ಅಂದು ರವೀಂದ್ರ ಕಲಾಕ್ಷೇತ್ರದ ವಿಶಾಲರಂಗದ ಮೇಲಣ ಕಲಾತ್ಮಕ ರಂಗಸಜ್ಜಿಕೆಯ ದೈವೀಕ ವಾತಾವರಣದಲ್ಲಿ, ಗಂಧರ್ವಲೋಕದ ಕನ್ನಿಕೆಯಂತೆ ಅಪೂರ್ವ ನರ್ತನಗೈಯ್ಯುತ್ತಿದ್ದ ನೃತ್ಯಕಲಾವಿದೆ ವೃದ್ಧಿ ಕಲಾಭಿಮಾನಿಗಳ ಹೃದಯದಲ್ಲಿ ಒಂದು ವಿಶೇಷ ಅನುಭೂತಿಯನ್ನು ಉಂಟುಮಾಡಿದಳು. ನೃತ್ಯ ಕಲಾವಿದೆಯ ಜೀವನದಲ್ಲಿ ‘ರಂಗಪ್ರವೇಶ’ ಎನ್ನುವುದೊಂದು ಚಿರಸ್ಮರಣೀಯವಾದ ಸುವರ್ಣದಿನ. ಭರತನಾಟ್ಯ ಗುರು ಡಾ. ಸತ್ಯವತಿ ರಾಮನ್ ಇವರಿಂದ ಉತ್ತಮ ನಾಟ್ಯಶಿಕ್ಷಣ ಪಡೆದ ಅವರ ನೆಚ್ಚಿನ ಶಿಷ್ಯೆಯಾಗಿ, ಅಂದು ವೃದ್ಧಿ ತುಂಬಿದ ಸಭಾಸದನದ ಕಲಾಭಿಮಾನಿಗಳ ಸಮ್ಮುಖ ವಿದ್ಯುಕ್ತವಾಗಿ ರಂಗಪ್ರವೇಶ ಮಾಡಿದ್ದಳು.
 
  ಆ ಪ್ರಶಸ್ತ ದಿನ- ಪಳಗಿದ ನರ್ತಕಿಯಂತೆ ಲೀಲಾಜಾಲವಾಗಿ ನರ್ತಿಸುತ್ತಿದ್ದ ‘ವೃದ್ಧಿ ಕಾಮತ’ಳ ಮನಮೋಹಕ ಭಾವ-ಭಂಗಿಗಳ ನಾಟ್ಯ, ನೆರೆದ ಕಲಾರಸಿಕರನ್ನು ವಿಸ್ಮಯಗೊಳಿಸಿತ್ತು. ಕಲಾವಿದೆಯ ಆತ್ಮವಿಶ್ವಾಸದ ಅಂಗಶುದ್ಧ ಭಾವಪೂರ್ಣ ನರ್ತನ, ಆದಿಯಿಂದ ಅಂತ್ಯದವರೆಗೂ, ಒಂದೇ ಸಮನೆ ಅವಳು ಕಾಯ್ದುಕೊಂಡ ಚೈತನ್ಯಪೂರ್ಣತೆಯಿಂದ ಮೆರಗು ಪಡೆಯಿತು. ‘ಮಾರ್ಗಂ’ ಸಂಪ್ರದಾಯದಂತೆ ಕಲಾವಿದೆ ಬಹು ಅಚ್ಚುಕಟ್ಟಾಗಿ, ನುರಿತ ಹೆಜ್ಜೆಗಳಲ್ಲಿ ನಿರಾಯಾಸವಾಗಿ, ಸೊಗಸಾದ ಅಭಿನಯ ನೀಡಿ ಮನಕಾನಂದ ನೀಡಿದಳು.
 ಆ ಪ್ರಶಸ್ತ ದಿನ- ಪಳಗಿದ ನರ್ತಕಿಯಂತೆ ಲೀಲಾಜಾಲವಾಗಿ ನರ್ತಿಸುತ್ತಿದ್ದ ‘ವೃದ್ಧಿ ಕಾಮತ’ಳ ಮನಮೋಹಕ ಭಾವ-ಭಂಗಿಗಳ ನಾಟ್ಯ, ನೆರೆದ ಕಲಾರಸಿಕರನ್ನು ವಿಸ್ಮಯಗೊಳಿಸಿತ್ತು. ಕಲಾವಿದೆಯ ಆತ್ಮವಿಶ್ವಾಸದ ಅಂಗಶುದ್ಧ ಭಾವಪೂರ್ಣ ನರ್ತನ, ಆದಿಯಿಂದ ಅಂತ್ಯದವರೆಗೂ, ಒಂದೇ ಸಮನೆ ಅವಳು ಕಾಯ್ದುಕೊಂಡ ಚೈತನ್ಯಪೂರ್ಣತೆಯಿಂದ ಮೆರಗು ಪಡೆಯಿತು. ‘ಮಾರ್ಗಂ’ ಸಂಪ್ರದಾಯದಂತೆ ಕಲಾವಿದೆ ಬಹು ಅಚ್ಚುಕಟ್ಟಾಗಿ, ನುರಿತ ಹೆಜ್ಜೆಗಳಲ್ಲಿ ನಿರಾಯಾಸವಾಗಿ, ಸೊಗಸಾದ ಅಭಿನಯ ನೀಡಿ ಮನಕಾನಂದ ನೀಡಿದಳು.


ಪ್ರಪ್ರಥಮವಾಗಿ ಕಲಾವಿದೆ, ಅಷ್ಟದಿಕ್ಪಾಲಕರುಗಳಿಗೆ, ಗುರು- ಹಿರಿಯರಿಗೆ ಮನಸಾ ವಂದಿಸಿ, ನೃತ್ತ ನಮನಗಳಲ್ಲಿ ‘ಪುಷ್ಪಾಂಜಲಿ’ (ಚಕ್ರವಾಕ ರಾಗ- ಆದಿತಾಳ)ಯನ್ನು ಅರ್ಪಿಸಿದ ನಂತರ ‘ಗಿರಿರಾಜ ಸುತ’ನ ವಿವಿಧ ವಿಶಿಷ್ಟ ಭಂಗಿಗಳನ್ನು ಶಿಲ್ಪಸದೃಶವಾಗಿ ಸಾಕಾರಗೊಳಿಸಿದಳು. ಮುಂದೆ ‘ಅಲರಿಪು’ವಿನಲ್ಲಿ ತನ್ನ ತನುವನ್ನು ಪುಷ್ಪದಂತೆ ಅರಳಿಸಿ, ಬಾಗಿಸಿ, ಅರೆಮಂಡಿ, ಆಕಾಶಚಾರಿ, ಭ್ರಮರಿ, ಖಚಿತ ಅಡವು- ನಡೆಯ, ಸುಸ್ಪಷ್ಟ ಹಸ್ತಮುದ್ರಿಕೆಗಳ ಸೌಂದರ್ಯವನ್ನು ಶ್ರದ್ಧೆಯಿಂದ ಅನಾವರಣಗೊಳಿಸಿದಳು ವೃದ್ಧಿ.


‘ರಾಮಾಯಣ ಶಬ್ದ’- (ರಾಗಮಾಲಿಕೆ- ಮಿಶ್ರಚಾಪು ತಾಳ)ದಲ್ಲಿ ರಾಮಾಯಣದ ಅನೇಕ ಪ್ರಮುಖ ಘಟನೆಗಳಿಗೆ ಜೀವತುಂಬಿ ದೃಶ್ಯವತ್ತಾಗಿ ಕಣ್ಮುಂದೆ ನಡೆದಂತೆ ಅಭಿನಯಿಸಿದ ಕಲಾವಿದೆ, ಸೀತಾ ಸ್ವಯಂವರ, ಮಾಯಾಜಿಂಕೆ, ರಾವಣನಿಂದ ಸೀತಾಪಹರಣ (ಪರಿಸರ ಪ್ರೇಮಿ ಮುಗ್ಧ ಸೀತೆ, ವನದಲ್ಲಿ ಸಂಚರಿಸುತ್ತ ಮುದದಿಂದ ಹೂವು ಕೀಳುತ್ತಿರುವ ನಿಮಗ್ನ ಸಂದರ್ಭದಲ್ಲಿ), ಆಂಜನೇಯನ ಲಂಕಾಗಮನದ ಅನನ್ಯ ಚಿತ್ರಣ ಮತ್ತು ಚೂಡಾಮಣಿ ಪ್ರಸಂಗದ ಕಥಾನಕಗಳನ್ನು ಕಲಾವಿದೆ ತನ್ನ ಪರಿಣಾಮಕಾರಿ ಅಭಿನಯದಿಂದ ಕಟ್ಟಿ ಕೊಟ್ಟಿದ್ದು ತುಂಬಾ ವಿಶೇಷವಾಗಿತ್ತು.

ಯಾವುದೇ ಭರತನಾಟ್ಯ ಕಾರ್ಯಕ್ರಮದ ಹೃದಯಭಾಗ ಅಷ್ಟೇ ಹೃದ್ಯವಾದ ಭಾಗ `ವರ್ಣಂ’. ಅದು ಸಂಕೀರ್ಣ ಜತಿಗಳಿಂದ ಕೂಡಿದ್ದು, ಜೊತೆಗೆ ಅಷ್ಟೇ ಆಕರ್ಷಕವಾಗಿಯೂ ಇರುತ್ತದೆ. ನೃತ್ಯ ಕಲಾವಿದೆಯರ ಸ್ಮರಣಶಕ್ತಿಗೆ ಸವಾಲೆಸೆವ, ನೃತ್ತ ಮತ್ತು ಅಭಿನಯಗಳೆರಡರಲ್ಲೂ ಪರಿಣತಿ ಬೇಡುವ ಕ್ಲಿಷ್ಟ ನೃತ್ಯಬಂಧ. ವೃದ್ಧಿ ಪ್ರಸ್ತುತಿಪಡಿಸಿದ ರಸಾಭಿಜ್ಞತೆಯನ್ನು ಕೇಂದ್ರೀಕರಿಸಿಕೊಂಡ ’ವರ್ಣ’ದ ಸುದೀರ್ಘ ಬಂಧ, ಮನೋಹರ ಬಂಧುರತೆಯಲ್ಲಿ ಮಿನುಗಿತು. ರೀತಿಗೌಳ- ಆದಿತಾಳದಲ್ಲಿದ್ದ ಈ ಕೃತಿಗೆ ತಿರುಮಲೆ ಶ್ರೀನಿವಾಸ್ ಸಂಗೀತ ಸಂಯೋಜನೆ ಮಾಡಿದ್ದರು. ಭಕ್ತಿಪ್ರಧಾನವಾದ ‘ಶ್ರೀ ಕೃಷ್ಣ ಕಮಲಾನಾಥೋ ವಾಸುದೇವಃ ಸನಾತನಃ’ – ದೈವೀಕ ವರ್ಣದಲ್ಲಿ ಇಡೀ ಭಾಗವತದ ಸುಂದರ ದರ್ಶನ, ಶ್ರೀಕೃಷ್ಣನ ಲೀಲಾವಿನೋದ- ಪವಾಡಗಳು ಕಲಾವಿದೆಯ ಭಕ್ತಿ ತಾದಾತ್ಮ್ಯವಾದ ನೃತ್ಯಾಭಿನಯದಿಂದ ಶೋಭಾಯಮಾನವಾಗಿ ಸಾಕ್ಷಾತ್ಕಾರವಾಯಿತು.

ಸಂಚಾರಿಭಾಗದಲ್ಲಿ ವೃದ್ಧಿ, ಅನೇಕ ಸೂಕ್ಷ್ಮ ಅಭಿವ್ಯಕ್ತಿಗಳೊಂದಿಗೆ ಕಥಾನಡೆಗೆ ಜೀವ ತುಂಬಿದಳು. ಸೆರೆಮನೆಯಲ್ಲಿ ಪ್ರಸೂತಿಯ ಬೇನೆಯನ್ನು ಅನುಭವಿಸುವ ದೇವಕಿಯ ಸೂಕ್ಷ್ಮಾಭಿನಯದಿಂದ ಪ್ರಾರಂಭವಾದ ಕಥಾನಕ, ಶ್ರೀಕೃಷ್ಣನ ಜನನ, ವಸುದೇವ ಆದಿಶೇಷನ ರಕ್ಷಣೆಯಲ್ಲಿ, ಸುರಿವ ಮಳೆಯಲ್ಲಿ ಮಗುವನ್ನು ಗೋಕುಲಕ್ಕೆ ಸಾಗಿಸುವ ಸಹಾಜಾಭಿನಯ, ಗೋಕುಲದಲ್ಲಿ ಮಗುವನ್ನು ಬದಲಿಸಿ ಬರುವ ಸನ್ನಿವೇಶದಲ್ಲಿ ತಂದೆ ಹೃದಯದ ತಪ್ತತೆ, ಮಗುವನ್ನು ಕೊಲ್ಲಲು ಬರುವ ಪೂತನಿಯ ಮಾತೃತ್ವ ಜಾಗೃತಿ, ವಿಷದ ಮೊಲೆಯೂಡಿಸಿ ಅವಳು ಸಾಯುವ ದೃಶ್ಯದಲ್ಲಿ ಕಟ್ಟಿಕೊಟ್ಟ ಗಾಢತೆ, ಮುಂದೆ ಕಾಳಿಂಗಮರ್ಧನ, ಗೋಪಿಕೆಯರೊಡನೆ ಜಲಕ್ರೀಡೆಯ ಸಂಚಾರಿ, ಯುದ್ಧರಂಗದಲ್ಲಿ ಅರ್ಜುನ ಹಿಂಜರಿದಾಗ, ಕೃಷ್ಣ, ಅರ್ಜುನನ ಸಾರಥಿಯಾಗಿ ಉಪದೇಶಿಸುವ ಭಗವದ್ಗೀತೆಯ ಅಭಿನಯ ಮತ್ತು ವಿಶ್ವರೂಪ ದರ್ಶನದ ಪರಾಕಾಷ್ಠೆಯ ಹಂತದವರೆಗೂ ರಸಾನುಭವ ನೀಡಿತು. ಕೊನೆಯಲ್ಲಿ ಇಡೀ ಭಾಗವತ ಸಾರದ ಘಟನೆಗಳ ಗುಟುಕುಗಳನ್ನು ವೃದ್ಧಿ, ಸಮಗ್ರವಾಗಿ- ಸಾಂದ್ರವಾಗಿ ಒಟ್ಟಂದವನ್ನು ಪ್ರದರ್ಶಿಸಿದ್ದು ಅನನ್ಯವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.


ಕೃತಿಯ ನಡುನಡುವೆ ಸಾವಯವವಾಗಿ ಮೂಡಿಬಂದ ಯಾಂತ್ರಿಕತೆ ಇಲ್ಲದ, ವಿವಿಧ ವಿನ್ಯಾಸದ ನೂತನ ನೃತ್ತಾವಳಿಗಳು ಉಲ್ಲಾಸವನ್ನು ನೀಡಿ ಗುರುಗಳ ಸೃಜನಾತ್ಮಕ ಸಂಯೋಜನೆಗೆ ಕನ್ನಡಿ ಹಿಡಿದವು. ಗುರು ಸತ್ಯವತಿಯವರ ನಿಖರ- ಸುಸ್ಪಷ್ಟ ಲಯಾತ್ಮಕ ನಟುವಾಂಗದ ಬನಿ ಕೇಳಲು ಇಂಪಷ್ಟೇ ಅಲ್ಲದೆ, ಕಲಾವಿದೆಗೆ ಉತ್ತಮ ಪ್ರೇರಣೆ, ಹೆಜ್ಜೆಗಳಿಗೆ ಕಸುವು ನೀಡಿತ್ತು. ಕೃಷ್ಣನ ಅತಿಮಾನುಷ ವ್ಯಕ್ತಿತ್ವಕ್ಕೆ ಉತ್ತಮ ಪ್ರಭಾವಳಿ ನೀಡಿದ, ಭಾವಪೂರ್ಣ ಗಾಯನದ ಓಂಕಾರ್ ಅಮರನಾಥರ ಕಂಚಿನ ಕಂಠ, ಸನತ್ ಕುಮಾರರ ವಯೊಲಿನ್ ನಾದ, ಶ್ರೀಕೃಷ್ಣ ಭಟ್ಟರ ಮನಸೆಳೆದ ಮುರಳೀವಾದನ, ಲಕ್ಷ್ಮೀನಾರಾಯಣರ ಮೃದಂಗದ ಝೇಂಕಾರ ಮತ್ತು ಭಾರ್ಗವ ಹಾಲಂಬಿ ಅವರ ಮನಮುಟ್ಟಿದ ಪರಿಣಾಮದ ತರಂಗಗಳು ಕಲಾವಿದೆಯ ಮನನೀಯ ಅಭಿನಯ- ನೃತ್ತ ವೈಭವಕ್ಕೆ ಜೀವ ತುಂಬಿದವು.

ಪ್ರಸ್ತುತಿಯ ಎರಡನೆಯ ಭಾಗದಲ್ಲಿ ಶ್ರೀ ದಯಾನಂದ ಸರಸ್ವತಿ ರಚಿತ ರೇವತಿ ರಾಗ- ಆದಿತಾಳದ ‘ಭೋ ಶಂಭೋ ಶಿವ ಶಂಭೋ ಸ್ವಯಂಭೋ’ – ಶಿವಸ್ತುತಿ ವೃದ್ಧಿಯ ನವನವೀನ ಸುಂದರ ಭಂಗಿಗಳು, ಶಕ್ತಿಕರ ಹೆಜ್ಜೆ- ಆಂಗಿಕಗಳು ಮತ್ತು ಮೆರುಗಿನ ನೃತ್ಯ ಸಂಯೋಜನೆಗಳಿಂದ ಮನಮುಟ್ಟಿತು. ಅನಂತರ- ಶ್ರೀಪುರಂದರದಾಸರ (ಯಮನ್ ಕಲ್ಯಾಣಿ ರಾಗ ಆದಿತಾಳ) ‘ಹರಿಸ್ಮರಣೆ ಮಾಡೋ ನಿರಂತರ’ – ಉತ್ಕಟ ದೈವಭಕ್ತಿಯಿಂದ, ನಾಟಕೀಯ ಆಯಾಮದ ವಿವಿಧ ಸಂಚಾರಿ ಕಥಾನಕಗಳ (ದ್ರೌಪದಿಯ ಅಕ್ಷಯವಸ್ತ್ರ ಪ್ರಸಂಗ- ದ್ಯೂತ ಸನ್ನಿವೇಶಗಳು) ಸಾಕ್ಷಾತ್ಕಾರದಿಂದ ಅತ್ಯಂತ ರೋಚಕವಾಗಿ ಮೂಡಿಬಂತು. ಅಂತ್ಯದಲ್ಲಿ ಬಾಲಮುರಳೀಕೃಷ್ಣ ಬೃಂದಾವನಿ ರಾಗದ ‘ತಿಲ್ಲಾನ ಮತ್ತು ಮಂಗಳ’ದೊಂದಿಗೆ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದ ವೃದ್ಧಿ ತನ್ನ ಉತ್ತಮಾಭಿನಯದ ನೃತ್ತ ಪರಿವೇಷಗಳಿಂದ, ರಂಗಾಕ್ರಮಣದ ಸೊಗಸಿನಿಂದ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು.

ನೃತ್ಯ ವಿಮರ್ಶಕರು | ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
 
									 
					