ದಕ್ಲಕಥಾ ದೇವಿ ಕಾವ್ಯ ,ನಮ್ಮ ಅರಿವಿಗೆ ಸಿಗದ ಯಾವುದೋ ಒಂದು ಲೋಕದ ಅನಾವರಣ .ಕೂಳ್ಗುದಿಯೊಂದನ್ನು ಹೊರ ನಿಂತು ನೋಡುವುದಕ್ಕೂ ,ತಾನೆ ಅನುಭವಿಸುವುದಕ್ಕೂ ಅಂತರವಿದೆ,”ನಾನಾಗಿ ನೋಡು” “ಹೆಣ್ಣಾಗಿ ಹುಟ್ಟಿ ನೋಡು”ಎಂದು ಎಚ್ಚರಿಸುತ್ತಾ ನಮ್ಮ ಅನುಕಂಪದ ಸೋಗಲಾಡಿತನದ ಮುಖವಾಡ ಕಳಚುವ ಧ್ವನಿಯೊಂದು ಪ್ರಸ್ತುತಿಯ ನಂತರವೂ ಕಾಡುತ್ತದೆ .ಕುಡ್ ದ್ರಾ ..ತಿಂದ್ರಾ ..ಮಲಿಕಲಿ ಎಂದು ಅಣಕಿಸುತ್ತದೆ .ದಕ್ಲರು ಯಾರು ? ಎಲ್ಲಿಂದ ಹುಟ್ಟಿದ್ದು ,ಪಾದದಿಂದಲೇ..ಹೊಟ್ಟೆಯಿಂದಲೇ ,ನಾನು ಹುಟ್ಟಿನಿಂದ ಅಸ್ಪೃಶ್ಯ ,ಹೀಗೆ ಪ್ರಶ್ನೆಗಳೇ ಉತ್ತರಗಳಾಗಿ ಪ್ರಜ್ಞೆಯನ್ನು ಕದಡುವ ಕಾವ್ಯದ ಒಳಗೊಂದು ಒಪ್ಪವಾದ ದೇವಿ ಕತೆಯಿದೆ . ದಕ್ಲರಂತಹ ಅದೆಷ್ಟೋ ಅನನ್ಯ ಪರಂಪರೆಗಳ ಪ್ರಾತಿನಿಧಿಕ ಚಿತ್ರವಿದು .ಎಲ್ಲರೂ ಒಂದೇ ಎನ್ನುವ ಘೋಷಣೆಯಡಿಯಲ್ಲಿ ಕಳೆದುಹೋಗಲಿರುವ ಜನಪದರ ಲೋಕವನೊಮ್ಮೆ ಎಲ್ಲರು ನೋಡಲೇಬೇಕು .ಹಾಡು, ಮಾತು, ತಮಟೆ, ನೆರಳು, ಬೆಳಕು, ದೃಶ್ಯಗಳ ಹದವಾದ ಪಾಕ, ವಾಸ್ತವದೊಳಗಿನ ನಾಟಕ, ನಾಟಕದೊಳಗಿನ ನಮ್ಮನ್ನು ಪರಿಚಯಿಸುತ್ತದೆ . ಇನ್ನೇನೋ ಇದೆ ಎನ್ನುವಂತೆ
ಕಾಯುವಾಗ ನಾಟಕ ಮುಗಿಯುತ್ತದೆ ,ಪ್ರಜ್ಞೆಯೊಳಗಿಳಿಯುತ್ತದೆ .ವಿಶಿಷ್ಟವಾದ ಪ್ರಯೋಗಕ್ಕೆ ಮೊದಲು ಮಾಡಿದ ಜಂಗಮ ತಂಡದ ನಿರ್ದೇಶಕ ನಟ ಹಾಗು ತಾಂತ್ರಿಕವರ್ಗಕ್ಕೆ ಅಭಿನಂದನೆಗಳು ..
-ಚೇತನ್ ಕೊಪ್ಪ
ಚಿತ್ರ- ಅರವಿಂದ ಕುಡ್ಲ