ಬೆಂಗಳೂರು : ಅಂಕಿತ ಪುಸ್ತಕ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕ ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ ಮತ್ತು ಇತರ ನಾಟಕಗಳು’, ಲೇಖಕ ಮೌನೇಶ ಬಡಿಗೇರ ಅವರ ಕಥಾಸಂಕಲನ ‘ಶ್ರೀಗಳ ಅರಣ್ಯಕಾಂಡ’, ಲೇಖಕ ಸಂತೆಕಸಲಗೆರೆ ಪ್ರಕಾಶ್ ಅವರ ಕಥಾಸಂಕಲನ ‘ಪ್ರತಿಮೆ ಇಲ್ಲದ ಊರು’ ಹಾಗೂ ಲೇಖಕ ವಿವೇಕಾನಂದ ಕಾಮತ್ ಅವರ ಕಾದಂಬರಿ ‘ಪದರುಗಳು’ ಕೃತಿಗಳ ಲೋಕಾರ್ಪಣಾ ಸಮಾರಂಭವು ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ದಿನಾಂಕ 17-12-2023ರಂದು ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಬಿ.ಆರ್. ಲಕ್ಷ್ಮಣರಾವ್ “ನಾಟಕಗಳನ್ನು ಓದಿದರೆ ನಮಗೆ ಅದರ ಸ್ವಾರಸ್ಯ ತಿಳಿಯಲಾರದು, ಆದರೆ ರಂಗದಲ್ಲಿ ನೋಡಿದರೆ ಮಾತ್ರ ನಾವು ಅದನ್ನು ಆಸ್ವಾದಿಸಬಹುದು. ಅಂತಹ ರಂಗದ ಗುಣಗಳನ್ನು ಕಟ್ಟಿಕೊಡುವ ಕೃತಿ ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ ಮತ್ತು ಇತರ ನಾಟಕಗಳು’. ಈ ಕೃತಿಯಲ್ಲಿ ಮೂರು ನಾಟಕಗಳು ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಪಾತ್ರಗಳು ಹಾಸ್ಯದ ಜೊತೆ ಜೊತೆಗೆ ಗಂಭೀರವಾದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವಲ್ಲಿ ಗೆಲುವು ಪಡೆದುಕೊಂಡಿದೆ. ಬಡಿಗೇರ ಅವರ ‘ಶ್ರೀಗಳ ಅರಣ್ಯಕಾಂಡ’ ನನಗೆ ಬಹಳ ಹಿಡಿಸಿತು. ಇಲ್ಲಿನ ಕತೆಗಳು ಲಗು ದಾಟಿಯಲ್ಲಿ ಶುರುವಾಗಿ, ಗಂಭೀರವಾದ ಸ್ಥರಕ್ಕೆ ಹೊರಟುಹೋಗುತ್ತದೆ. ಕತೆಗಳಿಗೆ ಓದಿಸಿಕೊಳ್ಳುವ ಗುಣವಿರಬೇಕು. ಅಂತಹ ಗುಣವನ್ನು ಬಡಿಗೇರ ಅವರ ಕತೆಗಳು ಒಳಗೊಂಡಿವೆ. ನಗರ ಜೀವನದ ಮಧ್ಯಮ – ಕೆಳಮಧ್ಯಮ ವರ್ಗದ ಸಮಸ್ಯೆ, ದುಃಖ ದುಮ್ಮನ ಹಾಗೂ ಸ್ತ್ರೀ ಪಾತ್ರಗಳನ್ನು ಅಚ್ಚುಕಟ್ಟಾಗಿ ಇಲ್ಲಿ ಕಟ್ಟಿ ಕೊಡಲಾಗಿದೆ. ಸಂತೆಕಸಲಗೆರೆ ಪ್ರಕಾಶ್ ಅವರ ‘ಪ್ರತಿಮೆ ಇಲ್ಲದ ಊರು’ ಕೃತಿಯು ವಸ್ತುವಿನ ಮೇಲೆ ಹುಟ್ಟಿಕೊಂಡ ಕತೆಗಳನ್ನು ಭಿನ್ನವಾಗಿ ತಿಳಿಸುತ್ತದೆ. ಈ ನಿಟ್ಟಿನಲ್ಲಿ ಇಲ್ಲಿನ ಕತೆಗಳು ಆಕರ್ಷಕ ಗಮನಾರ್ಹವಾಗಿ ಮತ್ತು ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಧಾರವಾಹಿಯ ನೆಲೆಯಲ್ಲಿ ಈ ಕಾದಂಬರಿಯು ಹೊರಹೊಮ್ಮಿವೆ. ಒಟ್ಟಾರೆಯಾಗಿ ಈ ನಾಲ್ಕು ಕೃತಿಗಳು ಭಿನ್ನವಾಗಿ ರೂಪುಗೊಂಡಿದ್ದು, ಸಾಹಿತ್ಯ ಪರಿಧಿಯಲ್ಲಿ ಇಂತಹ ವಿಚಾರವಸ್ತುಗಳು ಇನ್ನು ಲಭ್ಯವಾಗಲಿ” ಎಂದು ತಿಳಿಸಿದರು.
ನಾಟಕಕಾರ, ಕವಿ ಎಚ್. ಡುಂಡಿರಾಜ್, “ಎಂ.ಎಸ್. ನರಸಿಂಹಮೂರ್ತಿ ಅವರ ‘ಬೆಗ್ ಬಾರೋ ಅಳಿಯ ಮತ್ತು ಇತರ ನಾಟಕಗಳು’ ಹಾಗೂ ಸಂತೆಕಸಲಗೆರೆ ಪ್ರಕಾಶ್ ಅವರ ‘ಪ್ರತಿಮೆ ಇಲ್ಲದ ಊರು’ ಕೃತಿಗಳ ಕುರಿತು ಮಾತನಾಡಿದರು. ‘ಬೆಗ್ ಬಾರೋ ಅಳಿಯ’ ಹಾಸ್ಯದ ಮೂಲಕ ಗಂಭೀರವಾದ ಸಮಸ್ಯೆಗಳಿಗೆ ಹೇಗೆ ಪರಿಹಾರವನ್ನು ಕೊಡಬಹುದು ಎಂಬುವುದನ್ನು ತಿಳಿಸುವ ಕೃತಿಯಾಗಿದ್ದು, ಇಲ್ಲಿನ ಮೂರು ನಾಟಕಗಳು ವಿಭಿನ್ನ ಶೈಲಿಯಲ್ಲಿ ರಚನೆಗೊಂಡಿವೆ. ಒಂದೊಂದು ನಾಟಕವು ಹಾಸ್ಯಮಯವಾಗಿದ್ದು, ಪಾತ್ರಗಳ ಕಟ್ಟುವಿಕೆಯ ಶೈಲಿ ಓದುಗರಿಗೆ ಬಹಳ ಹಿಡಿಸುತ್ತದೆ. ಗಾಂಧಿಯನ್ನು ಕಥಾವಸ್ತುವಾಗಿ ಹಿಡಿದಿಟ್ಟುಕೊಂಡಿರುವ ಕೃತಿ ‘ಸಂತೆಕಸಲಗೆರೆ ಪ್ರಕಾಶ್ ಅವರ ‘ಪ್ರತಿಮೆ ಇಲ್ಲದ ಊರು’. ಒಂದೇ ವಸ್ತುವಿನ ಬಗ್ಗೆ 12 ಕಥೆಗಳನ್ನು ಬರೆಯುವುದು ಸವಾಲಿನ ಕೆಲಸ. ಆದರೆ ಈ ಕೃತಿಯು ಅಂತಹ ಸವಾಲಿನ ಕೆಲಸವನ್ನು ನಿರ್ವಹಿಸಿದೆ. ಇಲ್ಲಿ ನಾವು ಗಾಂಧಿಯನ್ನು ಒಂದು ಸಿದ್ದಾಂತವಾಗಿ, ಕತೆಯಾಗಿ ಅಥವಾ ನಾಯಕನ ಪಾತ್ರದಲ್ಲಿ ಕಾಣಬಹುದು. ಹೀಗೆ ಬಹಳ ವಿಭಿನ್ನವಾಗಿ ಗಾಂಧಿ ನಮಗಿಲ್ಲಿ ಕಾಣುತ್ತಾರೆ ಎಂದರು.
ಪತ್ರಕರ್ತ ಮತ್ತು ಲೇಖಕ ರಘುನಾಥ ಚ.ಹ. ಇವರು ಮೌನೇಶ ಬಡಿಗೇರ ಅವರ ಕಥಾಸಂಕಲನ ‘ಶ್ರೀಗಳ ಅರಣ್ಯಕಾಂಡ’ ಹಾಗೂ ವಿವೇಕಾನಂದ ಕಾಮತ್ ಅವರ ಕಾದಂಬರಿ ‘ಪದರುಗಳು’ ಕುರಿತು ಮಾತನಾಡಿದರು. “ವಿವೇಕಾನಂದರ ಬರವಣಿಗೆಯು ಓದುಗರ ಗಮನವನ್ನು, ಸೆಳೆತವನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿದೆ. ಸರಳವಾದ ಆಕರ್ಷಕವಾದ ನಿರೂಪಣಾ ಶೈಲಿಯನ್ನು ಅವರು ರೂಢಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ತಮ್ಮ ಬರವಣಿಗೆಯಲ್ಲಿ ಸಮಕಾಲೀನ ವಿಚಾರವನ್ನು ತೆಗೆದುಕೊಂಡು ಜನರಿಗೆ ಅರ್ಥವಾಗುವ ರೀತಿಯಲ್ಲಿ ಕಟ್ಟಿಕೊಡುತ್ತಾರೆ. ಇದು ಅವರ ಬರವಣಿಗೆಯ ವಿಶೇಷತೆ. ಮೌನೇಶ ಅವರ ‘ಶ್ರೀಗಳ ಅರಣ್ಯಕಾಂಡ’ ಕೃತಿಯಲ್ಲಿ ಆರು ಕಥೆಗಳಿವೆ. ಈ ಕಥೆಗಳನ್ನು ನಾವು ಓದಿಯೇ ಅರ್ಥೈಸಿಕೊಳ್ಳಬೇಕು. ಇನ್ನು ನಮ್ಮ ಸಿದ್ಧ ಓದಿನ ಜಾಡನ್ನು ಬೇರ್ಪಡಿಸಿ ಅನುಭವದ ಓದಿನ ಕಡೆಗೆ ವಾಲುವಂತೆ ಇಲ್ಲಿನ ಕತೆಗಳು ಪ್ರೆರೇಪಿಸುತ್ತವೆ. ಕತೆಗಳ ಬಗೆಗಿನ ಗ್ರಹಿಕೆಗಳನ್ನು ಒಂದು ಪುನರ್ ವ್ಯಾಖ್ಯಾನಕ್ಕೆ ಈ ಕತೆಗಳು ಒತ್ತಾಯಿಸುತ್ತದೆ” ಎಂದು ತಿಳಿಸಿದರು.
ವೇದಿಕೆಯಲ್ಲಿ ನಾಲ್ಕು ಕೃತಿಯ ಲೇಖಕರುಗಳಾದ ಎಂ.ಎಸ್. ನರಸಿಂಹಮೂರ್ತಿ, ಮೌನೇಶ ಬಡಿಗೇರ, ಸಂತೆಕಸಲಗೆರೆ ಪ್ರಕಾಶ್, ವಿವೇಕಾನಂದ ಕಾಮತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಸೇರಿದಂತೆ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.