ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ 18ನೇ ಅಧ್ಯಕ್ಷರಾಗಿ ಅಪಾರ ಸೇವೆಯನ್ನು ಸಲ್ಲಿಸಿದ ಹಾಗೂ ಜಾನಪದ ಸಾಹಿತಿಯಾಗಿ, ಸಂಘಟಕರಾಗಿ, ಸಾರ್ವಜನಿಕ ಸೇವಾಗ್ರೇಸರರೂ ಆಗಿರುವ ನಾಡೋಜ ಡಾ. ಗೊ.ರು. ಚನ್ನಬಸಪ್ಪನವರ 95ನೆಯ ಜನ್ಮದಿನದ ಹಿನ್ನೆಲೆಯಲ್ಲಿ ದಿನಾಂಕ 18-05-2023ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಶ್ರೀಯುತರಿಗೆ ಶುಭಾಶಯಗಳನ್ನು ಸಲ್ಲಿಸಿ ಗೌರವಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಇರುವ ಡಾ. ಗೊ.ರು.ಚನ್ನಬಸಪ್ಪ ಅವರ ಮನೆಗೆ ತೆರಳಿ ಜನ್ಮದಿನದ ಶುಭಾಶಯಗಳನ್ನು ಹೇಳುವುದರೊಂದಿಗೆ, ಗೊರುಚ ಅವರು ನೂರುಕಾಲ ಆರೋಗ್ಯವಂತರಾಗಿ ಬಾಳಲಿ ಎಂದು ಹಾರೈಸಿದ್ದರು. ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಅವರ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಸದಾ ದೊರಕುತ್ತಿರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಡಾ. ಗೊ.ರು.ಚನ್ನಬಸಪ್ಪನವರು 1992ರಿಂದ 1995ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ 18ನೆಯ ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದವರು. ಕೊಪ್ಪಳ (1993), ಮಂಡ್ಯ (1994), ಮುಧೋಳಗಳಲ್ಲಿ (1995) 62, 63, 64ನೇ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ಇವರ ಅವಧಿಯಲ್ಲಿ ಪರಿಷತ್ತು ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.
ಕೇಂದ್ರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವರ್ಷಾದ್ಯಂತ ಕಾರ್ಯಕ್ರಮಗಳನ್ನು ನಡೆಯಲು ದತ್ತಿನಿಧಿಗಳ ಅಗತ್ಯ ಎಂದು ಅರಿತ ಗೊರುಚ ಅವರು ದತ್ತಿಯ ಮೂಲನಿಧಿಯನ್ನು ಬಳಸದೆ ಬಡ್ಡಿಯನ್ನು ಬಳಸಿಯೇ ಪ್ರತಿವರ್ಷದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪರಿಷತ್ತು ಸ್ವಾವಲಂಭಿ ಆಗಬಹುದು ಎಂದು ಮನಗಂಡು, ದತ್ತಿ ನಿಧಿಯ ಸಂಗ್ರಹಕ್ಕೆ ಆದ್ಯತೆ ನೀಡಿ ಪರಿಷತ್ತಿನಲ್ಲಿ ದಾಖಲೆ ಪ್ರಮಾಣದಲ್ಲಿ ದತ್ತಿನಿಧಿಗಳನ್ನು ಸಂಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ವಾವಲಂಬನೆಯ ದಿಕ್ಕಿನಡೆಗೆ ಸಾಗಿಸುವಲ್ಲಿ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದರು. ಇಂತಹ ಮಾದರಿ ಅಧ್ಯಕ್ಷರ ಆಶೀರ್ವಾದ ಮತ್ತು ಮಾರ್ಗದರ್ಶನ ಸದಾ ಪರಿಷತ್ತಿಗೆ ಇರಬೇಕು ಎಂದು ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.
ಸಾಹಿತ್ಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದ ನಾಡೋಜ ಡಾ. ಗೊ.ರು. ಚನ್ನಬಸಪ್ಪನವರು ಗಾಂಧೀ ಗ್ರಾಮದಲ್ಲಿ ಸಮಾಜ ಶಿಕ್ಷಣವನ್ನು ಪಡೆದು, ಭೂದಾನ ಚಳವಳಿ, ವಯಸ್ಕರ ಶಿಕ್ಷಣ, ಸೇವಾದಳಗಳಂತಹ ಸೇವಾ ಕ್ಷೇತ್ರದ ಮುಖ್ಯವಾಹಿನಿಯಲ್ಲಿ ಕೆಲಸ ಮಾಡುವುದರ ಜೊತೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಗೆ ಹೆಡ್ ಕ್ವಾರ್ಟರ್ಸ್ ಕಮೀಷನರ್ ಆಗಿ ಕೂಡ ಸೇವೆಯನ್ನು ಸಲ್ಲಿಸಿದ್ದರು. ಇವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೂಡ ದೀರ್ಘಕಾಲದ ಸೇವೆ ಸಲ್ಲಿಸಿದ್ದರು. ಇವರು ಪತ್ರಿಕಾರಂಗದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು, ʻಜಾನಪದ ಜಗತ್ತುʼ ʻಪಂಚಾಯತ್ ರಾಜ್ಯʼ, ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆʼ ಸೇರಿದಂತೆ ಮೊದಲಾದ ಪ್ರಮುಖ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಬೆಳಕನ್ನು ನೀಡಿದ್ದರು. ಇಂತಹ ಬಹುಮುಖಿ ವ್ಯಕ್ತಿತ್ವದ ಗೊರುಚ ಅವರ ಹಿರಿದಾದ ಅನುಭವಗಳ ಲಾಭ ಸದಾ ಕನ್ನಡಿಗರಿಗೆ ಸಿಗುವಂತಾಗಬೇಕು ಎಂದು ನಾಡೋಜ ಡಾ. ಮಹೇಶ ಜೋಶಿಯವರು ಆಶಿಸಿದರು.
1985ರಲ್ಲಿ ಬೀದರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಾಧ್ಯಕ್ಷರಾದ ಡಾ. ಹಾ.ಮಾ.ನಾಯಕರು ಪರಿಷತ್ತಿನ ಆರ್ಥಿಕ ಪರಸ್ಥಿತಿ ಸುಧಾರಿಸಲು ʻಒಬ್ಬ ಕನ್ನಡಿಗ – ಒಂದು ರೂಪಾಯಿʼ ಎಂಬ ʼಅಮೃತ ನಿಧಿʼ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಇದಕ್ಕೆ ಅನುವಾಗುವಂತೆ ಗೊರುಚ ಅವರು ಪರಿಷತ್ತಿನಲ್ಲಿ ʻಅಮೃತನಿಧಿ ಚೀಟಿʼಗಳನ್ನು ಮುದ್ರಿಸಿ ಮಾರಾಟಮಾಡಿ 25 ಲಕ್ಷ ರೂ.ಗಳಷ್ಟು ಅಮೃತ ನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂಡವಾಳವನ್ನಾಗಿಸಿದ್ದರು. ಪುಸ್ತಕ ಪ್ರಾಧಿಕಾರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳಿಗೆ ಪರಿಷತ್ತಿನ ಭವನದಲ್ಲಿ ಜಾಗವನ್ನು ಬಾಡಿಗೆಗೆ ಕೊಟ್ಟು ಪರಿಷತ್ತಿಗೆ ಮಾಸಿಕ ಆದಾಯ ಹೆಚ್ಚುವಂತೆ ಮಾಡಿದ ಗೊರುಚ ಅವರ ದೂರದರ್ಶಿತ್ವ ನಮಗೆಲ್ಲಾ ಮಾರ್ಗದರ್ಶಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ ರಾಮಲಿಂಗ ಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಮ್. ಪಟೇಲ ಪಾಂಡು ಅವರು ಉಪಸ್ಥಿತರಿದ್ದರು.
- ಶ್ರೀನಾಥ್ ಜೆ., ಮಾಧ್ಯಮ ಸಲಹೆಗಾರರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು