ಬೆಂಗಳೂರು : ಕರ್ನಾಟಕ ಸರ್ಕಾರವು ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿದೆ. ನಿರ್ದೇಶಕರಾಗಿ ಆಯ್ಕೆಯಾದವರ ಪಟ್ಟಿಯನ್ನು 12 ಆಗಸ್ಟ್ 2024 ರಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಬಿಡುಗಡೆಗೊಳಿಸುವ ಮೂಲಕ ರಾಜ್ಯದ ರಂಗಭೂಮಿ ಚಟುವಟಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆ ನೀಡಿದ್ದಾರೆ.
ಮೈಸೂರು ರಂಗಾಯಣದ ನಿರ್ದೇಶಕರಾಗಿ ಶ್ರೀ ಸತೀಶ್ ತಿಪಟೂರು, ಧಾರವಾಡ ರಂಗಾಯಣದ ನಿರ್ದೇಶಕರಾಗಿ ಶ್ರೀ ರಾಜು ತಾಳಿಕೋಟೆ, ಶಿವಮೊಗ್ಗ ರಂಗಾಯಣದ ನಿರ್ದೇಶಕರಾಗಿ ಶ್ರೀ ಪ್ರಸನ್ನ ಡಿ ಸಾಗರ, ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿ ಡಾ. ಸುಜಾತ ಜಂಗಮ ಶೆಟ್ಟಿ, ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆಗೆ ನಿರ್ದೇಶಕರಾಗಿ ಶ್ರೀ ಮಲ್ಲಿಕಾರ್ಜುನ ಕಡಕೋಳ
ಹಾಗೂ ಯಕ್ಷರಂಗಾಯಣ ಕಾರ್ಕಳದ ನಿರ್ದೇಶಕರಾಗಿ ಶ್ರೀ ವೆಂಕಟರಮಣ ಐತಾಳ ಇವರನ್ನು ನೇಮಕ ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದ್ದು, ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ರಂಗಾಯಣಗಳ ಕಾರ್ಯ ಚಟುವಟಿಕೆಗಳನ್ನು ವೇಗಗತಿಯಲ್ಲಿ ಕೈಗೊಳ್ಳಲು ಹಾಗೂ ರಂಗಭೂಮಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದರು.
ಇದಲ್ಲದೆ ವಿವಿಧ ಅಕಾಡೆಮಿಗಳಲ್ಲಿ ಖಾಲಿ ಇದ್ದ ಸದಸ್ಯರ ನೇಮಕಾತಿಗೂ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.