ನೃತ್ಯರಂಗದಲ್ಲಿ ಸದ್ದಿಲ್ಲದೆ ಸಾಧನಾ ಪಥದಲ್ಲಿ ಸಾಗುತ್ತಿರುವ ನೃತ್ಯಗುರು ಶ್ರೀಮತಿ ಸುನೀತಾ ಅರವಿಂದ್ ನೇತೃತ್ವದ ‘ಕಲಾಂತರಿಕ್ಷಂ ನೃತ್ಯಕ್ಷೇತ್ರ’ ನೃತ್ಯಸಂಸ್ಥೆಯ ಪುಟಾಣಿ ನರ್ತಕಿಯರು ಇತ್ತೀಚೆಗೆ ಜೆ.ಎಸ್.ಎಸ್. ಆಡಿಟೋರಿಯಂನಲ್ಲಿ ಅತ್ಯಾಕರ್ಷಕ ವೇಷಭೂಷಣಗಳಿಂದ ವೇದಿಕೆಯ ಮೇಲೆ ಬಹು ಸೊಗಸಾಗಿ ನರ್ತಿಸಿದ ದೃಶ್ಯ ಅನನ್ಯವಾಗಿತ್ತು. ಸುಂದರ ವಿನ್ಯಾಸದ ನೃತ್ಯ ಸಂಯೋಜನೆ ಮತ್ತು ಕೃತಿಗಳ ಸಮರ್ಥ ಪ್ರಸ್ತುತಿಯಲ್ಲಿ ನೃತ್ಯಗುರು ಸುನೀತಾ ಅರವಿಂದ್ ಅವರ ಬಹು ಪರಿಶ್ರಮದ ಬದ್ಧತೆಯ ತರಬೇತಿ ಎದ್ದು ಕಾಣುತ್ತಿತ್ತು.
ಸುಮಾರು ಮೂರು ಗಂಟೆಗಳ ಕಾಲ 75 ಉದಯೋನ್ಮುಖ ನರ್ತಕಿಯರು ರಂಗದ ಮೇಲೆ ಬಹು ಸಾಮರಸ್ಯದಿಂದ ಹೆಜ್ಜೆಗಳನ್ನು ಹಾಕಿ, ತಮ್ಮ ಅಂಗಶುದ್ಧ ನರ್ತನ ವೈಖರಿಯಿಂದ, ಆಂಗಿಕಾಭಿನಯದ ಸೊಗಸಿನಿಂದ, ಮುದನೀಡುವ ಅಭಿನಯದಿಂದ ಕಲಾರಸಿಕರನ್ನು ಆಕರ್ಷಿಸಿದರು. ವರ್ಣರಂಜಿತ ವಸ್ತ್ರವಿನ್ಯಾಸ, ಬಹು ಆಸ್ಥೆಯಿಂದ ಮಾಡಿದ್ದ ಪ್ರಸಾಧನದ ಕಲಾತ್ಮಕತೆ, ಆಭರಣಗಳ ಆಯ್ಕೆ ಬಹು ವಿಶಿಷ್ಟವೆನಿಸಿತು. ಹಿರಿಯ ಕಲಾವಿದರಷ್ಟೇ ಎಲ್ಲ ಅಂಶಗಳಲ್ಲೂ ಪುಟ್ಟಮಕ್ಕಳಿಗೆ ನೀಡಿದ್ದ ಆದ್ಯತೆ ಗಮನಾರ್ಹವಾಗಿತ್ತು.
ಶುಭಾರಂಭಕ್ಕೆ ಅರಳು ಪ್ರತಿಭೆಗಳು ಬಹು ಶ್ರದ್ಧೆಯಿಂದ ಸಾಕಾರಗೊಳಿಸಿದ ‘ಪುಷ್ಪಾಂಜಲಿ’ ಮತ್ತು ವಿಘ್ನ ವಿನಾಯಕನ ಸ್ತುತಿಯ ನರ್ತನಾ ವಿಲಾಸ ಮುದನೀಡಿತು. ಅವರ ಸಂಭ್ರಮ -ಖುಷಿ ಅಲರಿಪು, ಜತಿಸ್ವರಗಳಲ್ಲಿ ಹೊನಲಾಗಿ ಹರಿಯಿತು. ಕಲಾವಿದೆಯರ ಹಸ್ತ-ಮುದ್ರೆಗಳ ಶುದ್ಧತೆಯೊಂದಿಗೆ ರೋಚಕ ಜತಿವಿನ್ಯಾಸ ಅಂಗಶುದ್ಧವಾಗಿದ್ದವು, ಅಷ್ಟೇ ನಗುಮುಖಗಳಿಂದ ಮನಮೋಹಕ ಆಂಗಿಕಾಭಿನಯದಲ್ಲಿ ಅಭಿವ್ಯಕ್ತವಾದವು. ಅವರು ಪ್ರದರ್ಶಿಸಿದ ಅರೆಮಂಡಿ, ಆಕಾಶಚಾರಿಗಳ ರಮ್ಯತೆ, ಆತ್ಮವಿಶ್ವಾಸದ ರಂಗಾಕ್ರಮಣ, ಸೊಬಗಿನ ನಡೆ ಉಲ್ಲಾಸ ನೀಡಿದವು.
ಮುಂದೆ ‘ಮೀನಾಕ್ಷಿ ಸ್ತುತಿ’ಯಲ್ಲಿನ ದೈವೀಕ ಭಾವ ಆನಂದಾನುಭವ ನೀಡಿತು. ಪುಟಾಣಿ ಕಣ್ಮಣಿಗಳಲ್ಲಿದ್ದ ತಾಳ ಮತ್ತು ಲಯಜ್ಞಾನಗಳು ಅಚ್ಚರಿ ಹುಟ್ಟಿಸಿತು. ನಂತರ ಷಣ್ಮುಖ ಕೌತ್ವಂ, ನಟೇಶ ಕೌತ್ವಂಗಳಲ್ಲಿ ಕಣ್ಮನ ಸೆಳೆದ ವಿಶಿಷ್ಟ ಭಂಗಿಗಳು- ಉತ್ತಮ ವಿನ್ಯಾಸಗಳು ಮನಸೆಳೆದವು. ನರ್ತಕಿಯರು ಮಿಂಚಿನ ವೇಗದ ಜತಿಗಳನ್ನು ಲೀಲಾಜಾಲವಾಗಿ ನಿರ್ವಹಿಸಿದರು. ಮುಂದಿನ ‘ಮುರುಗ ಶಬ್ದಂ’ ಅತ್ಯಾಕರ್ಷಕವಾಗಿ ಮೂಡಿಬಂತು. ನಂತರ ಪುರಂದರ ದಾಸರ ರಚನೆಯ ‘ಜಗನ್ಮೋಹನಾನೇ ಕೃಷ್ಣ’ ಕೃತಿಯನ್ನು ಕಲಾವಿದೆಯರು, ವಿವಿಧ ಸಂಚಾರಿಗಳಲ್ಲಿ ಬಹು ಪರಿಣಾಮಕಾರಿಯಾಗಿ ನರ್ತಿಸಿ ಕಲಾರಸಿಕರನ್ನು ಬೆರಗುಗೊಳಿಸಿದರು. ನವೀನ ಮತ್ತು ಕಲಾತ್ಮಕವಾಗಿದ್ದ ನೃತ್ಯ ಸಂಯೋಜನೆಯ ಯಶಸ್ಸು ಗುರು ಸುನೀತಾ ಅವರಿಗೆ ಸಲ್ಲಬೇಕು. ‘ಕೃಷ್ಣಂ ವಂದೇ ಜಗದ್ಗುರುಂ’ –ನಲ್ಲಿ ಅನಾವರಣಗೊಂಡ ಮನೋಜ್ಞ ದಶಾವತಾರಗಳು ಮಕ್ಕಳ ವಯಸ್ಸಿಗೇ ಮೀರಿದ ಅವರ ನೃತ್ಯ ಪ್ರತಿಭೆಗೆ ಸಾಕ್ಷಿಯಾಗಿದ್ದವು.
ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಸತತ ರಸಾನುಭವ ಒದಗಿಸಿದ ಪ್ರತಿಭಾನ್ವಿತ ಪುಟಾಣಿಗಳು ಸಾಕಾರಗೊಳಿಸಿದ ‘ಸ್ವಾಗತಂ ಕೃಷ್ಣ’ ಮನನೀಯವಾಗಿತ್ತು. ಹೃನ್ಮನ ತುಂಬಿದ ಬಾಲಪ್ರತಿಭೆಗಳ ನೃತ್ಯಮಂಜರಿ ಒಂದಕ್ಕಿಂತ ಒಂದು ಸೊಗವೆನಿಸಿದವು. ತೋಡಯ ಮಂಗಳಂ- ‘ಜಯ ಜಾನಕಿ ರಮಣ, ಜಯ ವಿಭೀಷಣ ಶರಣ…’ ಎಂಬ ಮಂಗಳದೊಂದಿಗೆ ತಮ್ಮ ಪ್ರಸ್ತುತಿಯನ್ನು ಸಂಪನ್ನಗೊಳಿಸಿದ ಸಾಮೂಹಿಕ ಗೆಜ್ಜೆಪೂಜೆಯ ಸುಂದರ ಕ್ಷಣಗಳು ಸ್ಮರಣೀಯವಾಗಿದ್ದವು ಎಂದರೆ ಅತಿಶಯೋಕ್ತಿಯಲ್ಲ.
ಪುಟಾಣಿಗಳಿಗೆ ಮನದಟ್ಟಾಗುವಂತೆ ನೃತ್ಯಶಿಕ್ಷಣ ನೀಡಿ ಅವರಿಂದ ಇಂಥ ಒಂದು ಶಿಸ್ತುಬದ್ಧ, ಅಚ್ಚುಕಟ್ಟಾದ ಕಾರ್ಯಕ್ರಮವನ್ನು ಅರ್ಪಿಸುವುದು ಬಹು ಶ್ರಮದಾಯಕವೇ ಸರಿ. ಇಂಥ ಒಂದು ಯಶಸ್ವೀ ಕಾರ್ಯಕ್ರಮಕ್ಕೆ, ಅನ್ವರ್ಥಕ ‘ಗೆಜ್ಜೆಪೂಜೆ’ಯ ರಂಗಪ್ರವೇಶದ ಸಾರ್ಥಕ ಮುನ್ನಡೆಗೆ ಗುರುಗಳು ಮತ್ತು ಶಿಷ್ಯೆಯರು ಖಂಡಿತಾ ಅಭಿನಂದನೀಯರು.
‘ಕಲಾಂತರಿಕ್ಷಂ ನೃತ್ಯಕ್ಷೇತ್ರ’ದ ಉದಯೋನ್ಮುಖ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ತಮ್ಮ ಕಾಲ್ಗಳಿಗೆ ನೂಪುರ ತೊಟ್ಟು ರಂಗಪ್ರವೇಶಿಸಿದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಹಿರಿಯ ನೃತ್ಯಗುರು ಡಾ. ಚಿತ್ರಾ ಮತ್ತು ಲೇಖಕಿ ವೈ.ಕೆ. ಸಂಧ್ಯಾ ಶರ್ಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೃತ್ಯ ವಿಮರ್ಶಕಿ : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.