ಕಾಸರಗೋಡು : ನವಪುರಂ ಪುಸ್ತಕ ದೇವಾಲಯದ ಆಶ್ರಯದಲ್ಲಿ ಚೆರುಶ್ಶೇರಿ ಕಲಾ ಸಾಹಿತ್ಯ ಸಭಾ ಏರ್ಪಡಿಸಿದ ದ್ರಾವಿಡ ಭಾಷಾ ಸಾಹಿತ್ಯ ಪುರಸ್ಕಾರಕ್ಕೆ ಕನ್ನಡ ಮತ್ತು ತುಳು ಸಾಹಿತಿ ಸುಂದರ ಬಾರಡ್ಕ ಆಯ್ಕೆಯಾಗಿದ್ದು ದಿನಾಂಕ 04-05-2024ರಂದು ನವಪುರಂ ಮಹೋತ್ಸವದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಹು ಭಾಷಾ ಸಾಹಿತ್ಯ ಗೋಷ್ಠಿ, ವಿಚಾರ ಸಂಕಿರಣ, ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು.
ಕವನ, ಕಥೆ, ಲೇಖನಗಳನ್ನು ಬರೆಯುತ್ತಿರುವ ಸುಂದರ ಬಾರಡ್ಕ ಅವರು ಜಾನಪದ ವೈದ್ಯ ವಿಭಾಗಕ್ಕೆ ಸಂಬಂಧಿಸಿ ಶೋಧನೆ ನಡೆಸಿದ್ದಾರೆ. ಸ್ಥಳೀಯ ಇತಿಹಾಸ, ಜನಾಂಗಿಕ ಅಧ್ಯಯನದಲ್ಲೂ ತೊಡಗಿಸಿಕೊಂಡಿದ್ದಾರೆ. ಕಪ್ಪು ಹಾದಿಯ ಕೆಂಪು ಹೆಜ್ಜೆಗಳು, ಮಿತ್ತಮ್ಮನ ಕೆಡೆಂಜೋಳು, ಪೊಲದ್ಯೆ, ನೆಲದನಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಜಿಲ್ಲಾಮಟ್ಟದ ಕವಿಗೋಷ್ಠಿ ವಿಚಾರಗೋಷ್ಠಿಗಳಲ್ಲೂ ಭಾಗವಹಿಸಿದ್ದ ಇವರು ಕೇರಳ ತುಳು ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ ಸಹಿತ ಹಲವು ಸಂಸ್ಥೆಗಳಿಂದ ಗೌರವಾಭಿನಂದನೆ ಗಳಿಸಿದ್ದಾರೆ.
ಅಕ್ಷರ ದೀಪವನ್ನು ಹಚ್ಚಿ ಅದರ ಬೆಳಕಿನಲ್ಲಿ ವಿಶ್ವವನ್ನು ಸ್ಪರ್ಶಿಸಿ ಅದನ್ನು ದರ್ಶಿಸುವ ನವಪುರಂ ಪುಸ್ತಕ ದೇವಾಲಯದಲ್ಲಿ ಪುಸ್ತಕ ಪ್ರತಿಷ್ಠೆ ಮಾಡಲಾಗಿದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಇಂತಹಾ ದೇವಾಲಯ ಬೇರೆ ಇಲ್ಲ. ಇಲ್ಲಿ ಪುಸ್ತಕವನ್ನು ಪೂಜಿಸುವ ಮೂಲಕ ಮನುಷ್ಯ ಮನಸ್ಸಿನಲ್ಲಿ ಅರಿವಿನ ಬೆಳಕನ್ನು ಹಚ್ಚಲಾಗುತ್ತದೆ. ಜಾತಿ, ಮತ, ಧರ್ಮ, ಭಾಷಾ ಭೇದವಿಲ್ಲದೆ ಎಲ್ಲರಿಗೂ ಈ ದೇವಾಲಯಕ್ಕೆ ಪ್ರವೇಶವಿದೆ. ಕಣ್ಣೂರು ಜಿಲ್ಲೆಯ ಚೆರುಪುಳ ಸಮೀಪದ ಗ್ರಾಮದಲ್ಲಿ ಎತ್ತರವಾದ ಗುಡ್ಡೆಯನ್ನು ಅಗೆದು ಕಲಾಗ್ರಾಮವಾಗಿಸಲಾಗಿದೆ. ಇದರ ಸ್ಥಾಪಕರು ಹಾಗೂ ಪ್ರಧಾನ ಅರ್ಚಕರು ಪ್ರಾಪೊಯಿಲ್ ನಾರಾಯಣನ್ ಮಾಸ್ಟರ್. ಅವರೊಬ್ಬ ಅಧ್ಯಾಪಕರಾಗಿದ್ದು, ಐದು ಸ್ನಾತಕೋತ್ತರ ಪದವಿಗಳನ್ನು ಪಡೆದಿರುವ ಚೆರುಪುಳದಲ್ಲಿ ವಿದ್ಯಾಲಯವೊಂದನ್ನು ನಡೆಸುತ್ತಿದ್ದಾರೆ. ಅದರಲ್ಲಿ ಲಭಿಸಿದ ಆದಾಯದ ಒಂದಂಶವನ್ನು ಈ ಪುಸ್ತಕ ದೇವಾಲಯಕ್ಕೆ ವಿನಿಯೋಗಿಸುತ್ತಿದ್ದಾರೆ. ವಿವಿದೆಡೆಗಳಿಂದ ಸಾಹಿತಿ, ಕಲಾವಿದರು, ಪುಸ್ತಕ ಪ್ರೇಮಿಗಳು ಇಲ್ಲಿಗೆ ಬರುತ್ತಾರೆ. ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಈ ದೇವಾಲಯದಲ್ಲಿ ವರ್ಷಂಪ್ರತಿ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ನವಪುರಂ ಪುಸ್ತಕ ದೇವಾಲಯದ ವತಿಯಿಂದ ದ್ರಾವಿಡ ಭಾಷಾ ಸಾಹಿತ್ಯ ಪ್ರಶಸ್ತಿಯನ್ನು ಬಹು ಭಾಷಾ ಸಾಹಿತಿಗಳಿಗೆ ನೀಡಲಾಗುತ್ತಿದೆ. ಈ ಬಾರಿ ತುಳು – ಕನ್ನಡ ಸಾಹಿತಿ ಸಂಘಟಕ ಸಾಂಸ್ಕೃತಿಕ ಸಂಪನ್ಮೂಲ ವ್ಯಕ್ತಿ ಸುಂದರ ಬಾರಡ್ಕ ಇವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.