ಉಡುಪಿ ಕುಕ್ಕಿಕಟ್ಟೆಯ ಉಪಾಧ್ಯಾಯ ಕುಟುಂಬದ ನೃತ್ಯಾಂಗನೆ ‘ಭಾವ-ಯೋಗ-ನೃತ್ಯ’ ತಂಡದ ಅನಲಾ ಉಪಾಧ್ಯಾಯ ಎಂಬ ಕಲಾವಿದೆ, ವಿವಾಹದ ಬಳಿಕ, ಚೆನ್ನೈಯಲ್ಲಿ ನೆಲೆಸಿದ್ದು, ನೃತ್ಯಕಲಿಕೆಯನ್ನು ಮುಂದುವರಿಸುತ್ತಾ, ಚೆನ್ನೈಯ ನೃತ್ಯ ಪ್ರದರ್ಶನಗಳನ್ನು ಕಂಡು ಪ್ರಭಾವಿತಳಾಗಿ, ತಾನು ಕುಣಿದು ನಲಿದ ತನ್ನ ತವರಿನಲ್ಲಿ, ಚೆನ್ನೈ ಮಾದರಿಯಲ್ಲಿ ಒಂದು ಚಿಕ್ಕದಾದ, ಪರಂಪರೆಯ ನೃತ್ಯ ಉತ್ಸವ ತಾನು ನಡೆಸಬೇಕೆಂಬ ಆಶಯದಿಂದ, ಊರಪರವೂರಿನ ಹಿರಿಕಿರಿಯ ಕಲಾವಿದರನ್ನು ಒಟ್ಟುಗೂಡಿಸಿ, ಅವಕಾಶ ನೀಡಿ ‘ನೃತ್ಯಮಾರ್ಗಂ’ ಮೂಲಕ ಮೋಕ್ಷವನ್ನು ಸಂಪಾದಿಸೋಣ ಎಂಬ ಪರಿಕಲ್ಪನೆಯಿಂದ, ಇತ್ತೀಚೆಗೆ ಉಡುಪಿಯ ಐವೈಸಿ ಕಲಾರಂಗದ ಸಭಾಂಗಣದಲ್ಲಿ ಕೆಲವು ಹಿರಿಯ ಕಲಾವಿದರೊಂದಿಗೆ ತಾನೂ ನರ್ತಿಸಿ ಈ ಉತ್ಸವಕ್ಕೆ ನಾಂದಿ ಹಾಡಿ, ರಸಿಕರ ಅಪಾರ ಮೆಚ್ಚುಗೆ ಗಳಿಸುವಲ್ಲಿ ಸಫಲರಾದರು.
ಸರಳವಾಗಿ ತನ್ನ ತಂದೆಯವರಿಂದಲೇ ದೀಪ ಬೆಳಗಿಸಿ ಉದ್ಘಾಟಿಸಲ್ಪಟ್ಟ ಈ ಉತ್ಸವವು, ಸುಮಾರು 2 ಗಂಟೆಗಳ ಕಾಲ ಸೊಗಸಾಗಿ ಪ್ರದರ್ಶಿಸಲ್ಪಟ್ಟಿತು. ಮೊದಲ ಭಾಗದಲ್ಲಿ ಹಿರಿಯ ನೃತ್ಯಗುರುಗಳಾದ ಮಂಗಳೂರಿನ ವಿದುಷಿ ರಾಧಿಕಾ ಶೆಟ್ಟಿಯವರ ಅಷ್ಟಪದಿ, ಪುತ್ತೂರಿನ ನೃತ್ಯ ದಂಪತಿಗಳಾದ ವಿದ್ವಾನ್ ದೀಪಕ್ ಹಾಗೂ ವಿದುಷಿ ಪ್ರೀತಿಕಲಾರವರ ಹಿಂದಿ ಭಜನ್, ಕಿನ್ನಿಗೋಳಿಯ ವಿದುಷಿ ಅನ್ನಪೂರ್ಣ ರಿತೇಶ್ ರವರ ಕೃಷ್ಣಲೀಲಾ ತರಂಗಿಣಿಯ ಆಯ್ದ ಭಾಗಗಳನ್ನು ಆರಿಸಿದ ಕೃತಿ ಹಾಗೂ ಉಡುಪಿಯ ವಿ. ಮಂಜರಿಚಂದ್ರ ಪುಷ್ಪರಾಜ್‌ರವರ ಕಾಳಿಂಗ ನರ್ತನದ ತಿಲ್ಲಾನಗಳು, ‘ಕೃಷ್ಣಾನಂದ ಲಹರಿ’ ಎಂಬ ಪರಿಕಲ್ಪನೆಯೊಂದಿಗೆ, ಧ್ವನಿಮುದ್ರಣದ ಸಂಗೀತಕ್ಕೆ ಪ್ರದರ್ಶನ ನೀಡಿ ಎಲ್ಲರನ್ನೂ ಸಂತಸಗೊಳಿಸಿದರು.
ಎರಡನೇ ಪ್ರಧಾನ ಭಾಗವು ಚೆನ್ನೈನ ಪ್ರಸಿದ್ಧ ಅಂತಾರಾಷ್ಟ್ರೀಯ ಖ್ಯಾತಿವೆತ್ತ ನೃತ್ಯಗುರು ಡಾ. ಜಾನಕಿ ರಂಗರಾಜನ್‌ರವರ ಪ್ರಾಥಮಿಕ (ಜೂನಿಯರ್) ಶಿಷ್ಠೆಯಂದಿರಾದ ಡಾ. ರಶ್ಮಿ ಫಾಪರ್ ನ್ಯೂಜಿಲೆಂಡ್ ಹಾಗೂ ಚೆನ್ನೈನ ಅನಲಾ ಉಪಾಧ್ಯಾಯ ಇವರಿಂದ ಪ್ರೌಢಮಟ್ಟದ ಪರಂಪರೆಯ ಯುಗಳ ನೃತ್ಯ ಡಾ. ಜಾನಕಿಯವರ ಶೈಲಿಯನ್ನು ನೆನಪಿಸುವ ಉತ್ಕೃಷ್ಟಶೈಲಿಯ ಅಡವುಗಳು ಹಾಗೂ ಅಭಿನಯಗಳ ಸಮತೋಲನದಿಂದ ಪ್ರಸ್ತುತಿಗೊಂಡವು.
ಹಂಸಧ್ವನಿ ರಾಗದ ‘ಭಜೇ ವಿಘ್ನರಾಜಂ’ ಕೃತಿಯು, ಗಣಪತಿಯ ಪ್ರತಿಷ್ಠಾಪನೆಯ ಮೊದಲಿನ ವಾದ್ಯಮೇಳಗಳ ಮೆರವಣಿಗೆ, ಪ್ರತಿಷ್ಠಾಪನೆ, ಪೂಜೆ, ಅಲಂಕಾರ, ಗಣಪತಿಯ ಹಿಂತಿರುಗುವಿಕೆ-ಇವೆಲ್ಲವೂ ಪಾರಂಪರಿಕ ‘ಮಲ್ಹಾರಿ’ ನೃತ್ಯಬಂಧದ ರೀತಿ ಸಂಯೋಜಿಸಲ್ಪಟ್ಟಿದ್ದು ಖುಷಿಕೊಟ್ಟಿತು. ಖಂಡಛಾಪು ತಾಳದ ಅಲರಿಪು, ಇದರ ಚೌಕಟ್ಟನ್ನು ಮೀರದೆ ‘ನವಿಲಿನ’ ಸಂಚಲನಗಳು, ನಡೆಗಳಿಂದ ಆಕರ್ಷಕವಾಗಿತ್ತು. ಮುಂದಿನದ್ದು ಪದವರ್ಣಂಸ ರೀತಿಯಲ್ಲಿ ಸಂಯೋಜಿಸಲ್ಪಟ್ಟ ‘ಸೀತಾಯಣ’ ಎಂಬ ಕನ್ನಡ ಸಾಹಿತ್ಯದ, ರಾಗಮಾಲಿಕೆಯ ನೃತ್ಯಬಂಧವು ಚುಟುಕಾದ, ಚೊಕ್ಕದಾದ ಕಥಾಹಂದರಗಳನ್ನು ಜತಿ, ಸ್ವರಗಳು, ಅರುಧಿಗಳ ಸಮರ್ಪಕ ಜೋಡಣೆಯಿಂದ ಇಬ್ಬರ ಪ್ರೌಢಿಮೆಯನ್ನೂ ಪ್ರತಿಫಲಿಸುವ, ಭಂಗಿಗಳು, ಅಭಿನಯಗಳೊಂದಿಗೆ ನಿರ್ವಹಿಸಲ್ಪಟ್ಟವು. ಕಾಫಿರಾಗದ ಪ್ರಸಿದ್ಧ ತಮಿಳು ಪದಂ ‘ಎನ್ನತವಂ’ ಬಂಧವು ನೃತ್ಯಾಂಗನೆಯರು ಗೋಪಿಕೆ ಹಾಗೂ ಯಶೋದೆಯಾಗಿ ಪ್ರತ್ಯೇಕವಾಗಿ ಅಭಿನಯಿಸಿದ್ದು, ಕೊನೆಯಲ್ಲಿ ಯಶೋದೆ ಆನಲಾ ತನ್ನ ಆರು ತಿಂಗಳ ಮಗ ಸಿದ್ಧಾನ್‌ನನ್ನೂ ವೇದಿಕೆಯಲ್ಲಿ ಬಳಸಿಕೊಂಡ ನವ್ಯರೀತಿಯ ಕೋರಿಯೋಗ್ರಫಿ, ಎಲ್ಲರ ಮನ ಒಲಿಸಿತು. ‘ಮಾರ್ಗಂ’ ಉತ್ಸವದ ಕೊನೆಯು ಲಾಲ್‌ಗುಡಿಯವರ ಪ್ರಸಿದ್ಧ, ಮಧುರ, ಕ್ಲಿಷ್ಟಕರ ಸಿಂಧು ಭೈರವಿ ತಿಲ್ಹಾನವು ಅನಲಳ ನೃತ್ತಭಾಗಗಳ ವಿನ್ಯಾಸ, ರಶ್ಮಿಯವರ ಸಂವಾದಿಯಾದ ಕರಣಗಳ ಜೋಡಣೆಗಳ ಪ್ರಸ್ತುತಿ, ಸೊಲ್ಲುಕಟ್ಟುಗಳು, ಅರುಧಿಗಳು, ಭ್ರಮರಿಗಳು, ಭಂಗಿಗಳಿಂದ ರಂಗಾಕ್ರಮಣದೊಂದಿಗೆ ಅಭಿನಯವನ್ನು ಪ್ರಸ್ತುತಪಡಿಸಿದ ವೈಖರಿ, ತಿಲ್ಲಾನ ಪ್ರಾರಂಭಿಸಿದ ಹೊಸತನ ಸ್ತುತ್ಯರ್ಹ. ಮಂಗಳಶ್ಲೋಕದೊಂದಿಗೆ ಈ ಬಾರಿಯ ಪ್ರಥಮ ‘ಮೋಕ್ಷ’ ನೃತ್ಯಮಾರ್ಗಂ ಸಂಪನ್ನಗೊಂಡಿತು.

ಈ ಯುಗಳ ನೃತ್ಯವು ಬಲಿಷ್ಠವಾಗಿ ಪೋಷಿಸಲ್ಪಟ್ಟು ನೃತ್ಯಾಂಗನೆಯವರಿಗೆ ಸಂಪೂರ್ಣ ಸಹಕಾರ ನೀಡಿದ್ದು, ಅತ್ಯುತ್ತಮ ಭರ್ಜರಿ ಹಿಮ್ಮೇಳದವರಿಂದ ಕೆಲವು ನೃತ್ಯಬಂಧಗಳನ್ನು ಸಂಯೋಜಿಸಿ, ಪಕ್ವತೆಯ ನಟ್ಟುವಾಂಗಗೈದ ಶ್ರೀ ಮಿಥುನ್ ಶಕ್ತಿಯವರ ತಾಕತ್ತು ಸ್ಪಷ್ಟವಾಗಿ ಅರಿವಿಗೆ ಬಂತು. ನೃತ್ಯಾಂಗನೆಯ ಭಾವಸ್ಫುರಣಕ್ಕೆ, ಪಾದಗಳ ಸಂಚಲನೆಗಳಿಗೂ ಭರಪೂರ ಅನುವು ಮಾಡಿ, ರಾಗ ಸಂಯೋಜನೆಗಳಲ್ಲೂ ಕೈಜೋಡಿಸಿದ. ಉಪ್ಪೂರಿನ ಶ್ರೀ ರೋಹಿತ್ ಭಟ್ ರವರ ಮಧುರ ಗಾನ ಅಭಿನಂದನೀಯ, ನೃತ್ತ, ನೃತ್ಯ, ಅಭಿನಯಗಳಿಗೆ ತಕ್ಕುದಾದ ಮನೋಧರ್ಮವನ್ನು ಅನುಸರಿಸಿ, ಖಚಿತವಾದ, ಸ್ಪಷ್ಟವಾದ, ಮೃದಂಗ ನುಡಿತಗಳ ಕಾರ್ತಿಕ್ ವೈದಾತ್ರಿಯವರ ಕೈಚಳಕ ಅನನ್ಯ, ನೃತ್ಯಾಂಗನೆಯವರ ಮನೋಧರ್ಮವನ್ನು ಸಮಯಪ್ರಜ್ಞೆಯಿಂದ ತಮ್ಮ ವಾದನಗಳಿಂದ ಆಕರ್ಷಕಗೊಳಿಸಿದ ಕೊಳಲಿನ ಶ್ರೀ ವಿವೇಕ್ ಕೃಷ್ಣ, ವಯೊಲಿನ್ ವಿಭುದೇಂದ್ರ ಸಿಂಹಾ, ರಿದಂ ಪ್ಯಾಡಿನ ಧನುಷ್ ಇವರೆಲ್ಲರೂ ಈ ನೃತ್ಯ ಪ್ರದರ್ಶನ ಎತ್ತರಕ್ಕೇರಲು ಸಿಂಹಪಾಲು ಪಡೆದರು.
ಡಾ. ಜಾನಕಿಯವರ ಕಿರಿಮಟ್ಟ (ಜ್ಯೂನಿಯರ್)ವ ಶಿಷ್ಠೆಯರಾಗಿದ್ದು, ಅವರ ಅನುಪಸ್ಥಿತಿಯಲ್ಲಿ, ತಾವು ಕಲಿತ ನೃತ್ಯಶಿಕ್ಷಣದ ಮೂಲ ಚೌಕಟ್ಟನ್ನು ಬಿಡದೆ, ತಾವೇ ಕೆಲವನ್ನು ಸಂಯೋಜಿಸಿ, ದೂರದ ಊರುಗಳಲ್ಲಿ ನೆಲೆಸಿದರೂ ಈ ಉತ್ಸವಕ್ಕಾಗಿ ತೀವ್ರ ಒಲವು, ಆಸಕ್ತಿ, ಪರಿಶ್ರಮ, ಬದ್ಧತೆಗಳಿಂದ ತೊಡಗಿಸಿಕೊಂಡದ್ದು ಸತ್ಯ, ಇನ್ನಷ್ಟು ಅಭಿನಯ, ನೃತ್ತದ ಅಡವುಗಳ ಪ್ರಸ್ತುತಿ, ಅಂಗಶುದ್ದಿ. ಮನೋಧರ್ಮಗಳ ಬಗ್ಗೆ ಇವರು ಸಾಧನೆ ಮಾಡುವುದು ಅಪೇಕ್ಷಣೀಯ. ಈ ಸಾಹನ ಮಾಡಿ ತನ್ನ ತವರಿನ ಹಾಗೂ ನೃತ್ಯದ ಮೇಲಿನ ಒಲವನ್ನು ಈ ಮೂಲಕ ತೋರ್ಪಡಿಸಿದ ಅನಲಾ ಅಭಿನಂದನಾರ್ಹಳು.

ಈ ದಾರಿಯಲ್ಲಿ ಇದರಲ್ಲಿ ಇನ್ನು ಮುಂದೆ ಪಾಲ್ಗೊಳ್ಳುವ ಕಲಾವಿದರ ಪ್ರದರ್ಶನದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಭರತನಾಟ್ಯದ ಸಂಸ್ಕಾರ, ಪರಂಪರೆ ಇನ್ನಷ್ಟು ಬೆಳಗಿ, ಉಳಿಯಲು ಈ ಉತ್ಸವದಲ್ಲಿ ನೃತ್ಯಾಂಗನೆಯರು (ಕಲಾವಿದರು) ಕಡ್ಡಾಯವಾಗಿ ಧ್ವನಿಮುದ್ರಿತವಲ್ಲದ, ನೈಜ ಹಿಮ್ಮೇಳವನ್ನೇ ವ್ಯವಸ್ಥೆಗೊಳಿಸುವಂತೆ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡುವುದು ಅತ್ಯಂತ ಸೂಕ್ತ.

ವಿಮರ್ಶಕರು | ವಿದುಷಿ ಪ್ರತಿಭಾ ಎಂ.ಎಲ್. ಸಾಮಗ
