ಆತ್ಮವಿಶ್ವಾಸದ ದೃಢವಾದ ಹೆಜ್ಜೆಗಳಲ್ಲಿ ನಗುಮುಖದಿಂದ ವೇದಿಕೆ ಪ್ರವೇಶಿಸಿದ ನೃತ್ಯಗಾರ್ತಿ ಬಿದರಕೋಟಿಯ ಮೇಘಾಳ ನೃತ್ಯದ ಚೆಲುವು ಮೊದಲನೋಟದಲ್ಲೇ ಸೆಳೆಯಿತು. ಅಂದವಳ ವಿದ್ಯುಕ್ತ ರಂಗಪ್ರವೇಶ. ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ಕಲಾಭಿಮಾನಿಗಳ ಸಮ್ಮುಖ ಅವಳು ನಿರೂಪಿಸಿದ ಎಲ್ಲ ದೈವೀಕ ಕೃತಿಗಳೂ ಕಣ್ಮನ ಸೆಳೆದವು, ಹೃದಯಸ್ಪರ್ಶಿಯಾಗಿದ್ದವು. ಹೆಸರಾಂತ ಅಂಜಲಿ ಇನ್ಸ್ಟಿಟ್ಯುಟ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಭರತನಾಟ್ಯ ಶಾಲೆಯ ನೃತ್ಯಗುರು ಡಾ. ಸ್ವರೂಪಲಕ್ಷ್ಮಿ ಕೃಷ್ಣಮೂರ್ತಿ ಇವರ ನುರಿತ ಗರಡಿಯಲ್ಲಿ ತಯಾರಾದ ಕಲಾಶಿಲ್ಪ ಮೇಘಾ, ಗುರುಗಳ ಸುಮನೋಹರ ನೃತ್ಯ ಸಂಯೋಜನೆಯನ್ನು ಅಷ್ಟೇ ಮನಮೋಹಕವಾಗಿ ಸಾಕ್ಷಾತ್ಕರಿಸಿದಳು.
ಶುಭಾರಂಭ- ಸಕಲ ದೇವಾನುದೇವತೆಗಳಿಗೆ, ಗುರು ಹಿರಿಯರಿಗೆ ಪುಷ್ಪಾಂಜಲಿ (ರಚನೆ- ಮಧುರೆ ಮುರಳೀಧರನ್, ರಾಗ- ಜೋಗ್, ಆದಿತಾಳ)ಯ ಮೂಲಕ ಸಲ್ಲಿಸಿದ ಹೊಸವಿನ್ಯಾಸದ ನೃತ್ತಗಳ ನಮನ ಸೊಗಸೆನಿಸಿತು. ತನ್ನ ಪದಾಘಾತವನ್ನು ಮನ್ನಿಸೆಂದು ಭೂದೇವಿಯನ್ನು ವಿನಮ್ರವಾಗಿ ಪ್ರಾರ್ಥಿಸಿದ ಕಲಾವಿದೆ, ನಂತರ ಆನಂದ ನರ್ತನ ಗಣಪತಿಯ ಆಶೀರ್ವಾದವನ್ನು ಬೇಡಿದ ವಿನಾಯಕ ಸ್ತುತಿ (ರಾಗ – ನಾಟೈ, ಆದಿತಾಳ) ಆತನ ಹಲವು ನಾಮಗಳ ಅರ್ಚನೆ ಮಾಡಿ, ಗುಣ-ಮಹಿಮೆಗಳನ್ನು ತನ್ನ ಸುಂದರ ಭಂಗಿ-ಅಭಿನಯಗಳಿಂದ, ಲೀಲಾಜಾಲ ನೃತ್ತ ಸಲಿಲದಿಂದ ರಮ್ಯವಾಗಿ ಕಟ್ಟಿಕೊಟ್ಟಳು.
ಮುಂದೆ ಕರ್ನಾಟಕ ಶಾಸ್ತ್ರೀಯ ಸಂಗೀತದ ‘ಸ್ವರಜತಿ’ಗೆ ಸಂವಾದಿಯಾದ ‘ಜತಿಸ್ವರ’ದಲ್ಲಿ ನರ್ತಕರು ಸಾಮಾನ್ಯವಾಗಿ ಜತಿಗಳನ್ನು ಪ್ರಧಾನವಾಗಿಟ್ಟುಕೊಂಡು ಲಯಾತ್ಮಕವಾಗಿ ಪ್ರಸ್ತುತಪಡಿಸುತ್ತಾರೆ. ತಂಜಾವೂರು ಸಹೋದರರು ರಚಿಸಿದ ‘ಜತಿಸ್ವರ’ (ರಾಗಮಾಲಿಕೆ-ಮಿಶ್ರಚಾಪು ತಾಳ)ವನ್ನು ಮೇಘಾ ತನ್ನ ಖಚಿತವಾದ ಅಡವುಗಳ ಸೌಂದರ್ಯದಲ್ಲಿ, ಅಂಗಶುದ್ಧವಾದ ಆಂಗಿಕಾಭಿನಯ, ಮನಸೆಳೆದ ಆಕಾಶಚಾರಿ, ಬಾಗು-ಬಳಕುಗಳ ಆಕರ್ಷಕ ಭಂಗಿಗಳಲ್ಲಿ ನಿರೂಪಿಸಿದ್ದು ವಿಶೇಷವಾಗಿತ್ತು. ಅವಳ ನೃತ್ಯದ ಹೆಜ್ಜೆಗಳಿಗೆ ಪ್ರೇರಕವಾಗಿ ಗುರು ಸ್ವರೂಪರ ಸ್ಫುಟವಾದ-ಖಚಿತ ನಟುವಾಂಗ ಪೂರಕವಾಗಿತ್ತು.
‘ವರ್ಣ’ – ಮಾರ್ಗಂ ಸಂಪ್ರದಾಯದ ನೃತ್ಯಪ್ರಸ್ತುತಿಯಲ್ಲಿ ಪ್ರಧಾನವಾದ ಘಟ್ಟ. ಕಲಾವಿದರಿಗೆ ನೃತ್ತ ನೈಪುಣ್ಯದೊಡನೆ ಸಮಾನವಾಗಿ ಅಭಿನಯ ಪ್ರಭುತ್ವವೂ ಇರಬೇಕಾಗುತ್ತದೆ. ಜೊತೆಗೆ ಸಾಕಷ್ಟು ಕಸುವೂ ಅಗತ್ಯ. ಈ ಎಲ್ಲವನ್ನೂ ಹೊಂದಿದ್ದ ಮೇಘಾ ತೋಡಿ ರಾಗ, ಅದಿತಾಳದ ಮಧುರೈ ಆರ್. ಕೃಷ್ಣನ್ ರಚಿಸಿದ ಭಕ್ತಿಪ್ರಧಾನ ‘ವರ್ಣ’ವನ್ನು ಬಹು ಸಮರ್ಥವಾಗಿ ನಿಭಾಯಿಸಿದಳು. ಒಬ್ಬ ಕ್ಷೇತ್ರದೇವತೆಯ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ವಾಗ್ಗೇಯಕಾರ ಮಾಡಿದ್ದಾರೆ. ಇದು ಅಭಿರಾಮಿರೂಪಿ ದೇವಿಯ ವರ್ಣನೆ-ಮಹಿಮೆ ಚಿತ್ರಿಸುವ ‘ಮಾಯೆ ಮಾಯನ್ ಸೋದರಿಯೇ’ ಕೃತಿ. ಅಮ್ಮನವರ ಮಹಾಭಕ್ತ ಶಿವರಾಮಿ ಭಟ್ಟರ್ ಎಂದೇ ಜನಜನಿತರಾದ ಸುಬ್ರಹ್ಮಣ್ಯಂ ಅಯ್ಯರ್ ಪವಾಡದ ಕಥೆಯನ್ನು ಕಟ್ಟಿಕೊಟ್ಟ ಭಕ್ತಿಪ್ರಧಾನ ವರ್ಣ ಚೇತೋಹಾರಿಯಾಗಿತ್ತು. ದೇವಿಯ ಆರಾಧನೆಯ ಭಕ್ತಿ ತಾದಾತ್ಮ್ಯತೆಯಲ್ಲಿ ಮೈಮರೆತಿದ್ದ ಶಿವರಾಮಿ ಭಟ್ಟರ್ ಅಲ್ಲಿನ ಸರ್ಪೋಜಿ ಮಹಾರಾಜನ ಆಗಮನವನ್ನು ಗಮನಿಸದ ಕಾರಣ, ಅವರ ಕೋಪಕ್ಕೆ ತುತ್ತಾದ. ‘ಇಂದು ಯಾವ ದಿನ’ ಎಂಬ ಮಹಾರಾಜನ ಪ್ರಶ್ನೆಗೆ, ಭಕ್ತ, ಅಭಿರಾಮಿಯ ಹೊಳೆಯುವ ಕಿವಿಯೋಲೆಯನ್ನು ದಿಟ್ಟಿಸುತ್ತಿದ್ದವನು, ‘ಹುಣ್ಣಿಮೆ’ ಎಂದು ಬಿಟ್ಟ. ಇಂದು ಹುಣ್ಣಿಮೆ ಎಂಬ ತನ್ನ ಮಾತನ್ನು ಅವನು ಸಾಬೀತುಪಡಿಸದೆ ಹೋದರೆ ಸಾವಿನ ಶಿಕ್ಷೆ ಕೊಡಲಾಯಿತು. ಆಗ ಭಕ್ತನ ರಕ್ಷಣೆಗೆ, ದೇವಿ ಆ ಸಂಜೆ ತನ್ನ ಕಿವಿಯೋಲೆಯನ್ನು ಆಕಾಶಕ್ಕೆ ಎಸೆದಾಗ, ಅದು ಹುಣ್ಣಿಮೆಯ ಚಂದಿರನಂತೆ ಕಂಡು ಬಂದು, ಅವನಿಗೆ ಜೀವದಾನ ನೀಡಿದ ಪವಾಡದ ಕಥೆಯನ್ನು ಕಲಾವಿದೆ, ಕಣ್ಣ ಮುಂದೆ ಸನ್ನಿವೇಶ ನಡೆದಂತೆ ಸೊಗಸಾದ ಸಂಚಾರಿ ಕಥಾನಕವನ್ನು ಪ್ರಬುದ್ಧತೆಯಿಂದ ಅಭಿನಯಿಸಿ ನೋಡುಗರ ಮೆಚ್ಚುಗೆ ಪಡೆದಳು. ಶಕ್ತಿಶಾಲಿ ನೃತ್ತಮಾಲೆ, ರಂಗಾಕ್ರಮಣ ನೃತ್ತ ಅಪೂರ್ವತೆಯಿಂದ ಮನಾಕರ್ಷಿಸಿ, ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು. ನಡುನಡುವೆ ಮಿಂಚಿನ ಸಂಚಾರದ ನೃತ್ತಗಳು, ಆಕರ್ಷಕ ಭಂಗಿಗಳಿಂದ, ನವರಸಾಭಿನಯದಿಂದ ಕಣ್ಮನ ಸೆಳೆದರೆ ಗುರು ಸ್ವರೂಪಲಕ್ಷ್ಮಿ ಅವರ ಲಯಾತ್ಮಕ, ನಟುವಾಂಗದ ಝೇಂಕಾರ ನೃತ್ಯದ ಆಕರ್ಷಕ ಭಾಗವಾಗಿತ್ತು.
ಅನಂತರ ಶ್ರೀ ನಾರಾಯಣ ತೀರ್ಥರ ಕಲ್ಯಾಣಿ ರಾಗದ ಕೋಮಲಾಧಾರಿ ರುಕ್ಮಿಣಿ (ತರಂಗಂ) ‘ರುಕ್ಮಿಣಿ ಕಲ್ಯಾಣ’ ಅತ್ಯಂತ ಮನಮೋಹಕವಾಗಿ ಒಡ ಮೂಡಿತು. ರುಕ್ಮಿಣಿಯ ಲಜ್ಜಾನ್ವಿತ ಶೃಂಗಾರ ಭಾವಗಳನ್ನು ಮೇಘಾ ನಾಟಕೀಯ ಆಯಾಮದಲ್ಲಿ ತುಂಬಾ ಚೆನ್ನಾಗಿ ಅಭಿನಯಿಸಿ ಮೆಚ್ಚುಗೆ ಪಡೆದಳು. ನಂತರ ಶ್ರೀಹರಿ ಹಲವು ಸಂದರ್ಭಗಳಲ್ಲಿ ಹೆಣ್ಣಿನ ವೇಷಗಳನ್ನು ಧರಿಸಿ ಮಾಡಿದ ವಿಸ್ಮಯಗಳನ್ನು ಆಕರ್ಷಕ ಸಂಚಾರಿಯಲ್ಲಿ ಕಲಾವಿದೆ ಕುಸುಮನಾಭ ಕನ್ನಿಕೆಯಾಗಿ ಜಾಗವನ್ನು ಉದ್ಧರಿಸಿದ ಪ್ರಸಂಗಗಳನ್ನು ಪುರಂದರದಾಸರ ರಚನೆಯ ‘ಇಂಥ ಹೆಣ್ಣನು ನಾನೆಲ್ಲೂ ಕಾಣೆನೋ’ ಕೃತಿಯಲ್ಲಿ ಪ್ರಸ್ತುತಪಡಿಸಿದಳು. ಲಯಾತ್ಮಕ ಸೊಲ್ಲುಕಟ್ಟುಗಳ ಸೌಂದರ್ಯವನ್ನು ಎತ್ತಿ ಹಿಡಿವ ಆಕರ್ಷಕ ನೃತ್ತಗಳ ಸಂಭ್ರಮವನ್ನು ಚೆಲ್ಲಿದ ಮೇಘಾ, ‘ತಿಲ್ಲಾನ’ದ ಮೂಲಕ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು. ತುಳಜಾ ಭವಾನಿಯ ಮಂಗಳ ಸ್ತುತಿ ಮನಸೆಳೆಯಿತು.
ನೃತ್ಯಕ್ಕೆ ಕಳೆಗೊಟ್ಟ ವಾದ್ಯ ಸಹಕಾರದಲ್ಲಿ ಗಾಯನ ಭಾರತೀ ವೇಣುಗೋಪಾಲ್, ಮೃದಂಗ – ಶ್ರೀಹರಿ ರಂಗಸ್ವಾಮಿ, ಕೊಳಲು – ವಿವೇಕ್ ಕೃಷ್ಣ, ಪಿಟೀಲು – ಚಿನ್ಮಯಿ ಮಧುಸೂದನ್, ರಿದಂಪ್ಯಾಡ್ – ಕಾರ್ತೀಕ್ ದಾತಾರ್ ಮತ್ತು ಶಕ್ತಿಶಾಲಿಯಾದ ನಟ್ಟುವಾಂಗದಲ್ಲಿ ಗುರು ಸ್ವರೂಪ ಲಕ್ಷ್ಮೀ ಸೊಗಸಾದ ಇಂಬು ನೀಡಿದರು.
– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.