ಎಂದು ಹೇಳಿದರು.
ಕೊಲ್ಲೂರು ಸಮೀಪದ ಮೀಸಲು ಅರಣ್ಯದಲ್ಲಿರುವ ಮೇಯುವ ಭೂಮಿ ಅವಲಕ್ಕಿ ಪಾಲೆಯಲ್ಲಿ, ಅವರ ತಂಡವು ಸುಮಾರು 12,000 ವರ್ಷಗಳ ಹಿಂದಿನ ಆಹಾರ ಸಂಗ್ರಹಣೆ ಜನಾಂಗಕ್ಕೆ ಸಂಬಂಧಿಸಿದ ಉಪಕರಣಗಳನ್ನು ಮತ್ತು ಬೇಟೆಯ ದೃಶ್ಯಗಳು ಚಿತ್ರಿಸುವ 19 ಬಂಡೆಗಳ ಕೆತ್ತನೆಗಳನ್ನು ಕಂಡುಹಿಡಿದಿದೆ ಎಂದು ಅವರು ಹೇಳಿದರು. ಅವರ ತಂಡವು ಸುಬ್ರಹ್ಮಣ್ಯ ಮತ್ತು ಉಡುಪಿ ಜಿಲ್ಲೆಯ ಗವಳಿ, ಪಳ್ಳಿ ಮತ್ತು ಅತ್ತೂರು-ಕುಂಡಾಜೆಯಂತಹ ಸ್ಥಳಗಳಲ್ಲಿಯೂ ಸಂಶೋಧನೆಯನ್ನು ಕೈಗೊಂಡಿದೆ. ಅವರ ಅಧ್ಯಯನಗಳು ಹಿಂದೆ ಏಕೀಕೃತ ಪ್ರದೇಶವಾಗಿದ್ದ ಗೋವಾದವರೆಗಿನ ಇಡೀ ತುಳುನಾಡು ಪ್ರದೇಶವನ್ನು ಒಳಗೊಂಡಿದೆ.
ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಷ್ ಬಸು ಸ್ವಾಗತಿಸಿದರು. ಶರ್ವಾಣಿ ಭಟ್ ಅತಿಧಿಗಳನ್ನು ಪರಿಚಯಿಸಿದರು.