ವಿದುಷಿ ಸೌಮ್ಯಶ್ರೀ ಇಂದು ನಡೆದ ತನ್ನ ರಂಗಪ್ರವೇಶದ ಮುದವಾದ ಶುಭ ಮುಂಜಾನೆಯಲ್ಲಿ ತನ್ನ ಸಾತ್ವಿಕಾಭಿನಯದ ಸೊಬಗಿನ ನೃತ್ಯವಲ್ಲರಿಯಿಂದ ಗಮನ ಸೆಳೆದಳು. ‘ದಿ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’ -ನೃತ್ಯಸಂಸ್ಥೆಯ ನೃತ್ಯಗುರು ಶ್ರೀಮತಿ ಅಕ್ಷರ ಭಾರದ್ವಾಜ್ ಅವರ ಬದ್ಧತೆಯ ಉತ್ತಮ ಮಾರ್ಗದರ್ಶನದಲ್ಲಿ ಅವಳು, ನಗರದ ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿ ‘ಮಾರ್ಗಂ’ ಸಂಪ್ರದಾಯದ ಹಲವು ಕೃತಿಗಳನ್ನು ಸಾಕ್ಷಾತ್ಕರಿಸಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು.
ಕರ್ನಾಟಕದ ಭರತನಾಟ್ಯ ಮೈಸೂರು ಪರಂಪರೆಯ ಶ್ರೀಮಂತಿಕೆಯನ್ನು ಒಳಗೊಂಡಿರುವ ‘ಜಯ ಜಾನಕೀ ರಮಣ’ – ‘ತೋಡಯ ಮಂಗಳಂ’ (ರಚನೆ- ಭದ್ರಾಚಲಂ ರಾಮದಾಸರು) ಶ್ರೀರಾಮನಿಗೆ ಈ ಮಂಗಳಗೀತೆಯ ಮೂಲಕ ‘ಪುಷ್ಪಾಂಜಲಿ’ಯನ್ನು ಅರ್ಪಿಸಿ, ತನ್ನ ಪ್ರಸ್ತುತಿಯನ್ನು ಶುಭಾರಂಭಿಸಿದಳು ಕಲಾವಿದೆ. ನಂಜನಗೂಡು ಪರಂಪರೆಯನ್ನು ಒಳಗೊಂಡಿರುವ ‘ಅಷ್ಟದಿಕ್ಪಾಲಕ ಸ್ತೋತ್ರ’ದಲ್ಲಿ ಅಷ್ಟದಿಕ್ಪಾಲಕರನ್ನು ಆರಾಧಿಸಿ, ಪೂರ್ವದಲ್ಲಿ ಇಂದ್ರ, ಆಗ್ನೇಯದಲ್ಲಿ ಅಗ್ನಿ, ದಕ್ಷಿಣದಲ್ಲಿ ಯಮ, ನೈರುತ್ಯದಲ್ಲಿ ನ್ರಿತ್ತಿ, ಪಶ್ಚಿಮದಲ್ಲಿ ವರುಣ, ವಾಯುವ್ಯದಲ್ಲಿ ವಾಯು, ಉತ್ತರದಲ್ಲಿ ಕುಬೇರ, ಈಶಾನ್ಯದಲ್ಲಿ ಈಶಾನನಿಗೆ ಅವರ ದಿವ್ಯ ಸೊಗಸಾದ ಭಂಗಿಗಳಲ್ಲಿ ನಮನ ಸಲ್ಲಿಸಿದ್ದು ನಯನ ಮನೋಹರವಾಗಿತ್ತು.
ಅನಂತರ ವಿಘ್ನ ವಿನಾಯಕನನ್ನು ವಿಶಿಷ್ಟ ರೀತಿಯಲ್ಲಿ ತನ್ನ ವಿಶೇಷ ಭಂಗಿ-ಭಾವಗಳಿಂದ ಸಾಕಾರಗೊಳಿಸಿದಳು. ಶ್ರೀ ಶಂಕರಾಚಾರ್ಯರ ‘ಮುದಾಕರತ್ತ ಮೋದಕಂ-ಸದಾ ವಿಮುಕ್ತಿ ಸಾಧಕಂ’ ಪ್ರಸಿದ್ಧ ಸ್ತೋತ್ರವನ್ನು ಸಂಕ್ಷಿಪ್ತ ಸಂಚಾರಿಯೊಂದಿಗೆ ಭಾವಪೂರ್ಣವಾಗಿ ವಿನಾಯಕನಿಗೆ ಆರಾಧನೆ ಸಲ್ಲಿಸಿದಳು. ಗಣೇಶನ ಅನೇಕ ಮೋಹಕ ಮುಖಗಳನ್ನು ತನ್ನ ಹದವಾದ ಆಂಗಿಕಾಭಿನಯ ಮತ್ತು ಭಾವಪುರಸ್ಸರ ಅಭಿನಯದೊಂದಿಗೆ ಅನಾವರಣಗೊಳಿಸಿದಳು. ಈ ಕೃತಿ ನೃತ್ತ ಮತ್ತು ನೃತ್ಯ ಎರಡಕ್ಕೂ ಸಮೃದ್ಧ ಭೂಮಿಕೆಯಾಗಿತ್ತು.
ಮುಂದೆ ಎಂದಿನಂತೆ ಗುರು ಅಕ್ಷರ, ತಮ್ಮ ಹೊಸ ಒಳನೋಟಗಳ ನವ ವಿನ್ಯಾಸದ ಪ್ರಯೋಗಾತ್ಮಕ ‘ಆಂಡಾಳ್ ಅಲರಿಪು’ವನ್ನು ಹೊಸ ಆಯಾಮದಲ್ಲಿ ವಿಶೇಷವಾಗಿ ನೃತ್ಯ ಸಂಯೋಜಿಸಿದ್ದರು. ಇದರಲ್ಲಿ ಸಾಮಾನ್ಯ ಅಲರಿಪುವಿನಂತೆ ಶುದ್ಧ ತಾಳ, ಅಂಗಸಂಚಲನ ಮಾತ್ರವಲ್ಲ, ಜೊತೆಗೆ ಶ್ರೀವಿಷ್ಣುವಿನ ಮಹಾಭಕ್ತೆಯಾದ ಆಂಡಾಳ್ ಕುರಿತ ಅವಳ ದಿವ್ಯಭಕ್ತಿಯ ಕಥೆಯ ಹಿನ್ನಲೆಯಲ್ಲಿ, ಆಕೆಯ ಕೃಷ್ಣಭಕ್ತಿಯ ಅರಳುವಿಕೆಯನ್ನು ಭಾವಗಳ ಮೂಲಕ ಅಭಿವ್ಯಕ್ತಿಸಲಾಯಿತು. ಅವಳದೇ ಆದ ವಿಶಿಷ್ಟ ವೇಷಭೂಷಣದಲ್ಲಿ ವಿಶೇಷ ಅನುಭೂತಿಯನ್ನು ಸ್ಫುರಿಸುತ್ತ, ಕಲಾವಿದೆ ಸೌಮ್ಯಶ್ರೀ, ಸೌಮ್ಯ ನೃತ್ತಗಳೊಂದಿಗೆ, ಕಮಲದ ಹೂವುಗಳನ್ನು ಕರದಲ್ಲಿ ಧರಿಸಿ ಸಾಂಕೇತಿಕವಾಗಿ ಪುಷ್ಪಾರ್ಚನೆ ಸಲ್ಲಿಸುತ್ತಾ, ತನ್ನ ಹೃದಯದ ಭಕ್ತಿ ನಿವೇದನೆಯ ಭಾಷೆಯಾಗಿ ತನ್ನ ಕೋಮಲ ಆಂಗಿಕಗಳ ಮೂಲಕ ಮನಮೋಹಕವಾಗಿ ಅರ್ಪಿಸಿದಳು. ಅಕ್ಷರ ಅವರ ಸ್ಫುಟವಾದ ನಟುವಾಂಗದ ಹಿನ್ನಲೆಯಲ್ಲಿ, ವಿ. ಬಾಲಸುಬ್ರಮಣ್ಯ ಶರ್ಮ ಅವರ ಸುಮಧುರ ಕಂಠದಲ್ಲಿ ಆಂಡಾಳ್ ಪಾಸರಂ ಅಲೆಯಲೆಯಾಗಿ ಧ್ವನಿಸುತ್ತಿತ್ತು. ‘ಕೌತ್ವಂ’ಗಳು ಪ್ರಾಚೀನ ಕಾಲದಿಂದಲೂ ಶೌರ್ಯಯುತ ದೇವತೆಗಳಿಗೆ ಅರ್ಪಿಸಲ್ಪಡುವ ಶಕ್ತಿಪೂರ್ಣ ನೃತ್ಯ ಪ್ರಸ್ತುತಿಗಳು. ಮುಂದಿನ ‘ನರಸಿಂಹ ಕೌತ್ವಂ’ನಲ್ಲಿ ಶ್ರೀ ಮಹಾವಿಷ್ಣುವಿನ ನರಸಿಂಹಾವತಾರವನ್ನು ಅನಾವರಣಗೊಳಿಸಲಾಯಿತು. ಲಯೋತ್ಸಾಹದ ಚುರುಕುಗತಿಯಲ್ಲಿ, ತೀವ್ರ ಭಾವಾಭಿನಯದ ಉತ್ತುಂಗದಲ್ಲಿ ಪರಿಣಾಮಕಾರಿ ಅಭಿನಯದಲ್ಲಿ ಹಿರಣ್ಯಕಶಿಪುವಿನ ರುದ್ರಾವತಾರ, ಭಕ್ತ ಪ್ರಹ್ಲಾದನ ಹರಿಭಕ್ತಿ ಮತ್ತು ಉಗ್ರ ನರಸಿಂಹನ ಅವತಾರ ಸಾಕಾರಗೊಂಡಿತು.
ಪ್ರಸ್ತುತಿಯ ಹೃದಯಭಾಗ, ಅಷ್ಟೇ ಹೃದ್ಯವಾದ ಹಂತ ‘ವರ್ಣ’. ಕೊಂಚ ದೀರ್ಘಬಂಧ ಎನ್ನಬಹುದು. ರಾಧಾಕೃಷ್ಣರ ಅನುರಾಗ ಕುರಿತ ವಿಪ್ರಲಂಭ ಶೃಂಗಾರದ ‘ವರ್ಣಂ’ – ‘ಇನ್ನಂ ಎನ್ ಮನಂ ಮರಿಯಾದವಾ ಪೋಲ …’ ಎಂದು ರಾಧೆ, ನನ್ನ ಹೃದಯದ ಹಂಬಲವನ್ನು ನೀನು ಅರ್ತೂ ಅರಿಯದಂತೆ ಏಕೆ ವರ್ತಿಸುತ್ತಿರುವೆ ಎಂದು ತನ್ನ ಸ್ವಾಮಿಯಲ್ಲಿ ಅರಿಕೆ ಮಾಡಿಕೊಳ್ಳುವ ಕೃತಿಯಲ್ಲಿ ಆಕೆಯ ವಿರಹದ ಮಜಲುಗಳಲ್ಲಿ ಶ್ರೀಕೃಷ್ಣನ ವೈಶಿಷ್ಟ್ಯಭರಿತವಾದ ಮೇರು ವ್ಯಕ್ತಿತ್ವವನ್ನು ಚಿತ್ರಿಸಲಾಯಿತು. ಕೃಷ್ಣನ ಅಗಲಿಕೆಯ ವಿರಹೋತ್ಖಂಠಿತ ರಾಧೆಯ ದುಃಖದ ಮನಸ್ಥಿತಿಯನ್ನು ಸಮರ್ಥವಾಗಿ ಹೊರಹೊಮ್ಮಿಸಿದಳು ಸೌಮ್ಯಶ್ರೀ. ಅನಂತರ ರಾಜರಾಜೇಶ್ವರಿ ಅಷ್ಟಕ -ದೇವೀಕೃತಿಯಲ್ಲಿ ತಾಯಿಯ ಸಂಪೂರ್ಣ ವೈಭವ ದೈವೀಕ ನೆಲೆಯಲ್ಲಿ ನಿರೂಪಣೆಗೊಂಡು ಮನಸ್ಸಿಗೆ ತಂಪೆರೆಯಿತು.
ಅನಂತರ ಶ್ರೀ ಅಣ್ಣಮಾಚಾರ್ಯ ರಚಿತ ‘ಮುದ್ದುಗಾರೆ ಯಶೋದೆ’- ವಾತ್ಸಲ್ಯ ಪದವನ್ನು ಸೌಮ್ಯಶ್ರೀ ಯಶೋದೆಯ ಅಂತರಂಗವನ್ನು ಹೊಕ್ಕು, ತಾನೇ ಪಾತ್ರವಾಗಿ ಕೃಷ್ಣನ ತುಂಟಾಟಗಳನ್ನು, ಸಾಹಸ- ಮಹಿಮೆಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟಳು. ಅಂತ್ಯದಲ್ಲಿ ಹರ್ಷದ ಸೋನೆಗರೆದ ಲಯಾತ್ಮಕ ನೃತ್ತಗಳ ಝೇಂಕಾರದಿಂದ ಕಲಾವಿದೆ ‘ತಿಲ್ಲಾನ’ವನ್ನು ಮತ್ತು ಅಣ್ಣಮಾಚಾರ್ಯ ವಿರಚಿತ ‘ಅದಿವೋ ಅಲ್ಲದಿವೋ ಹರಿವಾಸಮು’ ಕೃತಿಯ ಮೂಲಕ ಏಳುಮಲೆಯ ಗೋವಿಂದನ ದಿವ್ಯ ದರ್ಶನದ ರಸಾನುಭವವನ್ನು ಮನೋಜ್ಞ ನೃತ್ಯದ ಮೂಲಕ ಒದಗಿಸಿ, ತನ್ನ ನೃತ್ಯ ಸಮರ್ಪಣೆಯನ್ನು ಸಾರ್ಥಕಗೊಳಿಸಿಕೊಂಡಳು.
ಕಲಾವಿದೆಯ ಭಾವಪೂರ್ಣ ನರ್ತನಕ್ಕೆ ದಿವ್ಯ ಕಳೆ ನೀಡಿದವರು – ಗಾಯನದಲ್ಲಿ ಬಾಲಸುಬ್ರಹ್ಮಣ್ಯ ಶರ್ಮ, ಮೃದಂಗದಲ್ಲಿ ಜಿ. ಗುರುಮೂರ್ತಿ, ಕೊಳಲು – ಕಾರ್ತೀಕ್ ಸಾಥವಳ್ಳಿ, ವಯೊಲಿನ್ – ವಿಭುದೇಂದ್ರ ಸಿಂಹ ಮತ್ತು ರಿದಂ ಪ್ಯಾಡ್ ಮಿಥುನ್ ಶಕ್ತಿಯ ಸಾಂಗತ್ಯದಲ್ಲಿ ಅಕ್ಷರ ಭಾರಧ್ವಾಜ್ ಅವರ ಹದವಾದ ಉತ್ತಮ ನಟುವಾಂಗ ಕಲಾವಿದೆಯ ಭಾವಪೂರ್ಣ ಅಭಿನಯ, ಅಂಗಶುದ್ಧ ನರ್ತನದ ಹೆಜ್ಜೆಗಳಿಗೆ ಸ್ಫೂರ್ತಿ ನೀಡಿತು.
* ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.