ಭಾರತೀಯ ವಿದ್ಯಾಭವನದ ವೇದಿಕೆಯಲ್ಲಿ ನೃತ್ಯ ಕಲಾವಿದೆ ರಮ್ಯಾ ವರ್ಣ ತನ್ನ ಸೊಗಸಾದ, ಭಾವ ಪುರಸ್ಸರ ನೃತ್ಯಾಭಿನಯದಿಂದ ನೆರೆದ ಕಲಾರಸಿಕರ ಮನಸ್ಸನ್ನು ಸೆಳೆದಳು. ಐಸಿಸಿಆರ್ ಆಯೋಜನೆಯ ಪ್ರತಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿತ್ತು. ಗುರು ಗಾಯತ್ರಿ ಚಂದ್ರಶೇಖರ ಇವರ ನುರಿತ ಗರಡಿಯಲ್ಲಿ ತರಬೇತಿ ಪಡೆದ ರಮ್ಯಾ, ಲೀಲಾಜಾಲವಾಗಿ, ನಿರಾಯಾಸದಿಂದ ನರ್ತಿಸುತ್ತ, ಮೊದಲಿನಿಂದ ಕಡೆಯ ಕೃತಿಯವರೆಗೆ ಒಂದೇ ಚೈತನ್ಯ ಪ್ರದರ್ಶಿಸಿದ್ದು ನಿಜಕ್ಕೂ ಸ್ತುತ್ಯಾರ್ಹ. ಸಂಪ್ರದಾಯದಂತೆ ಕಲಾವಿದೆ ‘ಪುಷ್ಪಾಂಜಲಿ’ಯಿಂದ ಶುಭಾರಂಭಿಸಿ, ಗುರು-ಹಿರಿಯರಿಗೆ, ದೇವಾನುದೇವತೆಗಳಿಗೆ ಮತ್ತು ಪ್ರೇಕ್ಷಕರಿಗೆ ನೃತ್ಯ ನಮನಗಳ ಮೂಲಕ ವಂದನೆ ಸಲ್ಲಿಸಿ, ನಂತರ ‘ಗಜವದನ’ ಬೇಡುವೆ’ ಎಂದು ವಿಘ್ನ ನಿವಾರಕನ ವಿವಿಧ ರೂಪ-ವೈಶಿಷ್ಟ್ಯಗಳನ್ನು ತನ್ನ ಸುಂದರ ಆಂಗಿಕಾಭಿನಯದಿಂದ ಸಾಕ್ಷಾತ್ಕರಿಸಿದಳು.
ಕಲಾವಿದೆಯ ಹಸನ್ಮುಖ, ಲವಲವಿಕೆಯ ಚಲನೆಗಳು, ತಾಳ-ಲಯಜ್ಞಾನದ ಹೆಜ್ಜೆಗಳು ಗಮನ ಸೆಳೆದವು. ಮುಂದೆ-ಚಾರುಕೇಶಿ ರಾಗದ ಲಾಲ್ಗುಡಿ ಜಯರಾಮನ್ ರಚನೆಯ ‘ಇನ್ನುಂ ಎನ್ ಮನಂ’ ಅರಿತುಕೊಂಡಿಲ್ಲವೇ ಕೃಷ್ಣಾ ಎಂದು ಅವನಲ್ಲಿ ಅನುರಕ್ತಳಾದ ನಾಯಕಿ, ಅವನ ಅಗಲಿಕೆಯ ವಿರಹ ವೇದನೆಯಿಂದ ಪರಿತಪಿಸುತ್ತ, ತನ್ನಿನಿಯ ಕೃಷ್ಣನಲ್ಲಿ ತನಗಿರುವ ಆಳವಾದ ಅನುರಾಗವನ್ನು ಅಭಿವ್ಯಕ್ತಿಸುತ್ತ, ಆತ್ಮನಿವೇದನೆ ಮಾಡಿಕೊಳ್ಳುವ ‘ವರ್ಣ’ ಮನಮುಟ್ಟಿತು. ಗಂಧರ್ವಲೋಕಕ್ಕೆ ಕೊಂಡೊಯ್ದ ಮೋಹನ ಮುರಳೀನಾದ (ನರಸಿಂಹ ಮೂರ್ತಿ)ದಲ್ಲಿ ಒಡಮೂಡಿದ ಶೃಂಗಾರಭರಿತವಾದ ಈ ಕೃತಿಯನ್ನು ಕಲಾವಿದೆ ತನ್ನ ಸೂಕ್ಷ್ಮಾಭಿನಯದ ಸೊಗಡಿನಿಂದ, ನೃತ್ತಗಳ ಕಲಾನೈಪುಣ್ಯತೆಯಿಂದ, ಮನಮೋಹಕ ಅಭಿನಯದಿಂದ ಪಾತ್ರದಲ್ಲಿ ತನ್ಮಯಳಾಗಿ ನಿರೂಪಿಸಿದ್ದು, ಕಲಾವಿದೆಯ ಅಸ್ಮಿತೆಯಾಗಿತ್ತು. ಗುರು ಗಾಯತ್ರಿಯವರ ಸ್ಫುಟವಾದ, ನಿಖರ ಲಯದ ನಟುವಾಂಗ ಕಲಾವಿದೆಯ ಹೆಜ್ಜೆಗಳಿಗೆ ಕಸುವು ನೀಡಿತ್ತು.
ಮುಂದೆ- ಶ್ರೀ ಪುರಂದರದಾಸರ ಮನನೀಯ ಕೃತಿ- ‘ಎಂಥ ಚೆಲುವಗೆ ಮಗಳ ಕೊಟ್ಟನು’ – ಎಂಬ ಮೇಲ್ನೋಟಕ್ಕೆ ಮದುಮಗನ ರೂಪ -ಚಹರೆ- ಗುಣಗಳನ್ನು ಕುರಿತು ಮಾಡಿದ ಆಕ್ಷೇಪಣೆ-ವ್ಯಂಗ್ಯದಂತೆ ಕಂಡರೂ, ಒಳ ಪದರದಲ್ಲಿ ಶಿವನ ಆಂತರಂಗಿಕ ಸೌಂದರ್ಯ- ವೈಶಿಷ್ಟ್ಯಗಳನ್ನು ಚಿತ್ರಿಸುವ ‘ನಿಂದಾಸ್ತುತಿ’, ಅಮೃತ ಮಂಥನ ಮುಂತಾದ ಸಂಚಾರಿ ಕಥಾನಕಗಳೊಂದಿಗೆ ಆಕರ್ಷಕವಾಗಿ ಮೂಡಿಬಂತು. ಕಲಾವಿದೆ ರಮ್ಯ, ಕಣ್ಣಿಗೆ ಕಟ್ಟುವ ದೃಶ್ಯ ಚಿತ್ರಣಗಳನ್ನು ಕಟ್ಟಿಕೊಡುತ್ತ ವರನಾಗಿ ಬಂದ ಅನನ್ಯ ಪುರುಷ ಪರಶಿವನ ದೈವೀಕತೆ, ಮಹತ್ವಗಳನ್ನು ಪರಿಣಾಮಕಾರಿಯಾದ ನಾಟಕೀಯ ಆಯಾಮದಲ್ಲಿ ಅನಾವರಣಗೊಳಿಸಿದಳು.
ಅನಂತರದ ‘ಜಾವಳಿ’ –ಪಟ್ನಂ ಸುಬ್ರಹ್ಮಣ್ಯಂ ಅಯ್ಯರ್ ರಚಿತ ‘ಏರಾ.. ರಾ ರಾ..’ – ಎಂದು ವಿಲಪಿಸುವ, ನಾಯಕನನ್ನು ಸೇರಲು ಕಾತುರಳಾಗಿದ್ದ ನಾಯಕಿಯ ಚಡಪಡಿಕೆ, ಅದಮ್ಯ ಒಲವಿನ ತೀವ್ರ ಭಾವನೆಗಳನ್ನು ರಮ್ಯಾ ತುಂಟತನದ ನವಿರು ಭಾವನೆಗಳ ಅಭಿವ್ಯಕ್ತಿಯಲ್ಲಿ ಮೋಹಕವಾಗಿ ಅರ್ಪಿಸಿ ಕಲಾರಸಿಕರ ಮೆಚ್ಚುಗೆಯ ಕರತಾಡನ ಪಡೆದಳು.
‘ಟುಮಕ ಚಲತ್ ರಾಮಚಂದ್ರ’ನ ಸುಮನೋಹರ ಬಾಲ್ಯವನ್ನು ಚಿತ್ರವತ್ತಾಗಿ ಸಾಕಾರಗೊಳಿಸುವ, ತಾಯಿ ಕೌಸಲ್ಯೆಯ ಲಾಲನೆ-ಪಾಲನೆಯ ಬಗೆಯನ್ನು, ತನ್ನ ಮುದ್ದುಮಗುವಿಗೆ ಆಕೆ ತೋರುವ ವಾತ್ಸಲ್ಯಧಾರೆಯನ್ನು ಕಲಾವಿದೆ ಬಹು ಆಪ್ತವಾಗಿ ಕಂಡರಿಸಿದಳು. ಶ್ರೀರಾಮಚಂದ್ರನ ಸೌಮ್ಯ ರೂಪ – ಧೀರ ನಡೆಯ ಭಾವ-ಭಂಗಿಗಳನ್ನು ಕಟ್ಟಿಕೊಟ್ಟ ಕಲಾವಿದೆ ರಮ್ಯಾಳ ನರ್ತನಾಭಿನಯದ ಮೋಡಿ ಮುದ ನೀಡಿತು. ದೈವೀಕ ನೆಲೆಯಲ್ಲಿ ಅರಳಿದ ಶ್ರೀರಾಮನ ಭಜನೆ ಮನಸ್ಸಿಗೆ ಆಪ್ಯಾಯಮಾನವಾಗಿತ್ತು. ಮಿಂಚಿನ ಸಂಚಾರದ ನೃತ್ತ ಝೇಂಕಾರದಿಂದ ಕೂಡಿದ ‘ತಿಲ್ಲಾನ’ದೊಂದಿಗೆ ಕಲಾವಿದೆಯ ಪ್ರಸ್ತುತಿ ಸಂಪನ್ನವಾಯಿತು.
ರಮ್ಯಳ ಸುಭಗ ನೃತ್ಯಕ್ಕೆ ಪ್ರಭಾವಳಿ ನೀಡಿದ ಸಂಗೀತ ಗೋಷ್ಠಿಯ ಭಾರತೀ ವೇಣುಗೋಪಾಲ್ (ಗಾಯನ), ಜನಾರ್ದನ್ ರಾವ್ (ಮೃದಂಗ) ಮತ್ತು ನರಸಿಂಹ ಮೂರ್ತಿ (ಕೊಳಲು) ಹಾಗೂ ನಿಸ್ಪೃಹ ನಟುವಾಂಗ- ಗಾಯತ್ರಿ ಚಂದ್ರಶೇಖರ್ ಅವರ ಕಾರ್ಯಕ್ಷಮತೆ ಗಮನಾರ್ಹವಾಗಿತ್ತು.
ನೃತ್ಯ ವಿಮರ್ಶಕರು : ವೈ.ಕೆ.ಸಂಧ್ಯಾ ಶರ್ಮ, ಖ್ಯಾತ ಲೇಖಕಿ ಮತ್ತು ಕಲಾ ವಿಮರ್ಶಕರು