ನವದೆಹಲಿ : ದೆಹಲಿ ಕರ್ನಾಟಕ ಸಂಘ (ರಿ.) ಇದರ ವತಿಯಿಂದ ‘ಅಭಿನಂದನಾ ಸಮಾರಂಭ’ವನ್ನು ದಿನಾಂಕ 01 ಆಗಸ್ಟ್ 2024ರಂದು ನವದೆಹಲಿಯ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸಭಾ ಕಾರ್ಯಕ್ರಮ ಬಳಿಕ ಲಾವಣ್ಯ (ರಿ.) ಬೈಂದೂರು ಇವರು ಶ್ರೀ ರಾಜೇಂದ್ರ ಕಾರಂತ ಇವರ ರಚನೆ ಮತ್ತು ನಿರ್ದೇಶನದಲ್ಲಿ ‘ನಾಯಿ ಕಳೆದಿದೆ’ ಎಂಬ ನಾಟಕ ಪ್ರಸ್ತುತ ಪಡಿಸಲಿದ್ದಾರೆ.
ನಾಟಕ : ‘ನಾಯಿ ಕಳೆದಿದೆ’
ಬೆಂಗಳೂರಿನಲ್ಲಿದ್ದುಕೊಂಡೇ ಕಾರ್ಯದೊತ್ತಡದ ನೆಪ ನೀಡಿ ಪ್ರತ್ಯೇಕವಾಗಿ ವಾಸಿಸುವ, ತಂದೆ-ತಾಯಿಯರ ಭಾವನೆಗಳನ್ನು ಅರ್ಥಮಾಡಿಕೊಳ್ಳಲಾಗದ, ವಾರಕ್ಕೊಮ್ಮೆ ಮನೆಗೆ ಬಂದಾಗಲೂ ಲ್ಯಾಪ್‌ಟಾಪ್, ಮೊಬೈಲ್‌ನಲ್ಲಿ ಮುಳುಗುವ ಮಕ್ಕಳು, ಬಾಳಿನ ಇಳಿ ಹೊತ್ತಿನಲ್ಲಿರುವ ವೃದ್ಧ ತಂದೆ-ತಾಯಿಯರಲ್ಲಿ ಉಂಟು ಮಾಡುವ ತಲ್ಲಣಗಳು ವೀಕ್ಷಕರ ಮನ ಕರಗುವಂತೆ ಮಾಡುತ್ತವೆ. ಅಮೇರಿಕಾದ ಭವ್ಯ ಬದುಕಿನ ಆಸೆ ಹೊತ್ತು ಅಲ್ಲಿಗೆ ತೆರಳಿದ ಮಗ, ಸೊಸೆ ವೃದ್ಯಾಪ್ಯದಲ್ಲಿ ಆಸರೆಯಾಗಲಿಲ್ಲವಲ್ಲ ಎಂಬ ವೇದನೆ ಒಂದೆಡೆಯಾದರೆ, ಇನ್ನೊಂದೆಡೆ ಅವರು ಬಿಟ್ಟು ಹೋದ ನೆಮ್ಮದಿಯ ಬದುಕಿಗೆ ಮುಳ್ಳಾಗಿ ಕಾಡುವ ನಾಯಿ, ನಾಯಿಯ ಬೊಗಳುವಿಕೆ ವೃದ್ಧರ ಬದುಕನ್ನು ನರಕ ಸದೃಶವಾಗಿಸುತ್ತದೆ. ಫೋನಿನಲ್ಲೂ ತಮಗಿಂತ ನಾಯಿ ಕುರಿತಾಗಿ ತೋರುವ ಕಾಳಜಿ, ಕೇಳುವ ಪ್ರಶ್ನೆಗಳು ಅವರ ಕನಸುಗಳನ್ನು ನುಚ್ಚುನೂರಾಗಿಸುತ್ತವೆ.