ಮಂಗಳೂರು : ಮಾಂಡ್ ಸೊಭಾಣ್ ಆಯೋಜಿಸಿದ ನವದಿನಗಳ ಮಕ್ಕಳ ರಜಾ ಶಿಬಿರ ʻವೋಪ್ʼ ಇದರ ಸಮಾರೋಪ ಸಮಾರಂಭವು ದಿನಾಂಕ 05-05-2024ರಂದು ಶಕ್ತಿನಗರದ ಕಲಾಂಗಣದಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲಾಂಗಣ ಆಡಳಿತ ಸಮಿತಿ ಅಧ್ಯಕ್ಷ ರೊನಾಲ್ಡ್ ಮೆಂಡೊನ್ಸಾ ಮಾತನಾಡಿ “ಇದುವರೆಗೆ ಇಂತಹ ಶಿಬಿರಗಳಿಂದ ಸಾವಿರಾರು ಪ್ರತಿಭೆಗಳು ಬೆಳಕಿಗೆ ಬಂದಿವೆ. ಈ ಮೂಲಕ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ಶ್ರಮ ಪಡುತ್ತಿರುವ ಮಾಂಡ್ ಸೊಭಾಣ್ ಪದಾಧಿಕಾರಿಗಳು ಮತ್ತು ತರಬೇತುದಾರರನ್ನು ಅಭಿನಂದಿಸುತ್ತೇನೆ.” ಎಂದು ಹೇಳಿದರು.
ಶಿಬಿರದಲ್ಲಿ ಶ್ರೇಷ್ಟ ಪ್ರದರ್ಶನ ನೀಡಿದವರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿದರು. ಶಿಬಿರ ಶ್ರೇಷ್ಟಳಾಗಿ ಜಿಯಾನ್ನಾ ಫರ‍್ನಾಂಡಿಸ್ ಪಾಲಡ್ಕಾ ರೂಪಾಯಿ 3೦೦೦/-, ವಿಭಾಗಗಳ ಶ್ರೇಷ್ಠರಾಗಿ ಶರ್ಲಿನ್ ಪಿಂಟೊ ಬೊಂದೆಲ್ (ನೃತ್ಯ), ಆಲನಿ ದಾಂತಿ ಪರ‍್ನಾಲ್ (ನಾಟಕ), ವಿಯೊನಾ ಜಾನಿಸ್ ಪಿಂಟೊ (ಗಾಯನ) ಮತ್ತು ಸಂಜನಾ ರಿವಾ ಮತಾಯಸ್ (ಕೊಂಕಣಿ) ಆಯ್ಕೆಯಾದರು. ಎಲ್ಲರಿಗೂ ತಲಾ ರೂಪಾಯಿ 2೦೦೦/- ನಗದು ಬಹುಮಾನ ನೀಡಲಾಯಿತು.
ಗೌರವ ಅತಿಥಿಯಾಗಿ ಆಗಮಿಸಿದ ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ಹಾಗೂ ಕಲಾಕುಲ್ ನಾಟಕ ಡಿಪ್ಲೋಮಾ ಆಡಳಿತ ಸಮಿತಿ ಸದಸ್ಯರಾದ ವಿದುಷಿ ರಾಜಶ್ರೀ ಶೆಣೈ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಆಶ್ವಿನ್ ಕುಲಾಸೊ, ಬ್ಲೆಸಿಟಾ ಫರ್ನಾಂಡಿಸ್ ಮತ್ತು ಸ್ವೀಡಲ್ ಫುರ‍್ಟಾಡೊ ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಂಜನಾ ಮತಾಯಸ್, ಜೆನಿಶಾ ರೊಡ್ರಿಗಸ್ ಮತ್ತು ಮೆಲೊರಾ ಡಿಸೋಜ ಸ್ವರಚಿತ ಕವಿತೆಗಳನ್ನು ವಾಚಿಸಿದರು.
ಗೌರವ ಅತಿಥಿಗಳಾದ ಪ್ಲ್ಯಾಂಟ್ ಟೆಕ್ ಇಂಡಸ್ಟ್ರಿಯಲ್ ಸರ್ವಿಸಸ್ ಲಿಮಿಟೆಡ್ ಇದರ ನಿರ್ದೇಶಕ ಮತ್ತು ಸಂಗೀತಗಾರ ಲಾರೆನ್ಸ್ ಡಿ’ಸೋಜ ಗಂಟೆ ಬಾರಿಸಿ ತಿಂಗಳ ವೇದಿಕೆಗೆ ಚಲಾವಣೆ ನೀಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಸಂಘಟಕ ಸ್ಟ್ಯಾನಿ ಆಲ್ವಾರಿಸ್ ಮತ್ತು ತರಬೇತುದಾರರ ಪರವಾಗಿ ರೈನಾ ಸಿಕ್ವೇರಾ ಉಪಸ್ಥಿತರಿದ್ದರು.
ನಂತರ ಶಿಬಿರಾರ್ಥಿ ಮಕ್ಕಳೇ ನೃತ್ಯ, ಗಾಯನ ಕಾರ್ಯಕ್ರಮ ನೆರವೇರಿಸಿದರು. ಅರುಣ್ ರಾಜ್ ರೊಡ್ರಿಗಸ್ ಭಾವಾನುವಾದಿಸಿ, ವಿಕಾಸ್ ಕಲಾಕುಲ್ ನಿರ್ದೇಶಿಸಿದ ‘ವ್ಹಡ್ಲೊ ರಾಕ್ಕೊಸ್’, ‘ಧಾಕ್ಟೊ ಪಾದ್ರ‍್ಯಾಬ್’ (ಹಿರಿ ರಾಕ್ಷಸ, ಕಿರಿ ಪಾದ್ರಿ) ನಾಟಕ ಪ್ರಸ್ತುತವಾಯಿತು.
ಆಲನಿ ದಾಂತಿ ಮತ್ತು ಕ್ರಿಶಲ್ ಆಲ್ಮೇಡಾ ಸಭಾ ಕಾರ್ಯಕ್ರಮ ಹಾಗೂ ಶೊನ್ ಗೋಮ್ಸ್ ಮತ್ತು ವಿಯೊನಾ ಪಿಂಟೊ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಜಿಯಾನ್ನಾ ಫರ್ನಾಂಡಿಸ್ ವಂದಿಸಿದರು.