ಬೆಂಗಳೂರು : ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದಲ್ಲಿ ದಿನಾಂಕ 09 ಡಿಸೆಂಬರ್ 2025ರಂದು ಕಲಾಗ್ರಾಮ ಸಮುಚ್ಚಯ ಭವನ ಮಲ್ಲತಹಳ್ಳಿಯಲ್ಲಿ ವಿಜಯನಗರ ಬಿಂಬ ತಂಡದವರು ‘ಅನೂಹ್ಯ’ ನಾಟಕವನ್ನು ಪ್ರದರ್ಶಿಸಿದರು.
‘ಅನೂಹ್ಯ’ ಇದೊಂದು ಊಹೆಗೂ ನಿಲುಕದ್ದು. ಕನ್ನಡದ ಭಾಷೆಯಲ್ಲಿ ಈ ಪದವು ಬಳಕೆಯಲ್ಲಿರುವುದು ಅಪರೂಪ. ಬರಹದಲ್ಲಿಯೂ ಕೂಡ ಬಳಸುವುದು ವಿರಳ. ಬದುಕಿನ ಬಣ್ಣಗಳ ಮನಸ್ಸು, ಅರಿವುಗಳ ಡೋಲಾಯಮಾನ, ಎಲ್ಲರೂ ನಿರಂತರವಾಗಿ ಅನಂತ ಕತ್ತಲೆಯಲ್ಲಿ ಲೀನವಾಗುವ ಮುನ್ನ ಬಂದು ಹೋಗುವ ತಾಣದಲ್ಲಿ ಎಲ್ಲರೂ ಸತ್ತಿರುವೆವೆಂಬ ಭ್ರಮೆಯಲ್ಲಿ, ತಾವಿರುವ ಜಾಗವು ಸ್ವರ್ಗವೋ ನರಕವೋ ಎಂದು ತಿಳಿಯದೆ, ಸತ್ತ ಮೇಲೂ ಬದುಕುವುದು ಸತ್ತ ಹಾಗೆ ಬದುಕುವುದು ಸಾಯೋತನಕ ಬದುಕುವುದು ಬತ್ತಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡು, ಸಮಾಜದ ವಾಸ್ತವವನ್ನು ಕಠೋರ ಸತ್ಯವನ್ನು ತಿಳಿಹಾಸ್ಯದ ಮೂಲಕ ಬಿಂಬಿಸುವ ನಾಟಕವೇ ಈ ‘ಅನೂಹ್ಯ’.
ಅಲ್ಲಲ್ಲಿ ತಮಾಷೆಯ ಸಂಭಾಷಣೆಗಳು ಪ್ರೇಕ್ಷಕರಿಗೆ ಮುದ ನೀಡುತ್ತವೆ – ಗರುಡ ಪುರಾಣದ ಯಮ ಆಗಿರಬಹುದೇ ಆ ಯಮ್ಮ, ಬಸ್ಸನ್ನೇನೋ ಉಚಿತವಾಗಿ ಬಿಟ್ರು, ಆದರೆ ಬಸ್ ಸ್ಟಾಪ್ ನಲ್ಲಿ ಬಸ್ಸೇ ನಿಲ್ಲೋದಿಲ್ಲ, ಬ್ಯಾಟ್ ಇಲ್ಲದೆ ಸಿಕ್ಸ್ ಹೊಡೆಯೋಕ್ಕಾಗುತ್ತಾ…. ಹೀಗೆ ನಾಟಕದುದ್ದಕ್ಕೂ ಪಂಚ್ ಡೈಲಾಗುಗಳ ಸುರಿಮಳೆ.
ಹಿಂದೂ ಮುಸ್ಲಿಂ ಕ್ರೈಸ್ತರ ಭಾವೈಕ್ಯತೆಯಲ್ಲಿನ ಭಿನ್ನ ಸ್ವರೂಪ, ಕಾರ್ಪೊರೇಟ್ ಸಿ.ಇ.ಓ.ಗಳ ಅಧಿಕಾರದ ದರ್ಪ, ರಾಜಕಾರಣಿಗಳ ಮತ ಬ್ಯಾಂಕ್, ಪಾರ್ಟಿ ಕೊಟ್ಟರೆ ಹೊಗಳಿ ಬರೆಯುವ ಪತ್ರಕರ್ತರು, ಜಿಹಾದಿಗಳ ಮನದ ಮಂಥನಗಳು, ಗಂಡ ಹೆಂಡತಿಯ ಮನೋಸ್ಥಿತಿಗಳು, ಪ್ರೇಮಿಗಳ ಬಣ್ಣನೆಯ ಮಾತುಗಳು, ಕವಿಗಳ ಪ್ರಾಸಭದ್ಧ ಪ್ರಲಾಪ, ಕೆಲಸಗಾರರ ಪಲಾಯನತನ, ವಿದ್ಯಾರ್ಥಿಗಳ ಆತುರದ ನಿರ್ಧಾರ… ಹೀಗೆ ಜೀವನದ ಕಟು ಸತ್ಯಗಳನ್ನು ಈ ನಾಟಕದ ಮೂಲಕ ನಿರ್ದೇಶಕರು ಹೇಳ ಹೊರಟಿರುವುದು ಸಮಾಜಕ್ಕೆ ಹಿಡಿದಿರುವ ಕೈಗನ್ನಡಿ.
ಸಮರ್ಥವಾದ ನಿರ್ದೇಶನ, ನಾಟಕದ ರಚನೆ, ವಿನ್ಯಾಸದಲ್ಲಿ ಡಾ. ಎಸ್.ವಿ. ಕಶ್ಯಪ್ ಪ್ರಥಮ ಸ್ಥಾನದಲ್ಲಿ ನಿಲ್ಲುತ್ತಾರೆ. ಸಹ ನಿರ್ದೇಶನದಲ್ಲಿ ಡಾ. ಬೃಂದಾರವರ ಶ್ರಮ ಗುರುತಿಸುವಂತಹದು, ಜೊತೆಗೆ ಕೆಲಸದಾಕೆಯ ಪಾತ್ರದಲ್ಲೂ ಮಿಂಚಿದ್ದಾರೆ. ರಾಘವೇಂದ್ರ ಬಿಜಾಡಿಯವರಿಂದ ಸೃಷ್ಯಾವ್ಯ ಮಧುರವಾದ ಸಂಗೀತ ಸಂಯೋಜನೆ ಪ್ರೇಕ್ಷಕನ ಕಿವಿಯಲ್ಲಿ ಗುಂಗಿಡುತ್ತವೆ. ನೃತ್ಯ ಸಂಯೋಜನೆಯಲ್ಲಿ ಡಾ. ಸುಷ್ಮಾ ಸನ್ನಿವೇಶಗಳಿಗೆ ತಕ್ಕಂತೆ ಪಾತ್ರಗಳ ಚಲನವಲನಗಳನ್ನು ವೈಭವೀಕರಿಸಿದ್ದಾರೆ. ರಂಗ ಪರಿಕರಗಳ, ರಂಗ ಸಜ್ಜಿಕೆಯಲ್ಲಿ ವಿಶ್ವನಾಥ್ ಮಂಡಿ ನಾಟಕದ ಕಳೆ ಹೆಚ್ಚಿಸಿದ್ದಾರೆ. ಪಾತ್ರಗಳಿಗೆ ತಕ್ಕ ವಸ್ತ್ರಾಲಂಕಾರದಲ್ಲಿ ಶೋಭ ವೆಂಕಟೇಶ್ ರವರು ಪ್ರೇಕ್ಷಕರ ಕಣ್ಣ ರಂಜಿಸಿದ್ದಾರೆ. ಬೆಳಕಿನ ನಿರ್ವಹಣೆಯಲ್ಲಿ ದರ್ಶನ್ ಎಂ. ಕಿನ್ನರ ಲೋಕವನ್ನೇ ಸೃಷ್ಟಿಸಿದ್ದಾರೆ. ಕೇಶಾಲಂಕಾರದಲ್ಲಿ ಸಾನ್ವಿ ಪ್ರತಿಪಾತ್ರಗಳನ್ನು ಮುದ್ದಾಗಿ ಕಾಣುವಂತೆ ವಿನ್ಯಾಸಗೊಳಿಸಿದ್ದಾರೆ.
ರಂಗಭವನದಲ್ಲಿ ತುಂಬಿದ ಪ್ರೇಕ್ಷಕರನ್ನು ನಾಟಕಕ್ಕೆ ಆಚಾರ್ ಸ್ವಾಗತಿಸಿದರು. ನಾಟಕದ ಅಂತಿಮದಲ್ಲಿ ನಿರ್ದೇಶಕರಿಗೆ ನಾಟಕ ಅಕಾಡೆಮಿ ಸದಸ್ಯರಾದ ಜಗದೀಶ್ ಜಾಲ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನಾಟಕ ಬೆಂಗ್ಳೂರ್ ಪರವಾಗಿ ಸಹಯೋಗ ನೀಡಿರುವ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಸಹಕಾರ ನೀಡಿರುವ ಬಹುರೂಪಿ ಪ್ರಕಾಶನಕ್ಕೆ ಆಚಾರ್ ವಂದನೆ ಸಲ್ಲಿಸಿದರು.
ಎಂ.ಬಿ. ಆಚಾರ್
9845622291
