ಕಾಸರಗೋಡು : ಗಡಿನಾಡ ಭೀಮಕವಿ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಿನಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯು ಕೊಡಮಾಡುವ ಎರಡನೆಯ ವರ್ಷದ ಪ್ರತಿಷ್ಠಿತ ನಾಡೋಜ ಕಯ್ಯಾರ ಕಿಞಣ್ಣ ರೈ ಪ್ರಶಸ್ತಿಯು ನಿವೃತ್ತ ಕನ್ನಡ ಪ್ರಾಧ್ಯಾಪಿಕೆ, ಹಿರಿಯ ಲೇಖಕಿ, ಬಹುಶ್ರುತ ವಿದ್ವಾoಸೆ, ಸಂಶೋಧಕಿ ಡಾ. ಪ್ರಮೀಳಾ ಮಾಧವ್ ಅವರಿಗೆ ದೊರಕಿದೆ.
ಕರ್ನಾಟಕ ಸರಕಾರದ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಾಗೂ ಮಂಗಳೂರಿನ ಮಂಜುನಾಥ ಎಜುಕೇಷನ್ ಟ್ರಸ್ಟ್ ಇವುಗಳ ಸಹಕಾರದೊಂದಿಗೆ ನಾಡೋಜ ಕವಿ ಕಯ್ಯಾರರ 108ನೇ ಜನ್ಮದಿನದ ಅಂಗವಾಗಿ ಅವರ ಹುಟ್ಟೂರಾದ ಕಾಸರಗೋಡಿನ ಕಯ್ಯಾರಿನಲ್ಲಿರುವ ಶ್ರೀ ರಾಮಕೃಷ್ಣ ಕಿ.ಪ್ರಾ. ಶಾಲೆ ಆವರಣದಲ್ಲಿ 08-06-2023 ರಂದು ಕಯ್ಯಾರ ಜನ್ಮದಿನಾಚರಣೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ಜರಗಿತು.
ಸಮಾರಂಭದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ ಹಿರೇಮಠ್ ಅವರು ಪ್ರಶಸ್ತಿ ವಿತರಿಸಿ. ಬಳಿಕ ಮಾತನಾಡಿದ ಅವರು ಹಿರಿಯ ಚೇತನ ಕಯ್ಯಾರರು ಮಹಾಕವಿಯಾಗಿ, ಸಾಹಿತಿಯಾಗಿ, ಬಹುಶ್ರುತ ವಿದ್ವಾಂಸರಾಗಿ ಜಗದೆತ್ತರಕ್ಕೆ ಬೆಳೆದವರು. ಅಲ್ಲದೆ ರಾಷ್ಟ್ರ ಪ್ರಶಸ್ತಿ ವಿಜೇತ ಆದರ್ಶ ಶಿಕ್ಷಕರಾಗಿ, ಧೀರ ಸ್ವಾತಂತ್ರ್ಯ ಯೋಧ, ಕನ್ನಡ ಹೋರಾಟಗಾರ, ಕಾಸರಗೋಡು ವಿಲಿನೀಕರಣ ಹೋರಾಟ ಸಮಿತಿಯ ನಾಯಕ, ಸಮಾಜ ಸೇವಕ, ಮಾದರಿ ಕೃಷಿಕ, ಪಂಚಾಯತಿನ ಆಡಳಿತ ಸಾರಥಿ, ಶ್ರೇಷ್ಠ ವಾಗ್ಮಿಗಳಾಗಿ ಬಹುರೂಪಿ ವ್ಯಕ್ತಿತ್ವಗಳಿಂದ ಶೋಭಿಸಿದವರು. ಅಂತಾ ಮಹಾನ್ ವ್ಯಕ್ತಿಯ ಹೆಸರಿನ ಪ್ರತಿಷ್ಠಿತ ಪ್ರಶಸ್ತಿಯು ಅದೇ ರೀತಿ ಬಹುರೂಪಿ ವ್ಯಕ್ತಿತ್ವದ ಬರಹಗಾರ್ತಿ, ಶಿಕ್ಷಣ ತಜ್ಞೆಗೆ ದೊರಕಿರುವುದು ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಏರಿಸಿದೆಯೆಂದು ಶ್ಲಾಘಿಸಿದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸಿದ್ದರು . ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ನಿರ್ದೇಶಕ ರಾಜೇಶ್ ಜಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಹಿರಿಯ ಸಾಹಿತಿ, ಚಿಂತಕ ಪ್ರೊ. ಕೆ.ಇ. ರಾಧಾಕೃಷ್ಣ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ್, ಎ.ಆರ್. ಸುಬ್ಬಯ್ಯಕಟ್ಟೆ, ಶಿವರಾಮ ಕಾಸರಗೋಡು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಪ್ರಶಸ್ತಿಗೆ ಉತ್ತರಿಸಿದ ಡಾ. ಪ್ರಮೀಳಾ ಮಾಧವ್ ಅವರು ಅನೇಕ ಪುರಸ್ಕಾರಗಳು ತನಗೆ ದೊರೆತಿದ್ದರೂ ನಾಡೋಜ ಕವಿ ಕಯ್ಯಾರರ ಹೆಸರಿನ ಪ್ರಶಸ್ತಿ ಲಭಿಸಿರುವುದು ಅತೀವ ಸಂತೋಷವನ್ನುಂಟು ಮಾಡಿದೆ ಎಂದರು. ಲೇಖಕ, ಪತ್ರಕರ್ತ ರವಿ ನಾಯ್ಕಾಪು ಅವರು ಪ್ರಶಸ್ತಿ ವಿಜೇತರ ಪರಿಚಯ ಮಾಡಿದರು. ಮಂಜುನಾಥ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಸ್ವಾಗತಿಸಿ, ಝೆಡ್. ಎ. ಕಯ್ಯಾರ್ ವಂದಿಸಿದರು.
ಕಯ್ಯಾರ ಜನ್ಮದಿನಾಚರಣೆ ಅಂಗವಾಗಿ ಬಳಿಕ ಬಹುಭಾಷಾ ಕವಿಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.