ಪುತ್ತೂರು : ಪುತ್ತೂರಿನ ನಾಟ್ಯರಂಗದ ನೃತ್ಯ ಗುರುಗಳಾದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರು ದಿನಾಂಕ 04-02-2024ರಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋ ಸೇವಾ ಬಳಗದ ವತಿಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ‘ಧರ್ಮಧೇನು’ ನೃತ್ಯ ರೂಪಕ ನೀಡಿದರು. ಗೋವಿನ ಬಗ್ಗೆ ಭಾಷಣ ಮಾಡುವುದು, ಪ್ರಬಂಧ ಬರೆಯುವುದು ಸುಲಭ. ಆದರೆ ಪ್ರಯೋಗಶೀಲ ನೃತ್ಯ ಪ್ರಸ್ತುತಿಗೆ ಕಥಾವಸ್ತುವನ್ನು ಜೋಡಿಸಿಕೊಳ್ಳುವುದು ಸವಾಲೇ ಸರಿ. ಇಲ್ಲಿ ಕ್ರಿಯಾಶೀಲ ಆಲೋಚನೆ ಮತ್ತು ದುಡಿಮೆಯ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ‘ಧರ್ಮಧೇನು’ ನೃತ್ಯ ರೂಪಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಗೋ ಮಹಿಮೆಯನ್ನು ವರ್ಣಿಸುವ ಶ್ಲೋಕದೊಂದಿಗೆ ಆರಂಭವಾದ ಪ್ರಸ್ತುತಿ ಗೋಮಾತೆಯನ್ನು ಅಪಮಾನಿಸಿದರೆ ಉಂಟಾಗುವ ಕ್ಲೇಶ – ದೋಷಗಳನ್ನು ಗೋ ಸೇವೆಯಿಂದಲೇ ಮುಕ್ತವಾಗಿಸಿ ಸಂತಾನ ಭಾಗ್ಯ ಪಡೆದುಕೊಂಡ ದಿಲೀಪನ ಕಥಾ ಹಂದರವನ್ನು ಧರ್ಮಧೇನು ನೃತ್ಯ ರೂಪಕ ಹೊಂದಿತ್ತು .ಗೋ ಸೇವೆಯ ಮಹತ್ವ ಹಾಗೂ ಪಾವಿತ್ರ್ಯತೆಗೆ ‘ಧರ್ಮಧೇನು’ ನೃತ್ಯ ರೂಪಕ ಪೂರ್ವರಂಗವಾಯಿತು. ಕಾಳಿದಾಸನ ರಘುವಂಶದ ಕಥೆಯನ್ನು ಆಧರಿಸಿ ಕವಿತಾ ಅಡೂರು ಇವರ ರಚನೆಯಲ್ಲಿ ಕಥಾವಸ್ತು ಮೂಡಿ ಬಂತು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ, ಸಂಗೀತ ಧನ್ಯತಾ ವಿನಯ್, ಲಯ ವಿನ್ಯಾಸ ಹಾಗೂ ನಟುವಾಂಗದಲ್ಲಿ ಮಂಜುನಾಥ್ ಎನ್. ಪುತ್ತೂರು, ಕೊಳಲಿನಲ್ಲಿ ಕೃಷ್ಣಗೋಪಾಲ ಪುತ್ತೂರು, ಹಾಡುಗಾರಿಕೆಯಲ್ಲಿ ಸಾತ್ವಿಕ್ ಬೆಡೆಕರ್, ಮೃದಂಗದಲ್ಲಿ ಪವನ ಮಾಧವ್ ಮಸೂರು ಬೆಂಗಳೂರು, ಕೀಬೋರ್ಡ್ ನಲ್ಲಿ ಪ್ರಮತೇಶ್, ಪ್ರಸಾಧನದಲ್ಲಿ ಶಿವರಾಮ ಕಲ್ಮಡ್ಕ, ಬೆಳಕಿನ ವಿನ್ಯಾಸದಲ್ಲಿ ಪ್ರವೀಣ್ ಬಜಾಲ್ ಸಹಕರಿಸಿದರು. ವಿದುಷಿ ಮಂಜುಳ ಸುಬ್ರಹ್ಮಣ್ಯ, ವಿನಿತಾ ಶೆಟ್ಟಿ, ವೀಣಾ ಪ್ರತಾಪ ಸಿಂಹ, ರುದ್ದಿ ವಿಜಯಕುಮಾರ್ ಶೆಟ್ಟಿ, ಅವನಿ ಬೆಳ್ಳಾರೆ, ಅಭೀಕ್ಷಾ ಜಿ. ರಾವ್, ಶರ್ವೀನಾ ಶೆಟ್ಟಿ, ಕೀರ್ತನಾ ವರ್ಮ, ಶ್ರೇಯಾ ರಾವ್ ಮತ್ತು ಅವನಿ ಕಲ್ಲೂರಾಯ ಇವರನ್ನೊಳಗೊಂಡ ಕಲಾವಿದರ ತಂಡ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿತು.