ನೃತ್ಯ ಪ್ರಸ್ತುತಿಯ ಕಾರ್ಯಕ್ರಮದಲ್ಲಿ, ಕಲಾರಸಿಕರ ಸಮ್ಮುಖದಲ್ಲಿ ಕಲಾವಿದರು ಏಕವ್ಯಕ್ತಿ ನೃತ್ಯ ಪ್ರದರ್ಶನ ಮಾಡುವುದಕ್ಕೂ ಮತ್ತು ಸಮೂಹ ನೃತ್ಯದಲ್ಲಿ ಒಂದು ಕಥಾವಸ್ತುವಿನ ಸುತ್ತ ಹೆಣೆಯಲಾದ ‘ನೃತ್ಯರೂಪಕ’ವನ್ನು ಬಹು ಕಲಾವಿದರು ಸೇರಿ ಸಾಕಾರಗೊಳಿಸುವುದಕ್ಕೂ ಅಪಾರ ವ್ಯತ್ಯಾಸವಿದೆ ಹಾಗೂ ಅದರಲ್ಲಿ ಅಷ್ಟೇ ಪರಿಶ್ರಮವಿದೆ – ಸಮಗ್ರತೆಯ ಸಾತತ್ಯವಿದೆ.

ದಿನಾಂಕ 26 ಜನವರಿ 2026ರಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ಖ್ಯಾತ ನಾಟ್ಯಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಅವರ ಶಿಷ್ಯೆ ಹಾಗೂ ಮಗಳಾದ ಡಾ. ಪಿ. ಸಾಧನಶ್ರೀ ನೇತೃತ್ವದಲ್ಲಿ ‘ಸಾಧನ ಸಂಗಮ ಟ್ರಸ್ಟ್’ ನೃತ್ಯಶಾಲೆಯು ನಡೆಸಿದ ‘ಬಹುಳ ನೃತ್ಯೋತ್ಸವ’ ಬಹು ಯಶಸ್ವಿಯಾಗಿ ಮೂರು ಹೃದಯಸ್ಪರ್ಶಿ ನೃತ್ಯರೂಪಕಗಳೊಂದಿಗೆ ಕಣ್ಮನ ತಣಿಸಿತು.


ಶುಭಾರಂಭದಲ್ಲಿ ‘ನಾಟ್ಯ ದೇಗುಲ ಡ್ಯಾನ್ಸ್ ಸ್ಕೂಲ್’ ಕಲಾತ್ಮಕ ನಿರ್ದೇಶಕ ವಿ.ಎಂ. ಸ್ವಾಮಿ ಅವರ ಶಿಷ್ಯರಿಂದ ಸ್ವಾಗತ ನರ್ತನ ಮತ್ತು ಭಾರತೀಯ ವಿವಿಧ ಶಾಸ್ತ್ರೀಯ ನೃತ್ಯಶೈಲಿಗಳ ಸಮಾಗಮದಲ್ಲಿ ಅರ್ಪಿಸಲಾದ ‘ಮಹಾ ಗಣಪತಿ’ಯ ಪ್ರಾರ್ಥನೆ ಚೇತೋಹಾರಿಯಾಗಿತ್ತು. ಮೊದಲಿಗೆ ಯಕ್ಷಗಾನದ ಮಟ್ಟುವಿನಲ್ಲಿ ಮೂಡಿ ಬಂದ ಭಾಗವತರ ಹಾಡುಗಾರಿಕೆಗೆ ವಿಶಿಷ್ಟ ಹೆಜ್ಜೆ ಕುಣಿತದಲ್ಲಿ ಗಣಪತಿಯ ಶ್ಲೋಕ, ಅನಂತರ ಭರತನಾಟ್ಯ, ಕುಚಿಪುಡಿ, ಮೋಹಿನಿಯಾಟ್ಟಂ, ಕಥಕ್ಕಳಿ ಮತ್ತು ಕಥಕ್ ಮುಂತಾದ ಪಂಚ ನೃತ್ಯಶೈಲಿಗಳಲ್ಲಿ ಗಣಪತಿಯ ದೈವಾರಾಧನೆ ಆಕರ್ಷಕ ವೇಷಭೂಷಣಗಳಿಂದ, ಮನಮೋಹಕ ಆಂಗಿಕಾಭಿನಯ- ಅಭಿನಯಗಳಿಂದ ರಸಾನುಭವ ನೀಡಿತು. ನೃತ್ಯದ ಎಲ್ಲಾ ಆಯಾಮಗಳನ್ನು ಪ್ರದರ್ಶಿಸಿದ, ವಿವಿಧ ನೃತ್ಯ ಶೈಲಿಗಳ ಸಂಗಮ ವನಮೋಹಕವಾಗಿ ಮೂಡಿ ಬಂತು.


ಅನಂತರ ‘ದಿ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’ನ ನಾಟ್ಯಗುರು ವಿದುಷಿ ಅಕ್ಷರ ಭಾರಧ್ವಾಜ್ ಇವರ ಅಮೋಘ ನೃತ್ಯಸಂಯೋಜನೆ- ಪರಿಕಲ್ಪನೆಯಲ್ಲಿ ಮೈದಾಳಿದ ಅವರ ಶಿಷ್ಯರು ಸಾಕ್ಷಾತ್ಕರಿಸಿದ – ‘ರಸ ರಾಜ’ – ಸದಾಶಿವನ ಜೀವನದ ಪ್ರಮುಖ ಘಟನೆಗಳನ್ನು ಸಾಂದ್ರೀಕೃತವಾಗಿ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರಿಸಿದ ವಿಶೇಷ ನೃತ್ಯರೂಪಕ ಚಿರಸ್ಮರಣೀಯವಾಗಿತ್ತು. ಕಲಾವಿದರ ಪರಕಾಯ ಪ್ರವೇಶದ ಅಭಿನಯ ತಾದಾತ್ಮ್ಯ ಮನನೀಯವಾಗಿತ್ತು. ಪ್ರತಿಯೊಂದು ಪಾತ್ರಗಳನ್ನೂ ಆಳವಾಗಿ ಪರಿಭಾವಿಸಿ, ಹೃದಯಂಗಮವಾಗಿ ಕಟ್ಟಿಕೊಡಲಾದ ರೂಪಕದಲ್ಲಿ ಬಳಸಲಾದ ಪರಿಕರಗಳು, ಸಹಜತೆಯಲ್ಲಿ ಸ್ಪರ್ಶಿಸಿದ ಪಾತ್ರಗಳ ವೇಷ-ಭೂಷಣ, ಪ್ರಸಾಧನ ಪ್ರತಿಯೊಂದು ಇಲ್ಲಿ ಪಾತ್ರವಾಗಿ ಮೆರೆದಿತ್ತು. ಸನ್ನಿವೇಶಗಳ ರಚನೆ – ದೃಶ್ಯ ನಿರ್ಮಾಣ ಗಮನಾರ್ಹವಾಗಿದ್ದು, ಪ್ರತಿಯೊಬ್ಬರೂ ಮನದುಂಬಿ ಅಭಿನಯಿಸಿದ್ದು, ಸನ್ನಿವೇಶಕ್ಕೆ ತಕ್ಕಂತೆ ನರ್ತಿಸಿದ್ದು, ನೃತ್ಯ ಸಂಯೋಜನೆ ರೂಪುಗೊಂಡಿದ್ದು ನಿಜಕ್ಕೂ ಶ್ಲಾಘನೀಯವಾಗಿತ್ತು. ಕಥೆ ಹಳೆಯದಾದರೂ ಅದಕ್ಕೆ ನೀಡಿದ ನವ ಆಯಾಮದ ಮಿನುಗು, ಮೆರುಗು ಹೃದಯಂಗಮವಾಗಿತ್ತು. ಹೊಸ ಪರಿಕಲ್ಪನೆ- ಪ್ರಯೋಗಗಳಿಗೆ ಹೆಸರಾದ ಸೃಜನಶೀಲ ಸಂಯೋಜಕಿ ಅಕ್ಷರ ಅವರ ಪರಿಶ್ರಮ ಎದ್ದು ಕಾಣುತ್ತಿತ್ತು.


ವರ್ಷವಿಡೀ ಹೊಸ ಚಟುವಟಿಕೆ, ಮುನ್ನಡೆ- ಪ್ರಯೋಗಗಳ ಮೂಲಕ ನೃತ್ಯರಂಗದಲ್ಲಿ ತನ್ನದೇ ಆದ ಗಮನಾರ್ಹ ಸ್ಥಾನ ಗಳಿಸಿರುವ ‘ಸಾಧನ ಸಂಗಮ’ –ನಡೆಸುವ ನೃತ್ಯೋತ್ಸವಗಳು ಉದಯೋನ್ಮುಖ ನೃತ್ಯ ಕಲಾವಿದರ ಬೆಳವಣಿಗೆಗೆ ತುಂಬಾ ಸಹಾಯಕವೆಂದರೆ ಅತಿಶಯೋಕ್ತಿಯಲ್ಲ. ತಾವೂ ಬೆಳೆದು, ತಮ್ಮೊಡನೆ ಉಳಿದ ನೃತ್ಯಶಾಲೆಗಳನ್ನೂ ಮುಂದೆ ಕರೆದೊಯ್ಯುತ್ತಿರುವುದು ಸ್ವಾಗತಾರ್ಹ. ಅನೇಕ ರಂಗಪ್ರವೇಶಗಳನ್ನು ನೆರವೇರಿಸಿ, ಪರಿಣತ ಕಲಾವಿದೆಯರನ್ನು ನೃತ್ಯರಂಗಕ್ಕೆ ಅರ್ಪಿಸುತ್ತಿರುವುದಲ್ಲದೆ, ಗುರು ಸಾಧನಾಶ್ರೀ ಪ್ರತಿವರ್ಷ ಸಂದೇಶಾತ್ಮಕ ಅನೇಕ ಸುಂದರ ಅಷ್ಟೇ ಅರ್ಥಪೂರ್ಣ ನೃತ್ಯರೂಪಕಗಳನ್ನು ಸಿದ್ಧಪಡಿಸಿ, ಅದನ್ನು ರಂಗದ ಮೇಲೆ ಪ್ರಯೋಗಿಸುತ್ತಿದ್ದಾರೆ.

ಈ ಬಾರಿ ‘ಸಾಧನ ಸಂಗಮ’ದ ಶಿಷ್ಯರು ಅನುಭವಜನ್ಯವಾಗಿಸಿದ ‘ನಾದಾಮೋದ’ ಸಂಗೀತ ನೃತ್ಯರೂಪಕದ ಮೂಲಕ ಉತ್ತಮ ಸಂದೇಶವೊಂದನ್ನು ಎತ್ತಿ ಹಿಡಿಯಲಾಯಿತು. ಅತ್ಯಮೂಲ್ಯ ಸಂಪತ್ತಾದ ‘ಕಸ್ತೂರಿ ಮೃಗ’ದ ನಾಭಿಯಲ್ಲಿ ದೊರಕುವ ಸುಗಂಧದ್ರವ್ಯ ಹಾಗೂ ಮನುಷ್ಯನ ದುರಾಸೆ- ಲೋಭತನದಿಂದ ಇಂದು ಅಂಥ ಅಪರೂಪದ ಕಸ್ತೂರಿ ಮೃಗಗಳ ಸಂತತಿಯ ನಾಶಕ್ಕೆ ಸಂಬಂಧಿಸಿದ ಕಥೆಯನ್ನು ಕುರಿತು ಬಹು ಮಾರ್ಮಿಕವಾದ ನೃತ್ಯರೂಪಕವನ್ನು ಹೆಣೆಯಲಾಗಿತ್ತು.


ಹಿಮಾವೃತ ಪ್ರದೇಶಗಳಲ್ಲಿ ಸ್ವಚ್ಚಂದವಾಗಿ ನಲಿಯುತ್ತ ಬದುಕು ಸಾಗಿಸುವ ಮುದ್ದಾದ ಪುಟ್ಟ ಕಸ್ತೂರಿ ಮೃಗಗಳಿಂದ ದೊರೆಯುವ ಲಾಭದ ದುರಾಸೆಗೆ ಬಲಿಯಾದ ಬೇಟೆಗಾರರು, ಅವುಗಳಿಗೆ ಇಷ್ಟವಾಗುವ ಸಂಗೀತದ ಸುಶ್ರಾವ್ಯತೆಯನ್ನು ಕೇಳಿಸುವ ಉಪಾಯ ಒಡ್ಡಿ, ಅವುಗಳನ್ನು ಕ್ರೂರವಾಗಿ ಹಿಡಿದು -ಕೊಂದು ಸುಗಂಧದ್ರವ್ಯವನ್ನು ಸಂಗ್ರಹಿಸಿ, ಸಿರಿವಂತರಾಗುವ ದುಷ್ಟ ಆಲೋಚನೆ – ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸುತ್ತಾರೆಂಬ ರೂಕ್ಷತೆಯನ್ನು, ಕಣ್ಮುಂದೆ ನಡೆದಷ್ಟು ಸಹಜರೀತಿಯಲ್ಲಿ ನೃತ್ಯರೂಪಕ ಸಾಕ್ಷಾತ್ಕಾರಗೊಳಿಸಿತು.


ಪುಟಾಣಿ ಕಸ್ತೂರಿ ಮೃಗಗಳಿಗಾದ ವಂಚನೆಯನ್ನು ಕಾಣುತ್ತ ಬಿಸುಸುಯ್ಲು ಉಕ್ಕುತ್ತದೆ. ಅವುಗಳ ದಾರುಣ ಮರಣದ ವಿದ್ರಾವಕ ದೃಶ್ಯವನ್ನು ಕಂಡಾಗ ನೋಡಗರ ಕರುಣೆ ಕಂಬನಿಯಾಗುತ್ತದೆ. ಗಂಧರ್ವ ಕನ್ನಿಕೆಯರ ನೃತ್ಯ ಗಾನ- ವಿನೋದಗಳನ್ನು ಅನುಸರಿಸಿಕೊಂಡು ಬಂದ ಬೇಟೆಗಾರ- ಬೇಟೆಗಾರ್ತಿಯರು ಅವರಿಂದ ಸಂಗೀತದ ಎಲ್ಲ ಆಯಾಮಗಳನ್ನೂ ಗಮನಿಸಿ ಕಲಿತು, ಅವರ ವಾದನಗಳನ್ನು ವಶಪಡಿಸಿಕೊಂಡು, ಅಮಾಯಕ ಜೀವಿಗಳ ಹರಣ ಮಾಡಿ ತಮ್ಮ ಸ್ವಾರ್ಥ ಸಾಧಿಸುವ ಪರಿಯನ್ನು ಹೆಣೆಯಲಾದ ಚಿತ್ರಕಥೆ ಪರಿಣಾಮಕಾರಿಯಾಗಿದೆ. ಅದಕ್ಕೆ ಸೊಗಸಾದ ಸಂಗೀತವನ್ನೂ ಅಳವಡಿಸಲಾಗಿದೆ. ನರ್ತಕಿಯರ ವಿಲಾಸಪೂರ್ಣ ಮನೋಹರ ನೃತ್ಯ, ಬೇಟೆಗಾರರ ಜಾನಪದ ಧಾಟಿಯ ಹೆಜ್ಜೆ- ಕುಣಿತ, ಕಸ್ತೂರಿ ಮೃಗಗಳಾಗಿ, ಅದಕ್ಕೆ ತಕ್ಕಂಥ ದಟ್ಟಗೂದಲಿನ ಚರ್ಮದ ಉಡುಪಿನೊಳಗೆ ಮೈವೆತ್ತ ಪುಟಾಣಿಗಳ ನೈಜ ಪ್ರಸಾಧನ- ವೇಷ- ಮುದ್ದಾದ ಆಂಗಿಕಚಲನೆಗಳ ದೃಶ್ಯ ಮನಂಬುಗುವಂತಿತ್ತು. ಸಾಧನಶ್ರೀಯ ಉತ್ತಮ ನೃತ್ಯ ಸಂಯೋಜನೆ ಆಕರ್ಷಕವಾಗಿತ್ತು.



ಕಾಲಕ್ರಮೇಣ ನಶಿಸಿಹೋಗುತ್ತಿರುವ ಕಸ್ತೂರಿ ಮೃಗಗಳ ಸಂತತಿಯ ಬಗ್ಗೆ ಕಾಳಜಿ, ಪರಿಸರ ರಕ್ಷಣೆ ಮತ್ತು ಸಮತೋಲನದ ಸೂಕ್ತ ಸಂದೇಶವನ್ನು ಸಾರುವ ನೃತ್ಯರೂಪಕ ಅರ್ಥಪೂರ್ಣವಾಗಿದ್ದುದಲ್ಲದೆ ಇಂದಿನ ಕಾಲಮಾನಕ್ಕೆ ಪ್ರಸ್ತುತವಾಗಿಯೂ ಇತ್ತು. ‘ಸಾಧನ ಸಂಗಮ’ ಸಂಸ್ಥೆಯ ‘ಬಹುಳ ನೃತ್ಯೋತ್ಸವ’ದ ಸಂದರ್ಭದಲ್ಲಿ ಪ್ರತಿವರ್ಷ ಇಂಥ ಅನ್ವೇಷಕ- ಪ್ರಾಯೋಗಿಕ ನೃತ್ಯರೂಪಕಗಳು ಇನ್ನೂ ಹೆಚ್ಚು ಹೆಚ್ಚಾಗಿ ಮೂಡಿ ಬರಲಿ ಎಂಬ ಶುಭ ಹಾರೈಕೆ. ಇದರಲ್ಲಿ ಭಾಗವಹಿಸಿದ ಪ್ರತಿ ಕಲಾವಿದರಿಗೂ ಹಾರ್ದಿಕ ಅಭಿವಂದನೆಗಳು.


ನೃತ್ಯ ವಿಮರ್ಶಕರು | ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
