ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ರಂಗವಾಹಿನಿ (ರಿ.) ಚಾಮರಾಜನಗರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ದಿನಾಂಕ 27 ಮಾರ್ಚ್ 2025ರಂದು ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ‘ವಿಶ್ವ ರಂಗಭೂಮಿ ದಿನಾಚರಣೆ’ಯ ಅಂಗವಾಗಿ ಏರ್ಪಡಿಸಿದ್ದ ‘ಅನ್ನ’ ಚಲನಚಿತ್ರದ ಕಥೆಗಾರರು ಹಾಗೂ ‘ಬೆಲ್ಲದ ದೋಣಿ’ ನಾಟಕ ಕೃತಿಯ ಕರ್ತೃಗಳಾದ ಹನೂರು ಚೆನ್ನಪ್ಪನವರ ಸ್ವರಚಿತ ನಾಟಕ ಅಮೋಘವಾಗಿ ಮೂಡಿಬಂದಿತು.
‘ಬೆಲ್ಲದ ದೋಣಿ’ ನಾಟಕ ಬಡ ಮಧ್ಯಮ ವರ್ಗದ ಶೋಷಿತ ಕುಟುಂಬವು ಸಾಲದ ಸುಳಿಯಲ್ಲಿ ಸಿಲುಕಿ ಹೇಗೆ ಸಾಲದ ಒತ್ತಡದಿಂದ ಹೊರಬರಲಾಗದೆ ತಡಬಡಿಸುತ್ತದೆ ಎಂಬುದು ಮನಮುಟ್ಟುವಂತೆ ಕಟ್ಟಿಕೊಡುತ್ತದೆ. ಸಮಾಜದಲ್ಲಿ ಶೋಷಿತರು ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರೂ ಅವರನ್ನು ಜಾತಿಯ ಸಂಕುಚಿತ ಮನೋಭಾವದಿಂದ ನೋಡುವ ಪರಿ ಬದಲಾಗುವುದಿಲ್ಲ ಎಂಬುದನ್ನು ಕುಟುಂಬದ ಯಜಮಾನ ತಾನು ಎಷ್ಟೇ ಬಡ್ಡಿಗೆ ಸಾಲ ಮಾಡಿಕೊಂಡಿದ್ದರೂ ಶಿವಣ್ಣ ಎಂಬ ವ್ಯಕ್ತಿಯಿಂದ ಐದು ಸಾವಿರ ಬಡ್ಡಿಗೆ ಸಾಲ ಮಾಡಿ ಅಯ್ಯಪ್ಪನ ಮಾಲೆ ಧರಿಸಿಕೊಂಡು ಭಯ ಭಕ್ತಿಯಿಂದ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೋಗುವ ಸಿದ್ದತೆ ಮಾಡಿಕೊಂಡಿರುತ್ತಾನೆ. ಸದಾ ಗಂಡ ಮತ್ತು ಮಗನನ್ನು ಬಯ್ಯುವ ಅಯ್ಯಪ್ಪ ಮಾಲೆಧಾರಿಯ ಹೆಂಡತಿ ತಾನು ಶ್ರಮಪಟ್ಟು ದುಡಿದು ಕೂಡಿಟ್ಟಿದ್ದ ಹುಂಡಿಯ ದುಡ್ಡು 7773 ರೂಗಳನ್ನು ತನ್ನ ಪತಿಯು ಎಲ್ಲಾ ದುಶ್ಚಟಗಳಿಗೆ ಕಡಿವಾಣ ಹಾಕಿ ಅಯ್ಯಪ್ಪ ಮಾಲೆ ಧರಿಸಿಕೊಂಡಿದ್ದಾರೆ ಎಂದು ತಿಳಿದು 7773 ರೂಗಳನ್ನು ತನ್ನ ಪತಿಗೆ ನೀಡುತ್ತಾಳೆ. ಆದರೆ ಈಕೆಯ ಮಗ ತನ್ನ ತಂದೆಯ ಅವತಾರದ ಬಗ್ಗೆ ಚಕಾರ ಎತ್ತಿ ಇದು ನಕಲಿ ಆಟ ಸಾಲದವರು ಮನೆ ಹತ್ತಿರ ಬರದಿರಲಿ ಎಂಬ ಉದ್ದೇಶದಿಂದ ಅಪ್ಪ ಮಾಲೆಧರಿಸಿದ್ದಾನೆ ಎಂದಾಗ ತಾಯಿ ತನ್ನ ಮಗನನ್ನು ಸಿಕ್ಕಾಪಟ್ಟೆ ಬೈದು ಗಂಡನ ಪರ ನಿಲ್ಲುತ್ತಾಳೆ. ಇಲ್ಲಿ ಲೇಖಕರು ಆಕೆಯು ಎಷ್ಟು ದೈವಭಕ್ತಳು ಹಾಗೇಯೇ ಎಷ್ಟು ಶ್ರಮಜೀವಿ ಎಂಬುದನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಆದರೆ ಮನೆಯ ಯಜಮಾನ ಆಸೆ ಸಾಲದ ಒತ್ತಡದಿಂದ ತಪ್ಪಿಸಿಕೊಳ್ಳುವುದಲ್ಲ, ಅಯ್ಯಪ್ಪ ಮಾಲೆಧಾರಿಯಾಗಿ ಮೇಲ್ವರ್ಗದ ಜನರು ಸಹ ನನ್ನನ್ನು ಸ್ವಾಮಿ ಎಂದು ಕರೆಯಲಿ ಎಂಬುದು. ಆದರೇ ಈ ವಿಚಾರ ಅವರ ಕುಟುಂಬದವರಿಗೂ ತಿಳಿಯುವುದಿಲ್ಲ.
ಜೀತಪದ್ದತಿಯಿಂದ ನಲುಗಿ ಹೋಗಿದ್ದ ಮತ್ತೊಬ್ಬ ಪಾತ್ರಧಾರಿ ತನ್ನ ನೋವನ್ನು ಹೇಳಿಕೊಳ್ಳುವ ಸಂದರ್ಭವನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಅವನ ಕಾಲಿಗೆ ಮುಳ್ಳೊಂದು ಚುಚ್ಚಿ ಇಡೀ ಮಾಂಸಖಂಡವೇ ಹರಿದು ಬರುವಂತ ನೋವನ್ನು ವ್ಯಕ್ತಪಡಿಸುವಾಗ “ಹೇ ಮುಳ್ಳೇ ಚುಚ್ಚು ಇನ್ನೂ ಆಳವಾಗಿ ಚುಚ್ಚು. ನಿನ್ನದು ಚುಚ್ಚಿ ನೋಯಿಸುವ ಕೆಲಸ ತಾನೇ ? ನೀನಾದರೂ ಇದೇ ತರಹ ನೋವು ಕೊಟ್ಟರೆ ನಿಮ್ಮ ಅವ್ವನ ಇಟ್ಟ್ಕೋ ಬಿಡ್ತೀನಿ” ಅನ್ನುವಾಗ ಅವನು ತನ್ನ ಜೀವಮಾನವೆಲ್ಲ ಉಳ್ಳವರ ಮನೆಯಲ್ಲಿ ಜೀತಮಾಡಿ, ತಾನು ಪಟ್ಟ ಅವಮಾನ ಹಾಗೂ ಮಾಲೀಕನ ಮೇಲಿನ ಕೋಪವನ್ನು ಮುಳ್ಳಿನೊಂದಿಗೆ ವ್ಯಕ್ತಪಡಿಸುವ ಪರಿ ಎಂತವರನ್ನು ಕರುಳು ಚುರುಕ್ ಅನ್ನುವ ಹಾಗೆ ಮಾಡುವುದರಲ್ಲಿ ಸಂದೇಹವಿಲ್ಲ. ನಾಟಕದ ಎಲ್ಲಾ ಪಾತ್ರಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.
ಖ್ಯಾತ ಜಾನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿಯವರ ರಂಗವಾಹಿನಿ (ರಿ.) ತಂಡದ ಎಲ್ಲಾ ಕಲಾವಿದರು ಪಾತ್ರಕ್ಕೆ ಜೀವ ತುಂಬುವ ಮೂಲಕ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕೊನೆಯ ಸನ್ನಿವೇಶದಲ್ಲಿ ಶೋಷಿತ ಸಮುದಾಯದ ಅಯ್ಯಪ್ಪ ಮಾಲೆಧಾರಿಗೆ ಜಮೀನ್ದಾರಿ ಮಾಲೀಕನಿಂದ ಸ್ವಾಮಿ ಎಂದು ಕರೆಸಿಕೊಳ್ಳುವ ಬಯಕೆ ಕೊನೆಗೂ ಈಡೇರುವುದಿಲ್ಲ. ಮೋಟರ್ ಕೆಟ್ಟಾಗ ಬಾವಿಗೆ ಇಳಿದು ಮೋಟಾರ್ ಮೇಲೆತ್ತುವಂತೆ ಮಾಲೀಕ ಅಯ್ಯಪ್ಪ ಮಾಲೆಧಾರಿಗೆ ಏಕವಚನದಲ್ಲಿ ಬೈದು ಹೇಳುತ್ತಾನೆ. ಆಗ ಅಯ್ಯಪ್ಪ ಮಾಲೆಧಾರಿ ನಾನು ಸ್ವಾಮಿ ಹಾಗಾಗಿ ನನ್ನನು ‘ಸ್ವಾಮಿ’ ಎಂದು ಕರೆಯಬೇಕು ಎಂದಾಗ ನೀ ಯಾವ ಸೀಮೆಯ ಸ್ವಾಮಿ ಬಡ್ಡಿಮಗನೇ ? ಮೋಟಾರ್ ಮೇಲಕ್ಕೆ ಎತ್ತಲೇ ಎಂದಾಗ ಕಷ್ಟವೋ ಸುಖವೋ ಬಾವಿಗೆ ಇಳಿದು ಮೋಟಾರ್ ಎತ್ತಿ ಹಾಕಿ ಕೊನೆಗೆ ತನ್ನ ತಪ್ಪಿನ ಅರಿವಾಗಿ ಬೋಧಿ ವೃಕ್ಷದ ಕೆಳಗೆ ಕುಳಿತು ಧ್ಯಾನಸ್ಥನಾಗಿ ನಮ್ಮೆಲ್ಲಾ ಸಮಸ್ಯೆಗಳಿಗೆ ಶಿಕ್ಷಣ ಮತ್ತು ಸಂವಿಧಾನವೇ ಪರಿಹಾರ ಎಂಬುದನ್ನು ಮೌನವಾಗಿಯೇ ತಿಳಿಯ ಬಯಸುತ್ತಾನೆ.
ಇಡೀ ನಾಟಕವೂ ಎಲ್ಲೂ ಬೇಸರವಾಗದೇ ಚಾಮರಾಜನಗರದ ಆಡುಭಾಷೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಕಥೆಗಾರಿಗೆ ಹಾಗೂ ನಿರ್ದೇಶಕ ಸಿ.ಜಿ.ಕೆ. ಪ್ರಶಸ್ತಿ ಪುರಸ್ಕೃತ ರೂಬಿನ್ ಸಂಜಯ್ ಹಾಗೂ ಸಂಗೀತ ನೀಡಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದವರ ಪ್ರಸಾದ್, ಸಿದ್ದು ಬದನವಾಳು ಹಾಗೂ ಎಲ್ಲಾ ಪಾತ್ರಧಾರಿಗಳಿಗೆ ಹಾಗೂ ನಾಟಕದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳೊಂದಿಗೆ ಇದು ರಂಗವಾಹಿನಿ ತಂಡದ ‘ಬೆಲ್ಲದ ದೋಣಿ’ ನಾಟಕದ 16ನೇ ಪ್ರದರ್ಶನ. ಚಾಮರಾಜನಗರ ಗಡಿ ಜಿಲ್ಲೆಯಲ್ಲಿ ರಂಗವಾಹಿನಿ ತಂಡದ ಮೂಲಕ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಸಿ.ಎಂ. ನರಸಿಂಹಮೂರ್ತಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಯೋಗೇಶ ಕೆ.
ಸಾಹಿತಿ, ಗುಂಡ್ಲುಪೇಟೆ