ಬೆಂಗಳೂರಿನ ರಂಗಪಯಣ (ರಿ.) ತಂಡವು ನಿರ್ಮಿಸಿದ ನಾಟಕ ‘ಚಂದ್ರಗಿರಿಯ ತೀರದಲ್ಲಿ’ (ನಿರ್ದೇಶನ: ನಯನಾ ಜೆ. ಸೂಡ. ಮೂಲ ಕಥೆ : ಸಾರಾ ಅಬೂಬಕ್ಕರ್). ಉಡುಪಿಯ ರಂಗಭೂಮಿಯು ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಹನ್ನೊಂದನೇ ನಾಟಕವಾಗಿ ರಂಗೇರಿದೆ ನಾಟಕವಿದು. ಮುಸ್ಲಿಂ ಸಮುದಾಯದಲ್ಲಿ ಹೆಣ್ಣಿನ ಬದುಕಿನ ದುರಂತ ಕಥೆಯಿರುವ ಈ ನಾಟಕವು ನೋಡಿದವರ ಕರುಳು ಹಿಂಡುವಂತಿದೆ. ಪುರುಷ ಪ್ರಧಾನ ಸಮಾಜದ ವಿರುದ್ಧ ಆಕ್ರೋಶ ಹುಟ್ಟಿಸುವಂತಿದೆ.
ಎಳೆಯ ವಯಸ್ಸಿನಲ್ಲಿಯೇ ತನ್ನ ದುಪ್ಪಟ್ಟು ವಯಸ್ಸಿಗಿಂತಲೂ ದೊಡ್ಡ ಗಂಡಸನ್ನು ಮದುವೆಯಾಗಬೇಕಾಗಿ ಬಂದ ಫಾತಿಮಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಲಿಂಗ ತಾರತಮ್ಯ ತುಂಬಿದ ಸಮಾಜದಲ್ಲಿ ಹೆಜ್ಜೆ ಹೆಜ್ಜೆಗೂ ಅನುಭವಿಸುವ ನರಕ ಯಾತನೆ ವರ್ಣನಾತೀತ. ಅಹಂಕಾರ, ದರ್ಪ, ಕೋಪಗಳ ಪ್ರತಿರೂಪವಾದ ಮನೆಯ ಯಜಮಾನನ ಮುಂದೆ ನಿಲ್ಲಲು ಗಡಗಡ ನಡುಗುವ ಹೆಂಡತಿ ಮಕ್ಕಳು. ಸ್ವಾತಂತ್ರ್ಯವೆಂದರೆ ಏನೆಂದೇ ತಿಳಿಯದ ಮುಗ್ಧ ಜೀವಿಗಳು. ಹಿರಿಯ ಮಗಳು ನಾದಿರಾಗೆ ಅತ್ಯಂತ ಪ್ರಾಮಾಣಿಕವಾಗಿ ಪ್ರೀತಿಸುವ ಒಳ್ಳೆಯ ಹುಡುಗ ರಷೀದ್ ಗಂಡನಾಗಿ ಸಿಕ್ಕಿ ಬದುಕು ಸುಂದರವಾದರೂ, ಕ್ಷುಲ್ಲಕ ಕಾರಣಗಳಿಗೆ (ತಾನು ಹೇಳಿದ್ದೇ ನಡೆಯಬೇಕು ಎಂಬ male egoದಿಂದಾಗಿ) ಅವರಿಬ್ಬರ ನಡುವೆ ಬಿರುಕು ತಂದು ತಲ್ಲಾಖ್ ಹೇಳಿಸುವ ಅಪ್ಪನ ಹುನ್ನಾರ ಆಘಾತಕಾರಿಯಾಗಿದೆ. ಇಷ್ಟು ಸಾಲದು ಎಂಬಂತೆ ಅವಳನ್ನು ಶ್ರೀಮಂತ ಮುದುಕನೊಬ್ಬನಿಗೆ ಕೊಟ್ಟು ಎರಡನೇ ಮದುವೆ ಮಾಡಿಸುವ ಹುನ್ನಾರವಂತೂ ಹಾಸ್ಯಾಸ್ಪದವಾಗಿದೆ. ರಷೀದ್ ನಾದಿರಾಳನ್ನು ಪುನಃ ಸ್ವೀಕರಿಸಲು ಸಿದ್ಧನಿದ್ದೇನೆ ಎಂದು ಹೇಳಿದರೂ ‘ಹಾಗೆ ಮತ್ತೆ ಸೇರಬೇಕಿದ್ದರೆ ಹೆಣ್ಣು ಬೇರೊಬ್ಬನನ್ನು ನಿಕಾ ಆಗಿ ಅವನೊಂದಿಗೆ ಒಂದು ರಾತ್ರಿ ಕಳೆಯಬೇಕು’ ಎಂಬ ‘ಧಾರ್ಮಿಕ ನಿಯಮ’ ಇನ್ನಷ್ಟು ಬೆಚ್ಚಿ ಬೀಳಿಸುತ್ತದೆ. ಹೆಣ್ಣೆಂದರೆ ಇವರ ದೃಷ್ಟಿಯಲ್ಲಿ ಆಟದ ಚೆಂಡೆ ? ಅವಳಿಗೆ ಅವಳದೇ ಆದ ಭಾವನೆ, ಆಸೆ, ಆಕಾಂಕ್ಷೆಗಳಿಲ್ಲವೇ ?
ನಾಟಕದಲ್ಲಿ ಪಾತ್ರ ವಹಿಸಿದ ಎಲ್ಲರೂ ತುಂಬಾ ಚೆನ್ನಾಗಿ ಅಭಿನಯಿಸಿದರು. ಫಾತಿಮಾ ಆಗಿ ಕುಂದಾಪುರದ ಚೇತನಾ ಪ್ರಸಾದ್ ಮತ್ತು ನಾದಿರಾ ಆಗಿ ನಯನಾ ಜೆ. ಸೂಡ ಅವರ ಮಾತುಗಳು, ಸಂಭಾಷಣೆಗಳ ನಿರ್ವಹಣೆ, ಭಾವನೆಗಳ ಅಭಿವ್ಯಕ್ತಿಗಳು ಪ್ರೇಕ್ಷಕರ ಹೃದಯದಾಳಕ್ಕೆ ಇಳಿಯುವಂತಿದ್ದವು. ನಾಟಕದುದ್ದಕ್ಕೂ ಬಳಸಿದ ಸಂಗೀತ, ಹಾಡುಗಳ ಸಾಹಿತ್ಯ ಹಾಗೂ ಗಾಯನಗಳು ಧ್ವನಿಪೂರ್ಣವಾಗಿದ್ದು ದುರಂತ ಕಥೆಗೆ ಪೂರಕವಾಗಿದ್ದವು. ಮುಸ್ಲಿಂ ಸಮುದಾಯದ ಹಲವು ಸಾಂಸ್ಕೃತಿಕ ಸಂದರ್ಭಗಳನ್ನು ನಾಟಕದಲ್ಲಿ ಅಳವಡಿಸಿಕೊಂಡಿದ್ದು, ಸಹಜವಾದ ವಾತಾವರಣವನ್ನು ಸೃಷ್ಟಿಸುವಲ್ಲಿ ಸಹಕಾರಿಯಾಯಿತು. ಅಲ್ಲಲ್ಲಿ ಬಳಸಿದ ಗುಂಪು ದೃಶ್ಯಗಳು ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುವ ಧಾರ್ಮಿಕ ಸೌಹಾರ್ದಕ್ಕೆ ಸಾಕ್ಷಿಯಾಗಿದ್ದವು.
- ಡಾ. ಪಾರ್ವತಿ ಜಿ. ಐತಾಳ್