ಬೆಂಗಳೂರು : ಜಂಗಮ ಕಲೆಕ್ಟಿವ್ ಪ್ರಸ್ತುತ ಪಡಿಸುವ ‘ದಕ್ಲಕಥಾ ದೇವಿಕಾವ್ಯ’ ನಾಟಕದ ಪ್ರದರ್ಶನವು ಬೆಂಗಳೂರಿನ ರಂಗಶಂಕರದಲ್ಲಿ ದಿನಾಂಕ 12-09-2023ರಂದು ಸಂಜೆ ಗಂಟೆ 7.30ಕ್ಕೆ ನಡೆಯಲಿದೆ.
ಕೆ.ಬಿ. ಸಿದ್ದಯ್ಯನವರ ಆಯ್ದ ಬರಹಗಳನ್ನು ಆಧರಿಸಿದ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದು ಲಕ್ಷ್ಮಣ್ ಕೆ.ಪಿ.ಯವರು. ಇವರಿಗೆ ಸ್ಕಂದ ಘಾಟೆ ಹಾಗೂ ಶ್ರೀಹರ್ಷ ಜಿ.ಎನ್. ಸಹನಿರ್ದೇಶಕರಾಗಿ ಸಹಕರಿಸಿದ್ದಾರೆ. ನಾಟಕದ ಬೆಳಕಿನ ವಿನ್ಯಾಸವನ್ನು ಮಂಜು ನಾರಾಯಣ್ ಮಾಡಲಿದ್ದು, ವಸ್ತ್ರ ವಿನ್ಯಾಸ ಶ್ವೇತಾಮಣಿ ಎಚ್.ಕೆ. ಅವರದ್ದು. ನಾಟಕದಲ್ಲಿ ಪಾತ್ರಧಾರಿಗಳು ಮತ್ತು ಸಂಗೀತಗಾರರಾಗಿ ಬಿಂದು ರಕ್ಷಿದಿ, ರಮಿಕ ಚೈತ್ರ, ಸಂತೋಷ್ ದಿಂಡ್ಗೂರು, ನರಸಿಂಹರಾಜು ಬಿ.ಕೆ. ಹಾಗೂ ಭರತ್ ಡಿಂಗ್ರಿ ಕಲಾಭಿಮಾನಿಗಳನ್ನು ರಂಜಿಸಲಿದ್ದಾರೆ.
ಹೊಸ ರಂಗ ಪರಿಭಾಷೆಯನ್ನು ಬಹಳ ಜತನದಿಂದ ಕಟ್ಟಿ, ಯಾವುದೇ ಅಬ್ಬರವಿಲ್ಲದೆ ಹಿತಮಿತವಾದ ಸಂಗೀತ ಹಾಗೂ minimalistic stage design ಈ ನಾಟಕದ ಮೆರಗು. ಕೇವಲ ಆಧ್ಯಾತ್ಮಿಕ ಪುರಾಣ ಕಥೆಗಳಿಗೆ ಜೋತು ಬಿದ್ದಿರುವ ಈ ಸಮಯದಲ್ಲಿ ವಿಶಿಷ್ಟವಾದ ಒಂದು ಕಥೆಯನ್ನು ರಂಗರೂಪಕ್ಕೆ ತಂದಿರುವುದು, ಸಿದ್ಧ ಮಾದರಿಯನ್ನು ಮುರಿದು ನಟರ ಅಭಿವ್ಯಕ್ತಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಿ, ನಿರಾಕಾರದಿಂದ ಒಂದು ಆಕಾರವನ್ನು ಸೃಷ್ಟಿಸಿದ ನಿರ್ದೇಶಕರ ಸೃಜನಶೀಲತೆ ಶ್ಲಾಘನೀಯ.
ಮೇಲು ಕೀಳು ಕೇವಲ ಜನರನ್ನು ಮಾತ್ರ ಅಥವಾ ಒಂದು ಜನಾಂಗವನ್ನು ಮಾತ್ರ ದೂರವಿಟ್ಟಿಲ್ಲ. ಅವರ ಆಚರಣೆ, ಬದುಕು, ಕಥೆ ಹಾಗೂ ಅವರ ಸಂಗೀತ ಪರಿಕರಗಳನ್ನು ದೂರವಿಟ್ಟಿದೆ. ಇಂತಹ ನೆಲ ಮೂಲದ ತಮಟೆ, ಅರೆ ವಾದ್ಯಗಳನ್ನು ರಂಗದ ಮೇಲೆ ತಂದು ಸೂಕ್ಷ್ಮಾತಿಸೂಕ್ಷ್ಮ ನಾದ-ಲಯದೊಂದಿಗೆ ಮನುಷ್ಯನ ವಿಕಾರಗಳನ್ನು, ನೋವು-ಹಸಿವನ್ನು, ಮಣ್ಣು-ಹೆಣ್ಣನ್ನು, ಮುಟ್ಟು-ಹುಟ್ಟನ್ನು ಕೆದಕುವ ಪರಿ ಎಲ್ಲೋ ನಮ್ಮನ್ನೇ ಅಣಕಿಸುವಂತಿದೆ. ಶಿಷ್ಟ ಜಗತ್ತಿನ ಸಾತ್ವಿಕರ ನಡುವೆ ಹಸಿವೆಂಬ ಮಹಾಮಾರಿ ನಮ್ಮೆಲ್ಲರನ್ನು ಆವರಿಸಿಕೊಳ್ಳುವ, ನಾನು, ನನ್ನದು ಎನ್ನುವ ಅಹಂಭಾವವನ್ನು ಕೆಣಕುವಂತಿದೆ.
ಜಂಗಮ ಕಲೆಕ್ಟಿವ್ :
ಜಂಗಮ ಕಲೆಕ್ಟಿವ್ ಒಂದು ಚಲನೆ ಮತ್ತು ರೂಪಾಂತರ ತತ್ವಗಳಲ್ಲಿ ನಂಬಿಕೆ ಇರುವ ವಿಭಿನ್ನ ಹಿನ್ನಲೆಯ ಕಲಾವಿದರ ಸಮೂಹ. ಸಾಂಸ್ಕೃತಿಕ ಎಚ್ಚರ ಮತ್ತು ಅರಿವನ್ನು ಹಬ್ಬಿಸುವ ಕಾಯಕವನ್ನು ಮುಖ್ಯವೆಂದು ಭಾವಿಸಿ ಅದಕ್ಕಾಗಿ ರಂಗಭೂಮಿಯನ್ನು ತನ್ನ ಅಭಿವ್ಯಕ್ತಿಯ ದಾರಿಯಾಗಿಸಿಕೊಂಡಿದೆ. ಮತ್ತದರ ವಿಸ್ತರಣೆವೆಂಬಂತೆ ಶಿಕ್ಷಣ, ಸಾಹಿತ್ಯ, ಪ್ರಕಾಶನ, ಸಿನೆಮಾ, ಸಾಮಾಜಿಕ ಹೋರಾಟಗಳಂತಹ ಸೃಜನಶೀಲ ಪ್ರಕ್ರಿಯೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಕರ್ನಾಟಕವನ್ನು ತನ್ನ ಮುಖ್ಯ ಪ್ರಯೋಗ ಭೂಮಿಯಾಗಿಸಿಕೊಂಡು ಜೊತೆಗೆ, ದೇಶ ವಿದೇಶಗಳಲ್ಲಿ ಸಾಂಸ್ಕೃತಿಕ ಜೀವಂತಿಕೆಯನ್ನು ಕಾಪಾಡಿಕೊಳ್ಳಲು ಕೈ ಜೋಡಿಸುತ್ತ ಆ ಮೂಲಕ ಜೀವತತ್ವ ಪ್ರತಿಪಾದಿಸುವ ರಾಜಕೀಯ ಪ್ರಶ್ನೆಯನ್ನು ರೂಪಿಸುತ್ತ ನಾವಿರುವ ನೆಲದ ಮತ್ತು ಸುತ್ತಲಿನ ಜನ ಸಮುದಾಯಗಳ ಬದುಕಿನ ಜೊತೆಗೆ ಬೆರೆತು ಹೋಗುವುದು ಜಂಗಮದ ಮುಖ್ಯ ತುಡಿತ.