ಮೂಲ ಹಿಂದಿ ನಾಟಕ – ಸುರೇಂದ್ರ ವರ್ಮಾ
ಕನ್ನಡ ರೂಪಾಂತರ – ಸಿದ್ಧಲಿಂಗ ಪಟ್ಟಣಶೆಟ್ಟಿ
ಪ್ರಸ್ತುತಿ – ಭೂಮಿಕಾ, ಹಾರಾಡಿ
ನಿರೂಪಣೆ ಮತ್ತು ನಿರ್ದೇಶನ – ಬಿ.ಎಸ್. ರಾಮ ಶೆಟ್ಟಿ ಹಾರಾಡಿ
ಭಾರತೀಯ ಪುರಾಣಗಳನ್ನು ಓದಿಕೊಂಡು ಬಂದವರಿಗೆ ‘ನಿಯೋಗ ಪದ್ಧತಿಯು’ ಹೊಸದೇನಲ್ಲ. ಮದುವೆಯ ಮುಖ್ಯವಾದ ಉದ್ದೇಶ ವಂಶಾಭಿವೃದ್ಧಿ ಎಂದು ಭಾವಿಸಿದ್ದ ಕಾಲ ಅದು. ಆಗ ಸಂತಾನಶಕ್ತಿಯು ಇಲ್ಲದ ಗಂಡನಿಂದ ದೈಹಿಕ ಸುಖದ ಕೊರತೆ ಆದಾಗ ಗಂಡನ ಒಪ್ಪಿಗೆ ಪಡೆದು ಹೆಂಡತಿ ಇನ್ನೊಬ್ಬ ಪುರುಷನನ್ನು ಸೇರಿ ಸಂತಾನಭಾಗ್ಯ ಪಡೆಯುವ ಪದ್ಧತಿಯೇ ನಿಯೋಗ. ಎಸ್.ಎಲ್. ಭೈರಪ್ಪನವರ ‘ಪರ್ವ’ ಕಾದಂಬರಿಯಲ್ಲಿ ಈ ಪದ್ಧತಿಯ ವಿಸ್ತಾರವಾದ ವಿವರಣೆ ಇದೆ.
ಸೂರ್ಯಾಸ್ತದಿಂದ…….. ಒಂದು ಮನೋವೈಜ್ಞಾನಿಕವಾದ ಸಂಘರ್ಷದ ಕಥೆ. ಇದೇ ನಿಯೋಗ ಪದ್ಧತಿಗೆ ಒಳಗಾಗುವ ಮಹಾರಾಣಿ ಮತ್ತು ಆಕೆಯ ಪತಿಯಾದ ಮಹಾರಾಜರ ಮನೋವೈಜ್ಞಾನಿಕ ಸಂಘರ್ಷದ ಕಥೆಯನ್ನು ಇಲ್ಲಿ ಬಹಳ ಚಂದವಾದ ದೃಶ್ಯಗಳ ಮೂಲಕ ಭೂಮಿಕಾ ಹಾರಾಡಿ ತಂಡದವರು ಸಮರ್ಪಣೆ ಮಾಡಿದ್ದಾರೆ. ಇಲ್ಲಿ ನಾಟಕದ ಸಂಭಾಷಣೆಗಳು ಆಧುನಿಕ ಮನೋವಿಜ್ಞಾನದ ದ್ವಂದ್ವ ಮತ್ತು ತುಮುಲಗಳಿಗೆ ತಾಳೆ ಆಗುತ್ತವೆ ಅನ್ನೋದು ನಾಟಕದ ಹೆಚ್ಚುಗಾರಿಕೆ.
ಕಾಲ್ಪನಿಕ ಪುರಾಣದ ಕಥೆ – ಸೂರ್ಯಾಸ್ತದಿಂದ….
ಮಲ್ಲರಾಜದ ಒಕ್ಕಾಕ ಎಂಬ ಅರಸನು ತನ್ನ ನಪುಂಸಕತ್ವ ಮುಚ್ಚಿಟ್ಟು ಶೀಲಾವತಿಯನ್ನು ಮದುವೆಯಾಗುತ್ತಾನೆ. ಆಕೆ ಐದು ವರ್ಷಗಳ ಕಾಲ ಸಮುದ್ರದ ಅಲೆಯಂತೆ ಏಳುವ ತನ್ನ ವಯೋಸಹಜವಾದ ದೈಹಿಕ ಮನೋಕಾಮನೆಗಳನ್ನು ಆವುಡುಗಚ್ಚಿಕೊಂಡು ಸಹಿಸಿಕೊಳ್ಳುತ್ತಾಳೆ. ತನ್ನ ಬಾಲ್ಯದ ಘಟನೆಗಳು, ಸತತವಾದ ಸೋಲು, ಕಾಡಿದ ಅಭದ್ರತೆಗಳೇ ತನ್ನ ನಿರ್ವೀರ್ಯತೆಗೆ ಕಾರಣ ಎನ್ನುವುದು ರಾಜ ನೀಡುವ ಸಮರ್ಥನೆಗಳು.
ಅವುಗಳು ಹೆಚ್ಚು ಕಡಿಮೆ ಸರಿ ಅನ್ನುತ್ತದೆ ಮನೋವಿಜ್ಞಾನ. ಅವನು ಪದೇ ಪದೇ ಸಿಟ್ಟಾಗುವುದು, ಅದರ ನಡುವೊಮ್ಮೆ ಅಳುವುದು ಎಲ್ಲವೂ ರಾಜನ ಸಹಜವಾದ ವರ್ತನೆಗಳು. ತೀವ್ರವಾದ ಅಸಹಾಯಕತೆಯಿಂದ ಮುಂದೆ ಆತನು ತನ್ನ ಮಂತ್ರಿ, ರಾಜಪುರೋಹಿತ, ಸೇನಾಧಿಕಾರಿ, ಹೆಂಡತಿ….ಹೀಗೆ ಯಾರನ್ನೂ ನಂಬಲಾರದ ಸ್ಥಿತಿಗೆ ತಲುಪುತ್ತಾನೆ. ಎಲ್ಲರೂ ತನ್ನನ್ನು ನಿರ್ಲಕ್ಷ್ಯ ಮಾಡುತ್ತಾ ಇದ್ದಾರೆ ಎನ್ನುವ ಹಪಾಹಪಿ. ತನ್ನ ಭ್ರಮೆಗಳ ಜೊತೆಗೆ ಬದುಕುವುದೇ ಆತನಿಗೆ ಸುಖ !
ವಾಸ್ತವದ ಪ್ರಜ್ಞೆಯಲ್ಲಿ ಬದುಕುವ ಮಹಾರಾಣಿ
ಅದೇ ಹೊತ್ತಿಗೆ ವಾಸ್ತವದ ಪ್ರಜ್ಞೆಯಲ್ಲಿ ಬದುಕುತ್ತಿರುವ ಮಹಾರಾಣಿಯನ್ನು ರಾಜ್ಯದ ಮಂತ್ರಿ ಪರಿಷತ್ ನಿಯೋಗ ಪದ್ಧತಿಗೆ ಒಪ್ಪಿಸುತ್ತದೆ. ಆಕೆಯೂ ಆರಂಭದಲ್ಲಿ ಇದನ್ನು ಒಪ್ಪುವುದಿಲ್ಲ. ಆದರೆ ಮಂತ್ರಿ ಆಕೆಯನ್ನು ಮಾನಸಿಕವಾಗಿ ಗೆರೆ ದಾಟಲು ಸಿದ್ಧಪಡಿಸುತ್ತಾನೆ. ಆಗ ರಾಜನ ಭಾವನಾತ್ಮಕ ಸಂಘರ್ಷಗಳನ್ನು ಅದ್ಭುತವಾದ ಸಂಭಾಷಣೆಯ ಮೂಲಕ ತೋರಿಸಲಾಗಿದೆ. ಆತನು ತನ್ನ ಎಲ್ಲ ಮಾನಸಿಕ ಶಕ್ತಿಗಳನ್ನು ಉಪಯೋಗ ಮಾಡಿ ಆಕೆಯನ್ನು ತಡೆಯುವ ಪ್ರಯತ್ನ ಮಾಡುತ್ತಾನೆ. ನಾಟಕದ ಪ್ರಥಮಾರ್ಧದಲ್ಲಿ ಮಹಾರಾಜನ ಸಶಕ್ತವಾದ ಮಾತುಗಳು, ದೇಹಭಾಷೆಗಳು ಪ್ರೇಕ್ಷಕರ ಅಂತರಂಗವನ್ನು ಅಲ್ಲಾಡಿಸಿ ಬಿಡುತ್ತದೆ.
ಆದರೆ ನಾಟಕದ ದ್ವಿತೀಯಾರ್ಧದಲ್ಲಿ ರಾಣಿಯೇ ಮೇರು !
ದ್ವಿತೀಯಾರ್ಧದಲ್ಲಿ ರಾಣಿ ಶೀಲಾವತಿಯು ವಿಜೃಂಭಿಸುವ ಸನ್ನಿವೇಶ ಇದೆ. ತನ್ನ ಗೆಳೆಯನನ್ನು ಉಪಪತಿಯಾಗಿ ಸ್ವೀಕಾರ ಮಾಡುವ ಆಕೆಯು ಹಿಂದೆ ತನ್ನ ಜೀವನದಲ್ಲಾದ ಕೊರತೆಗಳನ್ನು ತುಂಬಿಸಿಕೊಳ್ಳುವ ಆ ಕ್ಷಣಗಳು ನಿಜಕ್ಕೂ ಅದ್ಭುತ ! ಶೃಂಗಾರದ, ಲಜ್ಜೆಯ, ನಾಚಿಕೆಯ ನವಿರು ಭಾವನೆಗಳನ್ನು ಇಲ್ಲಿ ತುಂಬಾ ಸಹಜವಾಗಿ ಬಿಂಬಿಸಲಾಗಿದೆ.
ಈ ಕಡೆ ಅರಮನೆಯಲ್ಲಿ ಇಡೀ ರಾತ್ರಿಯೂ ನಿದ್ದೆಯಿಲ್ಲದೆ ಚಡಪಡಿಸುವ ಮಹಾರಾಜನು ತನ್ನ ಆಪ್ತ ಸೇವಕಿಯಾದ ಮಹತ್ತರಿಕಾ ಜೊತೆಗೆ ಆಡುವ ಮಾತುಗಳು ಆತನ ತೀವ್ರ ನೋವು, ಅಸೂಯೆ ಮತ್ತು ಅಸಹಾಯಕತೆಯ ಪ್ರತಿಬಿಂಬ ಹೌದು. ಕಿಟಕಿಯಿಂದ ಕೆಳಗೆ ನಡೆಯುತ್ತಿದ್ದ ನಿಯೋಗ ಪದ್ಧತಿಯ ವಿದ್ಯಮಾನಗಳನ್ನು ಸೇವಕಿ ಮಹತ್ತರಿಕಾ ನೋಡಿ ವಿವರಣೆ ಕೊಡುತ್ತಾ ಹೋಗುವಾಗ ಮಹಾರಾಜ ನೋವಿನ ಶಿಖರಕ್ಕೆ ತಲುಪುತ್ತಾನೆ. ಅಲ್ಲಿಯೂ ಆತ ತನ್ನ ದೌರ್ಬಲ್ಯದ ಸಮರ್ಥನೆ ಮಾಡುತ್ತಾನೆ ! ಲೈಂಗಿಕತೆಯು ದೇಹಕ್ಕಿದೆ, ಆದರೆ ಮನಸ್ಸಿಗಿಲ್ಲ ಎಂದು ಸಾಂಕೇತಿಕವಾಗಿ ಹೇಳುತ್ತಾ ಒಂದರೆ ಕ್ಷಣ ಆತನು ತನ್ನ ಸೇವಕಿಯನ್ನೇ ಮೋಹಿಸುತ್ತಾನೆ !
ನಾಟಕದ ಕೊನೆಯ ದೃಶ್ಯವು ಅದ್ಭುತ ದೃಶ್ಯಕಾವ್ಯ:
ರಾತ್ರಿ ಮುಗಿದು ಸೂರ್ಯೋದಯವು ಆದಂತೆ ನಿಯೋಗ ಪದ್ಧತಿ ಮುಗಿದು ಮತ್ತೆ ಅರಮನೆಗೆ ಬರುವ ಮಹಾರಾಣಿ ತನಗಾದ ಖುಷಿ, ಉದ್ವೇಗ ಮತ್ತು ಉನ್ಮಾದಗಳನ್ನು ತನ್ನ ದೇಹಭಾಷೆಯಲ್ಲಿ ಪ್ರಕಟಿಸುತ್ತಾ ಆಡುವ ಮಾತುಗಳು ತುಂಬಾ ಮನಸ್ಸಿಗೆ ನಾಟುತ್ತವೆ. ಒಂದು ಹಂತದಲ್ಲಿ ಆಕೆ ನಿಯೋಗ ಪದ್ಧತಿಯ ಒಪ್ಪಂದ ಮುರಿದು ಮುನ್ನುಗ್ಗುವ ಮಹಾನದಿ ಆಗುತ್ತಾಳೆ. ತನ್ನ ಪತಿಯ, ಮಂತ್ರಿಯ ಮತ್ತು ಸೇನಾಧಿಪತಿಯ, ಪುರೋಹಿತರ ಭ್ರಮೆಗಳ ಪರದೆಯನ್ನು ಕಿತ್ತು ಬಿಸುಟು ಅವರಲ್ಲಿ ಕೂಡ ವಾಸ್ತವದ ಪ್ರಜ್ಞೆಯನ್ನು ಮೂಡಿಸುವ ನಾಟಕದ ಕೊನೆಯ ದೃಶ್ಯವು ನಿಜಕ್ಕೂ ಕ್ಲಾಸ್ ! ಇಲ್ಲಿ ಮಹಾರಾಣಿಯು ಆಡುವ ಒಂದೊಂದು ಮಾತುಗಳು ಸಿಡಿಗುಂಡುಗಳೇ ! ಸ್ತ್ರೀ ಸ್ವಾತಂತ್ರ್ಯದ ಪರಾಕಾಷ್ಠೆಯ ಕೋಲ್ಮಿಂಚುಗಳೇ ! ಅಲ್ಲಿಯವರೆಗೆ ಮಹಾರಾಜನ ಪರವಾಗಿ ಇದ್ದ ಪ್ರೇಕ್ಷಕರು ಈಗ ಮಹಾರಾಣಿಯ ಪರವಾಗಿ ನಿಂತು ಬಿಡುತ್ತಾರೆ. ಪ್ರೇಕ್ಷಕ ಪ್ರಭುವಿಗೆ ಇವು ತನ್ನದೇ ಸುತ್ತಮುತ್ತ ನಡೆಯುವ ಘಟನೆಗಳು ಎಂದೆನಿಸುತ್ತವೆ. ಇದು ಎಲ್ಲಾ ಕಾಲಕ್ಕೂ ಸಲ್ಲುವ ನಾಟಕ ಎಂಬಲ್ಲಿಗೆ ಈ ನಾಟಕ ಗೆದ್ದು ಬಿಡುತ್ತದೆ.
ಕಥನ – ನಿರೂಪಣೆ – ನಿರ್ದೇಶನ, ಅಭಿನಯ ಇತ್ಯಾದಿ
ನೈತಿಕತೆ – ಅನೈತಿಕತೆ, ವಾಸ್ತವ – ಭ್ರಮೆಗಳ ವ್ಯತ್ಯಾಸಗಳನ್ನು ತುಂಬಾ ಅದ್ಭುತವಾಗಿ ತೆರೆದಿಟ್ಟ ನಾಟಕ ಇದು. ಅತ್ಯಂತ ಸುಂದರವಾದ ಲಿರಿಕಲ್ ಸಂಭಾಷಣೆಗಳು ಈ ನಾಟಕದ ಆಸ್ತಿ. ಒಟ್ಟು ಏಳು ಕಲಾವಿದರು ತಮ್ಮ ಅಗಾಧವಾದ ಅಭಿನಯ ಸಾಮರ್ಥ್ಯದ ಮೂಲಕ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಮಹಾರಾಜ (ಸುನೀಲ್ ಪಾಂಡೇಶ್ವರ) ಮತ್ತು ಮಹಾರಾಣಿ (ಅನಿಶಾ ಬಾಯರಿ) ಇಲ್ಲಿ ಅದ್ಭುತವಾಗಿ ತಮ್ಮ ಪಾತ್ರಗಳ ಪರಕಾಯ ಪ್ರವೇಶ ಮಾಡಿದ್ದಾರೆ. ಶೋಧನ್ ಅವರ ಸಂಗೀತ, ಸುಂದರವಾದ ಶೀರ್ಷಿಕೆ ಗೀತೆ ಎಲ್ಲವೂ ಈ ನಾಟಕವನ್ನು ಗೆಲ್ಲಿಸುತ್ತವೆ.
ನಿರ್ದೇಶಕ ರಾಮ ಶೆಟ್ಟಿ ಹಾರಾಡಿ ಅವರು ಬಳಸಿದ ಕಥನ ಕಲೆ, ನಿರೂಪಣೆ ಮತ್ತು ರಂಗವಿನ್ಯಾಸಗಳು ತುಂಬಾನೇ ಹೊಸದು. ನಿಲುವು ಕನ್ನಡಿ, ಚಕ್ರವಾಕ, ಕಿಟಕಿ, ಮದಿರೆಯ ಪಾತ್ರೆ, ಗೋಡೆಯ ಮೇಲೆ ಇರುವ ಚಿಮ್ಮುವ ಕುದುರೆಯ ಚಿತ್ರ ಇವೆಲ್ಲವೂ ಕಥನದ ಸಂಕೇತಗಳು. ಇಡೀ ನಾಟಕವು ರಾತ್ರಿಯಲ್ಲಿ ನಡೆಯುವ ಕಾರಣ ಬೆಳಕಿನ ವಿನ್ಯಾಸಗಳು ಅದಕ್ಕೆ ಪೂರಕವಾಗಿವೆ.
ಒಟ್ಟಿನಲ್ಲಿ ಭೂಮಿಕಾ ಹಾರಾಡಿ ಸಂಸ್ಥೆಯು ಪ್ರಸ್ತುತಿಪಡಿಸಿದ ಒಂದೂವರೆ ಗಂಟೆಯ ಅವಧಿಯ ಈ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ‘ನಾಟಕವು ನಮ್ಮೆಲ್ಲರ ‘ವ್ಯಾಲ್ಯೂ ಸಿಸ್ಟಮ್’ ಮೇಲೆ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದೆ ಎಂದು ಖಚಿತವಾಗಿ ಹೇಳಬಹುದು.
ಕಾರ್ಕಳದಲ್ಲಿ ಯಶಸ್ವೀ ಆದ ನಾಟಕದ ಹಬ್ಬ:
ಕಾರ್ಕಳದಲ್ಲಿ ನಡೆದ ಆರು ಶ್ರೇಷ್ಟವಾದ ನಾಟಕಗಳ ಹಬ್ಬದ ಕೊನೆಯ ದಿನದ ನಾಟಕವಾಗಿ ಈ ನಾಟಕ ಮೂಡಿಬಂದಿದೆ. ಆ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಿದ ಕಾರ್ಕಳದ ಯಕ್ಷರಂಗಾಯಣ ಸಂಸ್ಥೆ, ರಂಗ ಸಂಸ್ಕೃತಿ ಸಂಸ್ಥೆ ಮತ್ತು ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಈ ಸಂಸ್ಥೆಗಳಿಗೆ ಮತ್ತು ಪ್ರತೀ ದಿನವೂ ಕಿಕ್ಕಿರಿದು ನಾಟಕವನ್ನು ಆಸ್ವಾದಿಸಿದ ಸಹೃದಯ ಪ್ರೇಕ್ಷಕ ವರ್ಗಕ್ಕೆ ನಮ್ಮ ನೆನಕೆಗಳು ಸಲ್ಲುತ್ತವೆ.
ರಾಜೇಂದ್ರ ಭಟ್ ಕೆ.
ಅದ್ಭುತವಾದ ಛಾಯಚಿತ್ರಗಳು – ಶರತ್ ಕಾನಂಗಿ, ಗುರು ಸ್ಟುಡಿಯೋ, ಜೋಡುರಸ್ತೆ, ಕಾರ್ಕಳ.