ಬೆಂಗಳೂರಿನ ಚೌಡಯ್ಯ ವಿಶಾಲಾಂಗಣದ ದಿವ್ಯವೇದಿಕೆಯ ಮೇಲೆ ಕೋಲ್ಮಿಂಚಿನ ಪುಟ್ಟ ನಾಟ್ಯಪುತ್ಥಳಿಯೊಂದು ಚಿಗರೆಯಂತೆ ಕುಪ್ಪಳಿಸುತ್ತ, ಕಣ್ಮನ ತಣಿಸಿದ ನೃತ್ಯನೈವೇದ್ಯ ದೈವೀಕವಾಗಿತ್ತು. ವಯಸ್ಸಿಗೇ ಮೀರಿದ ಪ್ರತಿಭೆ ಸಂವೃತ ಕಿಶೋರ್, ತುಂಬಿ ತುಳುಕಿದ ಚೈತನ್ಯದಿಂದ ಪ್ರಸ್ತುತಪಡಿಸಿದ ವರ್ಚಸ್ವೀ ನೃತ್ಯ, ಕಣ್ಣೆವೆ ಮಿಟುಕಿಸದೆ ನೋಡುವಂತೆ ಮಾಡಿದ್ದು, ಆ ಬಾಲ ಕಲಾವಿದೆಯ ಅಸ್ಮಿತೆ. ಅಕ್ಷಯ ತೃತೀಯದ ಪ್ರಶಸ್ತ ಸಂದರ್ಭದಲ್ಲಿ ಸಂವೃತ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ತುಂಬಿದ ಸಭಾಂಗಣದ ಕಲಾರಸಿಕರೆದುರು ನೆರವೇರಿಸಿಕೊಂಡಳು.
ಇದು ಕಲಾವಿದೆಯ ಮೊದಲ ಹೆಜ್ಜೆಯ ರಂಗಪ್ರವೇಶ ಎನಿಸಲಿಲ್ಲ. ಲೀಲಾಜಾಲವಾಗಿ ಸಂವೃತ ನಿರಾಯಾಸವಾಗಿ ಸುಮಾರು ಎರಡೂವರೆ ಗಂಟೆಗಳ ಕಾಲ ಅದಮ್ಯ ಉತ್ಸಾಹದಿಂದ ಚೇತೋಹಾರಿಯಾಗಿ ನರ್ತಿಸಿದ್ದು ನಿಜಕ್ಕೂ ಅಪೂರ್ವ ನೋಟವಾಗಿತ್ತು. ಪ್ರಸ್ತುತಿಯ ಪ್ರಾರಂಭದಿಂದ ಕಡೆಯವರೆಗೂ ಒಂದೇ ಚೈತನ್ಯ- ನಗುಮೊಗದ ಭಾವಪೂರ. ಅರಳಿದ ಬೊಗಸೆಗಂಗಳ ಕಾಂತಿ, ನೀಳ ಕಣ್ಣೆವೆಗಳು ಪ್ರತಿಚಲನೆಗೂ ಪ್ರತಿಸ್ಪಂದಿಸುತ್ತಿದ್ದುದು ಅವಳ ನಾಟ್ಯ ವೈಖರಿಗೊಂದು ವಿಶಿಷ್ಟ ಮೆರುಗು ನೀಡಿತ್ತು. ಸಾಂಪ್ರದಾಯಿಕ ‘ಮಾರ್ಗಂ’ ಕೃತಿಗಳಾದರೂ ಕಲಾವಿದೆಯ ನವ ನವೋನ್ವೇಷಣ ಮಿಂಚಿನಸಂಚಾರದ ನೃತ್ತಗಳು, ನುರಿತ ಅಭಿನಯ ಚಮತ್ಕಾರ ನೋಡುಗರಿಗೆ ಮೋಡಿ ಮಾಡಿತು. ಗುರು ರತ್ನಾ ಸುಪ್ರಿಯರ ಕಲಾತ್ಮಕ ನೃತ್ಯಸಂಯೋಜನೆ ಹೊಸ ಆಯಾಮ ತೆರೆದು ಯಾಂತ್ರಿಕತೆ ಸುಳಿಯದಂತೆ ಕಾರ್ಯಕ್ಷಮತೆ ತೋರಿತ್ತು.
ನರ್ತಿಸಲು ಆಯ್ದುಕೊಂಡ ಎಲ್ಲಾ ಕೃತಿಗಳೂ ವೈವಿಧ್ಯಪೂರ್ಣವಾಗಿದ್ದವು. ವಿಶಿಷ್ಟ ಹೆಜ್ಜೆಗಳಿಂದ ರಂಗಪ್ರವೇಶಿಸಿದ ಸಂವೃತ, ಪ್ರಥಮನೋಟದಲ್ಲೇ ಅವಳ ‘ನೃತ್ಯ ಬಗೆ’ಯ ಹೊಸತನವನ್ನು ಅನಾವರಣಗೊಳಿಸಿದವು. ಶುಭಾರಂಭದ ‘ಪುಷ್ಪಾಂಜಲಿ’ಯಲ್ಲಿ ಅರೆಮಂಡಿಯಲ್ಲಿ ನೃತ್ತಗಳ ಸಮರ್ಪಣೆ, ವಿವಿಧ ಯೋಗದ ಭಂಗಿಗಳ ಬಾಗು-ಬಳುಕಿನಲ್ಲಿ ಹೊಸಮಿಂಚು ಅಭಿವ್ಯಕ್ತಗೊಂಡಿತು. ಇಡೀ ವೇದಿಕೆಯ ರಂಗಾಕ್ರಮಣದಲ್ಲಿ ನೃತ್ತನಮನ ಸಲ್ಲಿಸುತ್ತ, ನಟರಾಜನಿಗೆ ನಿಂತ ನೆಲಕ್ಕೆ ಸಮವಾಯಿಯಾಗಿ ತನ್ನ ಬಳ್ಳಿದೇಹವನ್ನು ಬಾಗಿಸಿ ಸಮತೋಲನಿಸಿ ನಮಸ್ಕರಿಸಿದ್ದು ಬೆರಗು ತಂದಿತು. ಭೂಮಿತಾಯಿಗೆ ತನ್ನ ಪದಾಘಾತವನ್ನು ಮನ್ನಿಸುವಂತೆ ಬೇಡಿ ಲಾಸ್ಯಪೂರ್ಣ ನೃತ್ತಗಳಿಂದ ಅರ್ಚಿಸಿದಳು. ನಂತರ- ‘ಗಂ ಗಣಪತಿ’ಯ ಪ್ರಥಮಪೂಜೆಯ ಮಹತ್ವ ತಿಳಿಸುವ ‘ರಾವಣನ ಆತ್ಮಲಿಂಗ’ದ ಪ್ರಸಂಗವನ್ನು ಕಣ್ಮನ ಸೆಳೆವ ಸಂಚಾರಿ ಅಭಿನಯದಲ್ಲಿ ಸಾಕಾರಗೊಳಿಸಿದಳು.
ಮುಂದೆ ‘ಅಲರಿಪು’- ಕಲಾವಿದೆಯ ಆತ್ಮವಿಶ್ವಾಸ, ಅಂಗಶುದ್ಧ ಆಕರ್ಷಕ ಆಂಗಿಕಾಭಿನಯ, ಹಸ್ತ ಮುದ್ರಿಕೆಗಳ ಸೊಗಸಿಗೆ ಕನ್ನಡಿ ಹಿಡಿದವು. ವಚನದ ಮನೋಜ್ಞ ಪ್ರಸ್ತುತಿಯ ನಂತರ, ‘ಜತಿಸ್ವರ’ದಲ್ಲಿ ಲಾಸ್ಯ, ರಮ್ಯತೆ ತುಂಬಿದ ಅರೆಮಂಡಿಯ ನೃತ್ತಾವಳಿಗಳು, ಯೋಗದ ಸುಂದರ ಭಂಗಿಗಳು, ರೋಮಾಂಚಕ ಆಕಾಶಚಾರಿ-ಭೂಚಾರಿಗಳು ನಿರಾಯಾಸವಾಗಿ ಪ್ರದರ್ಶಿತವಾದವು. ಕೋಮಲ ನಡೆಯ ಮೃದು ಹಸ್ತವಿನಿಯೋಗಗಳು, ಮಯೂರಭಂಗಿಗಳು ಆಮೋದ ನೀಡಿದವು. ‘ರಾಧಾ ಮುಖ ಕಮಲ’ – ಕೀರ್ತನೆಯಲ್ಲಿ ಶ್ರೀಕೃಷ್ಣನ ಲೀಲಾವಿನೋದ, ಸಾಹಸಗಾಥೆಗಳನ್ನು ತನ್ನ ಸೂಕ್ಷ್ಮಾಭಿನಯದಿಂದ ಸಾಕ್ಷಾತ್ಕರಿಸಿದ ಕಲಾವಿದೆ ಮಧುರಾನುಭೂತಿ ನೀಡಿದಳು. ಅವಳ ಮನಮೋಹಕ ಚಲನೆಯನ್ನು ಉದ್ದೀಪನಗೊಳಿಸಿದ್ದು ವಿಶೇಷ ಬಣ್ಣದ ಕೋಲುಗಳ ಕಲಾತ್ಮಕ ಬೆಳಕಿನ ಕಿರಣಗಳ ವಿನ್ಯಾಸ.
ಭರತನಾಟ್ಯದ ಹೃದಯ ಭಾಗ, ಅಷ್ಟೇ ಹೃದ್ಯವೂ ಅದ ಘಟ್ಟ ‘ವರ್ಣ’. ಸಂವೃತ ಹದವರಿತ ತಾಳ-ಲಯಜ್ಞಾನಗಳಿಂದ ನೃತ್ತ ಝೇಂಕಾರ ಮಿನುಗಿಸುತ್ತಿದ್ದರೆ, ನಡುನಡುವೆ, ಗುರು ರತ್ನ ಸುಪ್ರಿಯರವರ ಕುಣಿಸುವ ಲಯದ ಸ್ಫುಟವಾದ- ಸುಶ್ರಾವ್ಯ ನಟುವಾಂಗ ಕಲಾವಿದೆಯ ಹೆಜ್ಜೆ-ಗೆಜ್ಜೆಗೆ ಕಸುವು ತುಂಬಿತ್ತು. ಪಾಪನಾಶಂ ಶಿವನ್ ವಿರಚಿತ ಭಕ್ತಿಪ್ರಧಾನ ವರ್ಣ ’ಸ್ವಾಮಿ ನಾನುಂದನ್ ಅಡಿಮೈ’ – ಜೀವಾತ್ಮ- ಪರಮಾತ್ಮ ಕಲ್ಪನೆಯಲ್ಲಿ ಮೈದಾಳಿದ ಕೃತಿಯಲ್ಲಿ ಭಕ್ತೆ ತನ್ನ ಪರಮ ಆರಾಧ್ಯದೈವ ನಟರಾಜನ ರೂಪ-ಮಹಿಮೆ-ವೈಶಿಷ್ಟ್ಯಗಳನ್ನು ಸ್ತುತಿಸುತ್ತ ತೋರಿದ ‘ಅರ್ಧನಾರೀಶ್ವರ’ ರೂಪಗಳು ಅನನ್ಯವಾಗಿದ್ದವು. ಚೆನ್ನಮಲ್ಲಿಕಾರ್ಜುನನಲ್ಲಿ ಅನುರಕ್ತಳಾದ ನಾಯಿಕೆ, ಭಕ್ತಿತಾದಾತ್ಮ್ಯ ಭಾವದಿಂದ ನಿವೇದಿಸಿ ಅರ್ಪಿಸಿಕೊಂಡ ನೃತ್ಯಾರಾಧನೆ ಹೃದಯಸ್ಪಶಿಯಾಗಿತ್ತು. ಶಿವ ನಾಮಾಮೃತ ಪಾನವೇ ಉಸಿರಾದ ಭಕ್ತೆಯಾಗಿ ಸಂವೃತ, ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಪರಿಣತ ಅಭಿನಯ ಪ್ರದರ್ಶಿಸಿದಳು. ಶಿವನ ನಾಗಮುದ್ರೆಗಳು, ನೃತ್ತಾವೃತ ಭ್ರಮರಿಗಳ ಸುಮನೋಹರ ಯೋಗದ ಕ್ಲಿಷ್ಟ ಭಂಗಿಗಳನ್ನು ಸಲೀಸಾಗಿ ನಿರೂಪಿಸಿದಳು. ಚರಣದ ನಂತರ – ‘ನಟರಾಜ ದೇವ’ನನ್ನು ವಿಧ ವಿಧವಾಗಿ ಚಿತ್ರಿಸುತ್ತ, ಅತ್ಯಂತ ವೇಗದ ಸಂಕೀರ್ಣ ಜತಿಗಳಲ್ಲಿ ಪಾದಭೇದ ತೋರುತ್ತ, ನೃತ್ಯದ ವ್ಯಾಕರಣದ ಎಲ್ಲ ಅಂಶಗಳಲ್ಲೂ ಸಾಮರ್ಥ್ಯ ನಿರೂಪಿಸಿದಳು.
ಮುಂದಿನ ಭಜನೆ ಅತ್ಯಂತ ವಿಶೇಷವಾಗಿತ್ತು. ಶ್ರೀ ತುಳಸೀದಾಸರ ರಚನೆ- ‘ಶ್ರೀರಾಮಚಂದ್ರ ಕೃಪಾಳು ಭಜಮನ’ -ಭಕ್ತಿ ಪ್ರಧಾನವಾದ ಕೀರ್ತನೆಗೆ ಗುರು ರತ್ನ ಸುಪ್ರಿಯ ಶ್ಲೋಕಭಾಗವನ್ನು ತಮ್ಮ ಪ್ರಬುದ್ಧ ಅಭಿನಯದಿಂದ ಸಾದರಪಡಿಸಿದರೆ, ನುಡಿ-ಚರಣಗಳಿಗೆ ಕಲಾವಿದೆಯ ತಾಯಿ ವಿದುಷಿ. ಸುಹಾಸಿನಿ ಕಿಶೋರ್ ತಮ್ಮ ಚೆಂದದ ಅಭಿವ್ಯಕ್ತಿ- ಅಭಿನಯಗಳಿಂದ ಶ್ರೀರಾಮನಾಗಿ ನರ್ತಿಸಿದರೆ, ತಾಯಿಯೊಂದಿಗೆ ಸಾಮರಸ್ಯದಿಂದ ಭಕ್ತ ಹನುಮನಾಗಿ ಮನಮುಟ್ಟುವಂತೆ ದೈವೀಕವಾಗಿ ಸಂವೃತ ನರ್ತಿಸಿದಳು. ಮುಂದಿನ ಕೃತಿ- ‘ಕಂಜದಳಾಯತಾಕ್ಷಿ ಕಾಮಾಕ್ಷಿ’ ಯನ್ನು ಸಂವೃತ ಹೃದಯಂಗಮವಾಗಿ ಅರ್ಪಿಸಿದಳು. ಲೋಕಧರ್ಮೀಯ ಕೃತಿ ‘ಜಾವಳಿ’- ‘ಮಾತಾಡಬಾರದೇ ಮಾರಮಣನೇ’ ಎನ್ನುತ್ತಾ, ಮುನಿಸಿಕೊಂಡ ಗಂಡನನ್ನು ನಾನಾ ಪರಿಯಲ್ಲಿ ಒಲಿಸಿಕೊಳ್ಳುವ ಸೊಗಸಾದ ಅಭಿನಯ ಆನಂದ ನೀಡಿತು.
ಅಂತ್ಯದಲ್ಲಿ ಸಂವೃತ, ರೋಮಾಂಚಕ ಚಲನೆ-ಭಂಗಿಗಳು, ಕೋರ್ವೆ-ನೃತ್ತಗಳಿಂದ ಕೂಡಿದ ಕುಣಿಸುವ ಲಯದ ‘ತಿಲ್ಲಾನ’ದೊಂದಿಗೆ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು. ‘ಈ ಮಣ್ಣು ನಮ್ಮದು, ಈ ನಾಡು ನಮ್ಮದು’– ಎಂಬ ಆತ್ಮೀಯ ಕನ್ನಡಗೀತೆಯೊಂದಿಗೆ ‘ರಂಗಪ್ರವೇಶ’ ಕಾರ್ಯಕ್ರಮ ಶುಭಮಂಗಳವಾಗಿದ್ದು ಮನಸ್ಸನ್ನು ಆರ್ದ್ರಗೊಳಿಸಿತು. ಸಂವೃತಳ ಚೈತನ್ಯಪೂರ್ಣ ನೃತ್ಯಕ್ಕೆ ಗಾನಗೋಷ್ಠಿಯ ಹಿನ್ನಲೆಯ ಶಕ್ತಿಯಾದ ಕಲಾವಿದರು- ಭಾವಪೂರ್ಣ ಗಾಯನದಲ್ಲಿ ವಿದ್ವಾನ್ ಡಿ.ಎಸ್. ಶ್ರೀವತ್ಸ, ಮೃದಂಗದ ಝೇಂಕಾರ- ವಿದ್ವಾನ್ ಭವಾನಿ ಶಂಕರ್, ವೇಣುನಿನಾದ – ವಿದ್ವಾನ್ ಹೆಚ್.ಎಸ್. ವೇಣುಗೋಪಾಲ್, ಸುಮಧುರ ವೀಣಾಗಾನ- ವಿದ್ವಾನ್ ಶಂಕರರಾಮನ್, ವಯೊಲಿನ್ ಸುನಾದ- ವಿದ್ವಾನ್ ಪ್ರದೇಶಾಚಾರ್, ರಿದಂ ಪ್ಯಾಡ್ ವಿದ್ವಾನ್ ಡಿ.ವಿ. ಪ್ರಸನ್ನಕುಮಾರ್, ನಟುವಾಂಗದ ಬನಿಯಲ್ಲಿ ಗುರು ರತ್ನಾ ಸುಪ್ರಿಯ ಶ್ರೀಧರನ್ ಮತ್ತು ವಿದ್ವಾನ್ ಸುಹಾಸಿನಿ ಕಿಶೋರ್.
ನೃತ್ಯ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.