ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 01-07-2024ರಂದು ಸಂಜೆ ಗಂಟೆ 6.25ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀಮತಿ ಅನ್ನಪೂರ್ಣ ರಿತೇಶ್ ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಅನ್ನಪೂರ್ಣ ರಿತೇಶ್ ಇವರು ಶ್ರೀ ಚಂದ್ರಶೇಖರ ಶೆಟ್ಟಿ ಮತ್ತು ಶ್ರೀಮತಿ ಮಾಲತಿ ಶೆಟ್ಟಿ ದಂಪತಿಗಳ ಸುಪುತ್ರಿ. ಕೊಟ್ಟಾರದ ಭರತಾಂಜಲಿ ಸಂಸ್ಥೆಯ ಗುರುದಂಪತಿಗಳಾದ ವಿದುಷಿ ಪ್ರತಿಮಾ ಶ್ರೀಧರ್ ಹಾಗೂ ಶ್ರೀಧರ್ ಹೊಳ್ಳ ಭರತನಾಟ್ಯದ ಅಭ್ಯಾಸವನ್ನು ಪ್ರಾರಂಭಿಸಿದರು.
ಮುಲ್ಕಿಯ ವಿಜಯ ಕಾಲೇಜಿನಲ್ಲಿ ಬಿ.ಬಿ.ಎಂ. ಪದವಿ ಮತ್ತು ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರೈಸಿ, ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಭರತನಾಟ್ಯದ ಎಂ.ಎ. ಪದವಿಯನ್ನು ಪ್ರಥಮ ಶ್ರೇಣಿಯೊಂದಿಗೆ ಪಡೆದಿರುವ ಇವರು ಕರ್ನಾಟಕ ಸಂಗೀತ ಅಕಾಡೆಮಿಯು ಕೊಡುವಂತಹ ಶಿಷ್ಯ ವೇತನವನ್ನು ಪಡೆದಿರುತ್ತಾರೆ. ಶಿವಪ್ರಣಾಮ್ ನೃತ್ಯ ಶಾಲೆ ಎಂಬ ಸಂಸ್ಥೆಯನ್ನು 2014ರಲ್ಲಿ ಸ್ಥಾಪಿಸಿ, ತರಗತಿಯನ್ನು ಮಾಡುತ್ತಿದ್ದಾರೆ. ದೂರದರ್ಶನದ ಗ್ರೇಡೆಡ್ ಕಲಾವಿದೆಯಾಗಿರುವ ಇವರು ಗುರುವಂದನೆಯೊಂದಿಗೆ ‘ನೃತ್ಯ ಸಂಧ್ಯಾ’ ಎನ್ನುವ ಏಕವ್ಯಕ್ತಿ ಕಾರ್ಯಕ್ರಮ ನೀಡಿರುತ್ತಾರೆ.