ಎಳೆ ಚಿಗುರಿನಂಥ ಸಪೂರ ದೇಹ, ಚಿಗರೆಯಂತೆ ಲವಲವಿಕೆಯಿಂದ ಆಂಗಿಕಾಭಿನಯವನ್ನು ಸಲೀಸಾಗಿ ಅಭಿವ್ಯಕ್ತಿಸಬಲ್ಲ ಚೈತನ್ಯಭರಿತ ಉತ್ಸಾಹ, ಲವಲವಿಕೆ ಈ ಉದಯೋನ್ಮುಖ ನೃತ್ಯ ಕಲಾವಿದೆ ಗುಣಶ್ರೀಯ ಧನಾತ್ಮಕ ಅಂಶಗಳು. ಪ್ರಸಿದ್ಧ ‘ಸಾಧನ ಸಂಗಮ ಡಾನ್ಸ್ ಸೆಂಟರ್’ನ ನೃತ್ಯಗುರುದ್ವಯರಾದ ವಿದುಷಿ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಶ್ರೀ ಅವರ ಕಾಳಜಿಪೂರ್ಣ ಭರತನಾಟ್ಯ ಮಾರ್ಗದರ್ಶನದಲ್ಲಿ ರೂಪುಗೊಂಡ ನೃತ್ಯಪ್ರತಿಭೆ ಕುಮಾರಿ ಪಿ. ಗುಣಶ್ರೀ ಬಹುಮುಖ ಪ್ರತಿಭೆ. ಸಂಗೀತ -ನಾಟ್ಯಗಳಲ್ಲಿ ಭರವಸೆಯ ಅಡಿಗಳನ್ನಿಡುತ್ತಿರುವ ಗುಣಶ್ರೀ ಇತ್ತೀಚೆಗೆ ವಿಜಯನಗರದ ‘ಕಾಸಿಯಾ’ ಸಭಾಂಗಣದಲ್ಲಿ ‘ನೃತ್ಯ ಸುಗುಣ’ ಎಂಬ ಶೀರ್ಷಿಕೆಯಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು.
ಕಲಾವಿದೆ ಗುಣಶ್ರೀ ಪಾರಂಪರಿಕ ‘ಅಲರಿಪು’ (ಸಂಕೀರ್ಣ ಏಕತಾಳ)ವಿನಿಂದ ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದಳು. ಅಂಗಶುದ್ಧ ನೃತ್ತಗಳಿಂದ ನಿರೂಪಿಸಿದ ಕಲಾವಿದೆಯ ಖಚಿತ ನಡೆಯ, ಸುಂದರ ಆಂಗಿಕಾಭಿನಯ ಕಣ್ಮನ ಸೂರೆಗೊಂಡಿತು. ಗುರು ಸಾಧನಶ್ರೀ ಅವರ ಸುಸ್ಪಷ್ಟ ನಿಖರ, ಕಂಚಿನ ಕಂಠದ ನಟುವಾಂಗದ ಧ್ವನಿ ಗುಣಶ್ರೀಯ ಪಾದರಸದ ಮಿಂಚಿನ ಸಂಚಾರದ ವಿವಿಧ ವಿನ್ಯಾಸದ ನೃತ್ತಗಳಿಗೆ ಶಕ್ತಿಯ ಪ್ರೇರಣೆ ನೀಡಿತು. ಅರೆಮಂಡಿ- ಆಕಾಶಚಾರಿಗಳಿಂದ ಕೂಡಿದ್ದ ಸುಲಲಿತ ನೃತ್ಯ, ಕಲಾವಿದೆಯ ಅಭ್ಯಾಸ- ಪರಿಶ್ರಮಕ್ಕೆ ಕನ್ನಡಿ ಹಿಡಿದಿತ್ತು. ಮುಂದಿನ ಲಲಿತ ಸಹಸ್ರನಾಮದ ಧ್ಯಾನ ಶ್ಲೋಕದಲ್ಲಿ ಅಭಿವ್ಯಕ್ತವಾದ ಲಾಸ್ಯ-ಲಲಿತ, ಭಾವ- ಭಂಗಿಗಳು, ಭಾವಾಭಿವ್ಯಕ್ತಿ ಮುದ ನೀಡಿದವು.
ಮುಂದೆ- ‘ಜತಿಸ್ವರ (ರಾಗ ನವರಸ ಕನ್ನಡ ಮತ್ತು ರೂಪಕ ತಾಳ) ಲಯ ಪ್ರಧಾನವಾದ ನೃತ್ತ ಭಾಗ. ವಿವಿಧ ಬಗೆಯ ಲಯವಿನ್ಯಾಸಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದ ‘ಜತಿಸ್ವರ’ ಕಲಾವಿದೆಯ ಆಂಗಿಕಾಭಿನಯ ಮತ್ತು ಜತಿಗಳ ನಿರ್ವಹಣೆಯ ಸಾಮರ್ಥ್ಯವನ್ನು ಎತ್ತಿ ಹಿಡಿಯಿತು. ಈಕೆಯ ರಂಗಪ್ರವೇಶದ ಇನ್ನೊಂದು ವೈಶಿಷ್ಟ್ಯವೆಂದರೆ ಪ್ರಾರಂಭದಿಂದ ಕಡೆಯವರೆಗೂ ಎಲ್ಲ ಕೃತಿಗಳಲ್ಲೂ, ಗುರು ಸಾಧನಶ್ರೀ ಅವರ ಖಚಿತ ಧ್ವನಿಯ ನಟುವಾಂಗದ ಕುಣಿಸುವ ಲಯದ ಸಾಂಗತ್ಯ ನಿರಂತರವಾಗಿ ಇದ್ದುದು. ಅದಕ್ಕೆ ಅನುಗುಣವಾಗಿ ಸಪೂರ ಗೊಂಬೆಯಂಥ ಕಲಾವಿದೆ ಸಶಕ್ತ- ಆಕರ್ಷಕ ನೃತ್ತಾವೃತಗಳನ್ನು ದಣಿವರಿಯದೆ ಪ್ರದರ್ಶಿಸಿದಳು. ಖಚಿತ ಅಡವುಗಳು- ಬಗೆ ಬಗೆಯ ಭಂಗಿಗಳ ನಿರೂಪಣೆ ಗಮನ ಸೆಳೆಯಿತು.
‘ಶಂಕರ ಪರಮೇಶ್ವರ, ಶಶಿಶೇಖರ…’ – ಶಿವನನ್ನು ಸ್ತುತಿಸುವ ‘ಶಬ್ದಂ’ (ರಚನೆ- ಚೆನ್ನಕೇಶವಯ್ಯ) – ಲಯ ಮತ್ತು ಅಭಿನಯ ಸಮೀಕರಿಸಿದ ಗುಣಶ್ರೀಯ ಅಭಿನಯದಲ್ಲಿ ಒಡಮೂಡಿದ ಪರಿ ಅನನ್ಯ. ಬೇಡರ ಕಣ್ಣಪ್ಪ ಮತ್ತು ಭಕ್ತ ಮಾರ್ಕಂಡೇಯನ ಎರಡು ಸಂಚಾರಿ ಕಥಾನಕಗಳ ಮೂಲಕ ಭಕ್ತೆ ಶಿವನನ್ನು ಕುರಿತ ತನ್ನ ಭಕ್ತಿಯ ಶುದ್ಧತೆಯ ಬಗ್ಗೆ ಮನವರಿಕೆ ಮಾಡಿಕೊಡುತ್ತಾಳೆ. ಪ್ರಸ್ತುತಿಯ ಕೇಂದ್ರ ಕೃತಿ ‘ವರ್ಣ’. ‘ನೀಲಮೇಘ ಶ್ಯಾಮಸುಂದರನ ಕರೆತಾರೆ ಸಖಿ’ ಎಂದು ಆರ್ದ್ರವಾಗಿ ಅಷ್ಟೇ ಆತ್ಮೀಯವಾಗಿ ಕೋರಿಕೊಳ್ಳುವ ವಿರಹಾರ್ತ ನಾಯಕಿಯ ತೀವ್ರ ತಲ್ಲಣ- ತುಮುಲಗಳನ್ನು ಕಲಾವಿದೆ ಮನಮುಟ್ಟುವಂತೆ ಅಭಿನಯಿಸಿದಳು. ನಾಯಕಿಯ ನೋವನ್ನು ಪ್ರತಿಧ್ವನಿಸುವಂತೆ ಹಾಡಿದ ವಿದ್ವಾನ್ ಬಾಲ ಸುಬ್ರಹ್ಮಣ್ಯ ಶರ್ಮರ ಭಾವಪೂರ್ಣ ಗಾಯನ ಹೃದಯಸ್ಪರ್ಶಿಯಾಗಿತ್ತು. ನಾಯಕಿಯ ಮಾನಸಿಕ ಹೊಯ್ದಾಟಕ್ಕೆ ಕನ್ನಡಿ ಹಿಡಿದಂತೆ ಸಾಧನಾ ತಮ್ಮ ಶಕ್ತಿಶಾಲಿಯಾದ, ತನ್ಮಯತೆಯ ನಟುವಾಂಗದ ಮಟ್ಟುಗಳಲ್ಲಿ ಪರಿಣಾಮ ಬೀರುತ್ತಾರೆ.
ಶ್ರೀಕೃಷ್ಣನಲ್ಲಿ ಅನುರಾಗಪೂರಿತಳಾಗಿದ್ದ ನಾಯಕಿ, ನವರಸರಂಜಿತ ನಾಯಕನಲ್ಲಿ ಶರಣಾಗತ ಭಾವದಿಂದ ವಿಲಪಿಸುತ್ತ ಇಡೀ ರಂಗಾಕ್ರಮಣ ನಡೆಯಿಂದ, ವೇಗಗತಿಯ ಲೀಲಾಜಾಲ ನೃತ್ತಗಳ ರಾಗಾನುಭಾವದಿಂದ ತನ್ನ ಪ್ರೇಮೋತ್ಕರ್ಷತೆಯನ್ನು ಗಾಢವಾಗಿ ಅಭಿವ್ಯಕ್ತಿಸುತ್ತಾಳೆ. ಕೃಷ್ಣನ ಲೀಲಾ ವಿನೋದಗಳ ದೃಶ್ಯಗಳನ್ನು ರಂಗದ ಮೇಲೆ ಮರು ಸೃಷ್ಟಿಸುತ್ತ ತನ್ನ ಅಂತರಂಗದ ನೆನಪುಗಳ ನೋವಿಗೆ ಜೀವ ಕೊಡುತ್ತಾಳೆ. ಕಿಕ್ಕೇರಿ ಜಯರಾಮರ ಹೃದಯ ಕಲಕುವ ವೇಣುನಾದ, ನಾಯಕಿಯ ಇನಿಯ ಕೃಷ್ಣನ ಆಗಮನದ ನಿರೀಕ್ಷೆಯನ್ನು ಹೆಚ್ಚಿಸುತ್ತದೆ. ವಿದ್ಯಾಶಂಕರ್ ಮೃದಂಗದ ನುಡಿಸಾಣಿಕೆಯ ದನಿ ಅವಳ ಅಂತರಂಗದ ಮಿಡಿತವಾಗಿ ಪ್ರತಿಧ್ವನಿಸುತ್ತದೆ. ಪ್ರಾದೇಶಾಚಾರ್ಯರ ವಯೊಲಿನ್ ಮತ್ತು ಪ್ರಸನ್ನಕುಮಾರರ ಧ್ವನಿ ಪರಿಣಾಮಗಳು ಸನ್ನಿವೇಶದ ಅನನ್ಯತೆಯನ್ನು ಎತ್ತಿ ಹಿಡಿದವು.
ಮುಂದಿನ ‘ಅಂತಃಪುರ ಗೀತೆ’ (ಡಿ.ವಿ.ಜಿ)ಯಲ್ಲಿ, ಬೇಲೂರು ದೇವಾಲಯದ ಮದನಿಕೆಯರೊಡನೆ ಸಂಭಾಷಿಸುವ ‘ಡಂಗೂರ ಪೊಯ್ವುದದೇನೇ…’ ಎಂಬ ಕವಿಯ ವಿಸ್ಮಿತ ಭಾವನೆಗಳನ್ನು ಹರಳುಗಟ್ಟಿಸಿದ ಗುಣಶ್ರೀಯ ಉಲ್ಲಾಸಪೂರ್ಣ ನರ್ತನ ಮುದನೀಡಿತು. ಅವಳ ಚುರುಕಾದ ನೃತ್ತ ಗತಿ, ಸುಂದರ ಪಾದಚಲನೆ, ಶೃಂಗಾರಪೂರಿತ ಲಾಸ್ಯ ನಡೆ, ಆಕರ್ಷಕ ಭಂಗಿಗಳು, ಮದ್ದಳೆ ತಾಳದ ಲಯಾತ್ಮಕ ಕುಣಿತ ಮನಸೂರೆಗೊಂಡವು.
ಮುಂದೆ- ಶ್ರೀ ಪುರಂದರದಾಸರ ‘ಹನುಮಂತ ದೇವ ನಮೋ’ ದೇವರನಾಮವನ್ನು ಗುಣಶ್ರೀ ರಾಮಭೃತ್ಯನ ಗುಣಾವಳಿಗಳ ಘಟನೆಗಳನ್ನು ಕಣ್ಮುಂದೆ ತರುವಂತೆ ಸಾಕ್ಷಾತ್ಕರಿಸುತ್ತ ತನ್ನ ಅದ್ಭುತ ಅಭಿನಯದಿಂದ ಗಮನ ಸೆಳೆದಳು. ಕಡೆಯಲ್ಲಿ ಸಾಂಪ್ರದಾಯಕ ಚೇತೋಹಾರಿ ಬಂಧ ‘ತಿಲ್ಲಾನ’ದಲ್ಲಿ ಕಲಾವಿದೆ ತನ್ನ ಪಾದಭೇದಗಳ ಸುಂದರ ನೃತ್ತಾವಳಿಗಳಿಂದ ಆನಂದದಿಂದ ಮೈ ಮರೆತು ನರ್ತಿಸಿದಳು. ಅಂತ್ಯದಲ್ಲಿ ಸವಾಲ್- ಜವಾಬ್ ಮಾದರಿಯಲ್ಲಿ, ಕಲಾವಿದೆ ಮೃದಂಗದ ನುಡಿಸಾಣಿಕೆಗೆ ತನ್ನ ನೃತ್ತಗಳ ಝೇಂಕಾರದಿಂದ ಉತ್ತರಿಸುತ್ತ ತನ್ನ ತಾಳಜ್ಞಾನವನ್ನು ನಿರೂಪಿಸಿ ಚಿರಸ್ಮರಣೀಯ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು.
ನೃತ್ತಾಭಿನಯದಿಂದ ಶೋಭಿತಳಾದ ಕಲಾವಿದೆಯ ಮೆರುಗಿಗೆ ಸುಂದರ ಪ್ರಭಾವಳಿ ಇತ್ತ ವಿದ್ವಾಂಸರು – ಗಾಯನ- ಬಾಲಸುಬ್ರಹ್ಮಣ್ಯ ಶರ್ಮ, ವೇಣುಗಾನ- ಕಿಕ್ಕೇರಿ ಜಯರಾಂ, ವಯೊಲಿನ್- ಪ್ರದೇಶಾಚಾರ್, ರಿದಂ ಪ್ಯಾಡ್ – ಪ್ರಸನ್ನ ಕುಮಾರ್ ಮತ್ತು ಮೃದಂಗ- ವಿದ್ಯಾಶಂಕರ್. ಮೊದಲಿನಿಂದ ಕಡೆಯವರೆಗೂ ಎಡೆಬಿಡದೆ, ಗುರು ಸಾಧನಾಶ್ರೀ ಪಿ. ಇವರ ಅಸ್ಖಲಿತ ನಟುವಾಂಗ ಝೇಂಕಾರ ಮನಸೆಳೆಯಿತು.
* ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.