ಬೆಂಗಳೂರು : ಸಾಂಸ್ಕೃತಿಕ ಸಂಘಟನೆಯಾದ ರಂಗಚಂದಿರ (ರಿ.) ಆಯೋಜಿಸಿರುವ ರಂಗಕರ್ಮಿ, ರಂಗ ನಿರ್ದೇಶಕರಾದ ದಿವಂಗತ ಪ್ರೊ. ಸಿ.ಜಿ.ಕೆ.ಯವರ 74ನೇ ಜನ್ಮದಿನದ ಸವಿನೆನಪಿನ ಅಂಗವಾಗಿ ‘ಸಿ.ಜಿ.ಕೆ. ಎಂಬ ಸೂಜಿಗಲ್ಲು’ ಕಾರ್ಯಕ್ರಮವು ದಿನಾಂಕ 27-06-2024ರಂದು ಸಂಜೆ ಗಂಟೆ 5-30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ರಂಗಮಂದಿರದಲ್ಲಿ ನಡೆಯಲಿದೆ. ನಾಡೋಜ ಡಾ. ಸಿದ್ದಲಿಂಗಯ್ಯನವರು ರಚಿಸಿರುವ, ಸಿ.ಜಿ.ಕೆ.ಯವರ ನಿರ್ದೇಶನದ ‘ಪಂಚಮ’ ನಾಟಕ ಪ್ರದರ್ಶನ ಮತ್ತು ರಂಗ ಗೌರವ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಂತಕರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯನವರು ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ. ಎಲ್.ಎನ್. ಮುಕುಂದರಾಜ್, ಶ್ರೀ ಕೆ.ವಿ. ನಾಗರಾಜಮೂರ್ತಿ, ಶ್ರೀ ಮಾವಳ್ಳಿ ಶಂಕರ್, ಶ್ರೀ ಎಂ. ಪ್ರಕಾಶ್ ಮೂರ್ತಿ, ಡಾ. ಎ.ಆರ್. ಗೋವಿಂದ ಸ್ವಾಮಿ, ಶ್ರೀ ಮಂಜುನಾಥ ಅದ್ದೆ, ಶ್ರೀಮತಿ ಜಯಲಕ್ಷ್ಮಿ ಸಿ.ಜಿ.ಕೆ. ಅವರು ಭಾಗವಹಿಸಲಿದ್ದಾರೆ. ಸಿ.ಜಿ.ಕೆ. ಯವರ ಹುಟ್ಟುಹಬ್ಬದ ಅಂಗವಾಗಿ ನಾಟಕಕಾರರಾದ ಡಾಕ್ಟರ್ ಕೆ.ವೈ. ನಾರಾಯಣಸ್ವಾಮಿ, ರಂಗ ಸಂಘಟಕರಾದ ಶ್ರೀ ರಾಮದಾಸ್ ಚಳ್ಳಕೆರೆ ಮತ್ತು ಕಥೆಗಾರರಾದ ಶ್ರೀ ಕನಕರಾಜ್ ಆರನಕಟ್ಟೆಯವರಿಗೆ ‘ರಂಗ ಗೌರವ 2024’ ನೀಡಿ ಗೌರವಿಸಲಾಗುವುದು.