ಮಂಗಳಾದೇವಿ : ದಾಸ ಸಾಹಿತ್ಯ ಸೇವಾ ಪ್ರತಿಷ್ಠಾನವು ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ, ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ದಿನಾಂಕ 29-07-2023ರಂದು ಖ್ಯಾತ ಗಾಯಕ ವಿನಾಯಕ ಹೆಗ್ಡೆ ಅವರಿಂದ ಹರಿದಾಸರ ಕೃತಿ ಕೀರ್ತನೆಗಳ ಗಾಯನ ಕಾರ್ಯಕ್ರಮ ನಡೆಯಿತು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಾಜಿ ಮಹಾರಾಜ್ ಉದ್ಘಾಟಿಸಿ ಮಾತನಾಡಿ, “ದಾಸಸಾಹಿತ್ಯ ಸೇವಾ ಪ್ರತಿಷ್ಠಾನವು ನಿಯಮಿತವಾಗಿ ತಿಂಗಳಿಗೊಂದರಂತೆ ನಾಡಿನ ಖ್ಯಾತ ಗಾಯಕರನ್ನು ಕರೆಸಿ ನಮ್ಮ ಆಶ್ರಮದ ಸಭಾಂಗಣದಲ್ಲಿ ಹರಿದಾಸರ ಕೃತಿಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಮಠದ ಭಕ್ತರಿಗೂ, ನಮಗೂ ಕೀರ್ತನೆಗಳನ್ನು ಆಲಿಸುವ ಅವಕಾಶ ಸಿಗುತ್ತಿದೆ. ಮುಂದೆಯೂ ಈ ಬಗೆಯ, ಕಾರ್ಯಕ್ರಮಗಳು ಮುಂದುವರೆಯಲಿ” ಎಂದರು.
ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಹಾಗೂ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ಎಸ್. ಗುರುರಾಜ್ ಸ್ವಾಗತಿಸಿ, ಪ್ರಸ್ತಾಪಿಸಿ, “ದಾಸ ಸಾಹಿತ್ಯವು ನಮ್ಮಲ್ಲಿ ಸನ್ನಡತೆ, ಸಚ್ಚಾರಿತ್ರ್ಯಗಳನ್ನು ಮೂಡಿಸುವ ಅಪೂರ್ವ, ಅತ್ಯಮೂಲ್ಯ ಸಾಹಿತ್ಯ. ಇದನ್ನು ಆಸಕ್ತರಿಗೆ ತಲುಪಿಸುವ ಸತ್ಕಾರ್ಯ ನಡೆಯುತ್ತಿದೆ.” ಎಂದರು. ಈ ಕಾರ್ಯಕ್ರಮದಲ್ಲಿ ವಿದ್ಯಾ ರಾವ್ ನಿರೂಪಿಸಿ, ಕಾತ್ಯಾಯಿನಿ ರಾವ್ ವಂದಿಸಿದರು.