ಗುರುವಿನ ಜ್ಞಾನ ಸಾಗರದಲ್ಲಿ ಬೆರೆತು, ಕಲಾ ಪ್ರವಾಹದಲ್ಲಿ ಈಜುತ್ತಾ, ಕಲೆಯ ಆಳವನ್ನು ಅರಿಯುವ ಪ್ರಯತ್ನ ಮಾಡುತ್ತಾ ಸಾಗುವುದೇ ಕಲಾವಿದ/ಕಲಾವಿದೆಗೆ ಇರುವ ಸವಾಲು. ಕಲೆಯ ಕೈಂಕರ್ಯವೇ ಹಾಗೇ! ಸತತ ಪ್ರಯತ್ನ, ಪರಿಶ್ರಮದ ಅನಾವರಣ ಮತ್ತು ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ಪ್ರಬುದ್ಧತೆಯತ್ತ ಸಾಗುವ ಪ್ರಯತ್ನ ಮಾಡುವ ಮೂಲಕ ಸಾಗುವ ಪ್ರಕ್ರಿಯೆ. ಇದು ನಿರಂತರವಾಗಿರಬೇಕು. ಇದು ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಕೆಲವರಿಗೆ ಅಲ್ಪಜ್ಞಾನವೇ ಅದ್ಭುತಜ್ಞಾನವೆಂದು ಅನ್ನಿಸಿಬಿಡಬಹುದು, ಅದರ ಪರಿಧಿ ಅಲ್ಪವೇ. ಪರಿಪೂರ್ಣತೆ ಎನ್ನುವುದು ದೀರ್ಘಾವಧಿಯ ಪರಿಕಲ್ಪನೆ ಎನ್ನುವುದನ್ನು ಅರಿತ ಅನೇಕ ಕಲಾವಿದರು ಇದ್ದಾರೆ.
ಭರತನಾಟ್ಯದ ಮೂಲ ನೆಲೆ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ನೃತ್ಯ ಕಾರ್ಯಕ್ರಮವನ್ನು ನೋಡುವ ಮತ್ತು ಹಲವಾರು ಅಂಶಗಳನ್ನು ಗಳಿಸಿಕೊಳ್ಳುವ ಅವಕಾಶ ನನಗೆ ಫೆಬ್ರವರಿ 1ರಂದು ದೊರಕಿತು. ನಟ್ಟುವಾಂಗದಲ್ಲಿ ನನ್ನದೇ ವಿದ್ಯಾರ್ಥಿ ಆಗಿರುವ ಉತ್ತಮ ಭರತನಾಟ್ಯ ಕಲಾವಿದ ಎನ್. ದೇಬಾಶಿಷ್ ಇವನ ಪೂರ್ಣ ಪ್ರಮಾಣದ ಮಾರ್ಗ ನೃತ್ಯವು ಪಾರ್ಥಸಾರಥಿ ಸ್ವಾಮಿ ಸಭಾ ಚೆನ್ನೈ ಇಲ್ಲಿ ನಡೆಯಿತು. ಚೆನ್ನೈನಲ್ಲಿರುವ ಸಾಧಕ ಗುರುಗಳಾದ ಕಲೈಮಾಮಣಿ ಶ್ರೀಮತಿ ಡಾ. ಲಕ್ಷ್ಮೀ ರಾಮಸ್ವಾಮಿ ಅವರ ನೃತ್ಯ ಗರಡಿಯಲ್ಲಿ ಬೆಳೆದ ದೇಬಾಶಿಷ್, ವಳವೂರು ಶೈಲಿಯಲ್ಲಿ ನೃತ್ಯ ಪ್ರದರ್ಶಿಸಿದರು.
ಗುರು ಲಕ್ಷ್ಮೀ ರಾಮಸ್ವಾಮಿ ಇವರು ನೃತ್ಯ ಕಲಾವಿದೆಯಾಗಿ, ನೃತ್ಯ ಗುರುಗಳಾಗಿ, ನೃತ್ಯ ಸಾಹಿತ್ಯ ಸಂಯೋಜಕಿಯಾಗಿ ಹಲವಾರು ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ. ಅವರ ಅಗಾಧ ಜ್ಞಾನ ನೃತ್ಯದಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕದ ಎರಡು ಭಾಗಗಳಲ್ಲೂ ನಡೆಯುತ್ತದೆ. ತಮಗೆ ತಿಳಿದಿರುವ ಸೈದ್ಧಾಂತಿಕ ರೂಪಗಳನ್ನು ಪ್ರಾಯೋಗಿಕವಾಗಿ ವೇದಿಕೆಯಲ್ಲಿ ಅಳವಡಿಸುವ ಮೂಲಕ ಭರತನೃತ್ಯದ ತತ್ವಗಳನ್ನು ತಾನು ಕಲಿತ ವಳವೂರು ಶೈಲಿಯಲ್ಲಿ ಶುದ್ಧವಾಗಿ, ಬದ್ಧತೆಯಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಇವರ ಬದ್ಧತೆ, ಮೂಲ ತತ್ವ ಪ್ರತಿಪಾದನೆ ದೇಬಾಶಿಶ್ ನೃತ್ಯದಲ್ಲಿ ಎದ್ದು ಕಾಣುತ್ತಿತ್ತು. ಸತತ ಒಂದು ಮುಕ್ಕಾಲು ಗಂಟೆಗಳ ಕಾಲ ಸಾಗಿದ ನೃತ್ಯವು ಸಾಂಪ್ರದಾಯಿಕತೆಯನ್ನು ಇಟ್ಟುಕೊಂಡಿತ್ತು.

ಏಕವ್ಯಕ್ತಿ ಪ್ರದರ್ಶನದ ಪ್ರಥಮ ನೃತ್ಯಬಂಧವಾಗಿ ಪಾರ್ಥಸಾರಥಿ ಶ್ಲೋಕ ಮತ್ತು ವಿಲೋಮ ಖಂಡ ತಾಳದ ಅಲರಿಪುವನ್ನು ನರ್ತಿಸಲಾಯಿತು. ಇತ್ತೀಚಿಗಿನ ನೃತ್ಯ ಕಾರ್ಯಕ್ರಮದಲ್ಲಿ ಹೊಸ ಹೊಸ ಅಲರಿಪುಗಳನ್ನು ವಿಭಿನ್ನ ಲೆಕ್ಕಾಚಾರದೊಂದಿಗೆ, ವಿಭಿನ್ನ ಸಾಮರ್ಥ್ಯದ ಸಮರ್ಥ ರೂಪತೆಯನ್ನು ಪ್ರದರ್ಶಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ನರ್ತಿಸಿದ ಅಲರಿಪು ವಿಲೋಮ ಖಂಡ ತಾಳ ಅಂದರೆ ಖಂಡಚಾಪು ತಾಳದ ಲೆಕ್ಕಾಚಾರ 2+3 ಗೆ ವಿರುದ್ಧವಾಗಿ 3+2 ಲೆಕ್ಕಾಚಾರದೊಂದಿಗೆ ಸಾಗುತ್ತದೆ. ತಾಳದಲ್ಲಿ ಜ್ಞಾನವನ್ನು ಪಡೆದುಕೊಳ್ಳುತ್ತಿರುವ ಕಲಾವಿದ ದೇಬಾಶಿಷ್ ಈ ಸಂಯೋಜನೆಯನ್ನು ಸಮರ್ಥವಾಗಿ ಪ್ರಸ್ತುತ ಪಡಿಸಿದರು. ಈ ಅಲರಿಪುವಿನ ಸಂಯೋಜನೆ ಮತ್ತು ನೃತ್ಯ ಸಂಯೋಜನೆ ಗುರು ಡಾ. ಲಕ್ಷ್ಮೀ ರಾಮಸ್ವಾಮಿ ಅವರದಾಗಿತ್ತು.
ಎರಡನೇ ನೃತ್ಯವಾಗಿ ಜತಿಸ್ವರದ ಪ್ರಸ್ತುತಿ. ರಾಗ ಶಂಕರಾಭರಣ ಮತ್ತು ಮಿಶ್ರಛಾಪು ತಾಳದಲ್ಲಿ ತಂಜಾವೂರು ಸಹೋದರರಿಂದ ರಚಿತವಾದ ಈ ಜತಿಸ್ವರ, ತಾಳ ಪ್ರವೀಣ ದೇಬಾಶಿಷ್ ಅವರಿಗಾಗಿಯೇ ಸಂಯೋಜಿಸಿದಂತಿತ್ತು. ಕಠಿಣ ಅಡವುಗಳ ಜೋಡಣೆ, ಕೋರ್ವೈಗಳ ನಿಖರ ಲೆಕ್ಕಾಚಾರ, ಉಸಿ (ಹುಸಿ) ಅಡವುಗಳ ಪರಿಕಲ್ಪನೆ ಇವೆಲ್ಲವೂ ಗುರು ಲಕ್ಷ್ಮೀ ರಾಮಸ್ವಾಮಿ ಅವರದ್ದು. ಕಠಿಣ ಕೋರ್ವೈಗಳು ಮುಗಿದ ತಕ್ಷಣ ಕಲಾ ರಸಿಕರ ಚಪ್ಪಾಳೆಯ ಕರತಾಡನ ಸಭಾದ ತುಂಬಾ ಮೇಳೈಸಿತು.

ಮುಂದಿನ ಪ್ರಸ್ತುತಿ ಪದವರ್ಣ. ಭರತನಾಟ್ಯ ಪ್ರದರ್ಶನದ ಮಾರ್ಗ ಪದ್ಧತಿಯಲ್ಲಿ ಪದವರ್ಣಕ್ಕೆ ಅಗ್ರ ಸ್ಥಾನ. ಇಲ್ಲಿ ದೇಬಾಶಿಷ್ ಪ್ರಸ್ತುತ ಪಡಿಸಿದ ಪದವರ್ಣದ ನಾಯಕ ದೀರೊದಾತ್ತ ಶ್ರೀರಾಮಚಂದ್ರ. ತೆಲುಗು ಭಾಷೆಯಲ್ಲಿ ಪನ್ನಿಯಂ ಶ್ರೀ ಸೀತಾರಾಮ ಶರ್ಮ ಇವರಿಂದ ರಚಿತವಾದ ಈ ವರ್ಣವು ರಾಗ ತೋಡಿ, ಆದಿ ತಾಳದಲ್ಲಿ ಸಂಯೋಜಿತವಾಗಿದ್ದು, ಗುರು ಲಕ್ಷ್ಮೀ ರಾಮಸ್ವಾಮಿ ಅವರ ನೃತ್ಯ ಸಂಯೋಜನೆ. ಇದರಲ್ಲಿ ರಾಮನ ಗುಣಗಾನ ಭಕ್ತಿಯ ಪರಾಕಾಷ್ಟೆಯನ್ನು ತಲುಪುವ ಸಂಚಾರಿ ಎಲ್ಲರ ಗಮನ ಸೆಳೆಯಿತು. ಪುತ್ರಕಾಮೇಷ್ಟಿ ಯಾಗ, ವಿಶ್ವಾಮಿತ್ರ ಮುನಿಯ ಪ್ರಿಯ ಶಿಷ್ಯನಾದ ರಾಮನಿಗೆ ಗುರುಗಳಿಂದ ಮಂತ್ರೋಪದೇಶ, ಅಸುರ ಸಂಹಾರ, ಸೀತಾ ಸ್ವಯಂವರ, ವಾಲ್ಮೀಕಿಗೆ ಸಿಗುವ ರಾಮನಾಮ ಉಪದೇಶ, ಹನುಮನ ಹೃದಯದೊಳು ನೆಲೆಸಿದ ರಾಮ ಹೀಗೆ ಹಲವಾರು ಸಂಚಾರಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ವರ್ಣವನ್ನು ಗೆಲ್ಲಿಸಿದ ಇನ್ನೊಂದು ಅಂಶವೇ ಜತಿಗಳ ರಚನೆ, ಸಂಯೋಜನೆ ಮತ್ತು ಪ್ರಸ್ತುತಿ. ಎಲ್ಲಾ 5 ಜತಿಗಳು ನನಗೆ ತುಂಬಾ ಇಷ್ಟವಾದವು. ಅದರಲ್ಲೂ ನಾಲ್ಕನೇ ಜತಿಯಲ್ಲಿ ಅಳವಡಿಸಿದ ಸೊಲ್ಲು ನಿಜಕ್ಕೂ ಕ್ರಿಯಾತ್ಮಕ ದೃಷ್ಟಿಕೋನದಿಂದ ಕೂಡಿತ್ತು.

ಹುಡುಗರೆಂದ ಮೇಲೆ ನೃತ್ತದಲ್ಲಿ ನಿಪುಣರು, ಆದರೆ ಅಭಿನಯವನ್ನು ಅಂದವಾಗಿ ಪ್ರಸ್ತುತಪಡಿಸಲಾಗದು ಅನ್ನುವ ಮಾತಿಗೆ ವಿರುದ್ಧವೆಂಬಂತೆ ದೇಬಾಶಿಷ್ ಪ್ರಸ್ತುತ ಪಡಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿದ ಕೃತಿ ‘ಶ್ರೀ ರಂಗ ಪುರವಿಹಾರ’ ಎಲ್ಲರ ಹೃದಯ ಗೆದ್ದಿತು. ಗೀತೆಯ ಮೊದಲು ಶ್ರೀರಾಮನು ವಿಭೀಷಣನಿಗೆ ನೀಡಿದ ಕಾಣಿಕೆ ರಂಗನಾಥನ ಮೂರ್ತಿ. ಈ ಮೂರ್ತಿ ಶ್ರೀ ರಂಗಂ ದೇವಾಲಯವನ್ನು ನಿರ್ಮಾಣ ಹೇಗೆ ಮಾಡಿತು? ಎನ್ನುವ ಕಥೆಯನ್ನು ನಿರೂಪಿಸಿ ಮುಂದೆ ಭಕ್ತಿಯ ಹೂರಣವನ್ನು ಎಲ್ಲಾ ಕಲಾ ರಸಿಕರಿಗೆ ಉಣಿಸಿದರು. ಕೃತಿಯ ರಾಗ ಬೃಂದಾವನ ಸಾರಂಗವೇ ಎಲ್ಲರಿಗೂ ಅಚ್ಚುಮೆಚ್ಚು.
ಕೊನೆಯ ನೃತ್ಯಬಂಧವಾಗಿ ತಿಲ್ಲಾನ. ಹಂಸಾನಂದಿ ರಾಗ ಮತ್ತು ಆದಿ ತಾಳದಲ್ಲಿ ಸಂಯೋಜಿತವಾದ, ವಿಭಿನ್ನ ಮೈಅಡವು, ಮುಕ್ತಾಯ ಅಡವಿನ ಗುಚ್ಛಗಳ ಲೆಕ್ಕಾಚಾರ ಮತ್ತು ವಳವೂರು ಶೈಲಿಯ ಭಾವಾಭಂಗಿಯ ದರ್ಶನವಾಯಿತು. ಇದರ ನೃತ್ಯ ಸಂಯೋಜನೆ ಗುರುಗಳದ್ದು. ಇದರೊಂದಿಗೆ ಲಲಿತ ಶ್ಲೋಕದ ಮೂಲಕ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.

ಆತ್ಮವಿಶ್ವಾಸದೊಂದಿಗೆ ಕಠಿಣ ಸವಾಲುಗಳನ್ನು ಎದುರಿಸಿದ ದೇಬಾಶಿಷ್, ಆತನಿಗೆ ಗುರುವಾಗಿ ಪೂರ್ಣ ಜ್ಞಾನವನ್ನು ನೀಡಿ ಕಲಾವಿದನಾಗಿ ಬೆಳೆಸಿದ ಗುರು ಡಾ. ಲಕ್ಷ್ಮೀ ರಾಮಸ್ವಾಮಿ ಮತ್ತು ಶ್ರೀ ಮುದ್ರಾಲಯದ ಸಹ ಶಿಕ್ಷಕಿ ಡಾ. ಜಾಗ್ಯೇಸನಿ ಚಟರ್ಜಿ, ನಿರೂಪಣೆ ನಿರ್ವಹಿಸಿದ ಕುಮಾರಿ ಪ್ರಜ್ಞಾ, ಆತನ ಅಭ್ಯಾಸಕ್ಕೆ ಸಹಕರಿಸಿದ ವಿಭಾ ಬಾಲಾಜಿ ಮತ್ತು ವಿದ್ಯಾಲಕ್ಷ್ಮಿ ಗೋಪಿನಾಥ್, ಮೇಕಪ್ಪಿನಲ್ಲಿ ಸಹಕರಿಸಿದ ಶ್ರೀ ಬಿಜೋಯ್ ದಾಸ್, ದೇಬಾಶಿಷ್ ಅವರ ಗೆಳತಿ ಸ್ವರಲಿಪಿ ಮಂಡಲ್ ಇವರೆಲ್ಲಾ ಅಭಿನಂದನೆಗೆ ಅರ್ಹರು.

ಮುಖ್ಯವಾಗಿ ನೆನಪಿಸಿಕೊಳ್ಳಲೇಬೇಕಾದ ವಿಚಾರ ಸಮರ್ಥ ಹಿಮ್ಮೇಳ. ನಟ್ಟುವಾಂಗದಲ್ಲಿ ಗುರು ಡಾ. ಲಕ್ಷ್ಮೀ ರಾಮಸ್ವಾಮಿ, ಹಾಡುಗಾರಿಕೆಯಲ್ಲಿ ಶ್ರೀಮತಿ ಕೃತ್ತಿಕಾ ಅರವಿಂದ್, ಮೃದಂಗದಲ್ಲಿ ಡಾ. ಗುರು ಭಾರಧ್ವಾಜ್, ಕೊಳಲಿನಲ್ಲಿ ಶ್ರೀ ಸುಜಿತ್ ಎಸ್. ನಾಯಕ್ ಮತ್ತು ವಯಲಿನ್ ಶ್ರೀ ಅನಂತ ರಾಮನ್ ಬಾಲಾಜಿ ಇವರೆಲ್ಲರೂ ಕಾರ್ಯಕ್ರಮದ ಯಶಸ್ಸಿನ ರೂವಾರಿಗಳು.
ವಿದ್ವಾನ್ ಮಂಜುನಾಥ್ ಎನ್. ಪುತ್ತೂರು.
