ಪ್ರತಿ ವರ್ಷ ದೆಹಲಿಯ ರಾಷ್ಟ್ರೀಯ ರಂಗಶಾಲೆ (ಎನ್.ಎಸ್.ಡಿ.) ಭಾರತ ರಂಗ ಮಹೋತ್ಸವದ ಹೆಸರಲ್ಲಿ ನಾಟಕೋತ್ಸವವನ್ನು ನಡೆಸುತ್ತಾ ಬಂದಿದೆ. ಈ ವರ್ಷ ಬೆಂಗಳೂರಿನ ಕಲಾಗ್ರಾಮದಲ್ಲಿ ಫೆಬ್ರವರಿ 01ರಿಂದ 08ರವರೆಗೆ ಅದ್ದೂರಿಯಾಗಿ ಈ ಅಂತಾರಾಷ್ಟ್ರೀಯ ನಾಟಕೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದೆ.
ಈ ರಂಗಪರಿಷೆಯಲ್ಲಿ ರಾಷ್ಟ್ರೀಯ ರಂಗ ಶಾಲೆ ರೆಪರ್ಟರಿಯ ಎರಡು ನಾಟಕಗಳು ಫೆಬ್ರವರಿ 3 ಮತ್ತು 4ರಂದು ಪ್ರದರ್ಶನವಾಗುತ್ತಿವೆ. ಅದರಲ್ಲಿ ಫೆಬ್ರವರಿ 3ರಂದು ಪ್ರದರ್ಶನಗೊಂಡು ಗಮನ ಸೆಳೆದ ಹಿಂದಿ ಭಾಷೆಯ ನಾಟಕ ‘ಮಾಯರಿ ಮೈ ಕಾ ಸೇ ಕಹು’. ರಾಜಸ್ಥಾನದ ಪ್ರಖ್ಯಾತ ಬರಹಗಾರ ವಿಜಯದಾನ್ ದೇತಾರವರ ಜಾನಪದ ಕಥಾ ಸಂಗ್ರಹದಿಂದ ‘ದುವಿಧಾ’ ಕಥೆಯನ್ನು ಆಯ್ಕೆ ಮಾಡಿ ಎನ್.ಎಸ್.ಡಿ.ಯ ಅಜಯ್ ಕುಮಾರ್ ರವರು ರೆಪರ್ಟರಿ ಕಲಾವಿದರಿಗೆ ನಿರ್ದೇಶಿಸಿದ್ದಾರೆ.
ರಾಜಸ್ಥಾನಿ ಶೈಲಿಯಲ್ಲಿ ಮೂಡಿ ಬಂದ ಫ್ಯಾಂಟಸಿ ಸ್ವರೂಪದ ಈ ನಾಟಕವು ಅತ್ಯಂತ ಆಕರ್ಷಣೀಯವಾಗಿ ಮೂಡಿ ಬಂದಿದೆ. ಆ ಕಣ್ಮನ ಸೆಳೆಯುವ ಬಣ್ಣಬಣ್ಣದ ವಸ್ತ್ರ ವಿನ್ಯಾಸ ವೈಭವ, ಹಾಡು ಸಂಗೀತಗಳೇ ಈ ನಾಟಕದ ಜೀವಾಳ. ಕಲಾವಿದರ ಅಮೋಘ ನಟನೆ, ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವಂತಹ ಚಲನೆ, ಮೋಹಕತೆಗೆ ಮತ್ತೇರಿಸುವಂತಹ ಬೆಳಕಿನ ಬಣ್ಣದೋಕುಳಿ ಎಲ್ಲವನ್ನೂ ನಾಟಕ ನೋಡಿಯೇ ಅನುಭವಿಸಬೇಕು. ಒಟ್ಟಾರೆಯಾಗಿ ಇದೊಂದು ಮನರಂಜನಾತ್ಮಕವಾದ ಸಂಗೀತಮಯ ದೃಶ್ಯ ಕಾವ್ಯ.
ನಾಟಕವನ್ನು ನೋಡುತ್ತಾ ಹೋದಂತೆಲ್ಲಾ ಈ ಕಥೆಯ ಎಳೆ ಕೆಲವಾರು ಜಾನಪದ ಆಧರಿಸಿದ ಕನ್ನಡದ ನಾಟಕಗಳಲ್ಲಿ ಬಂದಿವೆಯಲ್ಲಾ ಎನ್ನಿಸದೇ ಇರಲಾರದು. ನಾಗಮಂಡಲ, ಸಿರಿಸಂಪಿಗೆ, ಜೋಕುಮಾರಸ್ವಾಮಿ ಅಷ್ಟೇ ಯಾಕೆ ಸಂಗ್ಯಾ ಬಾಳ್ಯಾ ಮುಂತಾದ ಕೆಲವು ನಾಟಕಗಳು ನೆನಪಾಗದೇ ಇರದು. ಆದರೆ ಜಾನಪದ ಕಥೆಯೊಂದರ ಎಳೆಯನ್ನು ವಿಸ್ತರಿಸಿ ಹೇಗೆ ಆಕರ್ಷಕವಾಗಿ ನಾಟಕವನ್ನು ಕಟ್ಟಬಹುದು ಎನ್ನುವುದಕ್ಕೆ ಈ ಹಿಂದಿ ಭಾಷೆಯ ನಾಟಕ ಸಾಕ್ಷಿಯಾಗಿದೆ.
ಇಷ್ಟಕ್ಕೂ ಕಥೆ ಇರೋದು ಇಷ್ಟೇ. ಶ್ರೀಮಂತ ಮಾರ್ವಾಡಿಯ ಮಗನ ಮದುವೆಯ ಸವಾರಿ ಒಂದು ಮರದ ಕೆಳಗೆ ಕುಳಿತು ವಿಶ್ರಮಿಸಿಕೊಳ್ಳುತ್ತಿರುತ್ತದೆ. ಆ ಮರದ ಮೇಲಿರುವ ಭೂತ ವಧುವಿನ ಸೌಂದರ್ಯಕ್ಕೆ ಮನಸೋಲುತ್ತದೆ. ಮದುವೆಯ ಮಾರನೆಯ ದಿನ ವರ ಸಂಪತ್ತಿನ ಸಂಪಾದನೆಗಾಗಿ ಐದು ವರ್ಷಗಳ ಕಾಲ ಪಟ್ಟಣಕ್ಕೆ ಹೊರಡುತ್ತಾನೆ. ಈ ಅವಕಾಶವನ್ನು ಬಳಸಿಕೊಂಡ ಭೂತ ವರನ ರೂಪ ತಾಳಿ ಮನೆಗೆ ಮರಳುತ್ತದೆ. ಎಲ್ಲ ಸತ್ಯವನ್ನು ತಿಳಿಸಿಯೇ ವಧುವನ್ನು ಒಪ್ಪಿಸಿದ ಭೂತ ಸಂಸಾರ ಶುರುಮಾಡುತ್ತದೆ ಹಾಗೂ ಹೀಗೂ ನಾಲ್ಕು ವರ್ಷ ಕಳೆಯುತ್ತದೆ. ಆಕೆಗೆ ಹೆಣ್ಣು ಮಗುವೂ ಆಗುತ್ತದೆ. ಈ ವಿಷಯ ತಿಳಿದು ಅಸಲಿ ಪತಿ ಓಡಿ ಬಂದು ವಾಸ್ತವ ಹೇಳಿದರೂ ಯಾರೂ ನಂಬದೇ ಇರುವಾಗ ರಾಜನ ಬಳಿ ಅಸಲಿ ಪತಿ ಯಾರೆಂದು ನ್ಯಾಯ ನಿರ್ಣಯ ಕೇಳಲು ಊರಿನವರು ಹೊರಡುತ್ತಾರೆ. ದಾರಿಯಲ್ಲಿ ಸಿಕ್ಕ ಮಂತ್ರವಾದಿ ತನ್ನ ಚಾಣಾಕ್ಷತನದಿಂದ ಪತಿ ರೂಪದ ಭೂತವನ್ನು ಬಾಟಲಿಯಲ್ಲಿ ಬಂಧಿಸಿ ನದಿಗೆ ಎಸೆಯಲು ಹೇಳುತ್ತಾನೆ. ಇದನ್ನು ಕೇಳಿ ಅಸಹಾಯಕಳಾದ ಪತ್ನಿ ನೊಂದುಕೊಳ್ಳುತ್ತಾಳೆ. ತನಗೆ ಬಂದ ದುಸ್ಥಿತಿ ತನ್ನ ಮಗಳಿಗೆ ಬರದೇ ಇರಲಿ ಎಂದು ಬೇಡಿಕೊಳ್ಳುತ್ತಾಳೆ. ಇಲ್ಲಿಗೆ ನಾಟಕ ಮುಗಿಯುತ್ತದೆ. ಯೋಚನೆ ಪ್ರೇಕ್ಷಕರ ಮೆದುಳೇರುತ್ತದೆ.
ಮಹಿಳೆಯರ ಮೇಲೆ ನಡೆಯುವ ಗಂಡಾಳ್ವಿಕೆಯನ್ನು ಈ ನಾಟಕ ಅನಾವರಣಗೊಳಿಸುತ್ತದೆ. ಹೇಳಿದಂತೆ ಕೇಳಿಕೊಂಡು, ಅತ್ತೆ ಮಾವಂದಿರ ಸೇವೆ ಮಾಡಿಕೊಂಡು ಇರುವುದೇ ಪತ್ನೀ ಧರ್ಮ ಎಂಬ ಪಿತೃಪ್ರಧಾನ ಮೌಲ್ಯಗಳನ್ನು ವಿಡಂಬನಾತ್ಮಕವಾಗಿ ತೋರಿಸಲಾಗಿದೆ. ಹೆಣ್ಣಿನ ಮನದ ಭಾವನೆಗಳಿಗೆ ಬೆಲೆಕೊಡದೇ ಸಂಪಾದನೆಯೇ ಬದುಕಿನ ಗುರಿ ಎಂದುಕೊಂಡಿರುವ ಗಂಡಸರ ದುರಹಂಕಾರಕ್ಕೆ ಹೆಣ್ಣು ಹೇಗೆಲ್ಲಾ ಸವಾಲಾಗಬಹುದು ಎನ್ನುವುದನ್ನೂ ಈ ನಾಟಕ ತೋರಿಸುತ್ತದೆ.
ಮದುವೆಯಾಗಿ ಹೆತ್ತವರನ್ನು ಬಿಟ್ಟು ಬಂದ ಹೆಣ್ಣಿಗೆ ಪ್ರೀತಿಯನ್ನು ಕೊಡದೆ ದೂರವಾಗುವ ಗಂಡನ ದೌರ್ಜನ್ಯಕ್ಕೆ ಪ್ರತಿಯಾಗಿ ಆಕೆ ಭೂತದ ಸಾಂಗತ್ಯವನ್ನೇ ಒಪ್ಪಿಕೊಳ್ಳುವ ಮೂಲಕ ಗಂಡನ ನಿರ್ಲಕ್ಷ್ಯಕ್ಕೆ ಸವಾಲಾಗುತ್ತಾಳೆ. ತನ್ನ ಹೆಣ್ತನದ ಆಸೆ ಭಾವನೆಗಳನ್ನು ಗೌರವಿಸುವ, ತನ್ನನ್ನು ಪ್ರೀತಿಸುವ ವ್ಯಕ್ತಿ ಭೂತವೆಂದರಿತೂ ತನ್ನನ್ನು ಸಮರ್ಪಿಸಿಕೊಳ್ಳುತ್ತಾಳೆ. ಹೆಣ್ಣಿನ ಇಂತಹ ನಿರ್ಧಾರ ಪುರುಷಪ್ರಧಾನ ಸಾಮಾಜಿಕ ಚೌಕಟ್ಟಿನಲ್ಲಿ ನಿಷಿದ್ಧವೆನ್ನಿಸಿದರೂ, ಈ ಜೀವವಿರೋಧಿ ನಿಷೇಧಕ್ಕೆ ಪ್ರತಿಭಟನೆ ತೋರುವಂತಹ ದಿಟ್ಟ ನಿರ್ಧಾರವನ್ನು ಈ ನಾಟಕದ ವಧು ತೆಗೆದುಕೊಳ್ಳುತ್ತಾಳೆ.
ಆದರೆ… ಈ ಪ್ರತಿಭಟನೆಯನ್ನು ಬಹಿರಂಗವಾಗಿ ತೋರಿಸಲಾಗದ ಅಸಹಾಯಕತೆಯಲ್ಲಿ ನರಳುವ ಆ ಹೆಣ್ಣು ಕೊನೆಗೆ ತನ್ನನ್ನು ತೊರೆದು ಹೋದ ನಿಷ್ಕರುಣಿ ಗಂಡ ಬೇಕೋ ಇಲ್ಲವೇ ಪ್ರೀತಿ ಕೊಟ್ಟು ಕಾಳಜಿ ತೋರಿದ ಭೂತ ಬೇಕೋ ಎಂದು ಹೇಳುವುದರಲ್ಲಿ ಸೋಲುತ್ತಾಳೆ. ಭೂತ ಬಂಧಿಯಾಗಿ ಅಂತ್ಯವನ್ನು ಅನುಭವಿಸುವಾಗಲೂ ಸಹಾಯಕ್ಕೆ ಹೋಗಲಾಗದ ಅಸಹಾಯಕತೆಯನ್ನು ಅನುಭವಿಸುವ ಆಕೆ ಕೊನೆಗೆ ಪುರುಷ ವ್ಯವಸ್ಥೆಗೆ ಶರಣಾಗುತ್ತಾಳೆ. ಪ್ರತಿಭಟನೆ ತೋರಬಹುದು ಎನ್ನುವ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸುತ್ತಾಳೆ. ತನಗೆ ಬಂದ ದುಸ್ಥಿತಿ ತನ್ನ ಮಗಳಿಗೆ ಬಾರದೇ ಇರಲಿ ಎಂದು ಹೇಳಿಕೊಳ್ಳುತ್ತಾಳೆ.
ಇದು ಈ ನಾಟಕದ ನಿರ್ದೇಶಕರ ನಿಲುವೂ ಆದಂತಿದೆ. ಕೊನೆಗೂ ಪ್ರೀತಿ ಪ್ರೇಮದಂತಹ ಭಾವನೆಗಳನ್ನು ಬಲಿ ಕೊಟ್ಟಾದರೂ ಹೆಣ್ಣು ಸಾಮಾಜಿಕ ನಿರ್ಬಂಧಗಳನ್ನು ಪಾಲಿಸಲೇಬೇಕು ಎನ್ನುವುದೇ ನಿರ್ದೇಶಕರ ಒಲವು ಇದ್ದಂತಿದೆ. ಒಲ್ಲದ ಗಂಡನನ್ನು ಒಪ್ಪಿಕೊಂಡು ಬದುಕಬೇಕಾದ ಪರಿಸ್ಥಿತಿಗೆ ಆಕೆಯನ್ನು ನಿರ್ದೇಶಕರು ತಳ್ಳಿದ್ದಾರೆ.
ಮಹಿಳೆಯರಿಗೆ ಹಕ್ಕು ಬಾಧ್ಯತೆಗಳೇ ಇಲ್ಲವೆನ್ನುವ ಗಂಡಸರ ಪುರುಷಹಂಕಾರವನ್ನು ವಿಡಂಬನೆ ಮಾಡುತ್ತಲೇ ಹೆಣ್ಣು ಪುರುಷ ಸಮಾಜ ನಿರ್ಬಂಧಿಸುವ ಕೌಟುಂಬಿಕ ಚೌಕಟ್ಟಿಗೆ ಬದ್ಧವಾಗಿದ್ದು ಹೆಣ್ಣು ತ್ಯಾಗಕ್ಕೆ ಸಿದ್ಧವಾಗಬೇಕು ಎಂದು ಈ ನಾಟಕದ ಅಂತ್ಯ ಹೇಳುವಂತಿದೆ. ಹಾಗೆಯೇ “ಎಲ್ಲಾ ಸಾಧ್ವಿಯರೂ ಗಂಡನ ಮುಖದಲ್ಲಿ ಪ್ರೇಮಿಯ ಛಾಯೆಯನ್ನು ಕಾಣುತ್ತಾರೆ” ಎಂದು ಭೂತದ ಬಾಯಲ್ಲಿ ಹೇಳಿಸುವ ನಿರ್ದೇಶಕರು ಸ್ತ್ರೀ ವಿರೋಧಿ ನಿಲುವನ್ನು ವ್ಯಕ್ತಪಡಿಸುತ್ತಾರೆ. ಹೆಂಗಸರೆಲ್ಲಾ ಹೀಗೆಯೇ ಎಂದು ಸಾರ್ವತ್ರೀಕರಣ ಮಾಡುವ ಪ್ರಯತ್ನವೇ ಮಹಿಳಾ ವಿರೋಧಿ ನಿಲುವಾಗಿದೆ. ಬಹುಷಃ ನಿರ್ದೇಶಕರೇ ದ್ವಂದ್ವದಲ್ಲಿದ್ದಂತಿದೆ. ನಾಟಕದಾದ್ಯಂತ ಮಹಿಳೆಯ ಭಾವನೆ, ಸ್ವಂತಿಕೆ, ಸ್ವಾವಲಂಬನೆ ಹಾಗೂ ಸ್ವಾಭಿಮಾನವನ್ನು ಹತ್ತಿಕ್ಕುವ ಗಂಡಾಳ್ವಿಕೆಯನ್ನು ಲೇವಡಿ ಮಾಡುತ್ತಲೇ ಕೊನೆಗೆ “ಅನಿವಾರ್ಯವಾಗಿ ಸಾಮಾಜಿಕ ಕಟ್ಟುಪಾಡುಗಳಿಗೆ ಮಹಿಳೆ ಬದ್ಧವಾಗಿರಬೇಕು, ನಿಜವಾದ ಪ್ರೀತಿಯನ್ನೂ ತ್ಯಾಗ ಮಾಡಬೇಕು, ಪ್ರೀತಿಸಿದವನ ಸಾವನ್ನೂ ಸಹಿಸಿಕೊಳ್ಳಬೇಕು” ಎನ್ನುವ ಸಂದೇಶವನ್ನೇ ಈ ನಾಟಕ ಹೇಳುವಂತೆ ಮೂಡಿಬಂದಿದೆ. ಅಂತಿಮವಾಗಿ ನಿಜವಾದ ಪ್ರೀತಿಗೆ ಸೋಲಾಗಿದೆ, ಪ್ರೀತಿಸಿದಾತನಿಗೆ ಸಾವಾಗಿದೆ, ಪುರುಷಪ್ರಧಾನ ವ್ಯವಸ್ಥೆಗೆ ಗೆಲುವಾಗಿದೆ. ಇಂತಹುದು ಅನೇಕ ಸಲ ವಾಸ್ತವದಲ್ಲಿ ನಡೆಯುವಂತಹುದ್ದೇ ಇರಬಹುದಾದರೂ. ನಾಟಕದ ಅಂತ್ಯದ ಆಶಯವೂ ಹೀಗೆಯೇ ಇರಬೇಕೆಂದೇನೂ ಇರಲಿಲ್ಲ. ಪ್ರೀತಿಗೆ ಪ್ರೀತಿಸಿದವರಿಗೆ ಗೆಲುವಾಗಬೇಕಿತ್ತು. ಹೆಣ್ಣಿನ ಭಾವನೆಗಳನ್ನು ದಮನಿಸುವ ಗಂಡಾಳ್ವಿಕೆಯನ್ನು ಹೆಣ್ಣು ಧಿಕ್ಕರಿಸಬೇಕಿತ್ತು. ಕೊನೆಗೆ ಕನಿಷ್ಟ ಪ್ರತಿಭಟನೆಯನ್ನಾದರೂ ತೋರಬೇಕಿತ್ತು.
ನಾಟಕ ಎನ್ನುವುದು ವಾಸ್ತವವನ್ನು ತೋರುವ ಕನ್ನಡಿ ಎಂದು ಹೇಳುತ್ತಾರೆ. ಆದರೆ ಇದ್ದದ್ದನ್ನು ಇದ್ದಂತೆ ತೋರುವುದೇ ಆದರೆ ನಾಟಕವಾದರೂ ಯಾಕೆ ಬೇಕು. ಸಮಾಜದಲ್ಲಿ ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ಮಾನವೀಯತೆಯ ನೆಲೆಯಲ್ಲಿ ತೋರುವುದೇ ನಾಟಕದ ಆಶಯವಾಗಬೇಕು. ದಮನಕ್ಕೆ ಒಳಗಾದವರ ಪರವಾದ ನಿಲುವನ್ನು ನಿರ್ದೇಶಕರು ಹೊಂದಿರುವುದು ಅಪೇಕ್ಷಣೀಯ. ಜನರ ತೆರಿಗೆ ಹಣದಿಂದ ನಡೆಯುತ್ತಿರುವ ರಾಷ್ಟ್ರೀಯ ನಾಟಕ ಶಾಲೆಯಿಂದ ಜೀವಪರ ನೆಲೆಯ ನಾಟಕಗಳು ಇರಬೇಕೆಂಬುದು ಬಹುಜನರ ನಿರೀಕ್ಷೆ.
ಅಷ್ಟೆಲ್ಲಾ ರಂಗಸಾಧ್ಯತೆಗಳನ್ನು ಸಮರ್ಥವಾಗಿ ಬಳಸಿಕೊಂಡು, ಸರಕಾರದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು, ಆಕರ್ಷಣೀಯ ನಾಟಕವೊಂದನ್ನು ಕಟ್ಟಿ ಪ್ರದರ್ಶನಗೊಳಿಸಿದ ಎನ್.ಎಸ್.ಡಿ. ನಿರ್ದೇಶಕ ಅಜಯ್ ಕುಮಾರ್ ರವರು ಗಂಡಾಳ್ವಿಕೆಯಲ್ಲಿ ನೊಂದ ಹೆಣ್ಣುಗಳ ದೃಷ್ಟಿಕೋನದಲ್ಲಿ ನಾಟಕದ ಆಶಯವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ನಾಟಕದ ಅಂತ್ಯವನ್ನು ಬದಲಾಯಿಸುವ ಮೂಲಕ ನಿಜವಾದ ಪ್ರೀತಿಗೆ, ಹೆಣ್ಣಿನ ಭಾವನೆಗಳಿಗೆ ನ್ಯಾಯ ಒದಗಿಸಬಹುದಾಗಿದೆ.
ಈ ನಾಟಕದ ಅಂತ್ಯದ ಆಶಯದ ಬಗ್ಗೆ ತಕರಾರಿದ್ದರೂ ಕಟ್ಟಿಕೊಟ್ಟ ಆಕೃತಿ ನಿಜಕ್ಕೂ ಆಕರ್ಷಕವಾಗಿ ವಿನ್ಯಾಸಗೊಂಡಿದೆ. ಪ್ರತಿಯೊಬ್ಬ ನಟ ನಟಿಯರ ಪ್ರತಿಭೆ ಅನನ್ಯವಾಗಿ ಪ್ರದರ್ಶನಗೊಂಡಿದೆ. ನಿಸ್ಸಂದೇಹವಾಗಿ ಈ ನಾಟಕ ಪ್ರೇಕ್ಷಕರ ಮನ ಸೂರೆಗೊಂಡಿದೆ. ಆದರೆ ಗುಂಪು ಬಳಕೆಯ ಮೂಲಕವೇ ನಾಟಕ ಕಟ್ಟುವ ಈ ಫಾರ್ಮ್ಯಾಟ್ ಈಗಾಗಲೇ ಕೆಲವಾರು ಎನ್.ಎಸ್.ಡಿ. ಪ್ರಾಯೋಜಿತ ನಾಟಕಗಳಲ್ಲಿ ಬಳಸಲಾಗಿದೆ. ಹಾಡು ಸಂಗೀತ ಹೆಜ್ಜೆ ಚಲನೆ ಅಷ್ಟೇ ಯಾಕೆ ದೃಶ್ಯ ಸೃಷ್ಟಿ ಮತ್ತು ಬ್ಲಾಕಿಂಗ್ ಗಳೂ ಸಹ ಎನ್.ಎಸ್.ಡಿ. ಮಾದರಿಯೊಂದರ ಪಡಿಯಚ್ಚಾಗಿದೆ. ಕಥೆಯನ್ನು ನಾಟಕೀಯವಾಗಿ ಹೇಳಲು ಹೊಸ ವಿನ್ಯಾಸಗಳನ್ನು ನಿರ್ದೇಶಕರು ಆನ್ವೇಷಿಸಿದರೆ ನಾಟಕ ಕಟ್ಟುವ ಕಲೆ ಇನ್ನೂ ಹೆಚ್ಚು ಎತ್ತರಕ್ಕೇರುವ ಸಾಧ್ಯತೆ ಇದೆ. ಬಿ.ವಿ. ಕಾರಂತರು ಆರಂಭಿಸಿದ ಆಕೃತಿ ವಿನ್ಯಾಸಗಳ ಛಾಯೆಯಿಂದ ಹೊರಬಂದು ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಂಡಷ್ಟೂ ರಾಷ್ಟ್ರೀಯ ರಂಗಶಾಲಾ ರೆಪರ್ಟರಿ ರಂಗಭೂಮಿ ಶ್ರೀಮಂತವಾಗುತ್ತದೆ. ಈಗಾಗಲೇ ಕಟ್ಟಲಾದ ಸಿದ್ಧ ಮಾದರಿಗಳನ್ನು ಮುರಿದು ಹೊಸ ಮಾದರಿಗಳನ್ನು ನಿರೀಕ್ಷಿಸಲಾಗುತ್ತದೆ. ಯಾಕೆಂದರೆ ಎನ್.ಎಸ್.ಡಿ. ಅಂದರೆ ಭಾರತೀಯ ರಂಗಭೂಮಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಆದ್ದರಿಂದ ಆ ರೆಪರ್ಟರಿ ನಾಟಕಗಳ ಬಗ್ಗೆ ನಿರೀಕ್ಷೆಗಳೂ ಅಪಾರವಾಗಿವೆ.
ಶಶಿಕಾಂತ ಯಡಹಳ್ಳಿ,
ರಂಗಕರ್ಮಿ