ಸಾಣೇಹಳ್ಳಿ : ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಮತ್ತು ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ದಿನಾಂಕ 28-06-2204ರಂದು 2024-25ನೆಯ ಸಾಲಿನ ‘ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ’ ಸಮಾರಂಭವು ನಡೆಯಿತು.
ಈ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ “ಪ್ರೌಢಶಾಲೆ ಎಷ್ಟು ಮುಖ್ಯವೋ ಪ್ರಾಥಮಿಕ ಶಾಲೆಯೂ ಅಷ್ಟೇ ಮುಖ್ಯ. ಅಧ್ಯಾಪಕರು ಆಸಕ್ತಿಯನ್ನು ವಹಿಸಿ ಬೋಧನೆ ಮಾಡಬೇಕು, ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕೇಳಬೇಕು. ಆಗ ಮಾತ್ರ ಕಲಿಕೆಯಲ್ಲಿ ಮುಂದುವರಿಯಲು ಸಾಧ್ಯ. ಕೇವಲ ಅಂಕಗಳಿಂದಲೇ ವಿದ್ಯಾರ್ಥಿಯ ಗುಣಮಟ್ಟವನ್ನು ಅಳೆಯುವುದು ಸರಿಯಾದ ಕ್ರಮವಲ್ಲ. ವಿದ್ಯಾರ್ಥಿಗಳು ಓದಿನ ಜೊತೆ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಓದುವುದರೊಂದಿಗೆ ನಮ್ಮ ನಡೆ ನುಡಿಗಳೂ ಮುಖ್ಯ. ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆಗಳನ್ನು ಬಿಟ್ಟು ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ಮತ್ತು ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ನೀಡುವ ಕೆಲಸವೂ ಆಗಬೇಕು” ಎಂದರು.
ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಕಾರ್ಯ ನೆರವೇರಿಸಿದ ಹಿರಿಯೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ. ತಿಪ್ಪೇಸ್ವಾಮಿ ಮಾತನಾಡಿ “ವಿದ್ಯಾರ್ಥಿ ಸಂಘಗಳ ಉದ್ದೇಶ ಪರಸ್ಪರ ಪ್ರೀತಿ ವಿಶ್ವಾಸದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು. ಸಾಣೇಹಳ್ಳಿಯ ಶಾಲೆ ಉತ್ತಮ ನಾಗರೀಕತೆ ಸಂಸ್ಕೃತಿ ಕಲಿಸುತ್ತದೆ. ಶಿಕ್ಷಕರಿಗೆ ಉತ್ತಮ ಧ್ಯೇಯ ಇದ್ದಾಗ ಮಾತ್ರ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೇರಿಸಲು ಸಾಧ್ಯ. ಸಾಣೇಹಳ್ಳಿಯಲ್ಲಿ ಕಲಿತ ಮಕ್ಕಳು ಮುಂದೆ ಎಲ್ಲ ಜವಾಬ್ದಾರಿ ಹೊರಲಿಕ್ಕೆ ಸಿದ್ಧರಾಗಿರುತ್ತಾರೆ” ಎಂದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಶಿವಕುಮಾರ ವಿದ್ಯಾವರ್ಧಕ ಸಂಘ ಉಪಾಧ್ಯಕ್ಷರಾದ ಡಿ.ವಿ. ಗಂಗಾಧರಪ್ಪ ಮಾತನಾಡಿ “ಶಾಲೆ ಅಭಿವೃದ್ಧಿ ಹೊಂದಬೇಕಾದರೆ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರ ಪಾತ್ರವೂ ಮುಖ್ಯವಾಗಿದೆ. ಇಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿಭಾ ಪುರಸ್ಕಾರ ಪಡೆಯಬೇಕು. ಸಾಣೇಹಳ್ಳಿಯಲ್ಲಿ ಓದಿದ ಮಕ್ಕಳು ದೇಶವಿದೇಶಗಳಲ್ಲಿ ಓದುತ್ತಿದ್ದಾರೆ. ಸಂಸ್ಕೃತಿಯಿಂದ ಕೂಡಿದ ಶಿಕ್ಷಣ ಸಾಣೇಹಳ್ಳಿಯಲ್ಲಿ ದೊರೆಯುತ್ತದೆ” ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕೆ.ಸಿ. ಶಿವಮೂರ್ತಿ ಮಾತನಾಡಿ “ಪೋಷಕರು ಮತ್ತು ಬೋಧಕರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಇತ್ತೀಚಿಗೆ ಅನೇಕ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ. ಎಲ್ಲ ಪೋಷಕರು ಸರಕಾರಿ ಶಾಲೆಗಳನ್ನು ಬಿಟ್ಟು ಹಣ ಖರ್ಚು ಮಾಡಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಸೇರಿಸುತ್ತಿರುವುದು ನೋವಿನ ಸಂಗತಿ. ಸರಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಅಧ್ಯಾಪಕರು ಇದ್ದಾರೆ. ಅದನ್ನು ಪೋಷಕರು ಅರ್ಥ ಮಾಡಿಕೊಂಡು ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು” ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರುಪಾದೇಶ್ವರ ಪ್ರೌಢಶಾಲೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಎ.ಸಿ. ಚಂದ್ರಣ್ಣ ಮಾತನಾಡಿ “ಸಾಣೇಹಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡ್ತಾ ಇರುವಂಥವರೇ ಪುಣ್ಯವಂತರು. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲೂ ಮುಂದು ಇರಬೇಕು. ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳು ಪಠ್ಯಕ್ರಮಕ್ಕೆ ಪೂರಕವಾಗಿರುವಂಥವು ಮತ್ತು ಸಂಸ್ಕಾರ ಸಂಸ್ಕೃತಿಯನ್ನು ಬೆಳೆಸುವಂಥವು. ಇಲ್ಲಿಗೆ ಕಲಿಕೆಯಲ್ಲಿ ತುಂಬಾ ಹಿಂದುಳಿದ ಮಕ್ಕಳು ಬಂದು ಸೇರುವರು. ಅಂತಹ ವಿದ್ಯಾರ್ಥಿಗಳು ಸಂಸ್ಕಾರ, ಸಂಸ್ಕೃತಿ ಕಲಿತು ಒಳ್ಳೆಯ ಉದ್ಯೋಗದಲ್ಲಿರುವುದನ್ನು ಕಾಣುತ್ತೇವೆ” ಎಂದರು.
ವಿದ್ಯಾರ್ಥಿಗಳು ವಚನಗೀತೆ, ಸಾಮೂಹಿಕ ಪ್ರಾರ್ಥನೆ ಮತ್ತು ಆಕರ್ಷಕ ನೃತ್ಯರೂಪಕಗಳನ್ನು ನಡೆಸಿಕೊಟ್ಟರು. ಕರಿಬಸಮ್ಮ ಸಿ. ಸ್ವಾಗತಿಸಿ, ಲಂಕೇಶ್ ವಂದಿಸಿದರು. ಜ್ಞಾನೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯರಾದ ಕೆ.ಆರ್. ಬಸವರಾಜ, ಬಿ.ಎಸ್. ಶಿವಕುಮಾರ್ ಮತ್ತು ಎ.ಎಸ್. ಶಿಲ್ಪಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.