ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಕವನ ರಚನಾ ಕಮ್ಮಟ ಕಾರ್ಯಕ್ರಮವು ದಿನಾಂಕ 01-11-2023 ರಂದು ಮಂಗಳೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಾರಾನಾಥ “ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಕನ್ನಡವನ್ನು ವ್ಯಾಪಕವಾಗಿ ಬಳಸಿದ ಹಾಗೆ ಕನ್ನಡವನ್ನು ಉಳಿಸಲು ಸಾಧ್ಯ“ ಎಂದರು. ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ ಬಾಲಕೃಷ್ಣ ಅವರು ರಾಜ್ಯೋತ್ಸವ ಆಚರಣೆಯ ಹಿಂದೆ ಸಂಘರ್ಷದ ಇತಿಹಾಸ ಇದೆ ಎಂದು ರಾಜ್ಯೋತ್ಸವ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಪಿ ಶ್ರೀನಾಥ ಅವರು ವಹಿಸಿಕೊಂಡಿದ್ದರು. ಲೇಖಕಿ ಅಕ್ಷತಾ ರಾಜ್ ಪೆರ್ಲ ವಿದ್ಯಾರ್ಥಿಗಳಿಗೆ ಕವನ ರಚನಾ ಕಮ್ಮಟವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜೇಶ್ವರಿ ಎಂ ಅತಿಥಿಗಳನ್ನು ಸ್ವಾಗತಿಸಿ, ಕಾಲೇಜಿನ ಪ್ರಾಧ್ಯಾಪಕ ಪುಷ್ಪರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು.