ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಹಾಸನ ಜಿಲ್ಲಾ ಘಟಕದ ಸಹಯೋಗದೊಂದಿಗೆ ಹಾಸನದಲ್ಲಿ ನಡೆದ ಅರಿವಿನ ಪಯಣ ಕಾರ್ಯಕ್ರಮದಲ್ಲಿ ಅಧ್ಯಯನ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಮಾದಕದ್ರವ್ಯ ವ್ಯಸನಗಳಿಂದ ಆಗುವ ಅನಾಹುತಗಳು ಕುರಿತು ಅರಿವು ಮೂಡಿಸುವ ಒಂದು ಕಿರು ನಾಟಕ ಪ್ರದರ್ಶನ ನೀಡಿದರು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಎಂಬ ಭೂತ ಸದ್ದಿಲ್ಲದೆ ಯುವ ಪೀಳಿಗೆಯನ್ನು ಹೇಗೆ ವ್ಯಾಪಿಸಿದೆ ? ಇದರಿಂದ ಆಗುತ್ತಿರುವ ಅನಾಹುತಗಳೇನು ? ಇದರಿಂದ ಎಷ್ಟು ಕುಟುಂಬಗಳು ಸಂಕಷ್ಟಕ್ಕೆ ದೂಡಲ್ಪಟ್ಟಿವೆ ? ಎಂಬುದನ್ನ ನಾವು ದಿನನಿತ್ಯ ಕೇಳುತ್ತಿದ್ದೇವೆ. ಆದರೆ ಈ ಯುವ ಪೀಳಿಗೆ ಯಾಕೆ ಇಂತಹ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ ? ಇದಕ್ಕೆ ಕಾರಣ ಏನು ? ಹುಡುಕುತ್ತ ಹೊರಟಾಗ ನಮಗೆ ಸಿಕ್ಕ ಅಂಕಿ ಅಂಶಗಳು ಮೂರು ತರಹದ ಗುಂಪುಗಳು ಸಿಗುತ್ತದೆ. ಅದರಲ್ಲಿ ಮೊದಲನೆಯ ಗುಂಪು ಅದು ಏನು ? ಹೇಗಿರುತ್ತದೆ ನೋಡೋಣ ಎಂಬ ಕುತೂಹಲಕ್ಕೆ ಹೋಗುವವರು. ಎರಡನೆಯ ಗುಂಪು ಅತಿಯಾದ ಶ್ರೀಮಂತಿಕೆ, ಮತ್ತೊಂದು ಅತಿಯಾದ ಬಡತನ. ಈ ಮೂರು ಗುಂಪಿನಲ್ಲಿ ಕುತೂಹಲಕ್ಕೆ ಹೋದರು 80% ಬದಲಾಗಿ ಬಿಡುತ್ತಾರೆ. ಆದರೆ ಅತಿಯಾದ ಶ್ರೀಮಂತಿಕೆ ಮತ್ತು ಮೂರನೆಯದು ಬಡತನ ಅದಲ್ಲೂ ಮನೆಯ ಪ್ರೀತಿ ವಂಚಿತರು ಎಂಬುದು ನಮಗೆ ತಿಳಿಯುತ್ತದೆ. ಮನೆಯಲ್ಲಿ ತಂದೆ, ತಾಯಿ ಅಣ್ಣ, ತಮ್ಮ, ಹೀಗೆ ಬಹಳಷ್ಟು ಪ್ರೀತಿ ವಂಚಿತ ಯುವಕರು ಇಂತಹ ವ್ಯಸನದಿಂದ ಹೊರಗೆ ಬರುವುದೇ ಇಲ್ಲ, ಅವರು ಹಾಗೆಯೇ ಉಳಿದು ಬಿಡುತ್ತಾರೆ. ಇವರು ಎಂತಹ ಕೃತ್ಯಗಳಿಗೆ ಇಳಿಯುತ್ತಾರೆ ಎಂದರೆ ಕೊಲೆ, ಅತ್ಯಾಚಾರ, ಹೀಗೆ ಎಲ್ಲಾ ಕೆಟ್ಟ ಕೆಲಸಗಳಿಗೆ ಇಳಿದು ಬಿಡುತ್ತಾರೆ. ತಮ್ಮ ಜೀವನ ಹಾಳು ಮಾಡಿಕೊಳ್ಳುವುದಲ್ಲದೇ ಬೇರೆಯವರ ಜೀವನವನ್ನು ಹಾಳು ಮಾಡಿ ಬಿಡುತ್ತಾರೆ.
ಇಂತಹ ಕಥೆಗಳು ನಾಟಕದ ವಸ್ತು. ಕುಟುಂಬದ ಪ್ರೀತಿಯಿಂದ ಹೇಗೆ ವಂಚಿತರಾಗುತ್ತಾರೆ, ಅನಂತರ ಆ ಪ್ರೀತಿಯನ್ನ ಹುಡುಕುತ್ತಾ ಬಂದವರಿಗೆ ಎಂತಹ ಸ್ನೇಹಿತರು ಸಿಗುತ್ತಾರೆ, ಅನಂತರ ಹೇಗೆ ತನ್ನ ಜೀವನ ಹಾಳು ಮಾಡಿಕೊಂಡು ಒಂದು ಚಿಕ್ಕ ಮಗುವಿನ ಮೇಲೆ ಅತ್ಯಾಚಾರ ಎಸಗಿ ತನ್ನ ಜೀವನ ಜೊತೆಗೆ ಬೇರೆಯವರ ಜೀವನ ಹಾಳಾಗುತ್ತದೆ ಎಂಬುದನ್ನು ನಾಟಕ ಹೇಳುತ್ತದೆ. ಅಧ್ಯಯನ ಪಿ.ಯು. ಕಾಲೇಜಿನ ಮಕ್ಕಳು ಬಹಳ ಅಚ್ಚುಕಟ್ಟಾಗಿ ಪಾತ್ರಗಳಿಗೆ ಜೀವ ತುಂಬಿ ಉತ್ತಮ ಪ್ರದರ್ಶನ ನೀಡಿದರು. ಹಾಸನದ ಒಟ್ಟು ನಾಲ್ಕು ಕಾಲೇಜುಗಳಲ್ಲಿ ತಮ್ಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಉಮೇಶ್ ತೆಂಕನಹಳ್ಳಿ ಇವರ ರಚನೆ ಮತ್ತು ನಿರ್ದೇಶನ ನಾಟಕದ ಹೆಸರು ‘ನನಗೆ ಅದು ಬೇಕು’.
ಬಹುತೇಕ ಪಿ.ಯು. ಕಾಲೇಜುಗಳಿಗೆ ಒಂದು ಅಪವಾದ ಇದೆ. ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಭಾಗವಹಿಸಲು ಬಿಡುವುದಿಲ್ಲ ಎಂದು. ಆದರೆ ಅಧ್ಯಯನ ಪಿ.ಯು. ಕಾಲೇಜು ಇಂತಹ ಅಪವಾದಕ್ಕೆ ದೂರ ಎಂಬುದನ್ನ ತೋರಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಕುಮಾರ್ ಇವರು ಮುಂದೆ ನಿಂತು ಅವರ ವಿದ್ಯಾಭ್ಯಾಸಕ್ಕೂ ತೊಂದರೆ ಆಗದ ರೀತಿಯಲ್ಲಿ ಮಕ್ಕಳ ಜೊತೆಗೆ ಮಕ್ಕಳಾಗಿ ಇದರ ಸಂಪೂರ್ಣ ಜವಾಬ್ದಾರಿ ಹೊತ್ತರು. ಅವರ ಕಾಲೇಜಿನ ವಾರ್ಡನ್ ಕೂಡ ಅವರ ಜೊತೆಗೆ ನಿಂತು ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ನೀಡಿದ್ದರು. ಸಹಕರಿಸಿದ ‘ಅರಿವಿನ ಪಯಣ’ದ ಜಿಲ್ಲಾ ಘಟಕದ ಎಲ್ಲಾ ಪದಾಧಿಕಾರಿಗಳಿಗೆ, ಅಧ್ಯಯನ ಪಿ.ಯು. ಕಾಲೇಜಿನ ಆಡಳಿತ ಮಂಡಳಿಗೆ ಹಾಗೂ ರಾಜ್ಯ ಮಟ್ಟದ ಎಲ್ಲಾ ಪದಾಧಿಕಾರಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳು.
ಉಮೇಶ್ ತೆಂಕನಹಳ್ಳಿ, ಅಧ್ಯಕ್ಷರು ಪ್ರತಿಮಾ ಟ್ರಸ್ಟ್ ಚನ್ನರಾಯಪಟ್ಟಣ