ನಾಡಿನ ಖ್ಯಾತ ಕುಚಿಪುಡಿ ನೃತ್ಯಗುರು- ಅಂತರರಾಷ್ಟ್ರೀಯ ಕಲಾವಿದೆ ಆಚಾರ್ಯ ದೀಪಾ ನಾರಾಯಣ್ ಶಶೀಂದ್ರನ್ (ಕೂಚಿಪುಡಿ ಪರಂಪರ ಫೌಂಡೇಷನ್ ಲೈಫ್ ಟ್ರಸ್ಟಿ) ಇವರ ಬದ್ಧತೆಯ ನೃತ್ಯ ತರಬೇತಿಯಲ್ಲಿ ರೂಪುಗೊಂಡ ಕಲಾವಿದೆ ಆರತಿ ನಾಯರ್ ಇವರು ಶ್ರೀ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ‘ನಾಟ್ಯಕಲಾ ಲಲಿತಮ್’ ಶೀರ್ಷಿಕೆಯಲ್ಲಿ ಪ್ರಸ್ತುತಪಡಿಸಿದ ಏಕವ್ಯಕ್ತಿ ನೃತ್ಯ ಪ್ರದರ್ಶನ ಅದ್ಭುತವಾಗಿ ಮೂಡಿಬಂತು. ವೇದಿಕೆಯ ಮೇಲೆ ಮಿಂಚಿನ ಬಳ್ಳಿಯಂತೆ ತನ್ನ ಮನಮೋಹಕ ಬಾಗು-ಬಳುಕುಗಳಿಂದ ರಸೋಲ್ಲಾಸದ ಆಂಗಿಕಾಭಿನಯ, ಸುಮನೋಹರ ಅಭಿನಯಗಳಿಂದ ನರ್ತನ ಮಾಡಿದ ಭರವಸೆಯ ಕುಚಿಪುಡಿ ನೃತ್ಯ ಕಲಾವಿದೆ ಆರತಿ ಕಲಾರಸಿಕರ ಮೆಚ್ಚುಗೆ ಗಳಿಸಿದಳು. ನೃತ್ಯಕ್ಕೆ ಹೇಳಿ ಮಾಡಿಸಿದ ಎತ್ತರದ ನಿಲುವು, ಪ್ರಮಾಣಬದ್ಧ ಮೈಮಾಟವನ್ನು ಹೊಂದಿದ್ದ ಕಲಾವಿದೆ ಆರಂಭದಿಂದ ಕಡೆಯವರೆಗೆ ಒಂದೇ ಚೈತನ್ಯವನ್ನು ಉಳಿಸಿಕೊಂಡು, ಹಲವಾರು ಸಾಂಪ್ರದಾಯಕ ಕುಚಿಪುಡಿ ಕೃತಿಗಳನ್ನು ಬಹು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ತನ್ನ ಕಲಾ ಪ್ರಪೂರ್ಣ ನೃತ್ಯದ ಮೂಲಕ ರಸಾನುಭವ ನೀಡಿದಳು.


ಸಾಮಾನ್ಯವಾಗಿ ಕುಚಿಪುಡಿ ಪ್ರಸ್ತುತಿ ಪ್ರಾರಂಭವಾಗುವುದು ಶುಭಾಪ್ರದವಾದ ‘ವಾಣಿ ಪರಾಕು’ – ದೇವಿಯ ವಂದನೆಯ ಪ್ರಾರ್ಥನೆಯೊಂದಿಗೆ. ಈ ಆರಂಭದ ಕೃತಿಯನ್ನು ನೋಡುವುದೇ ಒಂದು ಚೆಂದ, ಅಷ್ಟೇ ಮಿನುಗು. ಅದರಂತೆ ಕಲಾವಿದೆ ಆರತಿ, ತನ್ನ ಬಾಗು-ಬಳುಕುಗಳಿಂದ ಕೂಡಿದ ಪ್ರವೇಶದ ಹೆಜ್ಜೆಯನ್ನು ಮಿಂಚಿನ ಸಂಚಾರದೊಂದಿಗೆ ನಲಿವಿನ ನರ್ತನಗೈಯುತ್ತ, ವೇದಿಕೆಯನ್ನು ಮೆರಗುಗೊಳಿಸಿ, ಇಡೀ ರಂಗವನ್ನು ವೃತ್ತಾಕಾರದಲ್ಲಿ ಸುತ್ತು ಹಾಕುತ್ತ, ತನ್ನ ಮೋಹಕ ಆಂಗಿಕಾಭಿನಯದೊಂದಿಗೆ ಸಂಚಲನ ಮೂಡಿಸಿದಳು. ಕಲಾವಿದೆಯ ಆಕರ್ಷಕ ರೂಪವನ್ನು ಎತ್ತಿಹಿಡಿದ ಅವಳ ಸುಂದರ ವೇಷಭೂಷಣಗಳು ಅವಳ ಪಾದರಸದ ನರ್ತನದೊಂದಿಗೆ ಸಮರಸದಿಂದ ಬೆರೆತವು. ಭಾವಪೂರ್ಣ ಅವಳ ಮುಖಾಭಿವ್ಯಕ್ತಿ ಅದರ ಹೊಳಪನ್ನು ವೃದ್ಧಿಸಿದವು. ತನ್ನ ನೃತ್ಯಪ್ರಸ್ತುತಿ ನಿರ್ವಿಘ್ನವಾಗಿ ನೆರವೇರಲಿ ಎಂಬ ಸವಿನಯ ಪ್ರಾರ್ಥನೆಯನ್ನು ಕಲಾವಿದೆ, ವಿನಾಯಕನಿಗೆ ರಸೋಲ್ಲಾಸದ ನೃತ್ತನಮನಗಳ ಮೂಲಕ ಸಲ್ಲಿಸಿ, ಗಣಪನ ವಿವಿಧ ವಿನ್ಯಾಸದ ಸೊಗಸಾದ ಭಂಗಿಗಳನ್ನು ಯೋಗದ ಭಂಗಿಗಳಲ್ಲಿ ಪ್ರದರ್ಶಿಸಿದಳು.


ಮುಂದಿನ–ಶ್ರೀ ಆದಿ ಶಂಕರಾಚಾರ್ಯರ ಶಾರದಾಷ್ಟಕಂ ‘ರಾಜ ರಾಜ ರಾಜಿತೆ’ – ಶಾರದಾ ಸ್ತುತಿ (ರಾಗ- ನಿರೋಷ್ಟ – ತಾಳ- ಆದಿ ತಿಶ್ರಗತಿ)ಯನ್ನು ತನ್ಮಯತೆಯಿಂದ ಸಾಕಾರಗೊಳಿಸಿದಳು. ಆಚಾರ್ಯ ದೀಪ ನಾರಾಯಣನ್ ಶಶೀಂದ್ರನ್ ಇವರ ನೃತ್ಯ ಸಂಯೋಜನೆ ಕಣ್ಮನ ಸೆಳೆಯಿತು. ಮುತ್ತಯ್ಯ ಭಾಗವತರ್ ಈ ಕೃತಿಯ ರಾಗವನ್ನು ಸೃಜಿಸಿದ ಹಿನ್ನಲೆಯ ಕಥೆ ಸ್ವಾರಸ್ಯಕರವಾಗಿದೆ. ಮೈಸೂರು ಮಹಾರಾಜರ ತುಟಿಗೆ ಒಮ್ಮೆ ಜೇನುನೋಣ ಕುಟುಕಿ ಅವರಿಗೆ ಪಂಚಮ ಮತ್ತು ಮಧ್ಯಮದಲ್ಲಿ ಹಾಡಲಾಗದೇ (ಇದನ್ನು ಎರಡೂ ತುಟಿಗಳನ್ನು ಸೇರಿಸಿಯೇ ಹಾಡಬೇಕಾಗಿದ್ದರಿಂದ) ಇದ್ದುದರಿಂದ, ತುಟಿಗಳನ್ನು ಪರಸ್ಪರ ತಗುಲಿಸದೆಯೇ ನಿರ್ ಓಷ್ಟ್ಯವಾಗಿ ಹಾಡಲು ಸಹಾಯಕವಾಗುವಂತೆ ಮುತ್ತಯ್ಯ ಭಾಗವತರ್ ಈ ಕೃತಿಯನ್ನು ವಿಶೇಷ ರಾಗದಲ್ಲಿ ಸಂಯೋಜಿಸಿದರಂತೆ.


ಅನಂತರ- ಸಂಕೀರ್ಣ ಜತಿಗಳ ಲಯಾತ್ಮಕ ಬಂಧ ಅಪರೂಪದ ‘ಜತಿಸ್ವರ’ (ರಚನೆ- ಲಾಲ್ಗುಡಿ ರಾಜಲಕ್ಷ್ಮಿ)ವನ್ನು ಆರತಿ ಅನುಪಮವಾಗಿ ಪ್ರಸ್ತುತಪಡಿಸಿ ಅತ್ಯಂತ ವೇಗದ ಶಕ್ತಿಶಾಲಿ ನೃತ್ತಗಳ ಮಾಲೆಯನ್ನು ನೇಯ್ದು ದಂಗುಬಡಿಸಿದಳು. ರಾಜಲಕ್ಷ್ಮಿ ಅವರು 20 ವರ್ಷಗಳ ಹಿಂದೆ ರಚಿಸಿದ ಇದುವರೆಗೂ ಯಾರೂ ನೃತ್ಯ ಸಂಯೋಜಿಸಿರದ ಜತಿಸ್ವರಕ್ಕೆ ದೀಪಾ ನಾರಾಯಣ್ (ಮೊದಲ ಪ್ರಯೋಗ) ಅಪೂರ್ವ ಹೆಣಿಗೆಯಲ್ಲಿ ನೃತ್ಯ ಸಂಯೋಜಿಸಿದ್ದು, ಅದನ್ನು ಆರತಿ ಕಣ್ಮನ ಸೆಳೆಯುವಂತೆ ಸಾಕಾರಗೊಳಿಸಿದಳು.


ಪ್ರವೇಶ ಧರು – ‘ಭಾಮಾಕಲಾಪಂ’- ಕುಚಿಪುಡಿ ಶೈಲಿಯ ವಿಶಿಷ್ಟ ನೃತ್ಯ. ಪಾತ್ರವನ್ನು ಸಂಗೀತ, ಮಾತು, ನೃತ್ಯದ ಮೂಲಕ ಪರಿಚಯಿಸಲಾಗುತದೆ. ಯಕ್ಷಗಾನದ ‘ಭಾಮಕಲಾಪಂ’ನ ವಿಶಿಷ್ಟ ಛಾಪು ಕಾಣಿಸುವ ಸತ್ಯಭಾಮ ತುಂಬಾ ಮೆರುಗಿನ- ಬಿಂಕ ಬಿನ್ನಾಣಗಳ ಬೆಡಗಿನ ಪಾತ್ರ. ಆಭರಣಗಳಿಂದ ಅಲಂಕೃತಲಳಾದ ಚೆಂದುಳ್ಳಿ ಚೆಲುವೆ ಭಾಮಾ ಸಿಂಗರದ ಹೆಣ್ಣು. ಅಹಂ ಮೇಳೈವಿಸಿದ ಜಂಭದ ಬೆಡಗಿ. ‘ಭಾಮನೇ, ಸತ್ಯಭಾಮನೇ’ – ಎನ್ನುವ ಹಾಡಿಗೆ ಅವಳ ಹಾವ-ಭಾವ- ಬಿನ್ನಾಣವನ್ನು ಕಲಾವಿದೆ ಅತ್ಯಂತ ಸೊಗಸಾಗಿ ಕಂಡರಿಸಿದಳು. ಮಾಲೆ ಹಿಡಿದು, ವಯ್ಯಾರದಿಂದ ಪ್ರವೇಶ ನೀಡುವ ಸತ್ರಾರ್ಜಿತ ಮಹಾರಾಜನ ಕುವರಿಯ ಲಾಸ್ಯ- ಬೆಡಗೋ ಬೆಡಗು. ತನ್ನ ನೀಳವಾದ ಕೈಯಲ್ಲಿ ಜಡೆಯನ್ನು ಹಿಡಿದು ಜಂಭದ ನವಿಲಂತೆ ವಯ್ಯಾರವಾಗಿ ನಡೆಯುತ್ತಾ ಬರುವ ವಧುವಿನ ಮಿನುಗು- ಮಿಂಚಿನ ಓರೆನೋಟದ ರಮ್ಯತೆ, ಮುದನೀಡಿತು. ಶ್ರೀಕೃಷ್ಣನೊಡನೆ ನಡೆಯುವ ಅವಳ ವಿವಾಹ ಸಂಭ್ರಮವನ್ನು ನೃತ್ಯದ ಪ್ರತಿ ಆಯಾಮವೂ ಆರತಿಯ ರಮ್ಯ ನರ್ತನದಲ್ಲಿ ಚಿತ್ರಿತವಾಯಿತು. ಅವಳ ಅರೆಮಂಡಿ ನೃತ್ತಗಳ ನಾವೀನ್ಯದ ಸೊಗಸೋ ಸೊಗಸು. ಸತ್ಯಭಾಮಳ ಇಡೀ ವ್ಯಕ್ತಿತ್ವವನ್ನು ಕಲಾವಿದೆ ಬಹು ಸಮರ್ಥವಾಗಿ ಅನಾವರಣಗೊಳಿಸಿದಳು.

ಮುಂದೆ- ತರಂಗದ ಭಾಗವಾದ ‘ಮರಕತ ಮಣಿಮಯ ಚೇಲ’ – ಜನಪ್ರಿಯ ಕೃತಿ. ಶ್ರೀಕೃಷ್ಣನ ಮಹಿಮೆಯನ್ನು ಸಾದರಪಡಿಸುವ ದೈವೀಕ ಕೃತಿ. ಹಿತ್ತಾಳೆಯ ತಟ್ಟೆಯ ಅಂಚಿನ ಮೇಲೆ ನಿಂತು ಸಮತೋಲನ ಸಾಧಿಸಿ ಕ್ಲಿಷ್ಟವಾದ ನೃತ್ತಗಳನ್ನು ನಿರ್ವಹಿಸುವುದು ಕಲಾವಿದರಿಗೆ ನಿಜವಾದ ಸವಾಲೇ ಸರಿ. ಅದರ ಮೇಲೆ ತ್ರಿಭಂಗಿಯಲ್ಲಿ ನಿಂತು ಆರತಿ ತೋರಿದ ನೃತ್ತ ಲಾಸ್ಯ, ಪಾದಭೇದ- ವೈವಿಧ್ಯ ವಿನ್ಯಾಸದ ಜತಿಗಳು ಗಾಳಿಯಲ್ಲಿ ತೇಲಿದಂತೆ ಕಾಣುವ ಅವಳ ಅಂಗಶುದ್ಧ ಹೆಜ್ಜೆ-ಗೆಜ್ಜೆಗಳ ಸೊಗಸು ಕಣ್ಮನ ಸೆಳೆದವು. ಅರೆಮಂಡಿಯಲ್ಲಿ ಚಲಿಸುತ್ತ ರಚಿಸಿದ ಕೃಷ್ಣನ ನಾನಾ ಭಂಗಿಗಳು ಅನನ್ಯವಾಗಿದ್ದವು. ರಂಗಾಕ್ರಮಣದ ಚಲನೆಗಳು ಮತ್ತು ಕಲಾವಿದೆಯ ನಿಷ್ಕ್ರಮಣ ವಿನೂತನವಾಗಿತ್ತು.

ನಂತರ- ರಾಗಮಾಲಿಕೆ-ಆದಿತಾಳದ ‘ನಾರಾಯಣೀಯಂ’ ಸಾಂಪ್ರದಾಯಕ ಕೃತಿ- ‘ಮಾನಸ ಸಂಚರರೆ’ – ಅಭಿನಯ ಪ್ರಧಾನವಾದ ಈ ಕೃತಿಯಲ್ಲಿ, ಕಲಾವಿದೆಯ ಮೋಹಕ ಆಕಾಶಚಾರಿಗಳಿಂದ ಕೂಡಿದ ಕಲಾತ್ಮಕ ಭಂಗಿಗಳು ಬೆರಗು ತಂದವು. ದೀಪಾ ಅವರ ಅಸ್ಖಲಿತ ನಟುವಾಂಗದ ಧಾರೆಗೆ ಅನುಗುಣವಾಗಿ ಕಲಾವಿದೆ ನರ್ತಿಸಿ ನಲಿದಳು.

ಮುಂದೆ- ಪಂಚಸಭಾ ಸ್ಥಳದಿಂದ ಬಂದ ಪಂಚ ತಾಂಡವಮೂರ್ತಿ ನಟರಾಜನನ್ನು ಕಲಾವಿದೆ ಮನಸಾ ಭಕ್ತಿ ಭಾವದಿಂದ ಸ್ತುತಿಸಿ ದೈವೀಕ ಪ್ರಭೆ ಪಸರಿಸಿದಳು. ಗಂಧರ್ವ ಕನ್ನಿಕೆಯಂತೆ ಚೆಲುವು ಬೀರುತ್ತ, ಹಂಸನಡೆಯಲ್ಲಿ ಸಾಗಿದ ಕಲಾವಿದೆ ಶಿಲ್ಪಸದೃಶ ಭಂಗಿಗಳಲ್ಲಿ ಮೋಡಿ ಮಾಡಿದಳು. ದೀಪಾರ ಶಕ್ತಿಶಾಲಿ ಸೊಲ್ಲುಕಟ್ಟುಗಳಿಗೆ ನರ್ತಿಸಿದ ಕಲಾವಿದೆಯ ಭಾವಸ್ರೋತ ರಸೋಲ್ಲಾಸ ನೀಡಿತು. ಮುಂದೆ ಪ್ರಸ್ತುತಗೊಂಡ ‘ಕೋಪ ಮೇಟುಲ…’ -ತೆಲುಗು ಜಾವಳಿಯ ಖಂಡಿತ ನಾಯಕಿಯಾಗಿ ಕಲಾವಿದೆ, ತನ್ನಿನಿಯನ ಪರಸ್ತ್ರೀ ಸಂಗದಿಂದ ಕುಪಿತಳಾಗಿ ಅಷ್ಟೇ ಬೇಸರದಿಂದ ಅವನನ್ನು ದೂರತಳ್ಳುವ, ಖಿನ್ನತೆಗೆ ಒಳಗಾಗುವ ಭಗ್ನಪ್ರೇಮಿಯ ಪಾತ್ರವನ್ನು ಪರಿಣಾಮಕಾರಿಯಾಗಿ ಅಭಿನಯಿಸಿದಳು. ಪ್ರಸ್ತುತಿಯ ಅಂತ್ಯದಲ್ಲಿ ಸುವೇಗದ ನೃತ್ತಾಮೋದವನ್ನು ಬೀರಿದ ‘ತಿಲ್ಲಾನ’ ಮತ್ತು ಮಂಗಳದೊಂದಿಗೆ ಆರತಿಯ ‘ನಾಟ್ಯಕಲಾ ಲಲಿತಂ’ ಸುಸಂಪನ್ನವಾಯಿತು.

* ವಿಮರ್ಶಕಿ | ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
