ಉಪ್ಪಿನಂಗಡಿ : ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಸ್ತ್ರೀ ಪಾತ್ರಧಾರಿ ಪಾತಾಳ ವೆಂಕಟರಮಣ ಭಟ್ ಅವರು ಕೊಡಮಾಡುವ ‘ಪಾತಾಳ ಕಲಾ ಮಂಗಳಾ’ ಪ್ರಶಸ್ತಿ ಪ್ರದಾನ ಸಮಾರಂಭ ಕೀರ್ತಿಶೇಷ ಶ್ರೀ ನಿರಂಜನ ಸ್ವಾಮಿ ಸಂಸ್ಥಾಪಿತ ಸುಂಕದಕಟ್ಟೆ ಮೇಳದ ರಂಗ ವೇದಿಕೆಯಲ್ಲಿ ದಿನಾಂಕ 26-04-2024ರಂದು ನಡೆಯತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಲಾಪೋಷಕ ಶ್ರೀಪತಿ ಭಟ್ ಮೂಡುಬಿದಿರೆ, ಭುಜಬಲಿ ಧರ್ಮಸ್ಥಳ, ಜನಾರ್ದನ ಹಂದೆ, ಅಂಬಾಪ್ರಸಾದ್ ಪಾತಾಳ, ರಾಮ ಭಟ್ ಭಾಗವಹಿಸಿದ್ದರು. ಪ್ರಬುದ್ಧ ಸ್ತ್ರೀ ಪಾತ್ರಧಾರಿಗಳಾದ ಸಂಜಯ ಕುಮಾರ್, ಸರವು ರಮೇಶ ಭಟ್, ರಮೇಶ ಕುಲಶೇಖರ ಇವರಿಗೆ ರೂ.10,000/- ಗೌರವ ನಿಧಿಯೊಂದಿಗೆ ‘ಪಾತಾಳ ಕಲಾ ಮಂಗಳ’ ಪ್ರಶಸ್ತಿ ಪ್ರದಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ ಉಜಿರೆ ಅವರಿಂದ ಪಾತಾಳ ವೆಂಕಟರಮಣ ಭಟ್ ಅವರಿಗೆ ‘ಕುರಿಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಸ್ಥಳೀಯ ಸಾಧಕರಾದ ಕಂಗ್ವೆ ವಿಶ್ವನಾಥ ಶೆಟ್ಟಿ, ಚಿತ್ತೋಡಿ ಲೋಕೇಶ ಪೂಜಾರಿ, ನೂಜಿ ಪದ್ಮನಾಭ ಗೌಡ ಅವರನ್ನು ಗೌರವಿಸಲಾಯಿತು. ಮಹಾಲಿಂಗ ಭಟ್ ಬಿಲ್ಲಂಪದವು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕುರಿಯ ಪ್ರತಿಷ್ಠಾನದ ಸಂಚಾಲಕ, ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ ಭಟ್ ಅಭಿನಂದನಾ ನುಡಿಯನ್ನಾಡಿ, ನಿರೂಪಿಸಿದರು. ಬಳಿಕ ಸುಂಕದಕಟ್ಟೆ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.