ಬೆಂಗಳೂರಿನ ಕಾರಂಜಿ ಆಂಜನೇಯನ ದೈವಸನ್ನಿಧಿಯಲ್ಲಿ ಅನಾವರಣಗೊಂಡ ಪುರಾಣಕಾಲದ ಒಂದೊಂದು ದಿವ್ಯ ಕಥೆಯೂ ನಾಟಕದ ದೃಶ್ಯಗಳಂತೆ ಚೇತೋಹಾರಿಯಾಗಿ ಚಲಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಭಕ್ತಿಭಾವ ಕೆನೆಗಟ್ಟಿದ ‘ನವವಿಧ ಭಕ್ತಿ’ಯ ಕಥಾನಕಗಳು ಪೂರಕ ಸಂಗೀತ ಸಾಂಗತ್ಯದಲ್ಲಿ ಅರಳುತ್ತ ಕಥಾಪ್ರಸಂಗವನ್ನು ಕಣ್ಮನ ತಣಿಸುವ ನೃತ್ಯಧಾರೆಯಲ್ಲಿ ನಿರೂಪಿಸಿದ್ದು ವಿಶಿಷ್ಟವಾಗಿತ್ತು. ವಿಶ್ವಪ್ರಸಿದ್ಧ ಹಿರಿಯ ನೃತ್ಯಗುರು ಕೇಂದ್ರ ಪ್ರಶಸ್ತಿ ಪುರಸ್ಕೃತೆ ವಿದುಷಿ. ರಾಧಾ ಶ್ರೀಧರ್ ಪರಿಕಲ್ಪನೆ-ನೃತ್ಯ ಸಂಯೋಜನೆ ಮತ್ತು ತರಬೇತಿಯಲ್ಲಿ ಪ್ರದರ್ಶಿತವಾದ ಸುಮನೋಹರ ನೃತ್ಯರೂಪಕ ಎರಡು ಗಂಟೆಗಳ ಕಾಲ ತಲ್ಲೀನಗೊಳಿಸಿತು. ವಿದುಷಿ ದ್ವಾರಕಿ ಕೃಷ್ಣಸ್ವಾಮಿಯವರ ಸಾಹಿತ್ಯ-ಸಂಗೀತ ಸಹಕಾರ, ಗಾಯಕ ಡಿ. ಶ್ರೀವತ್ಸ ಸಂಗೀತ ನೀಡುವುದರೊಂದಿಗೆ ಭಾವಪೂರ್ಣವಾಗಿ ಹಾಡಿದ್ದರು.
‘’ನವವಿಧ ಭಕ್ತಿ’’- ನೃತ್ಯರೂಪಕ, ಭಕ್ತಿಯ ಪ್ರಖರಶಕ್ತಿಯನ್ನು ಸಾಕ್ಷಾತ್ಕರಿಸುವ ಉಜ್ವಲ ಸಂದೇಶದ ದಿವ್ಯಾನುಭೂತಿಗೆ ಕಾರಣವಾಯಿತೆಂದರೆ ಅತಿಶಯೋಕ್ತಿಯಲ್ಲ. ಸನಾತನ ಧಾರ್ಮಿಕ ಪರಂಪರೆಯಲ್ಲಿನ ಒಂಭತ್ತು ಬಗೆಯ ಭಕ್ತಿಯ ಮುಖಗಳನ್ನು ವಿವಿಧ ಪುರಾಣ ನಿದರ್ಶನಗಳ ಮೂಲಕ ದೃಶ್ಯಾತ್ಮಕವಾಗಿ ವರ್ಣರಂಜಕವಾಗಿ ಪ್ರಸ್ತುತಗೊಳಿಸಲಾಯಿತು. ಮೋಕ್ಷ ಸಾಧನಗಳಾದ ನವವಿಧ ಭಕ್ತಿಗಳಾದ -ಶ್ರವಣಂ, ಕೀರ್ತನಂ. ಸ್ಮರಣಂ, ಪಾದಸೇವನಂ, ಅರ್ಚನಂ, ವಂದನಂ, ದಾಸ್ಯಂ, ಸಖ್ಯಂ, ಅರ್ಪಣಂ ಮತ್ತು ಆತ್ಮ ನಿವೇದನಂ’ ಹೀಗೆ ಭಕ್ತ್ಯಾರ್ಪಣೆಯ ನವವಿಧ ಆಯಾಮಗಳನ್ನು ‘ವೆಂಕಟೇಶ ನಾಟ್ಯ ಮಂದಿರ’ದ ನುರಿತ 18 ಕಲಾವಿದರು ಅತ್ಯಾಕರ್ಷಕ ವೇಷ-ಭೂಷಣಗಳಿಂದ ನೃತ್ಯ ನೈವೇದ್ಯ ಸಲ್ಲಿಸಿದ್ದು ಭಕ್ತಿಯ ಸಂಚಲನವನ್ನುಂಟು ಮಾಡಿತ್ತು.
‘ಶ್ರವಣ’ ಮಾತ್ರದಿಂದಲೇ ಹಿರಣ್ಯ ಕಶಿಪು- ಕಯಾದುವಿನ ಮಗನಾದ ಪ್ರಹ್ಲಾದ, ತಾಯಗರ್ಭದಲ್ಲಿದ್ದಾಗಲೇ ನಾರದರು ಉಪದೇಶಿಸಿದ ಹರಿಮಂತ್ರವನ್ನು ಕಲಿತು ಮೈಗೂಡಿಸಿಕೊಂಡು, ಮುಂದೆ ತನ್ನ ಅಚಲ ಹರಿಭಕ್ತಿಯನ್ನುಲೋಕಕ್ಕೆ ಸಾರಿ, ಶ್ರೀಹರಿಯ ನಾರಸಿಂಹನ ಅವತಾರಕ್ಕೆ ಕಾರಣನಾಗುವ ರೋಮಾಂಚಕ ಪ್ರಸಂಗ ನಾಟಕೀಯ ಸನ್ನಿವೇಶದಲ್ಲಿ ಮನನೀಯವಾಗಿ ನಿರೂಪಿತವಾಯಿತು. ‘ಕೀರ್ತನ’ದ ಮಹತ್ವವನ್ನು ಬೇಡ ವಾಲ್ಮೀಕಿ, ನಾರದರ ಉಪದೇಶದಂತೆ ಎದುರಿಗಿದ್ದ ಮರ ಶಬ್ದವನ್ನು ಉಚ್ಚರಿಸುವಂತೆ ಪ್ರೇರೇಪಿತನಾಗಿ, ‘ಕೀರ್ತನ’ದ ಸತ್ಪ್ರಭಾವದಿಂದ ದೀರ್ಘ ತಪಸ್ಸಿಗೆ ಸಂದು, ವಲ್ಮೀಕದೊಳಗೆ ನವಜನ್ಮ ಪಡೆದುಕೊಂಡ. ಕೃಷ್ಣ ನಾಮ ‘ಸ್ಮರಣಂ’ – ಮೂಲಕ ವಾಗ್ಗೇಯಕಾರ ಊತಕಾಡು ವೆಂಕಟಸುಬ್ಬಯ್ಯರ್ ಕೃಷ್ಣನನ್ನು ಸಾಕ್ಷಾತ್ಕಾರ ಮಾಡಿಕೊಂಡ ಘಟನೆ ಸುಂದರವಾಗಿ ಚಿತ್ರಿತವಾಯಿತು. ಅರಣ್ಯವಾಸಕ್ಕೆ ಹೊರಟಿದ್ದ ಶ್ರೀರಾಮನ ಪಾದುಕೆಯನ್ನು ತನ್ನ ತಲೆಯ ಮೇಲೆ ಹೊತ್ತು ಅವನ ಹೆಸರಿನಲ್ಲಿ ಆಳ್ವಿಕೆ ಮಾಡಿದ ಭರತ ’ಪಾದಸೇವನಂ’ ಗೆ ನಿದರ್ಶನನಾದ. ‘ಅರ್ಚನಂ’ಗೆ ರೂಪಕವಾದ ಕೋಳೂರು ಕೊಡಗೂಸಿನ ಮುಗ್ಧಭಕ್ತಿ, ಅರಣ್ಯವಾಸ ಮುಗಿಸಿ ಅಯೋಧ್ಯೆಗೆ ಬಂದ ಶ್ರೀರಾಮ ಮೊದಲು ಬಂದು ಮಾಡಿದ ಕೆಲಸವೆಂದರೆ, ತನ್ನ ಉದ್ಧಾರಕ್ಕೆ ಕಾರಣಳಾದ ಕೈಕೇಯಿಗೆ ಮನಸಾರೆ ‘ವಂದನಂ’, ಸಲ್ಲಿಸಿದ್ದು ಒಂದು ಮಹತ್ವದ ಚಿಂತನೆ- ತನ್ನ ಸಮಸ್ತವನ್ನು ಶ್ರೀಕೃಷ್ಣನಿಗೆ ನಿರ್ವ್ಯಾಜದಿಂದ ಅರ್ಪಿಸಿದ ಸಂತ ಮೀರಳ ಸಂಪೂರ್ಣ ಜೀವನ ‘ದಾಸ್ಯಂ’ ದ್ಯೋತಕ, ಅರ್ಜುನನಿಗೆ ರಣಾಂಗಣದಲ್ಲಿ ಸಾರಥಿಯಾಗಿ ಇಡೀ ಕುರುಕ್ಷೇತ್ರ ಯುದ್ಧವನ್ನು ದಿಗ್ದರ್ಶಿಸಿದ್ದು, ಅರ್ಜುನನ ಮನೋಬಲ ಹೆಚ್ಚಿಸಲು ತೋರಿದ ವಿಶ್ವರೂಪ-ಉಪದೇಶಿಸಿದ ಗೀತೋಪದೇಶ ಅವರಿಬ್ಬರ ‘ಸಖ್ಯ’ಕ್ಕೆ ಹಿಡಿದ ಕನ್ನಡಿ. ಅಂತ್ಯದಲ್ಲಿ ದಾಸರು ತೋಯಜಾಕ್ಷ ಹರಿಯನ್ನು ಹಾಡಿ ಹೊಗಳಿ ಮುಕ್ತಿಪಡೆದ ದಿವ್ಯಕ್ಷಣಗಳು ‘ಆತ್ಮ ನಿವೇದನೆ’ಯ ಶರಣಾಗತಭಾವ ಪರಾಕಾಷ್ಟತೆಯಲ್ಲಿ ಘನೀಭವಿಸಿತು.
ಇಡೀ ನೃತ್ಯರೂಪಕ, ಬಿಡಿಬಿಡಿ ಘಟನೆಗಳ ಚಿತ್ರೀಕರಣದಲ್ಲಿ, ಕಲಾವಿದರ ಅಭಿನಯ ಸಾಮರ್ಥ್ಯದ ಮೆರುಗಿನಲ್ಲಿ, ನೃತ್ಯದ ನಾಟಕೀಯ ಆಯಾಮದಲ್ಲಿ ‘ನವವಿಧ ಭಕ್ತಿ’ ಯ ವೈವಿಧ್ಯ ರಸಹೂರಣವನ್ನು ನೋಡುಗರ ಹೃದಯಕ್ಕೆ ಪರಿಣಾಮಕಾರಿಯಾಗಿ ದಾಟಿಸಿತು.
ವೈ. ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.