ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಗೀತ ರಚನೆಕಾರ, ನಿರ್ಮಾಪಕ ಮತ್ತು ಹಿರಿಯ ನಿರ್ದೇಶಕ ಸಿ.ವಿ.ಶಿವಶಂಕರ್ ದಿನಾಂಕ : 27-06-2023ರಂದು ನಿಧನರಾಗಿದ್ದಾರೆ. ಮೃತರಿಗೆ 90 ವರ್ಷ ವಯಸ್ಸಾಗಿದ್ದು, ಪತ್ನಿ ಮತ್ತು ಪುತ್ರ ಇದ್ದಾರೆ. ಸಿ.ವಿ.ಶಿವಶಂಕರ್ (ಚಿಟ್ಟನಹಳ್ಳಿ ವೆಂಕಟಕೃಷ್ಣಭಟ್ಟ ಶಿವಶಂಕರ್) ಅವರು 1933 ಮಾರ್ಚ್ 23ರಂದು ತಿಪಟೂರಿನಲ್ಲಿ ಜನಿಸಿದರು. ಇವರ ತಾಯಿ ವೆಂಕಟಲಕ್ಷ್ಮಮ್ಮ. ತಂದೆ ರಾಮಧ್ಯಾನಿ ವೆಂಕಟ ಕೃಷ್ಣಭಟ್ಟ.
ಇವರು ರಚಿಸಿರುವ ಚಿತ್ರಗೀತೆಗಳಲ್ಲಿ ‘ಸಿರಿವಂತನಾದರೂ ಕನ್ನಡ ನಾಡಲ್ಲೇ ಇರುವೆ’, ‘’ಬೆಳೆದಿದೆ ನೋಡಾ ಬೆಂಗಳೂರು ನಗರ’, ‘ಹೋಗದಿರಿ ಸೋದರರೇ, ಹೋಗದಿರಿ ಬಂಧುಗಳೇ’ ಮುಂತಾದ ಗೀತೆಗಳನ್ನು ರಚಿಸಿ ಖ್ಯಾತಿ ಗಳಿಸಿದ್ದರು. ಚಿಕ್ಕಂದಿನಿಂದ ಸಾಹಿತ್ಯ, ನಾಟಕ, ನಟನೆಯತ್ತ ಒಲವಿದ್ದ ಶಿವಶಂಕರ್, ವಂಶಪಾರಂಪರ್ಯವಾದ ಪೌರೋಹಿತ್ಯ, ಜ್ಯೋತಿಷ್ಯ, ಶಾಸ್ತ್ರಾಧ್ಯಯನವಿರಲಿ ಪ್ರೌಢಶಿಕ್ಷಣವನ್ನೂ ಅರ್ಧದಲ್ಲೇ ಬಿಟ್ಟು ಗುಬ್ಬಿ ವೀರಣ್ಣ ನಾಟಕ ಮಂಡಲಿ, ಅಲ್ಲಿಂದ ಸುಬ್ಬಯ್ಯನಾಯ್ಡುರವರ ಕರ್ನಾಟಕ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ ಸೇರಿದರು. ಹಲವಾರು ನಾಟಕಗಳನ್ನು ಬರೆದು, ಪ್ರಕಟಿಸಿ, ನಟಿಸಿ, ಭೇಷ್ ಎನಿಸಿಕೊಂಡವರು. ಹೊರಗಡೆ ಕಲ್ಲು ತೂರಾಟವಿದ್ದರೂ, ಮದರಾಸಿನಲ್ಲಿ ಕನ್ನಡ ನಾಟಕಗಳನ್ನಾಡಿಸಿದ ಕೀರ್ತಿಯೂ ಇವರಿಗಿತ್ತು.
ನಾಟಕರಂಗದಲ್ಲಿನ ದಿಗ್ಗಜರ ಒಡನಾಟ ಮತ್ತು ಡಾ. ರಾಜ್ ಕುಮಾರ್ ಸಹಯೋಗದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತ ಸಂಭಾಷಣೆ-ಗೀತ ಸಾಹಿತ್ಯದತ್ತ ಒಲವು ಬೆಳೆಸಿಕೊಂಡರು. ತಾನೇ ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಸ್ವಪ್ರಯತ್ನದಿಂದ ಮೇಲೆ ಬಂದ ಇವರು ತಮ್ಮ ಕನ್ನಡಾಭಿಮಾನದ ಚಿತ್ರಗಳಿಂದ ಮತ್ತು ಗೀತೆಗಳಿಂದಲೇ ಜನರ ಮನವನ್ನು ಗೆದ್ದರು.
ಮಂಜುಳಾ, ದ್ವಾರಕೀಶ್, ತೂಗುದೀಪ ಶ್ರೀನಿವಾಸ್, ಕಲ್ಪನಾ ಮತ್ತು ಧೀರೇಂದ್ರ ಗೋಪಾಲ್ ರಂಥ ಹಲವು ಪ್ರತಿಭಾವಂತರನ್ನು ಮೊತ್ತ ಮೊದಲು ಬಾಲನಟರನ್ನಾಗಿಯೋ ಅಥವಾ ಪ್ರಥಮವಾಗಿಯೋ ಪೂರ್ಣಪ್ರಮಾಣದ ನಾಯಕ ನಾಯಕಿಯರಾಗಿಯೋ ತೆರೆಗೆ ತಂದ ಕೀರ್ತಿ ಇವರದು. ವಿದ್ಯಾಸಾಗರ ಎಂಬ ಹೆಸರಿನ ಮುನಿಚೌಡಪ್ಪನನ್ನು ‘ರಾಜೇಶ್’ ಆಗಿ ಪರಿಚಯಿಸಿದ್ದೂ ಇವರೇ. ಸಂಗೀತರತ್ನ ರತ್ನಂರನ್ನು ಚಿತ್ರರಂಗಕ್ಕೆ ಕೊಟ್ಟ ವ್ಯಕ್ತಿಯೂ ಇವರೇ. ಇದಲ್ಲದೆ ಗಿರಿಜಾ ಲೋಕೇಶ್, ಮಂಜುಳಾರಂಥ ನಟಿಯರಿಗೆ ನಾಟ್ಯ-ನಟನೆ ಕಲಿಸಿದ್ದಾರೆ.
ಆಕಾಶವಾಣಿಯ ‘ಕಂಪನಿಯ ಪೆಂಪು– ಇಂಪು’ ಸರಣಿಯನ್ನು ನಡೆಸಿಕೊಡುತ್ತಾ ರಂಗದ ಪರದೆಯ ಒಳಗಿನ ನಾಟಕವನ್ನು ಹಾಸ್ಯದ ಮೂಲಕ ಬಿಚ್ಚಿಟ್ಟು ಹಳ್ಳಿಹಳ್ಳಿಯಲ್ಲೂ ಜನಪ್ರಿಯರಾಗಿದ್ದರು ಶಿವಶಂಕರ್. ಇವರ ಸಾಧನೆಯನ್ನು ಗುರುತಿಸಿ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಮುಖ ನಾಟಕಗಳು : ರಾಣಿ-ರಾಜು ಬಿ.ಎ., ಆರೋಗ್ಯಪಿಶಾಚಿ, ನಿತ್ರಾಣ ಸುಂದರಿ, ಇತ್ಯಾದಿ ಪ್ರಮುಖ
ನಿರ್ದೇಶನ : ನಮ್ಮ ಊರು, ಮನೆ ಕಟ್ಟಿ ನೋಡು, ಪದವೀಧರ, ಮಹಡಿಯ ಮನೆ, ಮಹಾತಪಸ್ವಿ, ಹೊಯ್ಸಳ, ಮಹಾ ತಪಸ್ವಿ, ವೀರ ಮಹಾದೇವ, ನಮ್ಮ ಊರ ರಸಿಕರು, ಕನ್ನಡ ಕುವರ
ನಟನೆ : ಶ್ರೀಕೃಷ್ಣ ಗಾರುಡಿ, ಭಕ್ತ ಕನಕದಾಸ, ಆಶಾಸುಂದರಿ, ಸ್ಕೂಲ್ ಮಾಸ್ಟರ್, ರತ್ನಗಿರಿ ರಹಸ್ಯ, ಧರ್ಮ ವಿಜಯ, ಭಕ್ತ ವಿಜಯ, ರತ್ನ ಮಂಜರಿ, ವೀರ ಸಂಕಲ್ಪ, ಸಂತ ತುಕಾರಾಂ ಇತ್ಯಾದಿ.
ಗೀತ ಸಾಹಿತ್ಯ : ಬೆಳೆದಿದ ನೋಡಾ ಬೆಂಗಳೂರು ನಗರ, ನಾ ನೋಡಿ ನಲಿಯುವ ಕಾರವಾರ, ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ, ಹೋಗದಿರಿ ಸೋದರರೇ.., ಕನ್ನಡದಾ ರವಿ ಮೂಡಿ ಬಂದಾ.. , ನಾಡಚರಿತೆ ನೆನಪಿಸುವ ವೀರಗೀತೆಗಳು.