ನಾಟ್ಯ ಎಂದೊಡನೆ ಮೊದಲು ಕಣ್ಣೆದುರಿಗೆ ಬಂದು ನಿಲ್ಲುವುದು ನಾಟ್ಯಾಧಿಪತಿ ಶಂಕರನ ಅಪೂರ್ವ ಮೆರುಗಿನ ನಾಟ್ಯ ವೈವಿಧ್ಯ ತಾಂಡವಗಳು. ನೋಡಿದಷ್ಟೂ ಪುಳಕಿಸುವ ಹೊಸಬಗೆ, ಕಂಡಷ್ಟೂ ಸಾಕ್ಷಾತ್ಕರಿಸುವ ವಿನೂತನ ಪರಿಕಲ್ಪನೆ ಅದು. ಶಿವನ ಕಥೆ ಅನಂತ ನೆಲೆಗಳಲ್ಲಿ ಅನಾವರಣಗೊಳ್ಳುವ ಕುತೂಹಲ ಜನ್ಯ ಕಥಾ ಸರಿತ್ಸಾಗರ. ಇಂಥದೊಂದು ಸ್ವಾರಸ್ಯಕರ ಕಥಾನಕದ ನೃತ್ಯರೂಪಕ ‘ನಾಟ್ಯ ಶಂಕರ’ ಇತ್ತೀಚೆಗೆ ಶಿವರಾತ್ರಿಯ ದಿನಗಳಲ್ಲಿ ‘ನಯನ’ ರಂಗಮಂದಿರದಲ್ಲಿ ಕಲಾರಸಿಕರಿಗೆ ನೀಡಿದ ರಸಾನುಭವ ನೆನಪಿನಲ್ಲಿ ಉಳಿಯುವಂಥದ್ದು.
ಖ್ಯಾತ ಹಿರಿಯ ನೃತ್ಯಾಚಾರ್ಯ ಕೇಶವಮೂರ್ತಿ ನೇತೃತ್ವದ ‘ಕೇಶವ ನೃತ್ಯಶಾಲೆ’- ಕನ್ನಡ ನೃತ್ಯರೂಪಕಗಳ ಅಸ್ಮಿತೆಯಿಂದ ನೃತ್ಯಕ್ಷೇತ್ರದಲ್ಲಿ ವಿಶಿಷ್ಟತೆ ಪಡೆದಿರುವುದು ಸರ್ವವಿದಿತ. ಆದಿ ಪಂಪನಿಂದ ಪ್ರಾರಂಭವಾಗಿ ಹಲವಾರು ಕನ್ನಡ ನೃತ್ಯರೂಪಕಗಳ ನಿರ್ಮಾಣ-ಪ್ರದರ್ಶನ-ಪ್ರಯೋಗಗಳು ಅವರ ಕನ್ನಡ ಪ್ರೀತಿಯ ದ್ಯೋತಕ. ಅನಂತರ ಅವರ ಪುತ್ರ ನೃತ್ಯಾಚಾರ್ಯ ಡಾ. ಬಿ.ಕೆ. ಶ್ಯಾಂ ಪ್ರಕಾಶ್ ತಂದೆಯ ಪರಂಪರೆಯನ್ನು ಮುಂದುವರೆಸುತ್ತ ಮೂರು ದಶಕಗಳ ಹಿಂದೆಯೇ ‘ಶಿವಶಕ್ತಿ’ ಎಂಬ ನೃತ್ಯರೂಪಕವನ್ನು ಸಾಹಿತ್ಯ ರಚನೆಯೊಂದಿಗೆ ಮುಖ್ಯ ಪಾತ್ರವಹಿಸಿ ಪ್ರದರ್ಶಿಸಿದ್ದರು. ಅವರ ಮೂರನೆಯ ತಲೆಮಾರಿನವರಾದ ನೃತ್ಯಕಲಾವಿದ-ಗುರು ಕಲಾಯೋಗಿ ಎಸ್. ರಘುನಂದನ್ ಎರಡು ದಶಕಗಳ ಹಿಂದೆ ಪ್ರಧಾನ ಭೂಮಿಕೆಯಲ್ಲಿ ಶಂಕರನಾಗಿ ಅಭಿನಯಿಸಿ ಪ್ರಯೋಗಗೊಳಿಸಿದ್ದರು. ಇದೀಗ ಮತ್ತೆ ಅವರು ಹೊಸ ಧ್ವನಿಮುದ್ರಣ, ನೃತ್ಯ ಸಂಯೋಜನೆ, ನಿರ್ದೇಶನ – ಪರಿಕಲ್ಪನೆಯೊಂದಿಗೆ ನೃತ್ಯರೂಪಕವನ್ನು ಅಣಿಗೊಳಿಸಿ ವೀಕ್ಷಣೆಗೆ ಅವಕಾಶಗೊಳಿಸಿದ್ದು ‘ಕೇಶವ ನೃತ್ಯಶಾಲೆ’ ಮತ್ತು ‘ಅಭಿವ್ಯಕ್ತಿ ಸೆಂಟರ್’ನ ಒಂದು ಹೊಸ ಕೊಡುಗೆ ಎನ್ನಬಹುದು.
ಪ್ರಮುಖವಾಗಿ ಶಿವಪುರಾಣವನ್ನು ಆಧರಿಸಿ ಹೆಣೆಯಲಾದ ‘ನಾಟ್ಯ ಶಂಕರ’ -ಭರತನಾಟ್ಯದ ಚೌಕಟ್ಟಿನಲ್ಲಿಯೇ ಒಡಮೂಡಿತ್ತು. ‘ಮಾರ್ಗಂ’ ಸಂಪ್ರದಾಯದ ಕೆಲವು ಕೃತಿಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ –ಸಂಯೋಜನೆ (ವಿ. ವಿನಯ್ ಮಾನ್ಯ)ಯ ನೆಲೆಯಲ್ಲಿ ಆಕರ್ಷಕ ವೇಷಭೂಷಣ, ಜಾನಪದ ಮೆರುಗು- ಭರತನಾಟ್ಯದ ಸಾಂಪ್ರದಾಯಕ ಉಡುಗೆ-ತೊಡುಗೆಗಳೊಂದಿಗೆ ಹಿನ್ನಲೆಯ ಪರದೆಯ ಮೇಲೆ ಹೆಚ್ಚಿನ ಪರಿಣಾಮಕ್ಕಾಗಿ ಬಳಸಲಾದ ಪ್ರೊಜೆಕ್ಷನ್ ಪೂರಕ ಚಿತ್ರಗಳ ಮೂಲಕ ಸುಂದರವಾಗಿ ಮೂಡಿಬಂತು. ಎಂಟು ಅಂಕಗಳಲ್ಲಿ, ಸುಮಾರು ಎರಡು ಗಂಟೆಗಳ ಕಾಲ ದೃಶ್ಯವತ್ತಾಗಿ ಸಾಗಿದ ‘ನೃತ್ಯ ನಾಟಕ’ – ಶಿವ-ಪಾರ್ವತಿಯಾಗಿ ರಘುನಂದನ್ ಮತ್ತು ಮಾನಸಿ ದಂಪತಿಗಳೊಡನೆ ಸುಮಾರು ಐವತ್ತು ಮಂದಿ ನೃತ್ಯ ಕಲಾವಿದೆಯರ ಸುಮನೋಹರ ನಾಟ್ಯವಲ್ಲರಿಯಿಂದ ಚೆಂದಗೊಂಡಿತು.
ಮೊದಲ ಶಿವ ಗಣಾರಾಧನೆಯ ದೃಶ್ಯದಲ್ಲಿ ಶಿವನ ಪಂಚಕ್ರಿಯೆ ಮತ್ತು ಸಪ್ತ ತಾಂಡವಗಳಾದ ಆನಂದ ತಾಂಡವ, ಸಂಧ್ಯಾ ತಾಂಡವ, ಉಮಾ ತಾಂಡವ, ಗೌರಿ ತಾಂಡವ, ಕಾಳಿಕ ತಾಂಡವ, ತ್ರಿಪುರ ತಾಂಡವ, ಸಂಹಾರ ತಾಂಡವಗಳ ಸಂಕ್ಷಿಪ್ತ ನೋಟವನ್ನು ಓಂ ಶಿವಶಕ್ತಿಯ ಶಿವಗಣದ ಪ್ರಾರ್ಥನೆಯ ಸುಂದರ ಆಂಗಿಕಾಭಿನಯದ ಶಕ್ತಿಶಾಲಿಯಾದ ನರ್ತನ ಸಾಕ್ಷಾತ್ಕರಿಸಿತು. ಢಮರುಗ ಝೇಂಕರಿಸುತ್ತ ಸಶಕ್ತ ಹೆಜ್ಜೆಗಳನ್ನಿಡುತ್ತ ಲಯಾತ್ಮಕವಾಗಿ ರಂಗದ ತುಂಬಾ ಸಪ್ತ ತಾಂಡವದ ವೈವಿಧ್ಯ ಛಾಪು ಒತ್ತಿದ ರೌದ್ರರೂಪಿ ಶಿವನ ಬಿರುಸಾದ ನರ್ತನ ಪರಿಣಾಮಕಾರಿಯಾಗಿತ್ತು. ತ್ರಿಪುರಾಸುರ ಸಂಹಾರದ ದೃಶ್ಯದ ತಾಂಡವ ನೃತ್ಯವು ಉಗ್ರರೂಪಿ ನಟರಾಜನ ದರ್ಶನ ನೀಡಿತು. ಢಮರುಗವನ್ನು 14 ಬಾರಿ ನಿನದಿಸಿದ ಶಂಕರನು ಸೃಷ್ಟಿಸಿದ ಲೋಕದ ಸಸ್ಯ ಸಂಕುಲ, ಪಕ್ಷಿ-ಪ್ರಾಣಿಗಳನ್ನು ಜೀವಂತಗೊಳಿಸಿದ ಚರಾಚರದ ಅವತರಣಿಕೆ, ಹಿನ್ನಲೆಯ ಪರದೆಯ ಮೇಲೆ ಅಗ್ನಿ ಧಗಧಗಿಸುವ ಪರಿಣಾಮದೊಂದಿಗೆ ದೃಶ್ಯವತ್ತಾಗಿ ಅರಳಿತು. ಜತಿಗಳಿಗೆ ಅನುಗುಣವಾಗಿ ರೋಮಾಂಚಕ ಹೆಜ್ಜೆಯಲ್ಲಿ ರಂಗಾಕ್ರಮಿಸಿ ನರ್ತಿಸಿದ ಸೃಷ್ಟಿ ಚೇತನ ಶಿವನ ಒಂದೊಂದು ಭಂಗಿಯೂ ಅನನ್ಯವಾಗಿತ್ತು.
ಮೂರನೆಯ ದೃಶ್ಯ ಪರಬ್ರಹ್ಮ ಶಂಕರನ ಲೀಲೆ-ಅತ್ಯಂತ ಆಸಕ್ತಿಕರವಾಗಿ ಕಣ್ಮಿಟುಕಿಸದೆ ನೋಡುವಂತೆ ಮಾಡಿತ್ತು. ನಯನ ಮನೋಹರ ಶಿವನ ನಾಟ್ಯವನ್ನೇ ಆಸಕ್ತಿಯಿಂದ ಮೈಮರೆತು ನೋಡುತ್ತಿದ್ದ ತಮ್ಮ ಪತ್ನಿಯರನ್ನು ಖುಷಿಗಳು ಅಪಾರ್ಥ ಮಾಡಿಕೊಂಡು ಶಿವನನ್ನು ಸಂಹರಿಸಲು ಅವನ ಮೇಲೆ ಅನೇಕ ದುಷ್ಟಶಕ್ತಿಗಳನ್ನು ಪ್ರಯೋಗಿಸುವರು. ಮೇಲೆರಗಿ ಬಂದ ವ್ಯಾಘ್ರನ ಸಂಹರಿಸಿ ಶಿವನು ಅದರ ಚರ್ಮವನ್ನು ಧರಿಸಿ ಚರ್ಮಾಂಬರನಾಗುವನು. ಕೊಲ್ಲಲು ಬಂದ ಕಾಳ ಸರ್ಪ ಶರಣಾಗಿ ಶಿವನ ಕೊರಳ ಭೂಷಣನಾಗುತ್ತಾನೆ, ಹುಲಿಯ ಸೆಣೆಸಾಟದ ಕೌತುಕದ ಅಂಕ ಮತ್ತು ಹಾವಿನ ಬಳುಕು ಹರಿದಾಟ- ಹೊರಳಾಟದಲ್ಲಿನ ಮಂಡಿ ಅಡವು, ವಿವಿಧ ಆಂಗಿಕಾಭಿನಯದ ಅಭಿನಯದ ಸಂದರ್ಭಕ್ಕೆ ಸೂಕ್ತವಾಗಿ ಅಷ್ಟೇ ಸಶಕ್ತ, ವೇಗದ ಜತಿಗಳನ್ನು ಆನಂದ ತಾಂಡವದಲ್ಲಿ ಪ್ರಜ್ವಲತೆಯಿಂದ ಸಂಯೋಜಿಸಲಾಗಿತ್ತು. ನಾಟಕೀಯ ಆಯಾಮದಲ್ಲಿ ರೂಪಿತವಾದ ಈ ಸಂಚಾರಿಗಳಲ್ಲಿ ವಾಚಿಕಾಭಿನಯದ ಪ್ರಸ್ತುತಿ ಕೂಡ ಪೂರಕವಾಗಿತ್ತು.
ನಾಲ್ಕನೆಯ ದೃಶ್ಯದಲ್ಲಿ ಪಾರ್ವತಿಯು ಶಿವನ ಅನುಗ್ರಹಕ್ಕಾಗಿ ಗಾಢ ತಪಸ್ಸಿನಲ್ಲಿ ತೊಡಗಿದ್ದಾಗ ಶಿವನು ಅನೇಕ ಬಗೆಯಲ್ಲಿ ಅವಳನ್ನು ಪರೀಕ್ಷಿಸಿ ಕಡೆಯಲ್ಲಿ ಅವಳನ್ನು ಪಾಣಿಗ್ರಹಣ ಮಾಡಿಕೊಳ್ಳುವ ಆಸಕ್ತಿಕರ ಸನ್ನಿವೇಶ ರಮ್ಯವಾಗಿದ್ದು, ಶಿವ-ಪಾರ್ವತಿಯರ ಸಾಮರಸ್ಯದ ನೃತ್ಯ ರಮಣೀಯವಾಗಿತ್ತು. ಮುಂದೆ ಸುಂದರ ಶಂಕರನ ಪ್ರದೋಷ ನಾಟ್ಯವು ಆಮೋದ-ಸಂಭ್ರಮದಿಂದ ನಡೆಯುತ್ತದೆ. ಇಂದ್ರ ಸಭೆಯಲ್ಲಿ ಬ್ರಹ್ಮ-ವಿಷ್ಣು ಈ ನಾಟ್ಯ ಸಂಭ್ರಮದಲ್ಲಿ ಭಾಗಿಯಾಗಿ, ಲಕ್ಷ್ಮೀ-ಸರಸ್ವತಿಯರು ವಾದ್ಯಗಳನ್ನು ನುಡಿಸುವಾಗ ಶಿವನಾಡುವ ‘ಸಂಧ್ಯಾ ತಾಂಡವ’ ಆನಂದದಲೆಯನ್ನು ಪಸರಿಸುತ್ತದೆ. ನರ್ತಕಿಯರು ‘ತಿಲ್ಲಾನ’ದ ಹೆಜ್ಜೆ-ಗೆಜ್ಜೆಗಳ ಸಂಭ್ರಮವನ್ನು ಚೆಲ್ಲುವರು. ದೇವೇಂದ್ರನ ಪಟ್ಟದ ಮೇಲೆ ಕಣ್ಣಿಟ್ಟ ತ್ರಿಪುರಾಸುರರ ಅಟ್ಟಹಾಸವನ್ನು ಶಿವನು, ಮಂದರ ಪರ್ವತವನ್ನು ಬಿಲ್ಲಾಗಿಸಿಕೊಂಡು ಅಡಗಿಸಿ, ಸಂಹರಿಸುವ ದೃಶ್ಯ, ತ್ರಿಲೋಕೇಶ್ವರನ ಸಾಕ್ಷಾತ್ಕಾರದ ಮಂಗಳದ ದೃಶ್ಯದಲ್ಲಿ ಹೃದಯದ ತುಂಬಾ ಶಿವನೇ ತುಂಬಿಕೊಳ್ಳುತ್ತಾನೆ. ಶಿವಶಂಕರನ ಸಮಗ್ರ ಚಿತ್ರಣವನ್ನು ವಿವಿಧ ಸಂಚಾರಿಗಳಲ್ಲಿ ಕಟ್ಟಿಕೊಡುವ ಸುಂದರ ಲೀಲಾಜಾಲ ನರ್ತನ, ಸಂಗೀತ ನಿನಾದಗಳಿಂದ ಸ್ತುತ್ಯಾರ್ಹವಾಗಿ ಮೂಡಿಬಂದಿತ್ತು.
ನೃತ್ಯ-ಸಂಗೀತದ ರಸಗ್ರಹಣಕ್ಕೆ ಉತ್ತಮ ಬೆಳಕಿನ ವಿನ್ಯಾಸವೂ ನೆರವಾಗಿತ್ತು. ರಘುನಂದನರ ನಿರ್ದೇಶನ ಹರಿತವಾಗಿದ್ದು ಅವರ ಹಾಗೂ ಅವರ ಶಿಷ್ಯರ ಪರಿಶ್ರಮ ಸುವ್ಯಕ್ತವಾಗಿತ್ತು. ಮುಂಬರುವ ಪ್ರದರ್ಶನಗಳಲ್ಲಿ ಮತ್ತಷ್ಟು ಇದು ಕಲಾತ್ಮಕವಾಗಿ-ಪ್ರೌಢ ಆಯಾಮದಲ್ಲಿ ಗಟ್ಟಿಗೊಳ್ಳಲಿ ಎಂಬ ಆಶಯದೊಂದಿಗೆ ಪ್ರಯೋಗಶೀಲ ಕಲಾವಿದ ರಘುನಂದನ್ ಮತ್ತವರ ಶಿಷ್ಯಸಂಕುಲಕ್ಕೆ ಅಭಿನಂದನೆಗಳು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.