ಒಂದೇ ವೇದಿಕೆಯ ಮೇಲೆ ನೂರಾರು ಬಣ್ಣಗಳ ಕಾರಂಜಿಗಳು ಪುಟಿದ ರೋಮಾಂಚಕ ಅನುಭವ. ಕಣ್ತುಂಬಿದ ಬಣ್ಣಗಳ ಓಕುಳಿ. ಉದಯೋನ್ಮುಖ ನೃತ್ಯ ಕಲಾವಿದರ ಚೈತನ್ಯ ಸಮಾಗಮ. ಒಂದು ಗಳಿಗೆಯೂ ಬಿಡುವು ಕೊಡದೆ ರಂಗದ ಮೇಲಿನ ನವಿಲಂಥ ಚೆಲುವೆಯರು, ಗರಿಬಿಚ್ಚಿ ನಲಿದ ಸಂಭ್ರಮ ‘ನೃತ್ಯ ದರ್ಪಣ್’ದ ‘ತಾಳ್ ತರಂಗ್’ ದ ವೈಶಿಷ್ಟ್ಯ.

ಇವೆಲ್ಲ ಸಾಕ್ಷಾತ್ಕರವಾದದ್ದು ಬೆಂಗಳೂರಿನ ‘ನೃತ್ಯ ದರ್ಪಣ್’ ಅಕಾಡೆಮಿಯ ಆರ್ಟಿಸ್ತಿಕ್ ಡೈರೆಕ್ಟರ್ ಪಾದರಸ ವ್ಯಕ್ತಿತ್ವದ ವಿದುಷಿ ವೀಣಾ ಭಟ್ ಇವರ ವಿಶಿಷ್ಟ ಪರಿಕಲ್ಪನೆಯ ಸಮರ್ಥ ಕಾರ್ಯಕ್ಷಮತೆಯಿಂದ. ವರ್ಷ ಪೂರ್ತಿ ನಿರಂತರ ಸಕ್ರಿಯರಾಗಿರುವ ಪ್ರಯೋಗಶೀಲ ಕಥಕ್ ನೃತ್ಯಗಾರ್ತಿ ವೀಣಾ ಆರ್. ಭಟ್ ಕಳೆದ ಒಂದೂವರೆ ದಶಕಕ್ಕೂ ಹೆಚ್ಚಿನ ಕಾಲದಿಂದ ‘ನೃತ್ಯದರ್ಪಣ್’ -ಕಥಕ್ ನೃತ್ಯಶಾಲೆಯನ್ನು ಉತ್ತಮ ಗುರುವಾಗಿ, ಮುನ್ನಡೆಸುತ್ತ ತಮ್ಮ ವರ್ಣರಂಜಿತ ಕಾರ್ಯಕ್ರಮಗಳಿಗೆ ಅತ್ಯಂತ ಜನಪ್ರಿಯತೆ ಪಡೆದಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಕಥಕ್ ನೃತ್ಯದ ಶಿಕ್ಷಣ ನೀಡುತ್ತ ಮಾರ್ಗದರ್ಶಕರಾಗಿ ಯಶಸ್ವಿಯಾಗಿ ಅನೇಕ ಸಮ್ಮೋಹಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅವರ ಅಸ್ಮಿತೆ.


ಇತ್ತೀಚೆಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ‘ತಾಳ್ ತರಂಗ್’ ವೀಕ್ಷಿಸಲು ಕುತೂಹಲದಿಂದ ಸೇರಿದ್ದ ಕಲಾರಸಿಕರಿಂದ ಸಭೆ ತುಂಬಿ ತುಳುಕುತ್ತಿತ್ತು. ಅಲ್ಲಿ ಎನ್ನುಂಟು- ಏನಿಲ್ಲ. ನಮ್ಮ ಸನಾತನ ಭಾರತೀಯ ಪರಂಪರೆಯ ಎಲ್ಲ ನೃತ್ಯಶೈಲಿಗಳೂ ತಮ್ಮದೇ ಆದ ಚೆಲುವಿನಿಂದ ಕಂಗೊಳಿಸಿದ ಹೃದಯಂಗಮ ದೃಶ್ಯಾವಳಿ. ಒಂದೇ ವೇದಿಕೆಯ ಮೇಲೆ ವಿವಿಧ ಕಲಾ ಪ್ರಕಾರಗಳ ರಸದೌತಣ ನೀಡುವ ಒಂದು ವಿಶಿಷ್ಟ ಪ್ರಯೋಗ ಅದಾಗಿತ್ತು. ಸೀಮಿತ ಕಾಲಾವಧಿಯಲ್ಲಿ ಎಲ್ಲ ರಸಗಂಗೆಗಳನ್ನೂ ಸಂಗಮಿಸಿ ಎರೆದ ವರ್ಣರಂಜಿತ ನೃತ್ಯಧಾರೆ ಕಣ್ಮನ ತಣಿಸಿತು.


ಭರತನಾಟ್ಯ ನೃತ್ಯಗುರು ಎಂ.ಡಿ. ಸುನಿತಾ ಇವರ ಶಿಷ್ಯರು ಶುಭಾರಂಭದಲ್ಲಿ ‘ಪುಷ್ಪಾಂಜಲಿ’ಯಲ್ಲಿ ದೇವಾನುದೇವತೆಗಳು- ಗುರು-ಹಿರಿಯರಿಗೆ ಸೊಗಸಾದ ನೃತ್ತಗಳ ಮೂಲಕ ವಿನಮ್ರ ನಮನ ಸಲ್ಲಿಸಿದರು. ಮುಂದೆ- ಶ್ಲೋಕಾಂಜಲಿ, ಆಂಡಾಳ್ ಕೌತ್ವಂ ಪ್ರಸ್ತುತವಾಯಿತು. ನಂತರ- ‘ನೃತ್ಯಾರ್ಪಣ್’ ಗುರು ವೀಣಾಭಟ್ ಶಿಷ್ಯರು ತೀನ್ ತಾಳದಲ್ಲಿ ಪುಟಾಣಿ ಮಕ್ಕಳು ಅಂದವಾಗಿ ಕಥಕ್ ನೃತ್ಯ ಪ್ರದರ್ಶನ ನೀಡಿದರು. ಮುಂದೆ ಕಣ್ಸೆಳೆದ ಕಥಕ್ ನೃತ್ಯಾವಳಿಗಳು ಓತಪ್ರೋತವಾಗಿ ವೇದಿಕೆಯ ಮೇಲೆ ಸಂಚಲನ ಸೃಷ್ಟಿಸಿದವು. ಮುಂದೆ- ದಶಾಧ್ಯಾಯದ ಸುಂದರ ಪರ್ವ ಆರಂಭವಾಯಿತು. ಕೃಷ್ಣನ ವರ್ಣರಂಜಿತ ವ್ಯಕ್ತಿತ್ವ ಅನೇಕ ಮನಮೋಹಕ ಕಥಕ್ ನೃತ್ಯಾಂಕಗಳಲ್ಲಿ ಅನಾವರಣಗೊಂಡವು.


ಮುದ್ದುಕೃಷ್ಣಣ ಮನಸೆಳೆವ ರೂಪ- ಲಾವಣ್ಯವನ್ನು ಎತ್ತಿ ಹಿಡಿದ ವೇಷಭೂಷಣದ ಬಣ್ಣನೆ- ಅವನ ತುಂಟ ಬಾಲ್ಯ ಚಿತ್ರಿತವಾಯಿತು. ಅನಂತರ ಭರತನಾಟ್ಯದಲ್ಲಿ ಶ್ರೀಕೃಷ್ಣನ ಬಾಲ್ಯದ ಮಹತ್ವದ ಘಟನೆಗಳಾದ ಪೂತನಿ ಮಗುವನ್ನು ಕೊಲ್ಲಲು ಬಂದ ಪ್ರಸಂಗ ಮತ್ತು ಮಣ್ಣು ತಿಂದ ಕೃಷ್ಣನ ಬಾಯನ್ನು ತೆಗೆಸಿದ ಯಶೋದೆಗೆ ಮೂರುಲೋಕವನ್ನು ತೋರಿಸಿ ಬೆರಗುಗೊಳಿಸಿದ ಪ್ರಸಂಗಗಳು ಮೂಡಿಬಂದವು.

ಮುಂದೆ ಮತ್ತೆ ಕಥಕ್ ನೃತ್ಯ ಶೈಲಿಯಲ್ಲಿ ಕೃಷ್ಣನ ಲೀಲಾವಿನೋದ ಮುಂದುವರೆಯಿತು. ಮೇಲೆ ಬದುವಿನ ಮೇಲೆ ತಾಯಿ ಮುಚ್ಚಿಟ್ಟಿದ್ದ ಬೆಣ್ಣೆಯನ್ನು ಬಾಲಕೃಷ್ಣ ಕದ್ದು ಸಿಕ್ಕು ಬೀಳುವ ಪ್ರಸಂಗ, ಅಣ್ಣ ಬಲರಾಮನೊಂದಿಗಿನ ಭ್ರಾತೃತ್ವ, ಕಾಳಿಂಗ ಮರ್ಧನ (ಗತಭಾವ), ಗೋವರ್ಧನ ಗಿರಿಧಾರಿ, ಯಮುನಾ ನದಿಯ ದಂಡೆಯ ಮೇಲೆ ಗೋಪಿಕೆಯರನ್ನು ಛೇಡಿಸುವುದು, ರಾಧಾ ಮಾಧವರ ಪ್ರಣಯ ಪ್ರಸಂಗವನ್ನು ಸೆರೆಹಿಡಿದ ಅಷ್ಟಪದಿ (ರುಚಿಕಾ ಭಟ್), ಹೋಳಿಯ ರಂಗು ರಂಗಿನಾಟ, ಗೋಪಿಕೆಯರೊಂದಿಗೆ ರಾಸಲೀಲೆ, ಗತಭಾವದಲ್ಲಿ ದ್ರೌಪದಿ ವಸ್ತ್ರಾಪಹರಣ- ಅಕ್ಷಯವಸ್ತ್ರ ಪ್ರಸಂಗ ತುಂಬಾ ಪರಿಣಾಮಕಾರಿಯಾಗಿ ಪ್ರದರ್ಶಿತವಾದವು.

ಭರತನಾಟ್ಯದಲ್ಲಿ ಮೂಡಿಬಂದ ‘ಜಗದೋದ್ಧಾರನ ಆಡಿಸಿದಳೆಶೋದೆ’ ಮುದನೀಡಿತು. ಕಥಕ್- ಚತುರಂಗ ಮತ್ತು ಕುಚಿಪುಡಿಯಲ್ಲಿ ಪ್ರಸ್ತುತವಾದ ‘ತರಂಗಂ’ ಮೂಲಕ ಶ್ರೀಕೃಷ್ಣನ ವೈಭವ ಮತ್ತು ಸಾರಿದ ಸಂದೇಶದ ಪ್ರಸ್ತುತಿ, ಕೃಷ್ಣನೇ ರಾಮನಾಗಿ ಅಭಿವ್ಯಕ್ತವಾದ ವಿವಿಧ ನೃತ್ಯಶೈಲಿಗಳ ಸಮಾಗಮದಲ್ಲಿ ದಶ ತರಂಗದಲ್ಲಿ ಭಕ್ತಿಮಾರ್ಗವನ್ನು ಎತ್ತಿಹಿಡಿದ ಕೃಷ್ಣನ ಮಹಿಮಾವಳಿ ಸುಮನೋಹರವಾಗಿತ್ತು.


ಅನಂತರ- ದಶಾಧ್ಯಾಯದ ವಿಶೇಷ ಅರ್ಪಣೆಗಳಲ್ಲದೆ, ಖ್ಯಾತ ವಿವಿಧ ನೃತ್ಯಶಾಲೆಗಳಿಂದಲೂ ಅನೇಕ ಆಕರ್ಷಕ ನೃತ್ಯಗಳು ಪ್ರದರ್ಶಿತವಾದವು. ಡಾ. ರಾಗಶ್ರಿ ಭಾರಧ್ವಾಜ್ ಮತ್ತು ಅವರ ತಂಡ ಭರತನಾಟ್ಯದಲ್ಲಿ ‘ಸ್ವರಾಂಜಲಿ’ – ದೇವೀ ಸ್ತುತಿಯೂ ಶಕ್ತಿಶಾಲಿಯಾದ ನೃತ್ತ ಬಂಧವಾಗಿ ಗಮನ ಸೆಳೆಯಿತು. ಗುರು ವಿ. ಅಕ್ಷರ ಭಾರಧ್ವಾಜ್ ಮತ್ತು ಅವರ ತಂಡ -ಭರತನಾಟ್ಯ (ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್)ದ ಶೈಲಿಯಲ್ಲಿ ವೃಷಭಾವತಿ ನದಿಯ ಸುತ್ತ ಹೆಣೆದಂತೆ ಪಂಚತತ್ವ- ಪರಿಸರ ಮಾಲಿನ್ಯದ ಸಂದೇಶ ಹೊತ್ತು ಅಕ್ಷರ ಅವರ ಕಲಾನೈಪುಣ್ಯದ ಉತ್ತಮ ನೃತ್ಯ ಸಂಯೋಜನೆಯಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು.

ನಂತರ- ಸಾಯಿ ಇಂಟರ್ನ್ಯಾಷನಲ್ ಸ್ಕೂಲ್- ಶ್ವೇತಾ ವೆಂಕಟೇಶ್ ಮತ್ತು ತಂಡದಿಂದ ಗಂಗಾ ಚಲನೆ ಮತ್ತು ಕಾಳಿಕಾ ಮಾತೆಯ ಕುರಿತ ಕೃತಿ ಕಥಕ್ ನಲ್ಲಿ ಪ್ರದರ್ಶಿತವಾಯಿತು. ನಂತರ- ಕಾರ್ತೀಕ್ ತಂತ್ರಿ ಮತ್ತು ತಂಡದವರಿಂದ ಸಮಕಾಲೀನ ನೃತ್ಯ (ಆಬ್ಸ್ಟ್ರಾಟಿಕ್ಸ್ ಕ್ರಿಯೇಟಿವ್ ಡ್ಯಾನ್ಸ್ ಕಂಪೆನಿ) ಅದಿ- ಅಂತ್ಯಗಳ ನಡುವಣ ಬದುಕಿನ ಜೀವನಚಕ್ರ ಕುರಿತು ಚಲನೆ ಹಾಗೂ ಅಭಿವ್ಯಕ್ತಿಯಿಂದ ಕೂಡಿದ ಸಾಂಕೇತಿಕ ಚಿತ್ರಣವನ್ನು ನೀಡಿತು. ಶ್ರೀಕಂಟೇಶ್ವರ ಸ್ಕೂಲ್ ಗುರು ಗೌರೀ ಸಾಗರ್ ಶಿಷ್ಯರು ದಶಾವತಾರ ಕುರಿತ ಭರತನಾಟ್ಯ ಪ್ರಸ್ತುತಿಪಡಿಸಿದರು. ಗುರು ಕರ್ಪಗಂ ಮತ್ತು ಶಿಷ್ಯರು- ಕುಚಿಪುಡಿ (ಎಸ್.ಬಿ.ಎಲ್.ಕೆ.ಸಿ.), ಗುರು ಸೋಮಾ ದಾಸ್ ಮತ್ತು ಶಿಷ್ಯರು – ಕಥಕ್ (ನೂಪುರ ಧ್ವನಿ ಡ್ಯಾನ್ಸ್ ಅಕಾಡೆಮಿ), ವಿ.ಶುಭಾ ನಾಗರಾಜನ್ ಮತ್ತು ವಿ. ರಾಧಿಕಾ ಮಕರಂ – ಒಡಿಸ್ಸಿ ಯುಗಳ ನೃತ್ಯ ಕಾರ್ಯಕ್ರಮಗಳು ಮನದುಂಬಿದವು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಾಯಿ ವೆಂಕಟೇಶ್- ಕರ್ನಾಟಕ ನೃತ್ಯಕಲಾ ಪರಿಷತ್ ಮತ್ತು ಲೇಖಕಿ, ನೃತ್ಯ- ನಾಟಕ ವಿಮರ್ಶಕಿ ಲಿಪಿಪ್ರಾಜ್ಞೆ ವೈ.ಕೆ. ಸಂಧ್ಯಾ ಶರ್ಮ ಭಾಗವಹಿಸಿದ್ದರು.


* ವಿಮರ್ಶಕಿ | ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ. ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
