ಪುತ್ತೂರು : ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇದರ ವತಿಯಿಂದ ನೀಡಲಾಗುತ್ತಿರುವ ಮೂರನೇ ವರ್ಷದ ‘ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ, ಸಾಧಕರಿಗೆ ಅಭಿನಂದನೆ, ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ವಾರ್ಷಿಕ ಮಹಾಸಭೆಯು ದಿನಾಂಕ 04-05-2024ರಂದು ಜೈನ ಭವನ ಸಭಾಂಗಣದಲ್ಲಿ ನಡೆಯಿತು.
2024ನೇ ಸಾಲಿನಲ್ಲಿ ಸಂಘದ ವತಿಯಿಂದ ನೀಡಲಾಗುತ್ತಿರುವ ‘ಸ್ವರ್ಣ ಸಾಧನಾ ಪ್ರಶಸ್ತಿ’ಯನ್ನು ಸಾಹಿತ್ಯ ಕ್ಷೇತ್ರದ ಅನನ್ಯ ಸಾಧಕ, ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ನೀಡಲಾಯಿತು. ಸುಬ್ರಾಯ ಚೊಕ್ಕಾಡಿ ಹಾಗೂ ಲಕ್ಷ್ಮೀ ದಂಪತಿಯನ್ನು ಪ್ರಶಸ್ತಿಯೊಂದಿಗೆ ರೂ.15 ಸಾವಿರ ನಗದು, ಫಲಕ, ಸ್ಮರಣಿಕೆ, ಫಲಪುಷ್ಪಗಳೊಂದಿಗೆ ಗೌರವಿಸಲಾಯಿತು. ಕ್ಯಾಂಪ್ಲೋ ನಿವೃತ್ತ ಆಡಳಿತ ನಿರ್ದೇಶಕ ಕೆ. ಪ್ರಮೋದ್ ಕುಮಾರ್ ರೈ ಪ್ರಶಸ್ತಿ ಪ್ರದಾನ ಮಾಡಿದರು. ಸುಬ್ರಾಯ ಚೊಕ್ಕಾಡಿ ಕೃತಜ್ಞತೆ ಸಲ್ಲಿಸಿದರು.
ಅಭಿನಂದನಾ ಭಾಷಣ ಮಾಡಿದ ವಿವೇಕಾನಂದ ಮಹಾವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ ಎಚ್.ಜಿ. “ಪ್ರಕೃತಿಯೊಂದಿಗೆ ಮಾತನಾಡಲು ಮನೋಧರ್ಮ ಬೇಕು. ಕಾವ್ಯ ಪರಂಪರೆಯ ಮೂಲಕ ಅವರು ನಮ್ಮನ್ನು ಸೆಳೆದಿದ್ದಾರೆ. ತಮ್ಮ ಮನೆಯ ಎದುರಿನ ಒಂದು ಮರಕ್ಕೂ ರೆಕ್ಕೆ ಪುಕ್ಕ ದೃಶ್ಯ ಕಾವ್ಯವನ್ನು ಬೆಸೆದವರು. ಅವರ ಕವಿತೆಗಳಲ್ಲಿ ಅದ್ಭುತ ಲಯ, ಹಾಸ್ಯಗಳನ್ನು ಕಾಣಬಹುದು” ಎಂದರು.
ಇದೇ ಸಂದರ್ಭದಲ್ಲಿ ಸಂಘದಲ್ಲಿ ಸದಸ್ಯರಾಗಿದ್ದು 75, 80 ಮತ್ತು 85 ವರ್ಷ ಪ್ರಾಯ ಪೂರ್ಣಗೊಂಡ 48 ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು. ನಿಧನರಾದ ಸದಸ್ಯರಿಗೆ ಶ್ರದ್ದಾಂಜಲಿ ಸಲ್ಲಿಸಿದ ಬಳಿಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಉದ್ಯಮದಲ್ಲಿ ಸಾಧನೆ ಮಾಡಿದ ಎಸ್.ಆರ್ನ.ಕೆ. ಲ್ಯಾಡರ್‌ನ ಕೇಶವ ಅಮೈ, ದೆಹಲಿಯಲ್ಲೆ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (ಎನ್‌ಸಿಸಿ) ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ ವಿವೇಕಾನಂದ ಕಾಲೇಜ್ ವಿದ್ಯಾರ್ಥಿನಿ ತೇಜಸ್ವಿನಿ ವಿ. ಶೆಟ್ಟಿ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸ್ವಾತಿ ಎನ್.ವಿ., ಶಮಾ ಚಂದು ಕೂಡ್ಲು ಮತ್ತು ಪ್ರಣಮ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ದಕ್ಷಿಣ ಆಫ್ರಿಕಾದ ಟುನಿಷಿಯಾ ಅಂತರರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನದ ಪದಕ ವಿಜೇತ ವಿವೇಕಾನಂದ ಸಿ.ಬಿ.ಎಸ್.ಇ. ಶಾಲೆಯ ಆಪ್ತ ಚಂದ್ರಮತಿ ಮುಳಿಯ ಅವರಿಗೆ ಗೌರವ ಅರ್ಪಿಸಲಾಯಿತು.
ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಶಾಂತಿ ಟಿ. ಹೆಗಡೆ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ, ಜೊತೆ ಕಾರ್ಯದರ್ಶಿ ಎನ್. ಶಶಿಕಲಾ, ಉಪಾಧ್ಯಕ್ಷ ರಾಮದಾಸ್ ಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಲೀನಾ ಪುಡ್ತಾದೊ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ರೈ, ಕಾಂಚನ ಸುಂದರ ಭಟ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಐತಪ್ಪ ನಾಯ್ಕ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಉಪಾಧ್ಯಕ್ಷೆ ವತ್ಸಲಾ ರಾಜ್ಞಿ ನಿರೂಪಿಸಿದರು.