ಇದು ಕಗ್ಗತ್ತಲ ಖಂಡದ (?) ಸೋತವರ ಇತಿಹಾಸ, ಒಂದು ಮೇರು ರೂಪಕ
ನಾಟಕದ ಹೆಸರು – ದಿ ಫೈಯರ್.
ಮೂಲ ಕಥೆ – ಎಡುವರ್ಡೊ ಗೇಲಿಯಾನೋ (ಲ್ಯಾಟಿನ್ ಅಮೆರಿಕ).
ಕನ್ನಡಕ್ಕೆ – ಕೆ.ಪಿ. ಸುರೇಶ.
ವಿನ್ಯಾಸ ಮತ್ತು ನಿರ್ದೇಶನ – ಸಂತೋಷ್ ನಾಯಕ್ ಪಟ್ಲ.
ಪ್ರಸ್ತುತಿ – ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ.
ಯಾವುದು ನಾಟಕ ಅಲ್ಲವೋ ಅದೇ ನಿಜವಾದ ನಾಟಕ ಎಂದವರು ಹಿಂದಿ ಕವಿ ಮತ್ತು ನಾಟಕಕಾರ ಪ್ರೇಮಚಂದ್ ! ನಾಟಕಕ್ಕೆ ಸಿನೆಮಾಗಿಂತ ಹೆಚ್ಚು ಸಾಧ್ಯತೆಗಳಿವೆ ಎಂದವರು ಖ್ಯಾತ ನಿರ್ದೇಶಕ ಶಂಕರನಾಗ್ ! ಈ ಮಾತುಗಳು ನಿಮಗೆ ಸರಿಯಾಗಿ ಕನ್ವಿನ್ಸ್ ಆಗಬೇಕಾದರೆ ಈ ನಾಟಕವನ್ನೊಮ್ಮೆ ನೀವು ನೋಡಲೇಬೇಕು.
ದಿ ಫೈಯರ್ – ಇದು ಸಾರ್ವಕಾಲಿಕ ಕಥಾವಸ್ತು.
ಲ್ಯಾಟಿನ್ ಅಮೇರಿಕಾದ ಮೂಲನಿವಾಸಿಗಳ ಹೋರಾಟದ ಮತ್ತು ಕ್ರಾಂತಿಯ ಕಥೆ ಇದು. ವಸಾಹತುಶಾಹಿಗಳ ವಿರುದ್ಧ ಸೆಟೆದು ನಿಂತ ಲ್ಯಾಟಿನ್ ಅಮೇರಿಕಾದ ಮೂಲನಿವಾಸಿಗಳು ಬಂದೂಕು, ಲಾಠಿ, ಬೈಬಲ್, ತಕ್ಕಡಿಗಳ ವಿರುದ್ಧ ಹೇಗೆಲ್ಲಾ ಎದೆಕೊಟ್ಟು ನಿಂತು ಹೋರಾಡಿದರು ಎಂಬುದು ಇಲ್ಲಿ ಕಥಾ ವಸ್ತು.
ಕೊಲಂಬಸ್ ಎಂಬ ನಾವಿಕನು ತನ್ನ ಸ್ಪೇನ್ ದೇಶದಿಂದ ಹೊರಟು ಲ್ಯಾಟಿನ್ ಅಮೇರಿಕಾದ ಈ ದೇಶಗಳಿಗೆ ತಲುಪಿ ಅಲ್ಲಿನ ಮೂಲನಿವಾಸಿಗಳನ್ನು ಹಿಂಸೆ ಮಾಡಿ ಬರ್ಬರ ಹತ್ಯೆಗೆ ಮುಂದಾದ ಕಥೆಯ ಹಿನ್ನೆಲೆಯು ಇಲ್ಲಿದೆ. ಏನೇ ಮಾಡಿದರೂ ಆ ಮೂಲನಿವಾಸಿಗಳ ಜೀವನೋತ್ಸಾಹ, ಸ್ವಾಭಿಮಾನಗಳನ್ನು ಮೆಟ್ಟಿ ನಿಲ್ಲಲು ಸಾಮ್ರಾಜ್ಯಶಾಹಿಗಳಿಗೆ ಕೊನೆಗೂ ಸಾಧ್ಯವಾಗಿಲ್ಲ ಅನ್ನೋದು ಈ ನಾಟಕದ ಭರತವಾಕ್ಯ. ಮಾದಕ ದ್ರವ್ಯ, ಜೂಜು, ಕುಡಿತ ಮೊದಲಾದ ಆಮಿಷಗಳಿಂದ ಕೂಡ ಆಕ್ರಮಣಕಾರರಿಗೆ ಭೂಮಿಯ ಮಕ್ಕಳನ್ನು ವಿಚಲಿತರಾಗಿ ಮಾಡಲು ಸಾಧ್ಯವಾಗಲಿಲ್ಲ ಅನ್ನುವಾಗ ಆ ನೆಲದ ನಿವಾಸಿಗಳ ಬಗ್ಗೆ ನಮಗೆ ಅಭಿಮಾನ ಮೂಡದೆ ಇರಲು ಸಾಧ್ಯವೇ ಇಲ್ಲ.
ಲೇಖಕ ಗೆಲಿಯಾನೋ ಇಲ್ಲಿ ಬರೆದಿರುವುದು ಸೋಲನ್ನು ಒಪ್ಪಿಕೊಳ್ಳದೆ ಹೋರಾಟಗಳಲ್ಲಿ ತೊಡಗಿದ, ರಕ್ತ ಚೆಲ್ಲಲೂ ಹಿಂಜರಿಯದ ಮಣ್ಣಿನ ಮಕ್ಕಳ ಕಥನವನ್ನು. ಇಲ್ಲಿ ಸ್ತ್ರೀ ಸಬಲೀಕರಣದ ಒಂದು ಎಳೆ ಕೂಡ ಬಂದು ಹೋಗುತ್ತದೆ. ಇಂದಿನ ಆಧುನಿಕತೆಯ ಯುಗದಲ್ಲಿಯೂ ಈ ಭೂಮಿಯ ಮಕ್ಕಳ ಆರ್ತನಾದಗಳನ್ನು ಉಳ್ಳವರು, ಆಳುವವರು ದಮನಿಸಲು ಮುಂದಾಗುತ್ತಿದ್ದಾರೆ ಎಂಬಲ್ಲಿಗೆ ಈ ನಾಟಕದ ಕಥಾವಸ್ತುವು ಸಾರ್ವಕಾಲಿಕ ಮತ್ತು ಸಾರ್ವದೇಶೀಯ ಆಗಿದೆ!
ಪ್ರಸ್ತುತಿ ಮತ್ತು ನಿರೂಪಣೆ
ಇಡೀ ನಾಟಕದಲ್ಲಿ ನಿರ್ದೇಶಕರು ಆರಿಸಿಕೊಂಡದ್ದು ಸಹಜ ಮತ್ತು ಆಡಂಬರವಿಲ್ಲದ ಕಥನ ಕಲೆಯನ್ನು. ಒಟ್ಟು ಎಂಟು ಕಲಾವಿದರು ಹತ್ತಾರು ಪಾತ್ರಗಳನ್ನು ಮಾಡುತ್ತಾ ಇಡೀ ನಾಟಕದ ಕಥೆಯನ್ನು ಹೆಗಲಿನ ಮೇಲೆ ಹೊತ್ತುಕೊಂಡು ಮುನ್ನಡೆದಿದ್ದಾರೆ. ಅವರ್ಯಾರೂ ವೃತ್ತಿಪರ ಕಲಾವಿದರಲ್ಲ ! ಇನ್ನೂ ಅದ್ಭುತ ಎಂದರೆ ಇಡೀ ನಾಟಕದಲ್ಲಿ ಸಂಗೀತವೇ ಇಲ್ಲ ! ಕಲಾವಿದರ ಕಾಲುಗಳಿಗೆ ಕಟ್ಟಿದ ಸಣ್ಣ ಗೆಜ್ಜೆಗಳು ಹೊರಡಿಸುವ ಧ್ವನಿಯನ್ನು ಕೇಳುವುದೇ ಒಂದು ಆಪ್ತವಾದ ಅನುಭವ. ಕಲಾವಿದರು ತಮ್ಮ ನಾಭಿಯಿಂದ ಹೊರಡಿಸುವ ಕೀರಲು ಧ್ವನಿಗಳು ಈ ನಾಟಕದ ಸಂಗೀತದ ಕೊರತೆಯನ್ನು ತುಂಬಿಸುತ್ತವೆ. ರಂಗದ ಮೇಲೆ ಹರಡಿದ್ದ ಕೆಂಪು ಮಣ್ಣು ನಾಟಕದ ಉದ್ದಕ್ಕೂ ಗಾಳಿಗೆ ಹಾರುತ್ತಾ ಉಂಟುಮಾಡುವ ಅನುಭೂತಿಯೂ ಅದು ಅದ್ಭುತ !
ಮೂಲನಿವಾಸಿಗಳ ಆಕ್ರೋಶ ಮತ್ತು ಆಕ್ರಂದನ !
ನೆಲದ ಮಕ್ಕಳು ನೆಲಕ್ಕೆ ಕೈಗಳನ್ನು ಬಡಿದು ಆಕ್ರೋಶವನ್ನು ಹೊರಹಾಕುವುದು, ಆಳವಾದ ಬೇಸ್ ವಾಯ್ಸ್ ಮೂಲಕ ಹೊರಹೊಮ್ಮಿಸುವ ಆರ್ತನಾದ, ಜನಪದ ತಮಟೆಯ ವಾದ್ಯಗಳನ್ನು ಬಾರಿಸುತ್ತಾ, ಲಯಬದ್ಧವಾದ ನಾದವನ್ನು ಉಂಟುಮಾಡುತ್ತಾ ವೇಗವಾಗಿ ಹೆಜ್ಜೆಗಳನ್ನು ಹಾಕುವುದು, ವೃತ್ತಾಕಾರವಾಗಿ ಎಲ್ಲರೂ ಕೈಗಳನ್ನು ಹಿಡಿದು ಭೂಮಿಯ ಆಕಾರದಲ್ಲಿ ತಿರುಗುತ್ತಾ ಭೂಮಿಯು ಹುಟ್ಟಿದ ಕಥೆಯನ್ನು ಹೇಳುವುದು, ಮೌಢ್ಯಗಳನ್ನು ಜ್ಞಾನದ ಕುಲುಮೆಯಲ್ಲಿ ಸುಡುತ್ತ ಹೋಗುವುದು, ಜೂಜಾಡುತ್ತ ಮನೆಯ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವುದು, ಆತ್ಮಹತ್ಯೆಯನ್ನು ಮಾಡಿ ಸತ್ತರೆ ಅಮೇರಿಕಾದಲ್ಲಿ ಮತ್ತೆ ಹುಟ್ಟುತ್ತೇವೆ ಎಂದು ಮುಗ್ಧವಾಗಿ ನಂಬುವುದು, ಸಾಮ್ರಾಜ್ಯಗಳಿಗೆ ಉದ್ಯೋಗ ಮಾಡಲು ಹೋದ ಗಂಡ ಅನ್ಯಸ್ತ್ರೀಯ ಲೋಲುಪತೆಗೆ ಒಳಗಾದಾಗ ‘ನಾವು ಸ್ತ್ರೀಯರು ದಿನವೂ ಬಸಿರಾಗಿ ಸೇಡು ತೀರಿಸಿಕೊಳ್ಳಬೇಕು’ ಎನ್ನುವ ನೆಲದ ಹೆಣ್ಣುಮಕ್ಕಳ ಮುಗ್ಧ ಮತ್ತು ಆಕ್ರೋಶದ ಮಾತುಗಳು……… ಹೀಗೆ ನಾಟಕದ ಉದ್ದಕ್ಕೂ ಇಣುಕುವ 14 ಕಥನಗಳು ನಾಟಕವನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತವೆ.
ಅಗ್ನಿಯನ್ನು, ನೀರನ್ನು, ಆಹಾರಗಳನ್ನು ದಿನವೂ ಹಂಚಿ ಪಾಲುಮಾಡಿಕೊಳ್ಳುತ್ತಿದ್ದ ಮೂಲನಿವಾಸಿಗಳು ದುರಾಸೆಗೆ ಬಿದ್ದು ಅಂಗಳದಲ್ಲಿ ಪ್ರತ್ಯೇಕತೆಯ ಗೆರೆ ಎಳೆದು ಜಗಳಕ್ಕೆ ತೊಡಗುವ ದೃಶ್ಯವು ನೂರಾರು ಸಂದೇಶಗಳನ್ನು ನಮಗೆ ಕೊಡುತ್ತದೆ. ಅಲ್ಲಲ್ಲಿ ಇಣುಕುವ ಕೆಲವು ತುಳು ಭಾಷೆಯ ಸಂಭಾಷಣೆಗಳು ಆ ಭಾಷೆಯ ಪ್ರಾಚೀನತೆಯನ್ನು ಮತ್ತು ವಿಶ್ವವ್ಯಾಪಕತೆಯನ್ನು ತೋರಿಸುವ ಪ್ರಯತ್ನವಿರಬಹುದು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.
ನಾಟಕವನ್ನು ಗೆಲ್ಲಿಸಿದ ಅಂಶಗಳು :
ಕಲಾವಿದರ ವಸ್ತ್ರವಿನ್ಯಾಸ, ಮಂದವಾದ ಬೆಳಕು, ಧ್ವನಿ, ಪರಿಕರಗಳು, ಸರಳವಾದ ರಂಗಸಜ್ಜಿಕೆ, ಎಲ್ಲ ಕಲಾವಿದರ ಶ್ರೇಷ್ಟವಾದ ಅಭಿನಯ, ನಿರ್ದೇಶಕರು ಬಳಸಿದ ವಿವಿಧ ರಂಗತಂತ್ರಗಳು …. ಎಲ್ಲವೂ ಈ ನಾಟಕವನ್ನು ನೆಕ್ಸ್ಟ್ ಲೆವೆಲ್ಲಿಗೆ ತೆಗೆದುಕೊಂಡು ಹೋಗುತ್ತವೆ. ಈ ನಾಟಕದಲ್ಲಿ ಮಾತುಗಳು ಕಡಿಮೆ. ಅಭಿನಯಕ್ಕೆ ಅಪಾರ ಅವಕಾಶ.
ನಾಟಕದ ಕೊನೆಯ ದೃಶ್ಯದಲ್ಲಿ ಎಲ್ಲ ಮೂಲನಿವಾಸಿಗಳು ಜೊತೆಯಾಗಿ ನಿಂತು ಮಣ್ಣಿನ ಮಡಕೆಯನ್ನು ಒಡೆದು ತಲೆಯ ಮೇಲೆ ನೀರು ಸುರಿದುಕೊಳ್ಳುವ ದೃಶ್ಯವಂತೂ ಪ್ರೇಕ್ಷಕರ ಕಣ್ಣಾಲಿಗಳನ್ನು ಆರ್ದ್ರ ಮಾಡುತ್ತವೆ. ಇಡೀ ನಾಟಕದಲ್ಲಿ ಗುಪ್ತಗಾಮಿನಿ ಆಗಿ ಹರಿಯವ ನೋವು, ಆಕ್ರೋಶಗಳು ನಮ್ಮನ್ನು ಗಾಢವಾಗಿ ತಟ್ಟದೇ ಹೋದರೆ ನಮ್ಮಲ್ಲಿ ಸೂಕ್ಷ್ಮ ಸಂವೇದನೆಗಳು ಸತ್ತು ಹೋಗಿವೆ ಎಂದೇ ಹೇಳಬಹುದು !
ಹೀಗೆ ಒಂದು ಲ್ಯಾಟಿನ್ ಅಮೇರಿಕಾದ ಕಥಾವಸ್ತುವಿನ ಈ ಕನ್ನಡ ರೂಪಾಂತರ ನಾಟಕವು ಗೆದ್ದಿದೆ ಎಂದು ನಾವು ಖಚಿತವಾಗಿ ಹೇಳಬಹುದು. ನನ್ನೂರು ಕಾರ್ಕಳದಲ್ಲಿ ಈ ನಾಟಕವನ್ನು ಸಂಘಟನೆ ಮಾಡಿದ ಯಕ್ಷರಂಗಾಯಣ ಸಂಸ್ಥೆ, ನಾಟಕಕ್ಕೆ ಮೀಸಲಾದ ರಂಗಸಂಸ್ಕೃತಿ ಸಂಸ್ಥೆ, ಮಂಜುನಾಥ ಪೈ ಸಾಂಸ್ಕೃತಿಕ ಪ್ರತಿಷ್ಠಾನ ಈ ಸಂಸ್ಥೆಗಳಿಗೆ ನನ್ನ ಧನ್ಯವಾದಗಳು. ಆರು ದಿನಗಳ ನಾಟಕೋತ್ಸವದಲ್ಲಿ ಇದು ಐದನೇ ದಿನದ ನಾಟಕ ಆಗಿತ್ತು.
ವಿಮರ್ಶಕರು – ರಾಜೇಂದ್ರ ಭಟ್ ಕೆ.
ಅದ್ಭುತವಾದ ಫೋಟೋಗಳು – ಶರತ್ ಕಾನಂಗಿ, ಗುರು ಸ್ಟುಡಿಯೋ, ಜೋಡುರಸ್ತೆ, ಕಾರ್ಕಳ.