ಮಂಗಳೂರು : ವಿದ್ಯಾರ್ಥಿಗಳಲ್ಲಿರುವ ಕಲೆಯ ಆಸಕ್ತಿಯನ್ನು ವ್ಯವಸ್ಥಿತ ರೀತಿಯಲ್ಲಿ ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ರೂಪುಗೊಂಡ ನಾದನೃತ್ಯ ತಿಂಗಳ ಸರಣಿ ಕಾರ್ಯಕ್ರಮಗಳು ನಡೆದವು. ನಾದನೃತ್ಯ ಕಲಾಶಾಲೆಯ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವು ಕಳೆದೆರಡು ವರುಷಗಳಿಂದ ಮೂಡಿಬರುತ್ತಿದೆ. ದಿನಾಂಕ 28 ಆಗಸ್ಟ್ 2025ರಂದು ಚಿಲಿಂಬಿಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಹಾಗೂ ದಿನಾಂಕ 28 ನವೆಂಬರ್ 2025ರಂದು ಉರ್ವ ಮಾರಿಯಮ್ಮ ದೇವಸ್ಥಾನದಲ್ಲಿ ಡಾ. ಭ್ರಮರಿಯ ಶಿಷ್ಯೆಯರಾದ ಕುಮಾರಿ ಮಹಾಲಕ್ಷ್ಮೀ ಶೆಣೈ ಹಾಗೂ ಕುಮಾರಿ ಮೇಧಾ ರಾವ್ ಇವರ ವೈಯಕ್ತಿಕ ನೃತ್ಯ ಪ್ರದರ್ಶನಗಳು ಗಣ್ಯರು ಹಾಗೂ ಸಹೃದಯರ ಸಮ್ಮುಖ ನಡೆಯಿತು.

ಕಲಿಕೆಯ ಹಂತಗಳಾದ ಅಧ್ಯಯನ-ಮನನ-ಧ್ಯಾನ-ಧಾರಣದ ಕೌಶಲ್ಯಗಳನ್ನು ಭರತನಾಟ್ಯದ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಈ ಕಾರ್ಯಕ್ರಮಗಳನ್ನು ಸಂಯೋಜಿಸಲಾಗಿತ್ತು. ಪ್ರದರ್ಶನ ನೀಡುವ ವಿದ್ಯಾರ್ಥಿಗಳು ತಮ್ಮ ಇಷ್ದದ ನೃತ್ಯಬಂಧಗಳನ್ನು ಸುಮಾರು ಒಂದು ತಾಸಿನವರೆಗೆ ನರ್ತಿಸಿ ನೆರೆದ ಸಹೃದಯರನ್ನು ರಂಜಿಸಿದರು.
ಕುಮಾರಿ ಮಹಾಲಕ್ಷ್ಮೀಯು ವಿನಾಯಕ ಸ್ತುತಿಯಿರುವ ತೋಡಯ ಮಂಗಲ, ನಟೇಶ ಕೌತ್ವಂ, ಗುಮ್ಮನ ಕರೆಯದಿರೆ ದೇವರನಾಮ, ರಂಜನಿಮಾಲಾ ದೇವೀಸ್ತುತಿ ಹಾಗೂ ವೇಂಕಟಾಲನಿಲಯಂ ದೇವರನಾಮಗಳನ್ನು ನರ್ತಿಸಿದಳು. ಕುಮಾರಿ ಮೇಧಾ ರಾವ್ ವಿನಾಯಕ ಸ್ತುತಿಯಿರುವ ಪುಷ್ಪಾಂಜಲಿ, ನರಸಿಂಹ ಕೌತ್ವಂ, ಶ್ರೀಕೃಷ್ಣಃ ಕಮಲಾನಾಥೋ ಪದವರ್ಣ ಹಾಗೂ ರಂಜನಿಮಾಲಾ ದೇವೀಸ್ತುತಿಗಳನ್ನು ನರ್ತಿಸಿ ರಂಜಿಸಿದಳು.
ಕುಮಾರಿ ಮಹಾಲಕ್ಷ್ಮೀ ಶೆಣೈಳ ಕಾರ್ಯಕ್ರಮವನ್ನು ಶಿರಡಿ ಸಾಯಿ ಬಾಬಾ ಮಂದಿರದ ವರಿಷ್ಟರಾದ ಶ್ರೀ ಪ್ರತಾಪಚಂದ್ರ ಶೆಟ್ಟಿಯವರು ದೀಪ ಬೆಳಗಿಸಿ ಶುಭಾರಂಭಗೈದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಲೆಕ್ಕಪರಿಶೋಧಕರಾದ ಎಂ. ರಾಯಪ್ಪ ನಾಯಕ್ ಹಾಗೂ ಇನ್ನೋರ್ವ ಲೆಕ್ಕ ಪರಿಶೋಧಕ ಗೌತಮ್ ನಾಯಕ್ ಇವರು ಶಾಸ್ತ್ರೀಯ ನೃತ್ಯಕಲಿಕೆಯ ಅಂಗವಾಗಿ ಮೂಡಿಬರುತ್ತಿರುವ ಇಂಥ ಕಾರ್ಯಕ್ರಮಗಳಿಂದಾಗುವ ಪ್ರಯೋಜನಗಳನ್ನು ಗುರುತಿಸಿ ನಾದನೃತ್ಯ ಕಲಾಸಂಸ್ಥೆಯ ಈ ಪ್ರಯತ್ನವನ್ನು ಶ್ಲಾಘಿಸಿದರು.

ಕುಮಾರಿ ಮೇಧಾಳ ನೃತ್ಯ ಕಾರ್ಯಕ್ರಮವನ್ನು ಉರ್ವ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಲಕ್ಷ್ಮಣ ಆಮೀನ್ ಕೋಡಿಕಲ್ ಹಾಗೂ ಮೊಕ್ತೇಸರರುಗಳಾದ ಮಾಧವ ಪುತ್ರನ್ ಹಾಗೂ ಯಾದವ ಸುವರ್ಣ ಇವರು ದೀಪ ಬೆಳಗಿಸಿ ಶುಭಕೋರಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಸಸ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಚಿತ್ರಕಲಾವಿದ ಪ್ರೊ. ಅನಂತಪದ್ಮನಾಭ ರಾವ್ ಇವರು ಮಾತನಾಡಿ ಭರತನಾಟ್ಯ ಕಲಿಕೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಇಂಥ ನೃತ್ಯ ಕಾರ್ಯಕ್ರಮಗಳ ಕೊಡುಗೆಯನ್ನು ಹಾಗೂ ಅದಕ್ಕೆ ಪೋಷಕವಾಗಿರುವ ಡಾ. ಭ್ರಮರಿಯವರ ಕಲಾಹಿನ್ನೆಲೆಯನ್ನು ಗುರುತಿಸಿ ಪ್ರಶಂಸಿಸಿ ವಿದ್ಯಾರ್ಥಿಯನ್ನು ಆಶೀರ್ವದಿಸಿದರು.

ಈ ಎರಡೂ ಕಾರ್ಯಕ್ರಮಗಳ ಮೊದಲ ನೃತ್ಯಬಂಧವನ್ನು ಡಾ. ಭ್ರಮರಿಯವರು ತಮ್ಮ ಶಿಷ್ಯೆಯೊಂದಿಗೆ ನರ್ತಿಸಿ ಪ್ರೋತ್ಸಾಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಹಾಗೂ ಇಂಗ್ಲೀಷಿನಲ್ಲಿ ನಾದನೃತ್ಯದ ವಿದ್ಯಾರ್ಥಿನಿಯರಾದ ಅದಿತಿ ಎಚ್., ಸಮನ್ವಿತಾ ಶರ್ಮ, ಚಿನ್ಮಯಿ ಕೋಟ್ಯಾನ್ ಹಾಗೂ ಪ್ರಾಪ್ತ ಶೆಟ್ಟಿ ನೆರವೇರಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನಾದನೃತ್ಯದ ಪೋಷಕರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
