ಈ ಜಗತ್ತು ಶಬ್ದದಿಂದ ತುಂಬಿದೆ, ನಾದದಿಂದ ಕೂಡಿದೆ, ಅದೇ ರೀತಿ ಚಿತ್ರಗಳಿಂದಲೂ ಆವರಿಸಿದೆ. ಈಗಿನ ತಂತ್ರಜ್ಞಾನಗಳು ಅದನ್ನು ಸಾಬೀತು ಪಡಿಸುತ್ತಲೂ ಇದೆ. ಗಾಳಿಯಲ್ಲೇ ನಿಮಗೆ ಎಲ್ಲವೂ ಗೋಚರವಾಗುತ್ತದೆ. ಆದರೂ ನಮಗೆ ಗೋಡೆ ಮೇಲೆ ಚೌಕಟ್ಟಿನಿಂದ ಕೂಡಿದ ಚಿತ್ರ ನೋಡಿದಾಗ ಮಾತ್ರ ಸಮಾಧಾನ. ಅದಕ್ಕೆ ಡಿ.ವಿ.ಜಿ.ಯವರು, “ಭಿತ್ತಿಯೊಂದಿಲ್ಲದಿರೆ ಚಿತ್ರವೆಂತಿರಲಹುದು ? ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು, ನಿತ್ಯ ಸತ್ತ್ವವೆ ಭಿತ್ತಿ, ಜೀವನ ಕ್ಷಣ ಚಿತ್ರ, ತತ್ತ್ವವೀ ಸಂಬಂಧ – ಮಂಕುತಿಮ್ಮ” ಅಂದಿದ್ದಾರೆ. ಚಿತ್ರಕ್ಕೊಂದು ಗೋಡೆ ಆಧಾರ ಬೇಕು. ಹಾಗೆಯೇ ಗೋಡೆ ಸುಂದರವಾಗಿರಬೇಕೆಂದರೆ ಒಂದು ಚಿತ್ರ ಬೇಕು. ಒಂದಕ್ಕೊಂದು ಸಂಬಂಧ ಇರುವುದು ನಮಗೆ ಅರಿವಾಗುತ್ತದೆ. ಪರಮಾತ್ಮನಿಗೆ ಈ ಬ್ರಹ್ಮಾಂಡವೇ ಒಂದು ಕ್ಯಾನ್ವಾಸ್, ಈ ಜಗತ್ತೆ ಒಂದು ಚಿತ್ರ.
ದಿನಾಂಕ 30 ನವೆಂಬರ್ 2024ರಂದು ಇಂದಿರಾ ನಗರದ ಪ್ರತಿಷ್ಠಿತ ಜಾಗದಲ್ಲಿ ‘ಆರ್ಟಿಸೆರಾ’ ತನ್ನ ಕಲಾತ್ಮಕ ಕಲಾ ಗ್ಯಾಲರಿಯನ್ನು ಪ್ರತಿಷ್ಠಾಪಿಸಿದೆ. “A Realm of possibilities” ಕಲಾ ಪ್ರದರ್ಶನದ ಮೂಲಕ ಕಲಾ ಲೋಕಕ್ಕೆ ತನ್ನನ್ನು ತೆರೆದುಕೊಂಡಿದೆ. ಅಭಿರುಚಿಗಳು ವಿಸ್ತಾರಗೊಳ್ಳುವುದೇ ಇಂತಹ ಕಲಾ ಗ್ಯಾಲರಿಗಳಿಂದ. ಒಂದು ಕಲಾಕೃತಿ ರಚನೆಯಾದರೆ ಒಂದು ಸಂತಾನ ಆದ ಹಾಗೆ ಎಂಬ ಮಾತಿದೆ. ಅನೇಕ ಕಲಾಕೃತಿಗಳನ್ನು ಪ್ರದರ್ಶಿಸುವದರ ಮೂಲಕ ಸುಸಂಸ್ಕೃತ ಸಮಾಜಕ್ಕೆ ಭೌದ್ಧಿಕ ಸಂಭ್ರಮ ನೀಡಲಿದ್ದಾರೆ ವರುಣ್ ಮತ್ತು ಲೀಸಾ ದಂಪತಿಗಳು. ಕಲೆಯ ಮೇಲಿನ ಅತೀವ ಆಸಕ್ತಿಯಿಂದಾಗಿ ಇವರು ಇಂತಹ ಕಲಾ ಗ್ಯಾಲರಿಯನ್ನು ಸ್ಥಾಪಿಸಿದ್ದಾರೆ. ಇಲ್ಲಿ ಕಲೆಗೆ ಸಂಬಂಧಿಸಿದಂತೆ ಕಲಾಪ್ರದರ್ಶನಗಳು, ಕಲಾ ವಿಚಾರಗೋಷ್ಠಿಗಳು ನಡೆಯಬೇಕು, ಕಲೆಯ ಮೇಲೆ ಹೊಸ ಬೆಳಕನ್ನು ಚೆಲ್ಲುವ ಕೆಲಸ ಇಲ್ಲಿ ಆಗಬೇಕು ಎನ್ನುವುದು ಅವರ ಅಂತರಾಳದ ಮಾತು. “ಅತ್ಯಂತ ಪ್ರೀತಿಯಿಂದ ಈ ‘ಅರ್ಟಿಸೆರಾ’ ಕಟ್ಟಿ ಬೆಳಿಸಿದ್ದೇವೆ. ಕಲಾವಿದರು ಸಹಕರಿಸಬೇಕು. ಹೊಸ ಚಿಗುರು ಹಳೆ ಬೇರು ಅನ್ನುವ ಹಾಗೆ ಹಿರಿಯ ಮತ್ತು ಕಿರಿಯ ಕಲಾವಿದರ ಸಮ್ಮಿಲನಕ್ಕೆ ಇದೊಂದು ವೇದಿಕೆ ಆಗಬೇಕು. ಉದಯೊನ್ಮುಖ ಕಲಾವಿದರಿಗೆ ಹೆಚ್ಚಿನ ಅವಕಾಶ ಸಿಗಬೇಕು. ಅದರಲ್ಲೂ ದೇಶದ ಬೇರೆ ಬೇರೆ ಕಲಾವಿದರ, ಕಲಾಕೃತಿಗಳನ್ನು ನೋಡುವ, ಅನುಭವಿಸುವ ಕೇಂದ್ರವಾಗಬೇಕು” ಅನ್ನುವುದು ವರುಣ್ ಅವರ ಮನದಾಳದ ನುಡಿ. ಹಾಗೆ ನೋಡಿದರೆ ಕಳೆದ ಕೆಲವು ವರ್ಷಗಳಿಂದ ಈ ಕಲಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದವರು ಈ ದಂಪತಿಗಳು ಅದನ್ನೇ ಈಗ ದೊಡ್ಡ ಪ್ರಮಾಣದಲ್ಲಿ ಕಾರ್ಯಗತಗೊಳಿಸಿದ್ದಾರೆ. ದೇಶದ ನಾನಾ ಭಾಗದ ಸುಮಾರು ಮೂವತ್ತನಾಲ್ಕು ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶಿತಗೊಂಡಿವೆ. ವಿಶಾಲವಾದ ಸ್ಥಳವನ್ನು ಆವರಿಸಿದ ಕಲಾ ಗ್ಯಾಲರಿಯನ್ನು ನೋಡುತ್ತಲೇ ಮನಸ್ಸು ಉಲ್ಲಸಿತವಾಗುತ್ತದೆ. ವರುಣ್ ದಂಪತಿಗಳ ಈ ಸಾಹಸಕ್ಕೆ ಶುಭ ಹಾರೈಸೋಣ. ಸುಸಂಸ್ಕೃತ ಸಮಾಜಕ್ಕೆ ಈ ಕಲಾ ಗ್ಯಾಲರಿ ಅನನ್ಯ ಕೊಡುಗೆಯಾಗಲಿದೆ. ಡಿಸೆಂಬರ್ ತಿಂಗಳ 30ರವರೆಗೆ ಈ ಪ್ರದರ್ಶನ ತೆರೆದಿರುತ್ತದೆ. #648, ಮೊದಲನೇ ಮುಖ್ಯರಸ್ತೆ, ಅಂಬಾರಾಮ್ ಎಸ್ಟೇಟ್ಸ್, ಇಂದಿರಾ ನಗರ, ಮೊದಲನೇ ಹಂತ, ಬೆಂಗಳೂರು.
ಚಿತ್ರ ಬರಹ – ಗಣಪತಿ ಎಸ್. ಹೆಗಡೆಹಿರಿಯ ಕಲಾವಿದರು