ಎಂಬತ್ತು ತೊಂಬತ್ತು ಮತ್ತು ಅದರ ಆಸುಪಾಸಿನ ಸದಭಿರುಚಿಯ ಕನ್ನಡದ ಕಂಪನಿ ನಾಟಕಗಳನ್ನು ನೋಡಿದವರಿಗೆ ನೆನಪಿರಬಹುದು. ಹೆಚ್ಚಿನ ನಾಟಕಗಳಲ್ಲಿ ಪರದೆ ಎತ್ತಿದಾಕ್ಷಣ ಮನೆಯ ಮಗಳು ದೇವರಿಗೆ ನಮಿಸುತ್ತ ಒಂದು ಹಾಡು ಹೇಳುತ್ತಾಳೆ. ಪಕ್ಕದಲ್ಲೇ ನಿಂತಿರುವ ಹಿರಿಯರು ಆರತಿ ತೆಗೆದುಕೊಳ್ಳುತ್ತಾರೆ. ಹಿಂದೆಯೇ ಆ ಮನೆಯ ಹಿರಿಯ ಮಗ ಟ್ರಂಕು ಹಿಡಿದು ಪ್ರವೇಶಿಸುತ್ತಾನೆ.
ಹಿರಿಯರಿಗೆ ಕೈ ಮುಗಿಯುತ್ತಾ
“ಅಪ್ಪಾ, ನಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಹೊರಟಿದ್ದೇನೆ. ರೈಲಿಗೆ ತಡವಾಗುತ್ತದೆ ನಾನು ಹೊರಡುವೆ” ಎಂದು ಟ್ರಂಕ್ ಎತ್ತಿಕೊಂಡು ಹೊರಡುತ್ತಾನೆ.
ಕನ್ನಡದ ರಂಗಭೂಮಿಯೂ ರೈಲು ಪ್ರಯಾಣವೂ ಟ್ರಂಕೂ ಕನೆಕ್ಟ್ ಆಗುವದು ಹೀಗೆ.
ಇಂಥ ಟ್ರಂಕ್ ನ್ನು ರೂಪಕವಾಗಿಯೂ ಪರಿಕರವಾಗಿಯೂ, ವಾದ್ಯವಾಗಿಯೂ ಇಟ್ಟುಕೊಂಡು ‘ಕುಹೂ’ ಎನ್ನುವ ಕಥಾನಕವೊಂದನ್ನು ಕಟ್ಟುತ್ತಾರೆ ಅರುಣಲಾಲ್.
ಈ ಕಟ್ಟುವಿಕೆಯ ಹಿಂದೆ ವಿಸ್ತರವಾದ ರಿಸರ್ಚ್ ಇದೆ. ರೈಲಿನ ಬೋಗಿಗಳಲ್ಲಿ ಘಟನೆಗಳನ್ನ ಪ್ರಭಾವಶಾಲಿಯಾಗಿ ತುಂಬಿ ತುಂಬಿ ಕಳಿಸುವ ಜಾಣತನವಿದೆ. ‘ಕುಹೂ’ನ ಜೊತೆಗಿನ ನಮ್ಮ ಪ್ರಯಾಣ ಮುಂದುವರಿದಂತೆ ನಾವು ಇತಿಹಾಸಕ್ಕೂ ವರ್ತಮಾನಕ್ಕೂ ನಡುವೆ ಜೀಕುತ್ತ ಘಟನೆಗಳಿಗೆಲ್ಲ ಸಾಕ್ಷಿಗಳಗುತ್ತ ಹೋಗುತ್ತೇವೆ.
ಪ್ರಾರಂಭದಲ್ಲೇ ಶಾಸ್ತ್ರೀಯ ನೃತ್ಯ ಕಾರ್ಯಕ್ರಮವೊಂದರ ಸಂಗೀತಗಾರರ ತಾಳ ಮದ್ದಳೆಗಳನ್ನ ಪ್ರತಿಸ್ಥಾಪಿಸುವ ವಾದ್ಯವಾಗುವದರೊಂದಿಗೆ ‘ಟ್ರಂಕ್’ ರಂಗಪ್ರವೇಶ ಪಡೆಯುತ್ತದೆ. ಆ ಮೂಲಕ ಮೊದಲ ದೃಶ್ಯದಲ್ಲೇ ಅರುಣಲಾಲ್ ಮುರಿದು ಕಟ್ಟುವ ಪ್ರಕ್ರಿಯೆಯನ್ನೂ ಪ್ರಾರಂಭಿಸಿಬಿಡುತ್ತಾರೆ.
ಮುಂದಿನ ಒಂದುಮುಕ್ಕಾಲು ಘಂಟೆಯೂ ಟ್ರಂಕ್ ನದ್ದೇ ಕಾರುಬಾರು. ವಿವಿಧ ವಾದ್ಯಗಳ, ವಿನ್ಯಾಸಗಳ ಭಾಗವಾಗುತ್ತಾ ಈ ‘ಬಹುರೂಪಿ’ ಟ್ರಂಕು ನಮ್ಮ ಜೊತೆಗೇ ಪ್ರಯಾಣ ಬೆಳೆಸುತ್ತದೆ.
ಮೊದಮೊದಲು ರೈಲು ಪ್ರಯಾಣದ ವಿನೋದಪೂರ್ಣ ಘಟನೆಗಳೊಂದಿಗೆ ನಗೆಯುಕ್ಕಿಸುತ್ತ ಶುರುವಾಗುವ ಈ ಪ್ರಯಾಣ ಸಾಗುತ್ತಿದ್ದ ಹಾಗೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತ ಹೋಗುವ ಭಾವಯಾನವಾಗುತ್ತದೆ.
ನಾಟಕದ ಪೂರ್ವ ಭಾಗದ ಚೇತೋಹಾರಿ ದೃಶ್ಯವೊಂದರಲ್ಲಿ ಅರುಣಲಾಲ್ ಹುಡುಗಿಯೊಬ್ಬಳನ್ನು ರೈಲು ನಿಲ್ದಾಣದ ರೂಪಕವಾಗಿಸಿರುವದಂತೂ ಅಪೂರ್ವ. ಸ್ನೇಹ, ಪ್ರೀತಿ, ಕಾಳಜಿಗಳ ಒಟ್ಟೂ ಮೊತ್ತವಾಗಿರುವ ಆಕೆ,
ಪ್ರಯಾಣಿಕ ಯುವಕನೊಬ್ಬ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದಿದ್ದಕ್ಕೆ ‘ನಾನು ನನ್ನಲ್ಲಿ ಬರುವ ಎಲ್ಲರನ್ನೂ ಪ್ರೀತಿಸುತ್ತೇನೆ’ ಎನ್ನುವಾಗ ಅಬ್ಬಾ! ಎನಿಸಿಬಿಡುತ್ತದೆ.
‘ಪಥೇರ್ ಪಾಂಚಾಲಿ’ ದೃಶ್ಯದ ವಿನ್ಯಾಸವಂತೂ ಶ್ರೇಷ್ಠ ಮಟ್ಟದ್ದು. ಬಹು ಮಾಧ್ಯಮದ ನೆರವಿನೊಂದಿಗೆ ಕಟ್ಟಿದ ಸುಂದರ ಕಾವ್ಯವಿದು. ಹಿನ್ನೆಲೆಯಲ್ಲಿ ಕಾಣುವ ಸಿನಿಮಾದ ದೃಶ್ಯ, ತೂರಾಡುವ ತೆನೆಗಳು, ಕಬ್ಬು ತಿನ್ನುತ್ತಾ ಆಡುತ್ತಿರುವ ಹುಡುಗ, ಹುಡುಗಿ.
ಸಮಾನಾಂತರವಾಗಿ ಸಾಗುವ ಮಕ್ಕಳ ಚಲನೆಗಳು, ತೀವ್ರ ಭಾವಗಳು, ಅದ್ಭುತ ದೃಶ್ಯವೊಂದನ್ನು ಕಟ್ಟಿಕೊಡುತ್ತವೆ. ದೃಶ್ಯದ ಕೊನೆಯಲ್ಲಿ ಬರುವ ರೈಲು ಕರಾಳ ಕಾಲೋನಿಯಲ್ ದಿನಗಳ ಬರುವಿಕೆಯ ಸೂಚನೆಯೂ ಆಗುತ್ತದೆ.
ಇನ್ನು ‘ದೆವ್ವದ ಸ್ಟೇಷನ್’ ಎಂದೇ ಕರೆಯಲ್ಪಡುವ ಪಶ್ಚಿಮ ಬಂಗಾಳದ ‘ಬಾಗುನ್ ಕೋದರ್’ ನಿಲ್ದಾಣದ ದೃಶ್ಯ ನಾಟಕೀಯತೆಯ ಉತ್ತುಂಗ. ಭೂತ ಚೇಷ್ಟೆಯ ಕಾರಣಕ್ಕಾಗಿ ನಲವತ್ತೆರಡು ವರ್ಷ ಮುಚ್ಚಲ್ಪಟ್ಟಿತ್ತು ಈ ನಿಲ್ದಾಣ. ಮೂಢನಂಬಿಕೆಯ ದ್ಯೋತಕವಾದ ಇಂಥ ನಿಲ್ದಾಣದ ಕುರಿತ ದೃಶ್ಯವನ್ನು ಅಷ್ಟೇ ವ್ಯಂಗ್ಯದ ಧಾಟಿಯಲ್ಲಿ ನಿರ್ದೇಶಕರು ಕಟ್ಟುತ್ತ ಹೋಗುತ್ತಾರೆ.
‘ಈ ನಿಲ್ದಾಣದಲ್ಲಿ ರೈಲುಗಳು ನಿಧಾನವಾಗಿ ಚಲಿಸುತ್ತವೆ’ ಎನ್ನುವ ಸೂಚನೆಯೊಂದಿಗೆ ಪ್ರವೇಶ ಪಡೆಯುವ ‘ದಿಮಾಪುರ್’ ಸ್ಟೇಷನ್ ನ ಕಥೆಯಂತೂ ಹೃದಯ ಕಲಕುವಂಥದ್ದು. ಎರಡನೆಯ ವಿಶ್ವ ಯುದ್ಧದ ಹೊತ್ತಿಗೆ ಅರವತ್ತು ಸಾವಿರ ಹೆಣಗಳನ್ನು ಕಂಡ ನಿಲ್ದಾಣವಿದು. ನಿಧಾನ ಗತಿಯಲ್ಲಿ ದೃಶ್ಯವನ್ನು ಕಟ್ಟುವದರೊಂದಿಗೆ ನಿಜ ನೋವಿನ ದರ್ಶನ ಮಾಡಿಸುತ್ತಾರೆ ಅರುಣಲಾಲ್. ನಿಧಾನವಾಗಿ ನಡೆದಾಡುವ ಸೈನಿಕರು, ಟ್ರಂಕ್ ನ ಜೊತೆಯಲ್ಲೇ wreathನ್ನು ಕೈಲಿ ಹಿಡಿದೇ ಓಡಾಡುವ ಯೋಧರು, ಶವಪೆಟ್ಟಿಗಳಾಗಿ ಸಾಲು ಸಾಲಾಗಿ ಬರುವ ಟ್ರಂಕ್ ಗಳು. ಆಕ್ರಂದನ. ..ಸಭೆ ತುಂಬ ಮೌನ.
ಮುಂದೆ…
ಜಗತ್ಪ್ರಸಿದ್ಧ ಗಾಂಧೀಜಿಯ ದಕ್ಷಿಣ ಆಫ್ರಿಕಾದ ರೈಲು ಯಾತ್ರೆ, ಮೂರನೇ ದರ್ಜೆಯ ಕಥೆ, ಉಪ್ಪಿನ ಸತ್ಯಾಗ್ರಹ, ಸ್ವಾತಂತ್ರ್ಯ ಸಂಗ್ರಾಮ ಹೀಗೆ ರೈಲಿನ ಮೂರನೆಯ ದರ್ಜೆಯಲ್ಲೇ ಕೂತು ಸ್ವಾತಂತ್ರ್ಯ ಸಂಗ್ರಾಮ ಸಂಘಟಿಸಿದ ಮಹಾತ್ಮನ ಗಾಥೆ.
ಈ ಕಥೆಯ ಕೊನೆಯಲ್ಲೂ ಒಂದು ಚೋದ್ಯವಿದೆ. ದೇಶವನ್ನು ಕೈಗೊಪ್ಪಿಸುವ ದೃಶ್ಯದಲ್ಲಿ ಬ್ರಿಟಿಷನೊಬ್ಬ ಟ್ರಂಕು ಹಿಡಿದು ಬರುತ್ತಾನೆ. ಇಲ್ಲಿ ಆ ಟ್ರಂಕ್ ನ್ನು ಸ್ವೀಕರಿಸುವವನು ‘ಪಥೇರ್ ಪಾಂಚಾಲಿ’ಯಲ್ಲಿ ಹೊಲದಲ್ಲಿ ಆಡುತ್ತಿದ್ದ ಹುಡುಗನೇ. ಆ ಮೂಲಕ ಹೊಲದ ನಡುವೆ ರೈಲಿನ ಆಗಮನದ ಮೂಲಕ ಬ್ರಿಟಿಷರ ಆಗಮನವನ್ನು ಕಂಡ ಹುಡುಗನೇ ಅವರ ನಿರ್ಗಮನಕ್ಕೂ ಸಾಕ್ಷಿಯಾಗುತ್ತಾನೆ.
ಈ ಮಧ್ಯೆ ಬರುವ ‘ಚೌಕಿದಾರ್’ ಮತ್ತು ‘ಚೋರ್’ಗಳು, ಚೌಕಿದಾರ್ ನ ಬೀಗದಕೈ, ವರ್ತಮಾನದ ತೀಕ್ಷ್ಣ ವಿಡಂಬನೆ.
ಕೊನೆಯಲ್ಲಿ…
ನೋವಿನ ನೆನಪನ್ನು ಸದಾಕಾಲ ಬಿಟ್ಟು ಹೋಗಿರುವ ಭಾರತ ವಿಭಜನೆಯ ವೃತ್ತಾಂತ. ಇಲ್ಲಿಯೂ ಬಹುಮಾಧ್ಯಮದ ನೆರವಿನೊಂದಿಗೆ, ಗೆಳತಿಯರಿಬ್ಬರ ಅಗಲುವಿಕೆಯ ನೃತ್ಯವಿನ್ಯಾಸದೊಂದಿಗೆ ದೃಶ್ಯ ಕಟ್ಟುತ್ತಾರೆ. ಟ್ರಂಕ್ ಗಳನ್ನು ಪೇರಿಸಿಕೊಂಡು ಆಚೀಚೆ ತಳ್ಳುತ್ತ ಓಡಾಡುವ ದೃಶ್ಯ, ಬಳಸಿದ ತೀವ್ರ ಸ್ವರದ ಸಂಗೀತ ಮತ್ತೆ ಆ ನೋವಿನ ದಿನಗಳಿಗೊಯ್ಯುತ್ತದೆ.
ಇದೇ ನೋವು ವರ್ತಮಾನದ ನೋವೂ ಆಗುವದು ‘ಮಣಿಪುರ’ದ ದೃಶ್ಯದೊಂದಿಗೆ.
ಮುಚ್ಚಳ ತೆಗೆದುಕೊಂಡು ಬಿದ್ದ ಒಂದು ಟ್ರಂಕ್. ಅದರೊಳಗೆ ಅಂಗಾತ ಬಿದ್ದಿರುವ ಒಂದು ದೇಹ. ಒಂದು ಸ್ಪಾಟ್ ಲೈಟ್. ಜೊತೆಗೆ ‘Your attention please’ ಎನ್ನುವ ನಿಲ್ದಾಣದ ಸೂಚನೆ.
ಇಷ್ಟು ಸಾಕು. ಜವಾಬ್ದಾರಿಗಳನ್ನು ನೆನಪಿಸಲಿಕ್ಕೆ.
ಇನ್ನು, ನಟ ನಟಿಯರ ಬಗ್ಗೆ ಹೇಳಲೇಬೇಕು. ಅಸಾಧ್ಯ ಕಸುವು ತುಂಬಿಕೊಂಡ ಜೀವಗಳು ಅವು. ಕೊನೆಯ ತನಕವೂ ಅದೇ ಕಸುವನ್ನು ಉಳಿಸಿಕೊಂಡು, ಹಾರುತ್ತ, ಹಾಡುತ್ತ, ಟ್ರಂಕ್ ವಾದ್ಯಗಳನ್ನು ನುಡಿಸುತ್ತ ಅಷ್ಟೇ ಸಮರ್ಥವಾಗಿ ಅಭಿನಯ ನೀಡಿದವರು.
ಇಂಥ ಪಯಣದಲ್ಲಿ ನಮ್ಮನ್ನು ತಮ್ಮ ಜೊತೆಗೇ ಒಯ್ಯುವ ಇಂಥ ‘ಬೋಗಿ’ಗಳಿಗೂ, ಅವುಗಳಿಗೆ ದಾರಿ ತೋರಿಸುತ್ತ ಕೊಂಡು ಹೋದ ‘ಎಂಜಿನ್’ ಅರುಣಲಾಲ್ ರಿಗೂ, ಪಯಣಕ್ಕೆ ‘ಹಳಿ’ಯಾದ ನಿರ್ದಿಗಂತಕ್ಕೂ, ಪಯಣ ಹೊರಟ ‘ಸ್ಟೇಷನ್’, Little earth school of theatreಗೂ ಅಭಿನಂದನೆಗಳು.
ಮಿಸ್ ಮಾಡಲೇಬಾರದ ನಾಟಕ ಇದು. ರೈಲಿನ ಕುರಿತ ಚಂದದ ಹಾಡುಗಳೂ ಬೋನಸ್ ಆಗಿ ಸಿಗುತ್ತವೆ.
ಶಹಾಬ್ಬಾಸ್ ಅರುಣಲಾಲ್, ಲಿಟಲ್ ಥೀಯೇಟರ್, ನಿರ್ದಿಗಂತ
ನಾಟಕ ವಿಮರ್ಶಕರು ಕಿರಣ್ ಭಟ್ ಹೊನ್ನಾವರ