ದೇವೀಕಳೆಯಿಂದ ರಾರಾಜಿಸುತ್ತಿದ್ದ ಪುಟ್ಟ ನೃತ್ಯಕಲಾವಿದೆ ಕುಮಾರಿ ಅದಿತಿ ಗೋಪಾಲ್ ಇವರು ಕೆ.ಇ.ಎ. ಪ್ರಭಾತ್ ರಂಗಮಂದಿರದ ವೇದಿಕೆಯಲ್ಲಿ ತನ್ಮಯತೆಯಿಂದ ನರ್ತಿಸಿದ ದೈವೀಕ ನಾಟ್ಯದ ಶೀರ್ಷಿಕೆ ‘ನರ್ತಿಸು ಆದಿಶಕ್ತಿ’- ಅನ್ವರ್ಥಕವಾಗಿ ಸಾಕಾರಗೊಂಡಿತು. ‘ಚಿತ್ರ ನಾಟ್ಯ ಫೌಂಡೇಶನ್’ ನೃತ್ಯ ಸಂಸ್ಥೆಯ ಸೃಜನಶೀಲ ನೃತ್ಯಗುರು ವಿದುಷಿ ಎಲ್.ಜಿ. ಮೀರಾ ನುರಿತ ಗರಡಿಯಲ್ಲಿ ತರಬೇತಿಯನ್ನು ಪಡೆದ ಅದಿತಿ ತನ್ನ ರಂಗಪ್ರವೇಶದ ಸ್ಮರಣೀಯ ಸಂದರ್ಭದಲ್ಲಿ ಅನೇಕ ದೇವೀ ಕೃತಿಗಳನ್ನು ಭಕ್ತಿಪರವಶತೆಯಿಂದ ಸುಮನೋಹರವಾಗಿ ನರ್ತಿಸಿದಳು.
ತಮ್ಮ ಶಿಷ್ಯೆಯ ವಯಸ್ಸು ಮತ್ತು ಮನೋಧರ್ಮವನ್ನು ಗಮನದಲ್ಲಿಟ್ಟುಕೊಂಡು ಗುರು ಮೀರಾ, ಅದಿತಿಗೆ ತಕ್ಕುದಾದ ಭಕ್ತಿಪ್ರಧಾನ ಕೃತಿಗಳನ್ನೇ ಆಯ್ದುಕೊಂಡು ಸುಂದರ ಪ್ರದರ್ಶನಕ್ಕೆ ಅನುವು ಮಾಡಿದ್ದರು. ಶುಭಾರಂಭದಲ್ಲಿ ಪ್ರಾರ್ಥನಾರೂಪದ ಸಮರ್ಪಣೆಯಾಗಿ ಆದಿಪೂಜಿತ ಗಣೇಶನನ್ನು ‘ಪುಷ್ಪಾಂಜಲಿ’ಯ ನೃತ್ತ ನಮನಗಳ ಮೂಲಕ ಆರಾಧಿಸಿ, ಅನಂತರ ‘ನಟೇಶ ಕೌತ್ವಂ’- ಕೃತಿಯಲ್ಲಿ ನಟರಾಜನ ವೈಶಿಷ್ಯ-ಮಹತ್ವವನ್ನು ನಾನಾ ಭಂಗಿಗಳಲ್ಲಿ ಅಭಿವ್ಯಕ್ತಿಸಿದಳು.
ಮುಂದೆ ಅದಿತಿ ನಗುಮೊಗದಿಂದ ಪ್ರಸ್ತುತಪಡಿಸಿದ ‘ಸರಸ್ವತಿ ಅಲರಿಪು’ (ಖಂಡಜಾತಿ) ಶಿರೋ ಭೇದ, ದೃಷ್ಟಿ-ಗ್ರೀವ ಭೇದಗಳಿಂದ ಕೂಡಿದ್ದು, ನೃತ್ಯವ್ಯಾಕರಣದ ಬಹತೇಕ ಅಂಶಗಳನ್ನೂ ಒಳಗೊಂಡು ವೀಣಾಪಾಣಿ ಸರಸ್ವತಿಯ ವಿವಿಧ ಸುಂದರ ಭಂಗಿಗಳನ್ನು, ಹಸ್ತಮುದ್ರೆಗಳನ್ನು ತನ್ನ ಅಂಗಿಕಾಭಿನಯದಿಂದ ಒಪ್ಪವಾಗಿ ನಿರೂಪಿಸಿದಳು. ‘ಜತಿಸ್ವರ’ದಲ್ಲಿ ಸರಳ ಜತಿಗಳೊಡನೆ ಕೋದ ಸ್ವರಗಳ ಸುಂದರ ಸಂಗಮವನ್ನು ಸಮರ್ಥವಾಗಿ ನಿರ್ವಹಿಸಿದ ಅದಿತಿಯು ಮೀರಾ ಅವರ ನಿಖರ ನಟುವಾಂಗದ ತಾಳಕ್ಕೆ ಅನುಗುಣವಾಗಿ ಹೆಜ್ಜೆಗೂಡಿಸಿದಳು.
ನಾಟ್ಯದಲ್ಲಿ ಅಭಿನಯ ಮೊದಲು ಕಾಣಿಸಿಕೊಳ್ಳುವ ಕೃತಿ ‘ಶಬ್ದಂ’. ರಾಮಾಯಣದ ಕಥೆಯನ್ನು ಅಡಕವಾಗಿ ಹೇಳಲಾದ ತಮಿಳು ‘ರಾಮಾಯಣ ಶಬ್ದಂ’ನಲ್ಲಿ ಶಿವಧನಸ್ಸು ಛೇದನಾ, ಸೀತಾ ಕಲ್ಯಾಣ, ಮಾಯಾ ಜಿಂಕೆಯ ಪ್ರಕರಣ ಮತ್ತು ಮುದ್ರೆಯುಂಗುರ ಪ್ರಸಂಗಗಳು ಸಂಚಾರಿ ಕಥಾನಕದಲ್ಲಿ ಅದಿತಿಯ ಅಭಿನಯ ನಾಟಕೀಯ ಆಯಾಮದಲ್ಲಿ ಅಭಿವ್ಯಕ್ತಿಗೊಂಡಿತು.
ಭರತನಾಟ್ಯದ ‘ಮಾರ್ಗಂ’ ಸಂಪ್ರದಾಯದ ಪ್ರಸ್ತುತಿಯಲ್ಲಿ ‘ವರ್ಣ’ ಪ್ರಧಾನ ಘಟ್ಟ. ಅದಿತಿ ಅಂದು ಪ್ರಸ್ತುತಪಡಿಸಿದ್ದು ಭಕ್ತಿಪ್ರಧಾನವಾದ ‘ಪದವರ್ಣ’. ಅಪರೂಪದ ಕೃತಿ ‘ಕೋಳೂರು ಕೊಡಗೂಸು’ ಮೋಹನ ರಾಗ-ಆದಿತಾಳದಲ್ಲಿ ಈ ವರ್ಣವನ್ನು ವಿದುಷಿ ಮೀರಾ ತಾವೇ ರಚಿಸಿ, ನೃತ್ಯ ಸಂಯೋಜನೆ ಮಾಡಿದ್ದು ವಿಶೇಷವಾಗಿತ್ತು. ಕೋಳೂರಿನ ಪುಟ್ಟ ಶಿವಭಕ್ತೆ ತನ್ನ ಮುಗ್ಧಭಕ್ತಿಯನ್ನು ಸಾಬೀತು ಮಾಡುವ ಜನಪ್ರಿಯವಾದ ಕಥೆಯನ್ನು ಹೊಂದಿದೆ. ಪ್ರತಿದಿನ ತಾಯಿ ಶಿವನಿಗೆ ಹಾಲಿನ ನೈವೇದ್ಯ ಕೊಡುವ ಪದ್ಧತಿ ಕಂಡಿದ್ದ ಮಗು, ತಾನೂ ಶಿವನಿಗೆ ಹಾಲು ಎರೆಯುವ ಹಂಬಲದಿಂದ ಹಾಲನ್ನು ತೆಗೆದುಕೊಂಡು ಹೋಗಿ, ‘ಬಾ ಬಾ ನಾಗಭೂಷಣನೇ’ ಎಂದು ಶಿವನನ್ನು ಅಕ್ಕರೆಯಿಂದ ಕರೆಯುತ್ತ ಹಾಲು ಸ್ವೀಕರಿಸಲು ಬೇಡಿಕೊಂಡಾಗ ಶಿವಲಿಂಗ ಅಲುಗಾಡುವುದಿಲ್ಲ. ಶಿವ ಸ್ಥಿರವಾಗಿದ್ದುದನ್ನು ಕಂಡು, ತಾನಿತ್ತ ಹಾಲು ಕುಡಿಯಲೇಬೇಕೆಂದು ಕೂಸು ನಾನಾ ಬಗೆಯಲ್ಲಿ ಬೇಡಿಕೊಂಡು ಹಟಮಾಡಿ ಲಿಂಗಕ್ಕೆ ತಲೆಯನ್ನು ಒಡೆದುಕೊಂಡಾಗ ಆ ಪುಟ್ಟಬಾಲೆಯ ನಿರ್ಮಲ ಪ್ರೀತಿಗೆ ಕರಗಿಹೋದ ಶಿವ ಪ್ರತ್ಯಕ್ಷನಾಗಿ ಹಾಲು ಕುಡಿಯುವ ಸನ್ನಿವೇಶವನ್ನು ಮತ್ತು ಇಡೀ ಪ್ರಕರಣವನ್ನು ಅದಿತಿ ಸೊಗಸಾಗಿ ಕಂಡರಿಸಿದಳು. ಶಿವನನ್ನು ಕಾಣುವ ಸಂಭ್ರಮದ ಖುಷಿಯಿಂದ ರಂಗಾಕ್ರಮಣದಲ್ಲಿ ಕುಣಿಯುತ್ತ ನಲಿಯುತ್ತ ಮುದವಾದ ಅಭಿನಯ ತೋರಿದ ಅದಿತಿ ನೃತ್ತಗಳ ನಿರೂಪಣೆಯಲ್ಲೂ ‘ಸೈ’ ಎನಿಸಿಕೊಂಡಳು.
ಕೃಷ್ಣನ ಆಕರ್ಷಕ ವ್ಯಕ್ತಿತ್ವವನ್ನು ಸಾಕ್ಷೀಕರಿಸಿದ ‘ಪದಂ’- ‘ಮಧುರ ಮಧುರ ವೇಣುಗೀತಂ…’ ಗಿರಿಧರ ಗೋಪಾಲನ ಸುಮಧುರ ಮನಸೆಳೆವ ಸೌಂದರ್ಯವನ್ನು ಅನಾವರಣಗೊಳಿಸಿತು. ಗುರು ಮೀರಾ ರಚಿಸಿದ ‘ಮೂಲಾಧಾರ ಆದಿಶಕ್ತಿ ಒಲಿದು ಬಾ’- ಭಕ್ತಿಗೀತೆಯನ್ನು ಅದಿತಿ ಭಕ್ತಿ ತಲ್ಲೀನತೆಯಿಂದ ಅರ್ಪಿಸಿದಳು. ಮುಂದೆ ‘ಮೈಸೂರು ಮಲ್ಲಿಗೆ’ ಖ್ಯಾತಿಯ ಕವಿ ಕೆ.ಎಸ್.ನ. ವಿರಚಿತ ಸಿರಿಗನ್ನಡ ನಾಡಿನ ವೈಶಿಷ್ಟ್ಯ ಸಾರುವ ‘ಪಡುವಣ ಕಡಲಿನ ನೀಲಿಯ ಬಣ್ಣ…’ ಭಾವನೃತ್ಯದ ಸೊಗಸನ್ನು ಬೀರಿದಳು. ಅಂತ್ಯದಲ್ಲಿ ಗುರು ಅಳವಡಿಸಿದ್ದ ಕಂಸಾಳೆ, ವೀರಗಾಸೆ ಮುಂತಾದ ಎಂಟು ಬಗೆಯ ಜಾನಪದ – ದೇಸೀ ನೃತ್ಯದ ಸೊಗಡನ್ನು ಪಸರಿಸಿತು.
ಅಂತ್ಯದಲ್ಲಿ ‘ತಿಲ್ಲಾನ’ ಮತ್ತು ‘ಮಂಗಳ’ದೊಂದಿಗೆ ಅದಿತಿಯ ನೃತ್ಯಪ್ರಸ್ತುತಿ ಅಂತ್ಯವಾಯಿತು. ಸಹಗಾಯನದೊಂದಿಗೆ ಸ್ಫುಟವಾಗಿ ನಟುವಾಂಗ ನಿರ್ವಹಿಸಿದ ಪ್ರಯೋಗಶೀಲೆ ವಿದುಷಿ ಮೀರಾ ಅವರ ನೃತ್ಯ ಸಂಯೋಜನೆಗಳು ಸುಮನೋಹರವಾಗಿ ಕಣ್ಮನ ಸೆಳೆದದ್ದು ಗಮನಾರ್ಹವಾಗಿತ್ತು. ವಾದ್ಯಗೋಷ್ಠಿಯಲ್ಲಿ ಸಹಕರಿಸಿದವರು : ಗಾಯನ – ಸುಮಾ ವೆಂಕಟೇಶ್, ಮೃದಂಗ – ಕಾರ್ತೀಕ್ ವೈಧಾತ್ರಿ, ವಯೊಲಿನ್ – ಎಂ. ಚಿನ್ಮಯಿ, ಕೊಳಲು – ಕೆ.ಪಿ. ಪ್ರಣವ್ ಮತ್ತು ರಿದಂ ಪ್ಯಾಡ್ – ಎಸ್. ಮಿಥುನ್ ಶಕ್ತಿ.
– ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಪ್ರಧಾನ ಸಂಪಾದಕಿ ಸಂಧ್ಯಾ ಪತ್ರಿಕೆ, ‘ಅಭಿನವ ಪ್ರಕಾಶನ’ದ ಸ್ಥಾಪಕಿ, ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ‘ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡ’ದ ಅಧ್ಯಕ್ಷೆ.