ಮಂಗಳೂರು : ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನ (ರಿ.) ಇದರ ‘ದಶಮ ಸಂಭ್ರಮ’ವು ದಿನಾಂಕ 11-05-2024ರಿಂದ 13-05-2024ರವರೆಗೆ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ.
ದಿನಾಂಕ 11-05-2024ರಂದು ಬೆಳಗ್ಗೆ ಗಂಟೆ 7-15ಕ್ಕೆ ಶ್ರೀ ಅಮೃತೇಶ್ವರ ಸಾನಿಧ್ಯದಲ್ಲಿ ಗೆಜ್ಜೆ ಪೂಜೆ, ಗಂಟೆ 8-00ರಿಂದ ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದಲ್ಲಿ ಭಾಗವತಿಕೆ ತರಬೇತಿ ಪಡೆಯುತ್ತಿರುವ ಕಟೀಲು ಮೇಳದ ಪ್ರಸಿದ್ಧ ಭಾಗವತರಾದ ಶ್ರೀ ಶ್ರೀನಿವಾಸ ಬಳ್ಳಮಂಜ ಇವರ ಶಿಷ್ಯ ವೃಂದದವರಿಂದ ‘ಯಕ್ಷ ಗಾನ ವೈಭವ’ ಮತ್ತು ಗಂಟೆ 9-00ರಿಂದ ಕೃಷಿ ಮೇಳದ ಹಾಗೂ ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 12-30ರಿಂದ ಆಳ್ವಾಸ್ ವಿದ್ಯಾ ಸಂಸ್ಥೆಯ ಯಕ್ಷಗಾನ ವಿದ್ಯಾರ್ಥಿಗಳಿಂದ ‘ಹನುಮ ಒಡ್ಡೋಲಗ’, ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಿಂದ ‘ಯಕ್ಷಗಾನ ಹಾಸ್ಯ ವೈಭವ’, ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ರಂಗಪ್ರವೇಶ ಮತ್ತು ‘ಮೇದಿನಿ ನಿರ್ಮಾಣ ಮಹಿಷ ವಧೆ’ ಮತ್ತು ‘ಕದಂಬ ಕೌಶಿಕೆ’ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
ದಿನಾಂಕ 12-05-2024ರಂದು ಬೆಳಗ್ಗೆ ಗಂಟೆ 7-30ಕ್ಕೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಯ್ದ ಹವ್ಯಾಸಿ ಯಕ್ಷಕಲಾ ತಂಡಗಳ ‘ಯಕ್ಷಗಾನ ಸ್ಪರ್ಧೆ’, ರಾತ್ರಿ ಗಂಟೆ 9-30ಕ್ಕೆ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದವರಿಂದ ‘ನೃತ್ಯ ವೈಭವ’ ಪ್ರಸ್ತುತಿಗೊಳ್ಳಲಿದೆ.
ದಿನಾಂಕ 13-05-2024ರಂದು ಬೆಳಗ್ಗೆ ಗಂಟೆ 9-30ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಗಂಟೆ 12-00ರಿಂದ ಭಾರ್ಗವಿ ಉಡುಪಿ ಕಲಾ ತಂಡದಿಂದ ಸಾಂಸ್ಕೃತಿಕ ವೈಭವ, ಬಲೆ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು, ಸುನಿಲ್ ನೆಲ್ಲಿಗುಡ್ಡೆ, ಉಮೇಶ್ ಮಿಜಾರ್ ಮತ್ತು ವಿಸ್ಮಯ ವಿನಾಯಕ ತಂಡದವರಿಂದ ‘ಬಲೆ ತೆಲಿಪುಗ’, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ್ ಪೊಳಲಿ ಇವರಿಂದ ‘ಬೃಹತ್ ಗಾತ್ರದ ಕೋಳಿ ನೃತ್ಯ’, ಅಂತರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ್ ಇವರಿಂದ ‘ಜಾದೂ ಪ್ರದರ್ಶನ’, ರಾತ್ರಿ ಗಂಟೆ 7-00ರಿಂದ ಝೀ ಟಿವಿ ಖ್ಯಾತಿಯ ಶಿವಾನಿ ಕೊಪ್ಪ ಮತ್ತು ನವೀನ್ ಕೊಪ್ಪ ಹಾಗೂ ರಾಜ್ಯದ ಪ್ರಸಿದ್ಧ ಕಲಾವಿದರ ಸಮಾಗಮದೊಂದಿಗೆ ‘ಸಂಗೀತ ರಸ ಸಂಜೆ’ ಮತ್ತು ಮಂಗಳೂರಿನ ಜ್ಞಾನ ಐತಾಳ ಬಳಗದವರಿಂದ ‘ನೃತ್ಯ ವೈಭವ’ ನಡೆಯಲಿದೆ. ಇದೇ ಸಂದರ್ಭದಲ್ಲಿ ರಜತಾದ್ರಿ ಸಭಾ ಭವನದಲ್ಲಿ ಕೃಷಿ ವಿಚಾರಗೋಷ್ಠಿ, ಕೃಷಿ ಮಾಹಿತಿ ರೈತರೊಂದಿಗೆ ಸಂವಾದ ಮತ್ತು ಚರ್ಚಾಗೋಷ್ಠಿಗಳು ನಡೆಯಲಿದೆ.