Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ | ‘ಉರಿಯ ಉಯ್ಯಾಲೆ’ ಏಕವ್ಯಕ್ತಿ ಪ್ರದರ್ಶನ
    Article

    ನಾಟಕ ವಿಮರ್ಶೆ | ‘ಉರಿಯ ಉಯ್ಯಾಲೆ’ ಏಕವ್ಯಕ್ತಿ ಪ್ರದರ್ಶನ

    July 12, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    “ಈ ಕೂದಲ ಕಥೆ ಬಹಳ ದೊಡ್ಡದು ಬಿಡಿ. ಅದು ಬಿಚ್ಚಿದಾಗ ಭಾರತದ ಕಥೆ ಶುರುವಾಯ್ತು. ಕೂದಲು ಕಟ್ಟಿದಾಗ ಭಾರತದ ಕಥೆ ಮುಗಿಯಿತು. ಅಂತ ಕೃಷ್ಣ ಆಗಾಗ ಹೇಳ್ತಾನ. ನನ್ಕಥೇನೋ ಏನೋ ಕಟ್ಟಿದ ಕೂದಲು ಕಟ್ಟಿದ ಹಾಗೆ ಇರಲ್ಲ. ಬಿಚ್ಚಬೇಕಾಗುತ್ತದೆ. ಬಿಚ್ಚಿದ ಕೂದ್ಲು ಬಿಚ್ಚಿದ ಹಾಗೆ ಇರಲ್ಲ, ಕಟ್ಟಬೇಕಾಗುತ್ತದೆ. ಕಟ್ಟೋದು ಬಿಚ್ಚೋದು ದಿನಾ ನಡಿತಾನೆ ಇರುವಾಗ ಕಥೆ ಮುಗಿಯೋದು ಎಲ್ಲಿಂದ ಬಂತು”.

    ಈ ದೀರ್ಘವಾದ ಮಾತು ದ್ರೌಪತಿ ‘ಉರಿಯ ಉಯ್ಯಾಲೆ’ ಎಂಬ ಏಕವ್ಯಕ್ತಿ ಪ್ರದರ್ಶನದಲ್ಲಿ ಹೇಳುವ ಮಾತು. ಮಹಾಭಾರತಕ್ಕೆ ಮುಗಿತಾಯ ಎಂಬುದು ಇಲ್ಲ. ಕೃಷ್ಣನೊಂದಿಗೆ ಪಾಂಡವರು ಸ್ವರ್ಗಾರೋಹಣ ಮಾಡಿರಬಹುದು. ‘ಉರಿಯ ಉಯ್ಯಾಲೆ’ ಏಕವ್ಯಕ್ತಿ ಪ್ರದರ್ಶನದ ಪಠ್ಯವನ್ನು ಸಿದ್ದ ಪಡಿಸಿದವರು ಡಾ. ಎಚ್.ಎಸ್. ವೆಂಕಟೇಶಮೂರ್ತಿ. ಇದನ್ನು ಸ್ತ್ರೀಯರೇ ಅಭಿನಯಿಸಬೇಕು. ಈ ಏಕವ್ಯಕ್ತಿ ಪ್ರದರ್ಶನವು ಧಾರವಾಡದ ‘‌ಅಭಿನಯ ಭಾರತಿ’ಯ ವಸಂತ ನಾಟಕೋತ್ಸವದಲ್ಲಿ ದಿನಾಂಕ 02-07-2024ರಂದು ಸೃಜನಾ ರಂಗ ಮಂದಿರದಲ್ಲಿ ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು. ಏಕವ್ಯಕ್ತಿ ಪ್ರದರ್ಶನ ಮಾಡಿದವರು ಶ್ರೀಮತಿ ಜ್ಯೋತಿ ಮೋಹನ ದೀಕ್ಷಿತ. ನಿರ್ದೇಶನ ಶ್ರೀ ಶ್ರೀಪತಿ ಮಂಜನಬೈಲು.

    ಜಗತ್ತಿನ ಶ್ರೇಷ್ಠ ಮಹಾಕಾವ್ಯ ಮಹಾಭಾರತ. ಈ ಕಾವ್ಯದ ಒಡಲಿನಲ್ಲಿ ಜನ್ಮ ತಾಳಿದ ಕೃತಿಗಳು ಸಾವಿರಾರು. ಈ ಮಹಾಕಾವ್ಯದ ನಾಯಕಿ ದ್ರೌಪತಿ. ಪಾಂಚಾಲ ದೇಶದ ರಾಜ ದ್ರುಪದನ ಮಗಳಾದ ಈಕೆ ದ್ರುಪದ ಮಾಡಿದ ಯಜ್ಞದಲ್ಲಿ ಕನ್ಯೆಯಾಗಿ ನಡೆದು ಬಂದವಳು. ಇವಳಿಗೆ ಬಾಲ್ಯ ಇಲ್ಲ. ಇವಳನ್ನು ಯಜ್ಞಸೇನಿ. ಈಕೆ ಸದಾ ಕಾಲ ಯೌವ್ವನೆ, ಮುಪ್ಪು ಎಂಬುದಿಲ್ಲ. ಆದರೆ ಇಲ್ಲಿ ಪ್ರದರ್ಶನದಲ್ಲಿ ಯಾರೋ ಹೇಳುತ್ತಾರೆ ‘ದ್ರೌಪತಿ ನಿನಗೆ ಮುಪ್ಪು ಆವರಿಸುತ್ತಿದೆ, ನೀನು ಮುದುಕಿಯಾದೆ ಅಂತ’. ಅದಕ್ಕೆ ದ್ರೌಪತಿಯ ಉತ್ತರ.
    ಆಕಾಶ ಮುಪ್ಪಾಗುತ್ತದೆಯೇ?
    ಭೂಮಿ ಮುಪ್ಪಾಗುತ್ತದೆಯೇ?
    ಯಮುನೆ ಮುಪ್ಪಾಗುತ್ತಾಳೆಯೇ?
    ಕೃಷ್ಣೆ ಮುಪ್ಪಾಗುತ್ತಾಳೆಯೇ?
    ಹೆಣ್ಣಿಗೆ ವಯಸ್ಸಾಗುತ್ತದೆ, ಆದರೆ ಪ್ರಾಯ ಹೋಗುವುದಿಲ್ಲ, ಎಂದರೆ ಬಳ್ಳಿಗೆ ವಯಸ್ಸಾಗುತ್ತದೆ, ಅದು ಬಿಡುವ ಹೂವಿಗೆ ವಯಸ್ಸಾಗುವುದಿಲ್ಲ. ಹಾಗೆ ನಾನು. ನನಗೆ ಮುಪ್ಪಿಲ್ಲ. ನಾನು ಸದಾ ಜವ್ವನೆ. ದ್ರೌಪತಿಯ ದೈಹಿಕ ಬಣ್ಣ ಕಪ್ಪಾಗಿದ್ದರೂ ಅಪ್ರತಿಮ ಸುಂದರಿ. ಆದ್ದರಿಂದಲೇ ಅವಳು ಕೃಷ್ಣೆ. ಅವಳ ಸೌಂದರ್ಯವೇ ಅವಳಿಗೆ ಮಾರಕವಾಗಿತ್ತು. ಐದು ಜನ ಪಾಂಡವರ ಕೈ ಹಿಡಿದಿದ್ದರಿಂದ ಪಂಚ ವಲ್ಲಭೆ. ‘ಉರಿಯ ಉಯ್ಯಾಲೆ’ಯಲ್ಲಿ ಎಚ್.ಎಸ್.ವಿ.ಯವರು ದ್ರೌಪತಿಯ ವಿವಿಧ ಹೆಸರುಗಳನ್ನು ಸೂಕ್ತವಾಗಿ ಕಥೆಯ ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಂಡು ಪಠ್ಯಕ್ಕೆ ವಿಶೇಷ ಮಹತ್ವ ನೀಡಿದ್ದಾರೆ.

    ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳು ‘ಉಯ್ಯಾಲೆ’ ಅಂದರೆ ‘ಜೋಕಾಲಿ’ ಆಡುವುದು, ಜೀಕುವದು ನಾಗರ ಪಂಚಮಿಯಂದು. ಜೋಕಾಲಿ ಸಂಭ್ರಮದ ಪ್ರತೀಕ. ಬೆಟಗೇರಿ ಕೃಷ್ಣಶರ್ಮರ ಒಂದು ಕವನ ಸಂಕಲನದ ಹೆಸರು ‘ಜೀವನ ಜೋಕಾಲಿ’. ಇಲ್ಲಿ ನಾಟಕದಲ್ಲಿ ದ್ರೌಪತಿ ಜೀಕುತ್ತಿರುವದು ‘ಉರಿಯ ಉಯ್ಯಾಲೆ’.

    ಇಡೀ ನಾಟಕದ ತುಂಬ ಅರ್ಥಪೂರ್ಣವಾದ ಡೈಲಾಗ್ ಗಳಿವೆ. ಒಂದೊಂದು ಸನ್ನಿವೇಶ ದ್ರೌಪತಿಯ ಮಾತುಗಳಿಂದ ರಂಗವನ್ನು ಗಟ್ಟಿಯಾಗಿಡುತ್ತವೆ. ಸದೇಹದಿಂದ ಸ್ವರ್ಗಾರೋಹಣ ಸಮಯದಲ್ಲಿ ದ್ರೌಪತಿ ಆಡುವ ಮಾತುಗಳು ಎಲ್ಲರನ್ನೂ ಎಚ್ಚರಿಸುವಂತಿವೆ. ‘ಸ್ವರ್ಗಕ್ಕೆ ಶರೀರ ಸಮೇತ ಹೋಗೋಣ ಅಂತ ಯುದಿಷ್ಠಿರ ಅವನ ಹಿಂದೆ ಭೀಮ, ಅರ್ಜುನ, ನಕುಲ, ಸಹದೇವ ಎಲ್ಲರೂ ಹೊರಟಿದ್ದಾರೆ. ಮಂಜುಗಡ್ಡೆ ತುಂಬಿದ ಹಿಮಾಲಯ ದಾಟಿ ಹೋಗಬೇಕು. ಈ ವಯಸ್ಸಲ್ಲಿ? ಇವರಿಗೆ ಪರ್ವತ ಹತ್ತಕ್ಕಾಗತ್ತ ? ಛಳಿ ತಡೆಯೋಕೆ ಆಗತ್ತಾ ? ಸ್ವರ್ಗಕ್ಕೆ ಒಂದು ದಾರಿ ಕೂಡ ಇರೋದಿಲ್ಲ. ಹೋಗಿದ್ದೇ ದಾರಿ …… ದಾರೀನೆ ಇಲ್ಲಾಂತೆ….. ಗುರಿ ಮುಟ್ಟೋದಿಕ್ಕೆ ಹೊರಟಿದ್ದಾರೆ. ಕೂಗಿದಾಗೆಲ್ಲ ಓಡಿ ಬರುತ್ತಿದ್ದ ಕೃಷ್ಣ ಕೂಡ ಇಲ್ಲ…. ದಪ್ಪನ ಬಟ್ಟೆ ಗಿಟ್ಟೆ ಆದ್ರೂ ಸಾಕಷ್ಟು ತಗೊಳ್ಳೇಬೇಕು. ಒಳ್ಳೆಯ ಮಾಗಿ ಕಾಲ ಬೇರೆ…. ಸ್ವರ್ಗ ಸೇರೋ ಹೊತ್ತಿಗೆ ಸತ್ತ ಹೋಗಿ ಬಿಡ್ತಿವಿ ಅಷ್ಟೇ.,’ ಈ ಮಾತುಗಳನ್ನು ಹೇಳುತ್ತಾ ಬಟ್ಟೆಗಳನ್ನು ಹೊಂದಿಸುವಾಗ ಸ್ವಯಂವರದ ಸೀರೆ ಕೈಗೆ ಸಿಗುತ್ತದೆ. ಆಗ ಬಹಳ ಭಾವುಕಳಾಗಿ ಸ್ವಯಂವರದ ಇಡಿ ವೃತ್ತಾಂತವನ್ನು ಎಳೆ ಎಳೆಯಾಗಿ ಹೇಳುತ್ತಾಳೆ. ಕಲಾವಿದೆ ಜ್ಯೋತಿಯವರು ಈ ಪಠ್ಯದಲ್ಲಿ ಬರುವ ಎರಡು ವಸ್ತ್ರದ ಘಟನೆಗಳನ್ನು ಬಹಳ ಭಾವುಕರಾಗಿ ಅಭಿನಯಿಸಿದರು ಒಂದು ಸ್ವಯಂವರದ್ದು, ಇನ್ನೊಂದು ಅಕ್ಷಯಾಂಬರದ್ದು. ಈ ಸನ್ನಿವೇಶದಲ್ಲಿ ಕೃಷ್ಣ ಸಹೋದರತ್ವದ ನಿರೂಪಣೆ ಬಹಳ ಉತ್ತಮವಾಗಿತ್ತು.

    ಈ ಏಕವ್ಯಕ್ತಿ ಪ್ರದರ್ಶನದಲ್ಲಿ ದ್ರೌಪತಿಯಾಗಿ ಅಭಿನಯಿಸಿದ ಶ್ರೀಮತಿ ಜ್ಯೋತಿ ಅವರ ಅಭಿನಯ ಶ್ರೇಷ್ಠ ಮಟ್ಟದಾಗಿತ್ತು. ರಂಗದ ಮೀಮಾಂಸೆಯಂತೆ ಪಾತ್ರದಲ್ಲಿ ಪರಕಾಯ ಪ್ರವೇಶ ಪಡೆದು ಅಭಿನಯಿಸಿದರು. ಪ್ರೇಕ್ಷಕರನ್ನು ಒಂದು ಭಾವನೆಯ (ರಸ) ಅನುಭಾವದ (ಭಾವ) ಕಡೆಗೆ ಮುನ್ನುಡೆಸುವದು ಅಭಿನಯ. ಅದನ್ನು ಸಮರ್ಥಿಸುವಲ್ಲಿ ನಟಿ ಜ್ಯೋತಿ ದೀಕ್ಷಿತ ಯಶಸ್ವಿಯಾಗಿದ್ದಾರೆ. ಭಾವಾನುಭಾವದ ರಸವನ್ನು ಈ ಏಕವ್ಯಕ್ತಿ ಪ್ರದರ್ಶನ ನೀಡಿತು. ಸಾತ್ವಿಕ, ಆಂಗಿಕ ಹಾಗೂ ವಾಚಿಕಾ ಅಭಿನಯ ತ್ರಿವೇಣಿ ಸಂಗಮದಂತೆ ಕೂಡಿಕೊಂಡು ಪ್ರದರ್ಶನ ನಡೆಯಿತು. ಸುಮಾರು ಎಂಭತ್ತು ನಿಮಿಷಗಳ ಕಾಲ ಅಭಿನಯದ ಬಿಗಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು, ಪ್ರೇಕ್ಷಕರ ಮನೋಭಾವವನ್ನು ತಮ್ಮ ಅಭಿನಯದ ಮೂಲಕ ದೀಕ್ಷಿತರು ಕಟ್ಟಿ ಹಾಕಿದ್ದರು. ಪ್ರೇಕ್ಷಕರ ಕಣ್ಣು, ಕಿವಿ ದ್ರೌಪತಿಯ ಅಭಿನಯದ ಮೇಲೆ ಕೇಂದ್ರೀಕೃತವಾಗಿದ್ದವು. ಇದು ಶ್ರೀಮತಿ ಜ್ಯೋತಿಯವರ ಮೊದಲ ಏಕವ್ಯಕ್ತಿ ಪ್ರದರ್ಶನ. ಅದರಲ್ಲಿ ಸಿದ್ಧಿಯನ್ನು ಸಾಧಿಸಿ, ಎಲ್ಲರಿಂದಲೂ ಭೇಷ್ ಎನಿಸಿಕೊಂಡರು. ಪ್ರದರ್ಶನ ಮುಗಿದಾಗ ಜನ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿ, ಅಭಿನಂದಿಸಿದರು. ಇದರ ಒಟ್ಟಾರೆ ಫಲ ನಿರ್ದೇಶಕರಿಗೆ ಹಾಗೂ ಕಲಾವಿದೆಗೆ ಸಲ್ಲುತ್ತದೆ. ಪ್ರದರ್ಶನ ಈ ಮಟ್ಟಕ್ಕೇರಲು ನಿರ್ದೇಶಕರಾದ ಶ್ರೀಪತಿ ಮಂಜನಬೈಲು ಅವರ ನಿರ್ದೇಶನದ ಶ್ರಮದೊಂದಿಗೆ ದ್ರೌಪತಿ ಎದುರಿಸುವ ಘಟನೆಗಳನ್ನು ಸಾಕ್ಷಿಭೂತವಾಗಿ ಉತ್ತಮ ರೀತಿಯಲ್ಲಿ ರಂಗದ ಮೇಲೆ ಅರ್ಥೈಸಿರುವುದೇ ಕಾರಣ. ಸುಮಾರು ಒಂದು ತಿಂಗಳ ಕಾಲ ಅವರು ಹಾಕಿದ ಶ್ರಮ ದೊಡ್ಡದು. ಅವರ ಪ್ರತಿಭೆ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು. ಅಭಿನಯ ಭಾರತಿಯ ಈ ಹೊಸ ಪ್ರಯತ್ನ ಉತ್ತಮ ಫಲ ನೀಡಿತು. ಪ್ರಸಾಧನ, ಸಂಗೀತ, ನೆಳಲು ಬೆಳಕು ಮತ್ತು ರಂಗ ಸಜ್ಜಿಕೆ ಬಹಳ ಉತ್ತಮವಾಗಿತ್ತು. ಅದು ಪ್ರದರ್ಶನಕ್ಕೆ ಹೆಚ್ಚಿನ ಮೆರಗು ನೀಡಿತು.

    ಈ ಯಶಸ್ವೀ ಪ್ರಯೋಗದ ಪ್ರದರ್ಶನವನ್ನು ಸಣ್ಣ ಪುಟ್ಟ ಮಾರ್ಪಾಡುಗಳೊಂದಿಗೆ ದೇಶಾದ್ಯಂತ ಪ್ರದರ್ಶನ ನೀಡಬೇಕು. ಈ ನಾಟಕ ಕೇವಲ ಅಂದಿನ ಭಾರತವನ್ನು ಹೇಳದೆ, ಇಂದಿನ ಭಾರತವನ್ನು ಬಿಂಬಿಸುತ್ತದೆ. ನಮ್ಮ ಹೆಣ್ಣುಮಕ್ಕಳು ಅನೇಕ ಸಮಸ್ಯೆಗಳೊಂದಿಗೆ ತಲ್ಲಣ, ಬೇಕು ಬೇಡ, ಸುಖ-ದುಃಖಗಳ ಒತ್ತಡಗಳೊಂದಿಗೆ ಬದುಕು ನಡೆಸುತ್ತಿದ್ದಾರೆ. ಪುರುಸೊತ್ತು ಇಲ್ಲದ ಈ ಯುಗದಲ್ಲಿ ಮನೆಯ ಒಳಗೆ ಮತ್ತು ಹೊರಗೆ ದುಡಿಯುವ ಹೆಣ್ಣುಮಕ್ಕಳಿಗೆ ಈ ಪ್ರದರ್ಶನ ಹಾಗೂ ಪಠ್ಯ ಮಾತುಕತೆ ನಡೆಸುತ್ತದೆ. ಅವಳು ಪ್ರಶ್ನೋತ್ತರ ಮಾಡುತ್ತಾಳೆ. ಜೀವನದಲ್ಲಿ ಪ್ರಶ್ನೆ ಹುಟ್ಟಬೇಕು. ಅದಕ್ಕೆ ಸಮರ್ಪಕ ಉತ್ತರ ಕಂಡುಕೊಳ್ಳಬೇಕು. ಜೀವನವನ್ನು ಸಂತೋಷದ ಜೋಕಾಲಿಯಲ್ಲಿ ಜೀಕಬೇಕು.

    ಕೃಷ್ಣ ಕಟ್ಟಿ, ಧಾರವಾಡ

    ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆ ಈ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಕೃಷ್ಣ ಕಟ್ಟಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದಾರೆ. ಶ್ರೀಯುತರು ತಮ್ಮ ‘ಬೇಂದ್ರೆ ಮತ್ತು ಕನ್ನಡ ಭಾವ ಗೀತದ ಸ್ವರೂಪ’ ಎಂಬ ಪ್ರಬಂಧಕ್ಕೆ ಪಿ.ಎಚ್.ಡಿ. ಪಡೆದಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಪ್ರಥಮ ಪಿ.ಎಚ್.ಡಿ. ಪದವೀಧರರಾದ ಇವರು ಸುಧಾ ವಾರಪತ್ರಿಕೆಗೆ ಮೂರು ವರ್ಷಗಳ ಕಾಲ ‘ಸಮಕ್ಷಮ’ ಎಂಬ ಅಂಕಣ ಬರೆದಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಾಡೋಜ ಡಾ. ಕಮಲಾ ಹಂಪನಾ ಅವರಿಗೆ ನುಡಿ ಗೌರವ | ಜುಲೈ 12
    Next Article ಕಲಾಗ್ರಾಮದಲ್ಲಿ ‘ಕುದುರೆ ಬಂತು ಕುದುರೆ’ ನಾಟಕ ಪ್ರದರ್ಶನ | ಜುಲೈ 13
    roovari

    Add Comment Cancel Reply


    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.