ಪುತ್ತೂರು : ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವು–ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ವತಿಯಿಂದ ಪುತ್ತೂರಿನ ಪ್ರತಿಷ್ಠಿತ ಜಿ.ಎಲ್. ವನ್ ಮಾಲ್ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಹಯೋಗದೊಂದಿಗೆ ಚಿತ್ರಕಲಾ ಸ್ಪರ್ಧೆಯನ್ನು ದಿನಾಂಕ 28 ಡಿಸೆಂಬರ್ 2025ರಂದು ಪುತ್ತೂರಿನ ಜಿ.ಎಲ್. ವನ್ ಮಾಲ್ ಪ್ರಥಮ ಮಹಡಿಯಲ್ಲಿ ಆಯೋಜಿಸಲಾಗಿದೆ.
ಸಾಹಿತ್ಯವು ಪದಗಳ ಮೂಲಕ ಭಾವನೆಗಳನ್ನು ಮೂಡಿಸಿದರೆ, ಚಿತ್ರಕಲೆ ಬಣ್ಣ ಮತ್ತು ರೇಖೆಗಳ ಮೂಲಕ ಅದೇ ಭಾವನೆಗಳಿಗೆ ದೃಶ್ಯ ರೂಪ ನೀಡುತ್ತದೆ. ಈ ಎರಡು ಕಲಾರೂಪಗಳ ಸಮನ್ವಯದಿಂದ ಸಂಪೂರ್ಣ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಸಾಹಿತ್ಯದಲ್ಲಿ ಮೂಡಿಬರುವ ಕಲ್ಪನೆಗಳು, ಕಥೆಗಳು, ಪ್ರಕೃತಿ, ಜನಜೀವನ, ಸಂಸ್ಕೃತಿ ಮತ್ತು ಮೌಲ್ಯಗಳು ಚಿತ್ರಕಲೆಯ ಮೂಲಕ ಕಣ್ಣಿಗೆ ಕಾಣುವ ರೂಪ ಪಡೆಯುತ್ತವೆ. ಈ ಹಿನ್ನೆಲೆಯಲ್ಲೇ ವಿದ್ಯಾರ್ಥಿಗಳನ್ನು ಹಾಗೂ ಯುವಜನತೆಯನ್ನು ಸಾಹಿತ್ಯ ಮತ್ತು ಕಲೆಯ ಕಡೆಗೆ ಆಕರ್ಷಿಸುವ ಉದ್ದೇಶದಿಂದ ಈ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

